ಶರಣ ಪರಂಪರೆಯ ದಾರಿಯಲ್ಲಿ ಸಾಗಿಬಂದ ‘ಮುಸಲಾಪುರ’ ಮತ್ತು ಮುಸಲಾಪುರ ಜಾತ್ರೆ : ಒಂದು ಪ್ರಾತ್ಯಕ್ಷಿಕ ಅನುಭವ
ಒಂದು ವಿಶೇಷ ಸಾರ್ವಜನಿಕ ಒಂದುಗೂಡುವಿಕೆಗೆ ‘ಜಾತ್ರೆ’ ಎನ್ನುವ ಪರಿಕಲ್ಪನೆ ಇದೆ. ದೇವರ ಜಾತ್ರೆಗಳು ಗ್ರಾಮೀಣ ಪ್ರದೇಶಗಳ ಒಂದು ಬಹುಮುಖ್ಯ ಪರಂಪರೆ. ಸೌಹಾರ್ದತೆ, ಒಗ್ಗಟ್ಟು, ಪರಹಿತ ಚಿಂತನೆ, ಸೊಬಗು-ಸೊಗಡಿನ ಆಚರಣೆಗಳು .. ಹೀಗೆ ಹಲವು ವಿಶೇಷ ಪರಿಕಲ್ಪನೆಗಳು ಗ್ರಾಮ ಜಾತ್ರೆಗಳಿಗಿರುತ್ತವೆ.
ಶ್ರಾವಣ ಮಾಸ ನಮ್ಮ ಪರಂಪರೆಯ ಪವಿತ್ರ ಮಾಸ. ಹಬ್ಬಗಳ, ಜಾತ್ರೆಗಳ ಮಾಸ ಎಂತಲೂ ಕರೆಯಬಹುದು. ಈ ಮಾಸ ಹೊರತಾಗಿಯೂ ವಿವಿಧ ಅಮವಾಸ್ಯೆ, ಹುಣ್ಣಿಮೆ, ತಿಥಿ, ಪಕ್ಷಗಳ ಆಧರಿತ ಜಾತ್ರೆಗಳಿಗೂ ನಮ್ಮಲ್ಲಿ ಕಡಿಮೆ ಇಲ್ಲ.
ಗಂಡನ ಮನೆಗೆ ಹೋದ ಹೆಣ್ಣುಮಕ್ಕಳು ತವರುಮನೆಗೆ ಬರಲು ಒಂದು ಕಾರಣ ಸೃಷ್ಟಿಸಲೂ ಜಾತ್ರೆಯ ಆಚರಣೆ ಬಂದಿರುವ ಉದಾಹರಣೆ ಪಕ್ಕದ ಯಲಬುರ್ಗಾ ತಾಲೂಕಿನಲ್ಲಿದೆ. ಮಹಾಮಹಿಮರ ಸ್ಮರಣೆಯ ದಿನಗಳೂ ಜಾತ್ರೆಗಳಾಗಿರುವ ಪ್ರತೀತಿಗಳಿವೆ. ಜಾತ್ರೆಯ ಆಚರಣೆಗೆ ಒಂದು ಪವಿತ್ರ ಉದ್ದೇಶವಂತೂ ಖಂಡಿತ ಇದೆ.
ಕೊಪ್ಪಳದ ಗವಿಸಿದ್ಧೇಶ್ವರ ಜಾತ್ರೆ ಕಳೆದ ದಶಕದಿಂದೀಚಿಗೆ ಸಮಾಜಮುಖಿ ಜಾತ್ರೆಯಾಗಿ ಬದಲಾಗಿದ್ದು ಜಾತ್ರೆಯ ನೆಪದಲ್ಲಿ ಸಾಕಷ್ಟು ಸಮಾಜೋದ್ಧಾರ ಕೆಲಸಗಳಾಗುತ್ತಿವೆ.
ಕೊಪ್ಪಳದಿಂದ ಕನಕಗಿರಿಗೆ ಹೋಗುವ ದಾರಿಯಲ್ಲಿ ಬರುವ ಗ್ರಾಮ ‘ಮುಸಲಾಪುರ’. ಇಲ್ಲಿನ ಪ್ರಾಥಮಿಕ ಶಾಲೆಗೆ ಕಳೆದ ವರ್ಷ ವರ್ಗಾವಣೆಯಾಗಿ ಬಂದಾಗ ನನಗೆ ಗಮನ ಸೆಳೆದದ್ದು ಮುಸಲಾಪುರ ಮತ್ತು ಸುತ್ತಮುತ್ತಲ ಗ್ರಾಮಗಳ ಮಕ್ಕಳ ಸಂಸ್ಕಾರ. ಬಹುತೇಕ ಮಕ್ಕಳ ಹಣೆಯಲ್ಲಿ ತಿದ್ದಿ ತೀಡಿದ ವಿಭೂತಿ, ಎರಡೂ ಕೈಗಳನ್ನು ಮುಗಿದು ನಮಸ್ಕರಿಸುವ ಗುಣ, ಬಸವಾದಿ ಶರಣರ ಕುರಿತಾಗಿ ವಿಶೇಷ ಆಸಕ್ತಿಯನ್ನು ಹೊಂದಿರುವುದನ್ನು ಗಮನಿಸಿದೆ.
ಈ ನೆಲದ ಒಳ್ಳೆಯ ಸಂಸ್ಕಾರದ ಪರಂಪರೆಯ ಫಲದಿಂದ ಇಂಥ ಒಳ್ಳೆಯ ನಡವಳಿಕೆ ಮಕ್ಕಳಲ್ಲಿ ಬಂದಿರಬೇಕು ಎಂದು ಊಹಿಸಿದೆ. ಆ ನಂತರ ಈ ನೆಲದ ಪರಂಪರೆಯನ್ನು ತಿಳಿದುಕೊಳ್ಳಲು ಹೋದಾಗ ಗೊತ್ತಾಗಿದ್ದು ಮುಸಲಾಪುರ ವು ಸಾವಿರ ವರ್ಷಗಳಷ್ಟು ಇತಿಹಾಸವನ್ನು ಹೊಂದಿರುವ ಶರಣ ಸಂಸ್ಕೃತಿಯ ಗ್ರಾಮವೆಂಬುದು.
ಈ ಗ್ರಾಮಕ್ಕೆ ‘ಬಸವಗಿರಿ’, ‘ಬಸವನಗಿರಿ’ ಎಂದು ಕರೆಯಲಾಗುತ್ತಿತ್ತು. ಶಿವನ ವಾಹನವಾದ ನಂದಿಯ ‘ದಿಡಗಿ ಬಸವಣ್ಣನ ದೇವಾಲಯ’ ಇಲ್ಲಿ ಇರುವುದರಿಂದ ಈ ಹೆಸರು ಬಂದಿತ್ತೆಂಬ ಮೌಖಿಕ ಉಲ್ಲೇಖಗಳಿವೆ. ‘ದಿಡಗಿ’ ಶಬ್ದಕ್ಕೆ ಗಿರಿ, ಆಲಯ, ಸುಕ್ಷೇತ್ರ, ಪವಿತ್ರ ಸ್ಥಳ ಎಂಬ ಸಮಾನಾರ್ಥ ಪದಗಳಿವೆ. ಹೀಗಾಗಿ ಬಸವಣ್ಣನು ನೆಲೆಸಿರುವ ದಿಡಗಿಯೇ ಬಸವನ ‘ದಿಡಗಿ’, ಬಸವನ’ಗಿರಿ’ ಮುಂದೆ ‘ಬಸವಗಿರಿ’ಯಾಗಿದೆ.
ಇನ್ನೂ ಮಹತ್ವದ ಸಂಗತಿಯೆಂದರೆ ಕಲ್ಯಾಣ ಕ್ರಾಂತಿಯ ಹರಿಕಾರ ಬಸವಣ್ಣನವರ ಸೋದರಳಿಯ ಹನ್ನೆರಡನೇ ಶತಮಾನದ ಅಗ್ರಗಣ್ಯ ಶರಣರಲ್ಲಿ ಒಬ್ಬರಾದ ಚನ್ನಬಸವಣ್ಣನವರು ತಂಗಿ ಹೋದ ತಾಣ ಈ ಗ್ರಾಮ. ಹೀಗಾಗಿ ಶರಣ ಪರಂಪರೆಯ ದಟ್ಟ ಛಾಯೆ ಈ ಗ್ರಾಮದಲ್ಲಿ ಮುಂದುವರಿದುಕೊಂಡು ಬಂದಿದೆ.
ದಿಡಗಿ ಬಸವೇಶ್ವರ ದೇವಸ್ಥಾನದ ಜೊತೆಗೆ ಇಲ್ಲಿ ಬನ್ನಿ ಬಸವೇಶ್ವರ ಮತ್ತು ಚನ್ನಬಸವೇಶ್ವರ ದೇವಸ್ಥಾನಗಳೂ ಇವೆ. ಇಡೀ ಗ್ರಾಮ ಒಂದರ್ಥದಲ್ಲಿ ‘ಬಸವ’ಮಯವಾಗಿದೆ. ಬಸವಣ್ಣ, ಚನ್ನಬಸವಣ್ಣನವರು ಮುಸಲಾಪುರ ಗ್ರಾಮದ ಮನೆ-ಮನಗಳ ಶ್ರದ್ಧಾ-ಭಕ್ತಿಯ ಕೇಂದ್ರವಾಗಿದ್ದಾರೆ. ಇಲ್ಲಿಯ ಬಹುತೇಕ ಮನೆಗಳಿಗೆ ‘ಬಸವ ನಿಲಯ’, ‘ಬಸವೇಶ್ವರ ಕೃಪೆ’, ‘ಚನ್ನಬಸವಣ್ಣ ನಿಲಯ’, ‘ಬಸವಣ್ಣನ ಜ್ಯೋತಿ’ ಎನ್ನುವ ಹೆಸರುಗಳಿವೆ. ಗ್ರಾಮದ ಬಹುತೇಕ ಮನೆಗಳಲ್ಲಿ ಬಸವರಾಜ, ಚನ್ನಬಸವ, ಬಸಮ್ಮ, ಚನ್ನಬಸಮ್ಮ ಹೆಸರಿನ ಕನಿಷ್ಟ ಒಬ್ಬರಾದರೂ ಇರುತ್ತಾರೆ. ‘ಬಸವ ನಾಮ’ವು ಇಲ್ಲಿ ಒಂದು ಮಂತ್ರವಾಗಿದೆ. ಶರಣ ಪರಂಪರೆಯ ಪ್ರಭಾವದ ಹೆಮ್ಮೆಯ ಸ್ಥಳವಾಗಿದೆ.
18 ಮತ್ತು 19 ನೇ ಶತಮಾನಗಳ ಕಾಲಘಟ್ಟದಲ್ಲಿ ಈ ಗ್ರಾಮವು ಒಣಕೆಗಳನ್ನು ತಯಾರಿಸುವ ಮರಗಳನ್ನು ಹೊಂದಿದ್ದ ಸಮೃದ್ಧ ಅರಣ್ಯದ ನೈಸರ್ಗಿಕ ತಾಣವಾಗಿತ್ತು. ಹೀಗಾಗಿ ಇದು ‘ಒಣಕೆ’ಗಳನ್ನು ತಯಾರಿಸುವ ವ್ಯಾಪಾರೀ ಕೇಂದ್ರವಾಗಿತ್ತೆಂಬ ಮಾಹಿತಿಗಳಿವೆ.
ಮುಂದೆ ಈ ಪ್ರದೇಶ ಹೈದರಾಬಾದ-ಕರ್ನಾಟಕದ ಭಾಗವಾದ ಮೇಲೆ ಇಲ್ಲಿ ತಯಾರಿಸಲಾಗುತ್ತಿದ್ದ ಒಣಕೆ ಮರಗಳತ್ತ ಮುಸ್ಲಿಂ ವ್ಯಾಪಾರಿಗಳ ಗಮನ ಹರಿಯಿತು. ನಿಜಾಮನ ಆಡಳಿತ ಭಾಷೆ ಉರ್ದು ಆಗಿದ್ದರಿಂದ ಉರ್ದು ಭಾಷೆಯು ಸಹಜವಾಗಿ ಇಡೀ ಹೈದರಾಬಾದ-ಕರ್ನಾಟಕದ ಭೌಗೋಳಿಕ ಪರಿಸರದ ಮೇಲೆ ತನ್ನ ಪರಿಣಾಮ ಬೀರಿತು. ಇದರಿಂದ ಕನ್ನಡದಲ್ಲಿ ಉರ್ದು ಭಾಷೆ ಮಿಶ್ರಿತವಾಯಿತು.
ಇಲ್ಲಿ ಒಣಕೆ ಮರಗಳು ಹೇರಳವಾಗಿದ್ದವು. ‘ಒಣಕೆ ಮರ’ಕ್ಕೆ ಉರ್ದು ಭಾಷೆಯಲ್ಲಿ ‘ಮುಸಲ್’ ಎಂದು ಕರೆಯುತ್ತಾರೆ. ‘ಆಲಂ’ ಎಂದರೆ ಜಗತ್ತು ಅಥವಾ ಪ್ರದೇಶ ಎಂಬರ್ಥಗಳಿವೆ. ಒಣಕೆ (ಮುಸಲ್) ಗಳನ್ನು ಮಾರುವ ವ್ಯಾಪಾರದ ಆಲಂ (ಜಗತ್ತು, ಪ್ರದೇಶ) ಮುಸಲ್ ಆಲಂಪುರವಾಗಿ ಬದಲಾಗಿ ಪ್ರಸ್ತುತ ‘ಮುಸಲಾಪುರ’ಕ್ಕೆ ಕಾರಣವಾಗಿದೆ. ಮುಸಲಾಪುರ ಇದೀಗ ಸಣ್ಣ ಹಳ್ಳಿಯಾಗುಳಿದಿಲ್ಲ. ಬೆಳೆದಿರುವ, ಇನ್ನೂ ಬೆಳೆಯುತ್ತಲೇ ಇರುವ ಸುಧಾರಿತ ಹಳ್ಳಿ ಎನ್ನಬಹುದು.
ಇಲ್ಲಿ ಪ್ರತೀ ವರ್ಷ ಎಳ್ಳ ಅಮವಾಸ್ಯೆಯ ದಿನ ‘ಶ್ರೀ ಚನ್ನಬಸವೇಶ್ವರ’ ಮತ್ತು ‘ಶ್ರೀ ಮಾರುತೇಶ್ವರ’ ಜಾತ್ರೆ ನಡೆಯುತ್ತದೆ. ಇಡೀ ಮುಸಲಾಪುರ ಗ್ರಾಮಕ್ಕೆ ಗ್ರಾಮವೇ ಸಡಗರ, ಸಂಭ್ರಮದಲ್ಲಿ ತೇಲುತ್ತಿರುತ್ತದೆ. ತಮ್ಮ ಬಂಧು-ಬಳಗದವನ್ನು, ಸ್ನೇಹಿತರನ್ನು ಜಾತ್ರೆಗೆ ಆಮಂತ್ರಿಸಿ ತಮ್ಮ ಸಡಗರದಲ್ಲಿ ಎಲ್ಲರಿಗೂ ಬೆಸುಗೆ ಹಾಕುತ್ತಾರೆ.
ವಾರ ಮೊದಲೇ ಮನೆಗಳನ್ನು ಸಾರಿಸಿ ಸ್ವಚ್ಛಗೊಳಿಸಿಕೊಳ್ಳುವುದು, ಭಕ್ತಿ-ಭಾವದಿಂದ ಜಾತ್ರೆಯ ಪೂರ್ವ ತಯಾರಿ ಮಾಡಿಕೊಳ್ಳುವುದು, ಮಕ್ಕಳಿಗೆ ಹೊಸ ಬಟ್ಟೆ ಕೊಡಿಸುವುದು, ಸಿಹಿ ತಿನಿಸುಗಳನ್ನು ತಯಾರಿಸಿಕೊಳ್ಳುವುದು .. ಹೀಗೆ ಹಲವು ಸಡಗರಗಳಿಗೆ ಇಲ್ಲಿನ ಜನತೆ ಸಾಕ್ಷಿಯಾಗುತ್ತಾರೆ.
ಪ್ರಾಥಮಿಕ ಶಾಲೆಯ ಮುಂದಿನ ಜಾಗದಲ್ಲಿ ಮೂರ್‍ನಾಲ್ಕು ದಿನಗಳ ಮೊದಲೇ ಹಾಕಲಾಗುವ ಜೋಕಾಲಿಗಳು ಮಕ್ಕಳ ಹಿಗ್ಗನ್ನು ಮತ್ತಷ್ಟು ಇಮ್ಮಡಿಗೊಳಿಸುತ್ತದೆ.
“ನಮ್ ಜಾತ್ರಿ ಹಂಗಿರುತ್ತ, ತೇರು ಇಲ್ಲಿತನ ಬರುತ್ತ, ಹೊಸ ಬಟ್ಟಿ ಕೊಡಿಸ್ಯಾರ, ಮಾದಲಿ ಮಾಡತಾರ, ಬೂಂದೆ ತಂದೀವಿ, ಗುಡಿಗೆ ಜಲ್ದಿ ಹೋಗಬೇಕು, ಕೊಂಡ ಹಾರಾದು ನೋಡ್ತೀವಿ, ಹಾಲು-ಓಕುಳಿ ಬಾಳ ಚೆಂದಿರುತ್ತ, ಜಾತ್ರಿ ಹಿಂದಿನ ದಿನ ನಮ್ಮೂರಾಗ ಯಾರೂ ಮನಿ ಬಾಗಿಲಾನಾ ಹಾಕಾದಿಲ್ಲ, ಇಡೀ ಊರು ಎಷ್ಟು ಚೆಂದಾಗಿರುತ್ತ, ನಮ್ ಜಾತ್ರಿಗೆ ಬರ್ರಿ ಸರ್, ನಮ್ಮನಿಗೆ ಬರ್ರಿ ಸರ್” ಎಂದು ಶಾಲೆಯ ಮಕ್ಕಳು ತಮ್ಮ ಮುಗ್ದತೆ ಮತ್ತು ಸಡಗರದಿಂದ ಜಾತ್ರೆಗೆ ಆಹ್ವಾನಿಸಿದ್ದಾರೆ. ಅವರ ಖುಷಿಯನ್ನು ನೋಡಲಿಕ್ಕಾದರೂ ಜಾತ್ರೆಗೆ ಈ ಸಲ ಹೋಗಬೇಕೆನ್ನುವ ಆಸೆ ನನ್ನದು.
ಜಾತ್ರೆ ಆಚರಣೆ ಪೂರ್ವಿ ಕಾಲದಿಂದ ನಡೆಯುತ್ತಿದ್ದರೂ, 16 ವರ್ಷಗಳಿಂದ ಮಹಾರಥೋತ್ಸವ ಜರುಗುತ್ತಿದೆ. ಮುಸಲಾಪುರ ಗ್ರಾಮದ ಜಾತ್ರೆ ಎಂದರೆ ಗ್ರಾಮ್ಯ ಪರಿಸರದ, ಪರಂಪರೆಯ ಅನಾವರಣದಂತಿದೆ.
ಜಾತ್ರೆಯ ಮೂರು ದಿನಗಳ ಮೊದಲು ಕಳಸಾರೋಹಣವಾಗುತ್ತದೆ. ಕೊಪ್ಪಳದ ಪೂಜ್ಯ ಶ್ರೀ ಗವಿಸಿದ್ಧೇಶ್ವರ ಶ್ರೀಗಳ ಮತ್ತು ಕನಕಗಿರಿಯ ಪೂಜ್ಯ ಚನ್ನಮಲ್ಲ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಜಾತ್ರೆಯ ಎಲ್ಲ ಕಾರ್ಯಕ್ರಮಗಳು ಜರುಗುತ್ತವೆ. ಕಳಸ ಏರಿಸಿದ ಮೇಲೆ ಹಲವು ಧಾರ್ಮಿಕ ಆಚರಣೆಗಳನ್ನು ಭಕ್ತಿ-ಭಾವದಿಂದ ಆಚರಿಸಲಾಗುತ್ತದೆ. ಜಾತ್ರೆಯ ಹಿಂದಿನ ದಿನ ರಾತ್ರಿ ಇಡೀ ಮುಸಲಾಪುರದಲ್ಲಿ ಯಾರೊಬ್ಬರ ಮನೆಗೂ ಬಾಗಿಲು ಹಾಕುವುದಿಲ್ಲ. ಜಾತ್ರೆಯ ದಿನ ನಸುಕಿನಲ್ಲಿ ಕೊಂಡ ಹಾರುವದನ್ನು ನೋಡುವುದೇ ಒಂದು ರೋಮಾಂಚನ.
ರೈತಾಪಿ ವರ್ಗದವರ ಬೆಳೆಗಳು ಸಮೃದ್ಧವಾಗಿರಲಿ, ಗ್ರಾಮದಲ್ಲಿ ಸಹಬಾಳ್ವೆ ನೆಲೆಸಲಿ ಎಂಬ ಆಶಯಗಳನ್ನು ಹೊತ್ತ ಮುಸಲಾಪುರ ಗ್ರಾಮದ ಹಿರಿಯರ ನೇತೃತ್ವದಲ್ಲಿ ಎಲ್ಲ ಗ್ರಾಮಸ್ಥರು ಜಾತ್ರೆಯನ್ನು ಮನೆಯ-ಊರಿನ ಹಬ್ಬವಾಗಿ ಆಚರಿಸುತ್ತಾರೆ.
ರಥೋತ್ಸವದ ಮುಂಚೆ ನಡೆಯುವ ಹಾಲಿನೋಕುಳಿ ಜಾತ್ರೆಯ ವಿಶೇಷತೆಯಲ್ಲೊಂದು. ಮುಸಲಾಪುರ, ಕನಕಗಿರಿ, ವೆಂಕಟಾಪುರ, ಬಂಕಾಪುರ ಹೀಗೆ ಸುತ್ತ-ಮುತ್ತಲ ಹಳ್ಳಿಗಳ ಯಾದವ ಬಾಂಧವರು ಜಾತ್ರೆಗೆಂದೇ ಸಾಕಷ್ಟು ಮೊದಲೇ ಹಾಲನ್ನು ಸಂಗ್ರಹಿಸಿಟ್ಟುಕೊಂಡು, ರಥೋತ್ಸವಕ್ಕೂ ಮುಂಚೆ ಹಾಲಿನೋಕುಳಿಯನ್ನು ಮಾಡುತ್ತಾರೆ. ತಮ್ಮ ಜಾನುವಾರುಗಳು ಸಮೃದ್ಧವಾಗಿರಲಿ ಎಂಬ ಹರಕೆ ಹೊತ್ತ ಸುತ್ತಲ ಹಳ್ಳಿಗಳ ಯಾದವ ಕುಟುಂಬದವರ ಹಾಲಿನೋಕುಳಿಯ ದೃಶ್ಯ ಮನೋಹರವಾಗಿರುತ್ತದೆ.
ರಥೋತ್ಸವದಲ್ಲಿ ಹತ್ತಾರು ಸಾವಿರ ಸಂಖ್ಯೆಯ ಭಕ್ತರು ಭಾಗವಹಿಸಿ ಭಾವಪರವಶರಾಗುತ್ತಾರೆ. ತಮ್ಮ ಇಷ್ಟಾರ್ಥಗಳು ನೆರವೇರಲಿ ಎಂಬ ಹರಕೆಗಳು ಎಲ್ಲರಲ್ಲಿರುತ್ತವೆ. ಬಸವಣ್ಣ ಮತ್ತು ಆಂಜನೇಯ ನಮ್ಮನ್ನು ಮತ್ತು ಊರನ್ನು ಕಾಯುತ್ತಾರೆ, ನಮ್ಮೆಲ್ಲರ ಆಶೋತ್ತರಗಳಿಗೆ ‘ಅಸ್ತು’ ಎನ್ನುತ್ತಾರೆ ಎನ್ನುವ ಭಾವ ತುಂಬಿರುತ್ತದೆ. ಒಟ್ಟಾರೆ ಮುಸಲಾಪುರದ ನೆಲ ‘ಇದು ನನ್ನ ದಿನ’ ಎಂದು ಹೆಮ್ಮೆಯಿಂದ ಬೀಗುತ್ತಿರುತ್ತದೆ.
ಬಳೆಗಳ ಸಾಲಿನಲ್ಲಿ ಹೆಣ್ಣುಮಕ್ಕಳ ಖರೀದಿ, ಆಟಿಕೆಗಳ ಸಾಲಿನಲ್ಲಿ ಮಕ್ಕಳ ಖರೀದಿ ಜೋರು. ಜೋಕಾಲಿಗಳ ಸುತ್ತಲೂ ಜನಜಂಗುಳಿ. ಜಾತ್ರೆಯ ಜವಾಬ್ದಾರಿ ಹೊತ್ತ ಎಲ್ಲ ಹಿರಿಯರ ಶ್ರಮ ಮೆಚ್ಚುವಂಥದ್ದು.
ಕಬಡ್ಡಿ ಮತ್ತಿತರ ದೇಶೀ ಆಟಗಳ ಸ್ಪರ್ಧೆಗಳನ್ನೂ ಆಯೋಜಿಸಲಾಗಿರುತ್ತದೆ. ರಾತ್ರಿಯೆಲ್ಲ ಸಾಮಾಜಿಕ-ಭಕ್ತಿಪ್ರಧಾನ ನಾಟಕಗಳ, ಕಲೆಗಳ ಪ್ರದರ್ಶನವಿರುತ್ತದೆ. ಮುಸಲಾಪುರ ಜಾತ್ರೆ ಎಂದರೆ ವಿವಿಧತೆಗಳ ಏಕತೆಯ ಆಗರವಾಗಿದೆ.
ಮುಸಲಾಪುರ ಜಾತ್ರೆ ಎಂದರೆ ವಿವಿಧತೆಗಳ ಏಕತೆಯ ಆಗರವಾಗಿದೆ. ಹಾಸಗಲ್ ಗ್ರಾಮದವರು ರಥದ ಹಗ್ಗವನ್ನು, ಪರಾಪುರದವರು ಕುದುರೆ ಕುಣಿತವನ್ನು, ಗಂಗನಾಳ ಗ್ರಾಮದವರು ನಂದಿಕೋಲನ್ನು ಮೆರವಣಿಗೆ ಮೂಲಕ ತರುತ್ತಾರೆ. ಜಾತ್ರೆಯ ಮರುದಿನ ಮದ್ದು ಸುಡುವ ಕಾರ್ಯಕ್ರಮ, ಜಾತ್ರೆ ಮುಗಿದ ಒಂದು ವಾರದ ನಂತರ ಕಡುಬಿನ ಕಾಳಗ, ಕಳಸಾವರೋಹಣ ಕಾರ್ಯಕ್ರಮಗಳು ಪರಂಪರೆಯಂತೆ ಸಾಗಿ ಬಂದಿದೆ.
ಇಂಥದ್ದೊಂದು ಗ್ರಾಮ್ಯ ಸೊಗಡಿನ ಜಾತ್ರೆಯ ಸೊಬಗನ್ನು ಒಮ್ಮೆಯಾದರೂ ನೋಡಬೇಕು.