ಉದ್ದಾನ ಶ್ರೀಗಳ ಅನುಗ್ರಹ ಪಡೆದು
ಉದ್ದರಿಸಿ ಸಲಹಿದೆ ಹಗಲಿರುಳು ದುಡಿದು
ಸಿದ್ದಗಂಗೆಯ ಕ್ಷೇತ್ರ ಪಾವನ ತೀರ್ಥ
ಮಾಡಿದ ಗುರುವೆ ನಿಮಗೆ ನನ್ನ ನಮನ||
ಹಸಿದವರಿಗೆ ಅನ್ನ, ನೊಂದವರಿಗೆ ಅಭಯ
ಬಡಮಕ್ಕಳಿಗೆ ವಿದ್ಯೆ ಇದು ನಿಮ್ಮ ಶ್ರದ್ಧೆ
ತ್ರಿವಿಧ ದಾಸೋಹ ನಿಮ್ಮಯ ಉಸಿರು
ಅಳಿಯದೇ ಉಳಿಸಿದೆ ನಿಮ್ಮ ಹೆಸರು||
ಬಂಜರು ನೆಲದಲ್ಲಿ ಹೊನ್ನಬೆಳೆಗೆ ಟೊಂಕಕಟ್ಟಿ
ಭಕ್ತರಿಗೆ ಸಮತೆಯ ಸಾರುವ ಮಠಕಟ್ಟಿ
ಪಾಠಶಾಲೆಯಲ್ಲಿ ಬೆಳಗಿದ ಜ್ಯೋತಿ ನಂದಲೇ ಇಲ್ಲ
ಪಾಕಶಾಲೆಯಲ್ಲಿ ಹಚ್ಚಿದ ಒಲೆ ಆರಲೇ ಇಲ್ಲ
ಇದು ನಿಮ್ಮ ಶ್ರಮದ ಕುರುಹಲ್ಲವೇ ?
ಒಂದೆರಡು ಮಕ್ಕಳಿಂದು ಸಾಕುವುದೇ ಕಷ್ಟ
ಸಾವಿರಾರು ಮಕ್ಕಳ ಸಾಕುವುದೇ ನಿಮಗಿಷ್ಟ
ಹಡೆದ ತಾಯಂದಿರು ಹಾಕಿದರು ನಿಮ್ಮ ಉಡಿಗೆ
ಪಡೆದ ತಾಯಾಗಿ ಸಾಕಿದ ನೀ ಮಾತೃ ಹೃದಯಿ||
ಬಂಧುಗಳಿಗೆ ಮಠಕಟ್ಟಿ, ಬಲಿತವರ ಬೆನ್ನುತಟ್ಟಿ
ಬದುಕುವ ಕಾವಿಗಳೇ ಇಂದು ಹೆಚ್ಚು
ಆದರೆ . . . ನಿಮಗೆ
ಬಡವರಿಗೆ ಮಠಕಟ್ಟಿ, ಬಂದವರ ಬೆನ್ನುಟ್ಟಿ
ನೊಂದವರ ಮೊಗದಲ್ಲಿ ನಗುವ ನೋಡುವ ಹುಚ್ಚು ||
ಸ್ಥಾವರಕೆ ಅಳಿವುಂಟು, ಜಂಗಮಕೆ ಅಳಿವಿಲ್ಲ
ಎಂದು ಸಾರಿದರು ಕಲ್ಯಾಣದಲಿ ಬಸವ
ಅನ್ನದಾಸೋಹಕೆ ಜೋಳಿಗೆ ಹಿಡಿದು
ದಣಿವರಿಯದೇ ನೀವು ನಾಡಲ್ಲಿ ನಡೆದು
ಅಳಿಯದೇ ಜಂಗಮನಾಗಿ ಉಳಿದೆ||
ಸಿದ್ದಗಂಗೆಯ ಕ್ಷೇತ್ರ ಕಲ್ಯಾಣ ಮಾಡಿ,
ಜ್ಞಾನ ಮಂಟಪಕಟ್ಟಿ ಬಸವಣ್ಣನಾಗಿ
ಬಸವತತ್ವವ ಬರೀ ಬೋಧಿಸದೇ ನೀವು
ಸಾಧಿಸಿ ತೋರಿದಿರಿ ಬರುವವರೆಗೆ ಸಾವು||
ಸನ್ಮಾನಗಳ ಹುಡುಕಿ ಹೋಗಲಿಲ್ಲ
ಕಾಯಕವ ಮಾಡುವುದ ಮರೆಯಲಿಲ್ಲ
ಆದರೂ ನಿಮಗೆ ಬರಲಿಲ್ಲ “ಭಾರತ ರತ್ನ”
ಅದೇಕೆ? ನೀವೆ ಇರುವಾಗ “ಅನಘ್ರ್ಯರತ್ನ” ||
ಕ್ರಮಿಸಿದಿರಿ ಬಾಳ ಪಯಣದಿ 111 ವರುಷ
ಶ್ರಮಿಸಿದ ನಿಮ್ಮ ನಿಲುವು ಇನ್ನೊಂದು ಹರುಷ
ಬಾರದ ಲೋಕಕ್ಕೆ ನಿಮ್ಮ ಕರೆದೊಯ್ದಿದೆ ಸಾವು
ಮಾಡಿದ ನಿಮ್ಮ ಸೇವೆಯ ಮರೆವೆವೇ ನಾವು||
ಆಧುನಿಕ ಬಸವಣ್ಣನಾಗಿ ಜನಿಸಿ ಬಂದೆ
ಸಮತೆಯ ಸಂದೇಶ ಹೊತ್ತು ತಂದೆ
ಉಳಿದಿರುವುದೀಗ ನಿಮ್ಮ ನೆನವೊಂದೆ
ಮತ್ತೊಮ್ಮೆ ಹುಟ್ಟಿಬಾ ಬೆಳಕಾಗಿ ತಂದೆ.
-ಸಿ.ಮ.ಗುರುಬಸವರಾಜ
ಹವ್ಯಾಸಿ ಬರಹಗಾರರು