ಭಗವಾನ್ ಮಹಾವೀರರ ಬೋಧನೆಗಳು

ಭಗವಾನ್ ಮಹಾವೀರರ ಬೋಧನೆಗಳು

Share

ಭಗವಾನ್ ಮಹಾವೀರರು ಈ ವರ್ತಮಾನ ಕಾಲದ ಭರತ ಕ್ಷೇತ್ರದ 24 ನೇಯ (ಅಂತಿಮ) ತೀರ್ಥಂಕರರು. ಈಗ ನಡೆಯುತ್ತಿರುವುದು ಅವರ ತೀರ್ಥಕಾಲ ಚೈತ್ರ ಶುಕ್ಲ ತ್ರಯೋದಶಿ ಶುಭಯೋಗ ಸ್ವಾತಿ ನಕ್ಷತ್ರದಲ್ಲಿ ಸುಮಾರು 5621 ವರ್ಷಗಳ ಹಿಂದೆ ಭಗವಾನ್ ಮಹಾವೀರರ ಜನನವಾಯಿತು. ಕುಂಡಲಪುರದ ಅರಸ ಸಿದ್ದಾರ್ಥ ರಾಜ ಮತ್ತು ತ್ರಿಶಲಾ ರ ಏಕಮಾತ್ರ ಸುಪುತ್ರ ಇವರು. ಇವರ ಜನನಕ್ಕೆ 6 ತಿಂಗಳು ಮುಂಚಿತವಾಗಿಯೇ ಸಿದ್ಧಾರ್ಥ ರಾಜನ ಅರಮನೆಯ ಅಂಗಳದಲ್ಲಿ ಪ್ರತಿದಿನ ಮೂರುಬಾರಿ ಮೂರುವರೆ ಕೋಟಿ ಮುತ್ತು ರತ್ನಗಳ ಸುರಿಮಳೆ ಆಗುವುದಕ್ಕೆ ಪ್ರಾರಂಭವಾಯಿತು. ಒಟ್ಟು ಹದಿನೈದು ತಿಂಗಳು ಈ ರತ್ನವೃಷ್ಟಿ ಮುಂದುವರೆದು ಧನ-ಧನ್ಯಾದಿಗಳಿಂದ ರಾಜ್ಯ ಸುಭೀಕ್ಷವಾಯಿತು. ಮಹಾಪುರುಷರೆಂದರೆ ಹೀಗೆ ಪುಣ್ಯದ ಹೊಳೆಯೇ ಹರಿಯುತ್ತದೆ.
ತೀರ್ಥಂಕರರು:- ತೀರ್ಥಂಕರರೆಂದರೆ ಧರ್ಮ ತೀರ್ಥ ಪ್ರವರ್ತಕರು ‘ತರಂತಿ ಸಂಸಾರ ಮಹಾರ್ಣವಂ ಏಸ ತತ್ ತೀರ್ಥಂ’
ಅರ್ಥ:- ಯಾರ ಉಪದೇಶದ ಮುಖಾಂತರವಾಗಿ ಈ ಸಂಸಾರ ಸಾಗರವನ್ನು ದಾಟಲು ಸಾಧ್ಯವಾಗುತ್ತದೆಯೋ ಅದೇ ತೀರ್ಥವಾಗಿದೆ.(ಕಲ್ಯಾಣಕಾರಿಯಾಗಿದೆ)
ಭಗವಾನ್ ಮಹಾವೀರರ ಜನ್ಮಕಲ್ಯಾಣೋತ್ಸವದಂದು ಅವರ ಉನ್ನತ ವಿಚಾರಗಳ , ತತ್ವಗಳ ಸಿದ್ದಾಂತಗಳನ್ನು ಅರಿತು ಅದರಂತೆ ನಡೆಯುವುದು ಕಲ್ಯಾಣಕರವಾಗಿದೆ.
ಮಹಾವೀರರ ಸಿದ್ಧಾಂತಗಳು:- ಜೈನ ತತ್ವಗಳಾದ ಅಹಿಂಸೆ, ಅಪರಿಗೃಹ ಮತ್ತು ಅನೇಕಾಂತವಾದಗಳು ಭಗವಾನ್ ಮಹಾವೀರರ ಕಾಲದಲ್ಲಿ ಪ್ರಚಾರವಾಗಿ ಪುನರ್ ಸ್ಥಾಪನೆಗೊಂಡವು. ಇವುಗಳ ಪ್ರಚಾರ ಮಾಡಿ ಭಗವಾನ್ ಮಹಾವೀರರು ತಾವು ಉತ್ತಮ ಸಮಾಜ ಶಾಸ್ತ್ರಜ್ಞರು ಮತ್ತು ಸಮಾಜ ಸುಧಾರಕರು ಎಂಬುದನ್ನು ನಿರೂಪಿಸಿದರು. ಈ ಸಿದ್ಧಾಂತಗಳನ್ನು ಪಾಲಿಸುವುದರಿಂದ ಹೇಗೆ ಜೀವನವನ್ನು ಸ್ವರ್ಗಸಮಾನವನ್ನಾಗಿ ಮಾಡಿಕೊಂಡು ಬಾಳಬಹುದು ಎಂದು ಭೋಧಿಸಿದರು. ಇಷ್ಟಲ್ಲದೇ ಶಾಶ್ವತ ಸುಖವನ್ನು ಪಡೆಯುವ ಮೋಕ್ಷಮಾರ್ಗ , ರತ್ನತ್ರಯ ಮಾರ್ಗವನ್ನೂ ಭೋಧಿಸಿದರು.
ಅಹಿಂಸೆ:- ಅಹಿಂಸಾ ಪರಮೋಧರ್ಮ: ಬಾಳು ಮತ್ತು ಬಾಳಗೊಡು ಐive ಚಿಟಿಜ ಐeಣ ಐive ಇವು ಮಹಾವೀರರ ವಿಚಾರ. ಈ ಪ್ರಪಂಚದಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಗೆ ಬದುಕುವ ಹಕ್ಕಿದೆ . ಆ ಹಕ್ಕನ್ನು ಕಸಿದುಕೊಳ್ಳಲು ಯಾರಿಗೂ ಅಧಿಕಾರವಿಲ್ಲ. ಕೇವಲ ತಮ್ಮ ನಾಲಗೆಯ ರುಚಿಗಾಗಿ ಮತ್ತೊಂದು ಜೀವಿಯನ್ನು ಕೊಂದು ತಿನ್ನುವುದು ಮಹಾಪಾಪ ಎಂದು ಮಾನವರಿಗೆ ಭೋಧಿಸಿದರು. ನಮ್ಮ ಸುತ್ತಮುತ್ತಲು ಇರುವ ಏಕೇಂದ್ರಿಯದಿಂದ ಪಂಚೇದ್ರಿಯ ಜೀವಿಗಳ ವರೆಗೆ ಯಾವ ಜೀವಿಗೂ ಉದ್ದೇಶಪೂರ್ವಕವಾಗಿ ಹಿಂಸೆ ಮಾಡಬಾರದು ಎಂದರು. ಸಾವಿರರು ವರ್ಷಗಳ ಹಿಂದೆಯೇ ಭಗವಾನ್ ಮಹಾವೀರರು ಪರಿಸರ ಸಂರಕ್ಷಣೆಯ ವಿಚಾರವಾಗಿ ಒತ್ತುಕೊಟ್ಟರು. ಮನುಜ ಇಂದು ತನ್ನ ಸ್ವಾರ್ಥ ಮತ್ತು ದುರಾಸೆಯಿಂದ ಪ್ರಕೃತಿಯ ಮೇಲೆ, ಪರಿಸರದ ಮೇಲೆ ಪ್ರಹಾರ ಮಾಡುತ್ತಾ ದಬ್ಬಾಳಿಕೆ ನಡೆಸುತ್ತಿದ್ದಾನೆ. ಗುಡ್ಡ ಬೆಟ್ಟ , ನದಿ ಸಮುದ್ರ, ಗಿಡ ಮರ, ಅರಣ್ಯಗಳ ಸಂಪತ್ತನ್ನೆಲ್ಲಾ ಲೂಟಿ ಮಾಡಲು ಅವನ್ನು ನಾಶಮಾಡುತ್ತಿದ್ದಾನೆ, ಕಲುಷಿತಗೊಳಿಸುತ್ತಿದ್ದಾನೆ. ನಮ್ಮ ಪರಿಸರದಲ್ಲಿ ತುಂಬಿರುವ ಏಕೇಂದ್ರಿಯ ಜೀವಿಗಳಿಗೆ ಮತ್ತು ತ್ರಸ ಜೀವಿಗಳಿಗೂ ಇದರಿಂದ ಅಪಾರ ಹಿಂಸೆಯಗುತ್ತಿದೆ. ಈ ಹಿಂಸೆಯಿಂದಾಗಿಯೇ ಇಂದು ಮನುಕುಲ ಅನೇಕ ಪ್ರಾಕೃತಿಕ ವಿಕೋಪಗಳಿಗೆ ಗುರಿಯಾಗಿದೆ. ಮಾನವನ ದಬ್ಬಾಳಿಕೆಗೆ ಪ್ರಕೃತಿ ಈಗ ಸಿಡಿದೆದ್ದಿದೆ. ಗ್ಲೋಬಲ್ ವಾರ್ಮಿಂಗ್, ಸುನಾಮಿ, ಭೂಕಂಪ ,ಚಂಡಮಾರುತ ಬರ ಮುಂತಾದವುಗಳು ಹೆಚ್ಚಾಗುತ್ತಿವೆ. ಕೊರೋನಾ ಸಮಯದಲ್ಲಿ ಆಕ್ಸಿಜನ್‍ಗಾಗಿ ಮನುಷ್ಯರು ಪರದಾಡಿ ಪರಿಪಾಟಲು ಪಟ್ಟರು. ಪರಿಸರವನ್ನು ಸಂರಕ್ಷಿಸಿ ಆಗ ನೀವೂ ಸುರಕ್ಷಿತ ಎಂದೂ ಭಗವಾನ್ ಮಹಾವೀರರು ಆ ಕಾಲದಲ್ಲೇ ಬೋಧಿಸಿದ್ದರು.
ಪರಸ್ಪರೋಪಗೃಹೋ ಜೀವಾನಾಮ್- ಜೀವಿಗಳು ಬದುಕಿಗಾಗಿ ಪರಸ್ಪರ ಅವಲಂಭಿಸಿರುತ್ತವೆ. ಆದ್ದರಿಂದ ಸರ್ವಹಿತವನ್ನು ಬಯಸುವುದೇ ಧರ್ಮ ಎಂದು ಭಗವಾನ್ ಮಹಾವೀರರು ಭೋಧಿಸಿದರು.
ಧರ್ಮ:-

  1. ಯಾವುದನ್ನು ನೀನು ನಿನಗಾಗಿ ಬಯಸುತ್ತಿಯೋ ಅದನ್ನು ಬೇರೆಯವರಿಗೂ ಬಯಸಬೇಕು. ಯಾವುದನ್ನು ನೀನು ನಿನಗಾಗಿ ಬಯಸುವುದಿಲ್ಲವೋ ಅದನ್ನು ಬೇರೆಯವರಿಗೂ ಬಯಸಬಾರದು.
  2. ಧರ್ಮದ ಹೆಸರಿನಲ್ಲಿ ಹಿಂಸೆ ಮಾಡಿದರೆ ಅದು ಧರ್ಮವನ್ನೇ ಕೊಲೆ ಮಾಡಿದಂತೆ.
  3. ಧರ್ಮೋ ರಕ್ಷತಿ ರಕ್ಷಿತಃ:- ಯಾರು ಧರ್ಮವನ್ನು ರಕ್ಷಿಸುತ್ತಾರೋ ಅವರನ್ನು ಧರ್ಮವು ರಕ್ಷಿಸುತ್ತದೆ.

ಮುಪ್ಪು ನಮ್ಮನ್ನಾವರಿಸುವ ಮುನ್ನ, ಇಂದ್ರಿಯಾಗಳು ಶಿಥಿಲವಾಗುವ ಮುನ್ನ ಬೇನೆ ಬೇಸರಿಕೆಗಳು ಬೆಳೆಯುವ ಮುನ್ನ ಧರ್ಮವನ್ನಾಚರಿಸಬೇಕು ಎಂದು ಭಗವಾನ್ ಮಹಾವೀರರು ಭೋಧಿಸಿದರು.
ಸ್ವಹಿಂಸೆ, ಪರಹಿಂಸೆ ಎರಡನ್ನು ಮಾಡಬಾರದು ಕ್ರೋಧ, ಮಾನ, ಮಾಯಾ, ಲೋಭಗಳು ನಮ್ಮ ಆತ್ಮಘಾತವನ್ನು ಮಾಡಿ ನಮ್ಮನ್ನು ಅಧೋಗತಿಗೆ ದೂಡುತ್ತವೆ. ಆದ್ದರಿಂದ ನಾವು ಕಷಾಯಗಳನ್ನು ಕಡಿಮೆ ಮಾಡಿಕೊಳ್ಳುವ ನಿರಂತರ ಪ್ರಯತ್ನವನ್ನು ಮಾಡಬೇಕು.
ಅನೇಕಾಂತವಾದ:- ಯಾವುದೇ ವಸ್ತುವನ್ನಾಗಲೀ, ವಿಷಯವನ್ನಾಗಲೀ ವಿವಿಧ ದೃಷ್ಟಿಕೋನಗಳಿಂದ ವೀಕ್ಷಿಸಿದಾಗಲೇ ಸತ್ಯ ಗೋಚರಿಸುತ್ತದೆ. ಇನ್ನು ಸಮಾಜದಲ್ಲಿ ಸಹ ಅಸ್ತಿತ್ವ, ಹೋಂದಾಣಿಕೆ ಇರಬೇಕೆಂದರೆ ಅನೇಕಾಂತ ದೃಷ್ಟಿ ಇರಬೇಕು. ನಾನೇ ಸರಿ, ನನ್ನದು ಮಾತ್ರ ಸರಿ ಎಂದರೆ ಅದು ಏಕಾಂತವಾದ ಆಗುತ್ತದೆ. ಏಕಾಂತದಲ್ಲಿ ವಾದ, ವಿವಾದ, ಕಲಹವಿದೆ. ಅನೇಕಾಂತದಲ್ಲಿ ಸಂವಾದವಿದೆ, ಸ್ನೇಹವಿದೆ. ಅನೇಕಾಂತ ದೃಷ್ಟಿಕೋನವಿದ್ದರೆ ಈ ವಿಶ್ವದಲ್ಲಿ ಮಹಾಯುದ್ಧಗಳೇ ಸಂಭವಿಸುತ್ತಿರಲಿಲ್ಲ. ಸಾಮಾಜಿಕ ಸಂಘರ್ಷಣೆಗಳು ಕಡಿಮೆಯಾಗುತ್ತಿದ್ದವು. ಲೋಕ ಹಿತವಾಗುತ್ತಿತ್ತು.

ಅಪರಿಗೃಹ:-ಮಾನವನ ಪರಿಗ್ರಹ ಬುದ್ಧಿ, ಅತಿ ಆಸೆ, ಅತಿ ಸಂಗ್ರಹಣೆ ಮಾಡುವ ಬುದ್ಧಿಯೇ ಇದು ಇಡೀ ಸಮಾಜದ ಅಧಃಪತನಕ್ಕೆ ಕಾರಣ. ಧನಿಕ, ಬಡವ ಎನ್ನುವ ಅಂತರ ಹೆಚ್ಚಾದಷ್ಟು ಸಾಮಾಜಿಕ ಸ್ವಾಸ್ಥ್ಯ ಹದಗೆಡುತ್ತದೆ. ಕಳ್ಳತನ, ಕೊಲೆ, ಸುಲಿಗೆ, ದರೋಡೆ, ಮುಂತಾದವು ಹೆಚ್ಚುತ್ತದೆ. ಆದ್ದರಿಂದ ಇವನ್ನೆಲ್ಲಾ ತಡೆಗಟ್ಟಲು ಇದ್ದವರು, ಇಲ್ಲದವರಿಗೆ ದಾನ ನೀಡಬೇಕು. ಸಾಮಾಜಿಕ ಸಮಾನತೆಗಾಗಿ ಪ್ರಯತ್ನಪಡಬೇಕು ಎಂದು ಚತುರ್ವಿಧ ದಾನಗಳನ್ನು ಭೋಧಿಸಿದರು. ಆಹಾರ ದಾನ, ಆಭಯದಾನ, ಔಷಧದಾನ ಮತ್ತು ಜ್ಞಾನದಾನ ಪ್ರತಿಯೊಬ್ಬ ಶ್ರಾವಕನೂ ಯಥಾಶಕ್ತಿ ದಾನ ನೀಡಿ ಸಮಾಜದ ಋಣವನ್ನು ತೀರಿಸಬೇಕು ಎಂದು ಭೋಧಿಸಿದರು.
ಭಗವಾನ್ ಮಹಾವೀರರ ತತ್ವ ಸಿದ್ಧಾಂತಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಮ್ಮ ಮಾನವ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳೋಣ.

ಲೇಖಕಿ:-ಡಾ|| ನೀರಜಾ ನಾಗೇಂದ್ರ ಕುಮಾರ್
ಅಶ್ವಿನಿ ಕ್ಲಿನಿಕ್
ಬೆಂಗಳೂರು-75


Share