ನಂಜನಗೂಡು : ಪಟ್ಟಣದ ದಳವಾಯಿ ಸರಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ 12ನೇ ಅಂತರಾಷ್ಟ್ರೀಯ ಧ್ಯಾನ, ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಮಕ್ಕಳಿಗೆ ಹಲವು ಯೋಗಭ್ಯಾಸಗಳನ್ನು, ಮತ್ತು ಧ್ಯಾನವನ್ನು ಪ್ರಾಯೋಗಿಕವಾಗಿ ಮಾಡಿಸಲಾಯಿತು. ಮಕ್ಕಳೆಲ್ಲರೂ ಉತ್ಸಾಹದಿಂದ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು. ಶಾಲೆಯ ಮುಖ್ಯೋಪಾಧ್ಯಾಯರದ ರೇಚಣ್ಣ ಅವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ಯೋಗ ಹಾಗೂ ಧ್ಯಾನಾಭ್ಯಾಸವು ಜೀವನಕ್ಕೆ ಅತಿ ಉಪಯೋಗ ವಾಗಿದ್ದು ಮಕ್ಕಳು ಬಾಲ್ಯದಲ್ಲಿ ಧ್ಯಾನ ಯೋಗಭ್ಯಾಸವನ್ನು ಮಾಡಿದರೆ ಜೀವನ ಆರೋಗ್ಯದಿಂದ ಹಾಗೂ ಸುಖಮಯವಾಗಿರುತ್ತದೆ ಎಂದರು. ಜೂನ್ 21 ದೀರ್ಘಕಾಲದ ಹಗಲಾಗಿದ್ದು ಸೂರ್ಯ ನಮಸ್ಕಾರಕ್ಕೆ ಒಳ್ಳೆಯ ದಿನವೆಂದರು. ನೀವು ಪ್ರತಿನಿತ್ಯ ವಾಕಿಂಗ್ ಮಾಡುವುದು, ಯೋಗ ಮಾಡುವುದು, ಧ್ಯಾನ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ ಎಂದು ಮಕ್ಕಳಿಗೆ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಶಾಲೆಯ ದೈಹಿಕ ಶಿಕ್ಷಕರಾದ ಕಾಮಣ್ಣ ಹಾಗೂ ಎಲ್ಲಾ ಸಹ ಶಿಕ್ಷಕಿಯರು ಹಾಜರಿದ್ದರು.
Category: ಪ್ರಮುಖ ಸುದ್ದಿಗಳು
ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್, ಶಾಲಾ ಬ್ಯಾಗ್ ವಿತರಣೆ
ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಸಂಯುಕ್ತ ಪದವಿಪೂರ್ವ ಕಾಲೇಜು ಹಾಗೂ ಪ್ರೌಢಶಾಲೆ ಹೆಬ್ಬಾಲೆಯಲ್ಲಿ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ಹಾಗೂ ಶಾಲಾ ಬ್ಯಾಗ್ ಗಳನ್ನು ವಿತರಿಸುವ ಕಾರ್ಯಕ್ರಮವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು .
ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಬೆಂಬಲ ನೀಡುವ ಸಲುವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನು ಒದಗಿಸುವ ಉದಾರ ಮನೋಭಾವನೆಯನ್ನುಳ್ಳ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಾದ ಶ್ರೀ ಹೆಚ್ ಎನ್ ಪುಟ್ಟೇಗೌಡ (ನಿವೃತ್ತ ಸೈನಿಕರು), ಕಡುವಿನ ಹೊಸಹಳ್ಳಿಯ ಶ್ರೀ ಕುಮಾರ್ (ಸಿಂಗಾಪುರ್), ಶ್ರೀ ದೀಪಕ್ ಕೆ (ಮುಖ್ಯ ಇಂಜಿನಿಯರ್ ರೈಲ್ವೆ ಇಲಾಖೆ) ಇವರ ಸಹೋದರ ಶ್ರೀ ಕೆ ಸೂರಜ್ ಹಾಗೂ ಸಮಾಜ ಸೇವಕಿ ಶ್ರೀಮತಿ ಮಂಗಳಾರವರ ಪತಿ ಶ್ರೀ ಸುಂದರ್ ರವರು ನೋಟ್ ಬುಕ್ ಗಳು ಹಾಗೂ ಶಾಲಾ ಬ್ಯಾಗ್ ಗಳ ದಾನಿಗಳಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಈ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ಸೈನಿಕರಾದ ಶ್ರೀ ಪುಟ್ಟೇಗೌಡರು ವಿದ್ಯಾರ್ಥಿಗಳು ಶಿಸ್ತು ಹಾಗೂ ಪರಿಶ್ರಮದಿಂದ ಅಭ್ಯಾಸ ಮಾಡಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಹಾಗೂ ಶಾಲಾ ಅಭಿವೃದ್ಧಿಗೆ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಉತ್ತೇಜನಕ್ಕೆ ತಾವು ಸದಾ ಬದ್ಧರಾಗಿರುತ್ತೇವೆ ಎಂದು ತಿಳಿಸಿದರು. ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ಶ್ರೀಮತಿ ಮಂಗಳಾರವರ ಪತಿ ಶ್ರೀಯುತ ಸುಂದರ್ ಮಾಜಿ ಸೈನಿಕರು ಇವರು ಮಾತನಾಡುತ್ತಾ ವಿದ್ಯಾರ್ಥಿಗಳ ಆಲೋಚನೆಗಳು ಮತ್ತು ಕನಸುಗಳು ದೊಡ್ಡದಾಗಿರಬೇಕು ಅವುಗಳನ್ನು ಸಾಕಾರಗೊಳಿಸಲು ನಿರಂತರ ಪರಿಶ್ರಮವನ್ನು ಪಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು.
ಸಂಸ್ಥೆಯ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ರಾಜಶೇಖರ್ ರವರು ಮಾತನಾಡುತ್ತಾ ಶಾಲಾ ಅಭಿವೃದ್ಧಿಗೆ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಬೇಕಾಗಿರುವ ಅವಶ್ಯಕತೆ ಶೈಕ್ಷಣಿಕ ಸಾಮಗ್ರಿಗಳನ್ನು ದಾನವಾಗಿ ನೀಡಿರುವ ದಾನಿಗಳಾದ ಶ್ರೀ ಕೆ ದೀಪಕ್, ಶ್ರೀ ಕುಮಾರ ಸಿಂಗಾಪುರ್, ಶ್ರೀಮತಿ ಮಂಗಳ ಸುಂದರ್ ಮತ್ತು ಸದಾ ಶಾಲಾಭಿಮುಖಿ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಶ್ರೀ ಎಚ್ ಎನ್ ಪುಟ್ಟೇಗೌಡ ರವರಿಗೆ ಹಾಗೂ ದಾನಿಗಳ ಕುಟುಂಬ ವರ್ಗದವರಿಗೆ ಸಂಸ್ಥೆಯ ಪರವಾಗಿ,ಆಡಳಿತ ಮಂಡಳಿಯ ಪರವಾಗಿ, ಶಿಕ್ಷಕರ ಪರವಾಗಿ ಹಾಗೂ ವಿದ್ಯಾರ್ಥಿಗಳ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತಾ ನೀಡಿರುವ ಸಾಮಗ್ರಿಗಳನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು ಹಾಗೆಯೇ 10ನೇ ತರಗತಿಯಲ್ಲಿ ಶೇಕಡಾ ನೂರರಷ್ಟು ಫಲಿತಾಂಶ ನೀಡಿದ ಶಿಕ್ಷಕ ವೃಂದಕ್ಕೆ ಹಾಗೂ ವಿದ್ಯಾರ್ಥಿಗಳಿಗೆ ಅಭಿನಂದನೆಯನ್ನು ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ಬಸವರಾಜ ಶೆಟ್ಟಿ, ಶಿಕ್ಷಕರಾದ ವೆಂಕಟ್ ನಾಯಕ್, ಕವಿತಾ ಡಿ, ಲೋಕೇಶ್ ಸಿ ಡಿ, ಬೋಜೇಗೌಡ ,ಮುತ್ತಣ್ಣವರ ಅನಂತ್, ಯೋಗೇಶ್, ರಾಜಕುಮಾರ್, ರೇಣುಕಸ್ವಾಮಿ ಸೇರಿದಂತೆ ಮತ್ತಿತರರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

“ನಿಕೋಟಿನ್ ಮತ್ತು ತಂಬಾಕು ವ್ಯಸನದ ಆಕರ್ಷಣೆಯ ಮುಖವಾಡವನ್ನು ತೆರವುಗೊಳಿಸಿ: ವ್ಯಸನದ ವಿರುದ್ಧ ಹೋರಾಟ”
ಬಳ್ಳಾರಿ, ಜೂ 02: ವಿಶ್ವ ತಂಬಾಕು ಮುಕ್ತ ದಿನಾಚರಣೆ 2026ರ ಅಂಗವಾಗಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ (VSKUB) ಬಳ್ಳಾರಿಯ ಸಮಾಜಶಾಸ್ತ್ರ ವಿಭಾಗ, ಭಾರತೀಯ ಸೇವಾ ಸಂಸ್ಥೆ ಹಾಗೂ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ (FPAI) ಬಳ್ಳಾರಿ ಶಾಖೆ ಜೊತೆಗೂಡಿ VSKUB ಸಂಯುಕ್ತ ಆಶ್ರಯದಲ್ಲಿ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಬಳ್ಳಾರಿ ಶಾಖೆಯ ಅಧ್ಯಕ್ಷರಾದ ಶ್ರೀ ಟಿ. ಜಿ. ವಿಠ್ಠಲ್ ಅವರು ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಮಾದಕ ವಸ್ತುಗಳ ದಂಧೆ ಹಾಗೂ ತಂಬಾಕು ಬಳಕೆಯು ಯುವಜನತೆಯನ್ನು ಹೇಗೆ ದಾರಿ ತಪ್ಪಿಸುತ್ತಿದೆ ಎಂಬುದರ ಕುರಿತು ವಿವರಿಸಿದರು. ತಮ್ಮ ಜೀವನದ ಅನುಭವಗಳನ್ನು ಹಂಚಿಕೊಳ್ಳುತ್ತಾ, ಯುವಕರು ವ್ಯಸನದ ವಿರುದ್ಧ ಜಾಗೃತರಾಗಿ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು. “ಯುವಕರೇ, ವ್ಯಸನ ಮುಕ್ತ ಸಮಾಜದತ್ತ ಹೆಜ್ಜೆ ಹಾಕಿ” ಎಂಬ ಸಂದೇಶವನ್ನು ವಿದ್ಯಾರ್ಥಿಗಳಿಗೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಕುಮಾರ್ ಅವರು ಮಾತನಾಡಿ, ಸಮಾಜವನ್ನು ಹಾಳು ಮಾಡುವ ಯಾವುದೇ ದುಷ್ಪ್ರವೃತ್ತಿಗಳ ವಿರುದ್ಧ ಯುವಕರು ತಕ್ಷಣ ಪ್ರತಿಕ್ರಿಯಿಸಿ, ಜವಾಬ್ದಾರಿಯುತ ನಾಗರಿಕರಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು. ವಿಶೇಷವಾಗಿ ಸಮಾಜಶಾಸ್ತ್ರದ ವಿದ್ಯಾರ್ಥಿಗಳು ಸಮಾಜದಲ್ಲಿನ ಸಮಸ್ಯೆಗಳನ್ನು ಗುರುತಿಸಿ, ಅವುಗಳ ಮೂಲ ಕಾರಣಗಳನ್ನು ಅರ್ಥಮಾಡಿಕೊಂಡು, ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಹೇಳಿದರು. ಮಾದಕ ವಸ್ತುಗಳ ಬಳಕೆ, ತಂಬಾಕು ವ್ಯಸನ, ಬಾಲ್ಯ ವಿವಾಹ, ಲಿಂಗ ತಾರತಮ್ಯ ಹಾಗೂ ಇತರೆ ಸಾಮಾಜಿಕ ಪಿಡುಗುಗಳ ವಿರುದ್ಧ ಸಮುದಾಯದೊಂದಿಗೆ ಕೈಜೋಡಿಸಿ ಕೆಲಸ ಮಾಡುವುದು ಸಮಾಜಶಾಸ್ತ್ರದ ವಿದ್ಯಾರ್ಥಿಗಳ ಪ್ರಮುಖ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು. ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವ ಸಾಮಾಜಿಕ ನಾಯಕರಾಗಿ ರೂಪುಗೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದ ಉದ್ದೇಶ ಹಾಗೂ ವಾಸ್ತವಿಕ ನುಡಿಗಳನ್ನು ಶ್ರೀಮತಿ ಎಸ್. ವಿಜಯಲಕ್ಷ್ಮಿ, ಶಾಖಾ ವ್ಯವಸ್ಥಾಪಕರು, ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಬಳ್ಳಾರಿ ಶಾಖೆ ಅವರು ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಂವಾದ ನಡೆಸಿ, ತಂಬಾಕು ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳು, ಅವುಗಳಿಂದ ಉಂಟಾಗುವ ಆರೋಗ್ಯ ಹಾಗೂ ಸಾಮಾಜಿಕ ಸಮಸ್ಯೆಗಳ ಕುರಿತು ಚರ್ಚಿಸಿದರು. ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳು ವ್ಯಸನದ ಅಪಾಯಗಳು ಹಾಗೂ ಆರೋಗ್ಯಕರ ಜೀವನಶೈಲಿಯ ಮಹತ್ವದ ಬಗ್ಗೆ ಹೆಚ್ಚಿನ ಅರಿವು ಪಡೆದರು.
ಕೊಲ್ಹಾರ: ತಾಲೂಕಿನ ಕೂಡಗಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆ ಕೂಡಗಿ ಶಾಲಾ ಪ್ರಾರಂಭೋತ್ಸವವನ್ನು ವಿಶೇಷವಾಗಿ ಆಚರಿಸಲಾಯಿತು.
ಪ್ರಾರಂಭೋತ್ಸವದ ಹಿನ್ನೆಲೆಯಲ್ಲಿ ಶಾಲೆಯನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಶಾಲೆಯ ಮುಖ್ಯ ಗುರುಗಳಾದ ಅರವಿಂದ್ ಗಂಗೋರ, ಪ್ರತಿಭಾ ತೊರವಿ ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಸ್ವಾಗತಿಸಿದರು.
ಮೊದಲ ದಿನ ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಶಿಕ್ಷಕರು ಹೂಮಳೆ ಸುರಿಸುವ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು. ಬೇಸಿಗೆ ರಜೆ ಕಳೆದ ವಿದ್ಯಾರ್ಥಿಗಳು ಶಾಲೆಗೆ ಖುಷಿಯಿಂದ ಆಗಮಿಸಿದರು.
ಶಾಲೆ ಆವರಣದಲ್ಲಿ ಸಂಭ್ರಮ ಮನೆಮಾಡಿತ್ತು.ವರ್ಷಕ್ಕೊಮ್ಮೆ ಎದುರುಗೊಳ್ಳುವ ಈ ಸುಂದರ ಕಾಲ ಹೊಸತೊಂದು ಯುಗದ ಆರಂಭಕ್ಕೆ ಭಾಷ್ಯ ಬರೆದಂತೆ ಭಾಸವಾಗುತ್ತದೆ. ಮಕ್ಕಳ ಹುಮ್ಮಸ್ಸನ್ನು ನೋಡುವುದೇ ಒಂದು ಸಂಭ್ರಮ. ನಮಗಿದು ವಸಂತಕಾಲ ಎಂದು ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಹಣಮಂತ ಮಸೂತಿ ಮಾತನಾಡಿದರು.
ಬಾಲಕರು ಬೆಳಿಗ್ಗೆಯಿಂದಲೇ ಶಾಲೆ ಯನ್ನು ತಳಿರು ತೋರಣಗಳಿಂದ ಶೃಂಗಾರ ಮಾಡುವುದರಲ್ಲಿ ತಲ್ಲೀನ ರಾದರೆ, ಬಾಲಕಿಯರು ಕೊಠಡಿಗಳ ಮುಂದೆ ಬಣ್ಣ ಬಣ್ಣದ ರಂಗೋಲಿಯ ಚಿತ್ತಾರ ಬಿಡಿಸಿದರು.
ಮೊದಲ ದಿನ ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಪುಲಾವ್ ಮತ್ತು ಸಿಹಿ ವಿತರಿಸಲಾಯಿತು. ಶಿಕ್ಷಕರು, ಸಿಬ್ಬಂದಿ, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಗ್ರಾಮದ ಹಿರಿಯರು ಮಕ್ಕಳ ಸಂಭ್ರಮದಲ್ಲಿ ಭಾಗಿಯಾದರು.
ಶಾಲೆಯ ವೈಶಿಷ್ಟ
ಶಿಕ್ಷಣದ ಜೊತೆಗೆ ಮಕ್ಕಳಿಗೆ ಸಂಸ್ಕಾರವನ್ನು ಕಲಿಸಬೇಕೆಂಬ ಮಹಾದಾಸೆಯಿಂದ ಶಾಲೆ ಪ್ರಾರಂಭ ಈ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್
ತರಗತಿ, ಪ್ರೊಜೆಕ್ಟರ್ ಬಳಕೆ, 1ರಿಂದ 7ನೇ ತರಗತಿ ಮಕ್ಕಳಿಗೆ ವಿಶೇಷ ಬೋಧನೆ, ಚಟುವಟಿಕೆ ಆಧಾರಿತ ಕಲಿಕೆ, ಯೋಗ ಹೀಗೆ ವಿಭಿನ್ನ ರೀತಿಯ ಕಲಿಕೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ, ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗಾಗಿ ಶಾಲೆಯಲ್ಲಿ ಪೀಠೋಪಕರಣಗಳು, ಪಾಠೋಪಕರಣಗಳು ,ಗ್ರಂಥಾಲಯ, ಆಟೋಪಕರಣಗಳು, ಕಂಪ್ಯೂಟರ್ ಮುಂತಾದ ಸೌಕರ್ಯಗಳನ್ನು ಹೊಂದಿರುತ್ತದೆ ಎಂದು ಪ್ರತಿಭಾ ತೊರವಿ ಹೆಳಿದರು
ಮಕ್ಕಳು ಸುದೀರ್ಘ ರಜೆಯ ನಂತರ ಮೊದಲ ದಿನ ಶಾಲೆಗೆ ಬರುವುದರಿಂದ, ಅವರಲ್ಲಿ ಉತ್ಸಾಹ ಮೂಡಿಸಲು ವಿಶೇಷ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಶಾಲೆಗಳ ಪ್ರವೇಶ ದ್ವಾರ ಹಾಗೂ ತರಗತಿ ಕೋಣೆಗಳನ್ನು ತಳಿರು-ತೋರಣಗಳಿಂದ ಸಿಂಗಾರ ಮಾಡಿ, ಹಬ್ಬದ ಸಡಗರದ ವಾತಾವರಣದಲ್ಲಿ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು
ಮುಖ್ಯಗುರುಗಳಾದ ಅರವಿಂದ್ ಗಂಗೋರ, ನಮ್ಮ ಕರವೇ ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷರರಾದ ಮಹೇಶಕುಮಾರ ಹರಿಜನ,ನಿಂಗಪ್ಪ ತಾಂಬದ, ಶ್ರೀಶೈಲ ಗೊಗಿಹಾಳ, ಅನ್ನಪೂರ್ಣ ಮಠಪತಿ,ಮಾನಂದ ಬಡಿಗೇರ,ಹಣಮಂತ ಮಸೂತಿ,ಪ್ರತಿಭಾ ತೊರವಿ,ಎ ಎಸ್ ಹೊರ್ತಿ,ಎಚ್ ಜಿ ಯಂಡಿಗೇರ, ಸವಿತಾ ಹಳ್ಳಿ, ಎನ್ ಎ ಶೇಖ, ಯಲ್ಲಪ್ಪ ಪ್ರಾತೋಟ,ಹಾಗೂ ಸಿಬ್ಬಂದಿ ವರ್ಗದವರು ವಿದ್ಯಾರ್ಥಿ ವಿದ್ಯಾರ್ಥಿನಿಯರು, ಪೋಲಿಸ್ ಸಿಬ್ಬಂದಿ ಉಪಸ್ಥಿತರಿದ್ದರು.
ಮಲೇರಿಯಾ ವಿರೋಧಿ ಮಾಸಾಚರಣೆ ಮತ್ತು ಪೋಕ್ಸೋ ಕಾಯ್ದೆ ಬಗ್ಗೆ ಅರಿವು
ಕೊಡಗು : ಕುಶಾಲನಗರ ತಾಲೂಕಿನ ಹೆಬ್ಬಾಲೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಬ್ಯಾಡಗೊಟ ಅಂಗನವಾಡಿ ಕೇಂದ್ರದಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ ಮತ್ತು ಪೋಕ್ಸೋ ಕಾಯ್ದೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ನಡೆಸಲಾಯಿತು.
ವೈದ್ಯಾಧಿಕಾರಿಯವರಾದ -ಡಾ ಸಾನಿಯಾ ರವರು ಹದಿಹರೆಯದ ಹೆಣ್ಣುಮಕ್ಕಳು ಗರ್ಭಿಣಿಯರಿಗೆ ಆಗುವ ತೊಂದರೆಗಳ ಬಗ್ಗೆ ಹಾಗೂ ಪೋಕ್ಸೋ ಕಾಯ್ದೆ ಬಗ್ಗೆ ಮಾಹಿತಿಯನ್ನು ನೀಡಿದರು.
ಆರೋಗ್ಯ ನಿರೀಕ್ಷಕರಾದ-ಸಂಜಯ್ ರವರು ಮಲೇರಿಯಾ, ಡೆಂಗ್ಯೂ ಮತ್ತು ಸಾಂಕ್ರಾಮಿಕ ರೋಗಗಳ ಬಗ್ಗೆ , ಪರಿಸರ ಹಾಗೂ ಚರಂಡಿಗಳ ಸ್ವಚ್ಛತೆ ಕಾಪಾಡುವದರ ಬಗ್ಗೆ , ಮುಂಜಾಗ್ರತೆ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಿದರು.
ತಾಲ್ಲೂಕು ಮೇಲ್ವಿಚಾರಕರಾದ-ಅಶ್ವಿನಿ ರವರು ಮಗುವಿನ ಆರೈಕೆ ಹಾಗೂ ಮಗುವಿಗೆ ಹಾಕಿಸುವ ಲಸಿಕೆಗಳ ಬಗ್ಗೆ ಹಾಗೂ ಹೆಣ್ಣುಮಕ್ಕಳ HPV ಲಸಿಕೆ ಬಗ್ಗೆ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ನಾಗೇಂದ್ರಚಾರಿ, ಸಮುದಾಯ ಆರೋಗ್ಯ ಅಧಿಕಾರಿ ದೀಪು, ಆಶಾ ಕಾರ್ಯಕರ್ತೆಯರಾದ ಕವಿತ, ಚಂದ್ರಾವತಿ ಹಾಗೂ ಅಂಗನವಾಡಿ ಕಾರ್ಯಕರ್ತೆ ಶಾಲಿನಿ ಹಾಜರಿದ್ದರು.
ಅತ್ಯುನ್ನತ ಶ್ರೇಣಿ ಪಡೆದು ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿ ಶಾಲಿನಿ
ಮೈಸೂರು:ನಂಜನಗೂಡು ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ದಳವಾಯಿ ಶಾಲೆಯ ವಿದ್ಯಾರ್ಥಿನಿಯಾದ ಶಾಲಿನಿ, ಉಮೇಶ್ ಹಾಗೂ ಜ್ಯೋತಿ ದಂಪತಿಗಳ ಪುತ್ರಿ ಯಾಗಿದ್ದು ಪಟ್ಟಣದ ಚಾಮಲಾಪುರ ಬಡಾವಣೆ ವಾಸಿಯಾಗಿದ್ದಾರೆ.. ಈ ವಿದ್ಯಾರ್ಥಿನಿಯು ಒಟ್ಟು 625 ಕ್ಕೆ595 ಅಂಕ ಪಡೆದು ಹಾಗು ಶೇಕಡಾ 95.02% ನೊಂದಿಗೆ ಅತ್ಯುನ್ನತ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಯಾಗಿದ್ದಾಳೆ. ಸ್ಥಳೀಯ . ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ರೇಚಣ್ಣ ಹಾಗೂ ಎಲ್ಲಾ ಸಹ ಶಿಕ್ಷಕರು, ಸಹ ಶಿಕ್ಷಕಿಯರು ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಗೆ ನಾಮಪತ್ರ ಸಲ್ಲಿಕೆ
ಮೈಸೂರು: ದಿನಾಂಕ 19.04.2026ರಂದು ನಡೆಯುವ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಗೆ ನಂಜನಗೂಡಿನಲ್ಲಿ ಸುಮಾರು 34 ಶಿಕ್ಷಕರು ನಾಮಪತ್ರವನ್ನು ಕೊನೆಯ ದಿನವಾದ ಭಾನುವಾರದಂದು ಸಲ್ಲಿಸಿದ್ದಾರೆ. ಚುನಾವಣಾ ಅಧಿಕಾರಿ ಗಳಾಗಿ ಶಿವಲಿಂಗಪ್ಪನವರು ನಿವೃತ್ತ ಉಪನ್ಯಾಸಕರು ಕಾರ್ಯನಿರ್ವಹಿಸಿದ್ದಾರೆ. ಸೋಮವಾರ ನಾಮಪತ್ರಗಳ ಪರಿಶೀಲನ ಕಾರ್ಯ ನಡೆಯಲಾಗುವುದು. ವಾಪಸ್ ಪಡೆಯಲು ಮಂಗಳವಾರ ಕೊನೆಯ ದಿನವಾಗಿದೆ.
ಮಕ್ಕಳ ದಾಖಲಾತಿ ಆಂದೋಲನ ಕಾರ್ಯಕ್ರಮ
ಮೈಸೂರ್ : ನಂಜನಗೂಡು ಸರಕಾರಿ ಹಿರಿಯ ಉನ್ನತಿಕರಿಸಿದ ಪ್ರಾಥಮಿಕ ಶಾಲೆ ಇವರ ವತಿಯಿಂದ ಮಕ್ಕಳ ದಾಖಲಾತಿ ಆಂದೋಲನ ಕಾರ್ಯಕ್ರಮ ಪಟ್ಟಣದ ಐದು ಆರು ವಾರ್ಡಿನಲ್ಲಿ ಮುಖ್ಯ ಶಿಕ್ಷಕರಾದ ಲೀಲಾವತಿ ಮತ್ತು ಸಹ ಶಿಕ್ಷಕರು ಹಾಗೂ ಸಹ ಶಿಕ್ಷಕಿಯರಿಂದ ಮತ್ತು ಮಕ್ಕಳಿಂದ ನಡೆಯಿತು. ಎಲ್ಕೆಜಿ ಇಂಗ್ಲಿಷ್ ಮೀಡಿಯಂ ಶಾಲೆಗೆ ದಾಖಲಾತಿ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು. ಸರಕಾರಿ ಶಾಲೆಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಪೋಷಕರಿಗೆ ತಿಳಿಯ ಪಡಿಸಲಾಯಿತು.
ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆ ವತಿಯಿಂದ ಸಿದ್ದಗಂಗಾ ಶ್ರೀಗಳವರ 119 ನೇ ಜನ್ಮ ದಿನಾಚರಣೆ
ಹಾಸನ ನಗರದ ತಣ್ಣೀರುಹಳ್ಳ ಶ್ರೀಮಠದ ಅವರಣದಲ್ಲಿ ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆ ವತಿಯಿಂದ ಸಿದ್ದಗಂಗಾ ಶ್ರೀಗಳವರ 119 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ತಣ್ಣೀರುಹಳ್ಳ ಮಠದ ಶ್ರೀಗಳವರ ದಿವ್ಯ ಸಾನಿಧ್ಯದಲ್ಲಿ ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಎನ್. ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್, ಕೋಶಾಧಿಕಾರಿ ರುದ್ರಸ್ವಾಮಿ, ಸಂಘಟನಾ ಕಾರ್ಯದರ್ಶಿ ಅನಂದ್ ಪಟೇಲ್,ಬೇಲೂರು ತಾಲ್ಲೂಕು ಅಧ್ಯಕ್ಷ ಹೆಬ್ಬಾಳು ಹಾಲಪ್ಪ, ಅರಕಲಗೂಡು ತಾಲ್ಲೂಕು ಅಧ್ಯಕ್ಷ ಅಮೃತೇಶ್, ಕದಳಿ ಮಹಿಳಾ ವೇದಿಕೆ ಹಿರಿಯರಾದ ಶರಣೆ ಸೌಭಾಗ್ಯ, ಚನ್ನರಾಯಪಟ್ಟಣ ತಾಲ್ಲೂಕು ಅಧ್ಯಕ್ಷರು ಶರಣೆ ಕಲ್ಪನಾ ಸಿದ್ದುರಾಜು, ಬೇಲೂರು ಪ್ರಧಾನ ಕಾರ್ಯದರ್ಶಿ ರಾಜಕುಮಾರ, ಖಜಾಂಚಿ ಧನಂಜಯ, ಸಕಲೇಶಪುರ ಕದಳಿ ಮಹಿಳಾ ವೇದಿಕೆ ಮೀನಾಕ್ಷಿ ಖಾದರ್, ಶಾರಧ ಗುರುಮೂರ್ತಿ, ಭಾವನಾ, ಕಲಾವತಿ, ಪೂಜಾ, ರತ್ನಮ್ನ, ಅನ್ನಪೂರ್ಣ ಇನ್ನೂ ಮುಂತಾದವರು ಪೂಜೆಯಲ್ಲಿ ಭಾಗವಹಿಸಿದ್ದರು.
ಶ್ರೀ ಗೌತಮಪಂಚಮಹಾರಥೋತ್ಸವ ಮೆರವಣಿಗೆಯನ್ನು ಶಾಸಕರು ಜಿಲ್ಲಾಧಿಕಾರಿಗಳು ಉದ್ಘಾಟಿಸಿದರು
ಶ್ರೀ ಶ್ರೀಕಂಠೇಶ್ವರ ಸ್ವಾಮಿ ಅವರ ಶ್ರೀ ಗೌತಮ ಪಂಚ ಮಹಾರಥೋತ್ಸವ ಪೂಜಾ ಕಾರ್ಯಕ್ರಮಗಳು ಬೆಳಿಗ್ಗೆಯಿಂದಲೇ ಪ್ರಾರಂಭವಾದವು ಮೆರವಣಿಗೆನ ಶಾಸಕರು ಜಿಲ್ಲಾಧಿಕಾರಿಗಳು ಉದ್ಘಾಟಿಸಿದರು . ಗಣೇಶ, ಸುಬ್ರಮಣ್ಯ, ಚಂಡಿಕೇಶ್ವರ, ಪಾರ್ವತಮ್ಮ, ನಂಜುಂಡೇಶ್ವರ ಬೃಹತ್ ಮಹಾ ತೇರುಗಳನ್ನು ರಥ. ಬೀದಿಯಲ್ಲಿ ವಿವಿಧ ತಾಳ ಮದ್ದೆಳೆಗಳ ವಾದ್ಯ ಗೋಷ್ಠಿಯೊಂದಿಗೆ ಸಾಗರೋಪಾದಿಯಲ್ಲಿ ಜನಸ್ತೋಮದ ನಡುವೆ ಜೈಕಾರದ ಮೂಲಕ ಸಾಗಿತು.

ಪೊಲೀಸ ಅಧಿಕಾರಿಗಳು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಭದ್ರತೆಯನ್ನು ಏರ್ಪಡಿಸಿದ್ದರು. ಮೆರವಣಿಗೆ ಶಾಂತವಾಗಿ ಸಾಗಿತು. ಸ್ವಾಮಿಗೆಹೂವು ಹಣ್ಣುಗಳನ್ನು ಮಾರ್ಗಗಳಲ್ಲಿ ಭಕ್ತಾದಿಗಳು ಮೇಲೆ ಎಸೆದರು. ರಥೋತ್ಸವ ದೇವಸ್ಥಾನದಲ್ಲಿ ಕೊನೆಯಾಯಿತು. ಮಾರ್ಗದಲ್ಲಿ ಅನ್ನ ಸಂತರ್ಪಣ ಕಾರ್ಯ ಪಟ್ಟಣದ ಎಲ್ಲಾ ಕಡೆ ನಡೆಯಿತು . ಅಲ್ಲಲ್ಲಿ ಮಜ್ಜಿಗೆ ಪಾನಕ ಸಿಹಿ ವಿತರಣಾ ಕಾರ್ಯಗಳು ನಡೆದವು.
