ಬಸವಣ್ಣ ಮತ್ತು ಪ್ರಸ್ತುತತೆ

ಬಸವಣ್ಣ ಮತ್ತು ಪ್ರಸ್ತುತತೆ

Share

ದೃಷ್ಠಿಯಿಂದ ಸಮಷ್ಠಿಯವರೆಗೆ, ರಾಜ್ಯದಿಂದ ದೇಶದವರೆಗೆ, ರಾಷ್ಟ್ರದಿಂದ ಅಂತರ್ ರಾಷ್ಟ್ರದವರೆಗೆ, ಅಂತಿಮವಾಗಿ ಜಗತ್ತಿನ ಸರ್ವೋತ್ತಮ ಅಭಿವೃದ್ಧಿಯಾಗಬೇಕಾದರೆ ಕೆಲವೊಂದು ನೀತಿ, ನಿಯಮ, ತತ್ವ ಸಿದ್ಧಾಂತಗಳು ಅನಿವಾರ್ಯವಾಗುತ್ತವೆ. ಸಕಲ ಜೀವಾತ್ಮರಿಗೆ ಲೇಸನ್ನೆ ಬಯಸುವ ಸರ್ವ ಸಮನಾನತೆಯ ಸಂದೇಶವನ್ನು ಸಾರುವ ಸಾಮಾಜಿಕ, ಆರ್ಥಿಕ, ರಾಜಕೀಯ, ಸಾಹಿತ್ಯಿಕ ಹಾಗೂ ಆಧ್ಯಾತ್ಮಿಕ ತತ್ವ ಸಿದ್ಧಾಂತಗಳನ್ನು ಪರಿ ಪಾಲಿಸಿದ್ದೆಯಾದರೆ ಇವುಗಳೆಲ್ಲವುಗಳಲ್ಲಿ ಸ್ಥಿರತೆಯನ್ನು ತರಬಹುದು. ಪ್ರಜಾಪ್ರಭುತ್ವ ಸರ್ಕಾರಗಳಾಗಲಿ, ರಾಜ ತಾಂತ್ರಿಕ ಸರ್ಕಾರಗಳಾಗಲಿ ಅಥವಾ ನೌಕರಶಾಹಿ ವ್ಯವಸ್ಥೆಗಳಾಗಲಿ, ಮೂಲಭೂತವಾಗಿ ಕೆಲವು ಧ್ಯೇಯೋದ್ಧೇಶ ತತ್ವಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಇದರಿಂದಾಗಿ ಜನತೆ ಶಾಂತಿ, ಸೌಖ್ಯ, ಸಾಮರಸ್ಯ, ಸೌಹಾರ್ದತೆಗಳಿಂದ ಬಾಳಲು ಸಾಧ್ಯವಾಗುತ್ತದೆ. ಇದನ್ನೇ ಕೆಲವು ಇತಿಹಾಸಕಾರರು, ಚಿಂತಕರು, ಮೇಧಾವಿಗಳು ಹೇಳುತ್ತಲೇ ಬಂದಿದ್ದಾರೆ. ಇದಕ್ಕಾಗಿ ಕೆಲವು ಉದ್ ಗ್ರಂಥಗಳು ರಚನೆಯಾಗಿವೆ. ಅವುಗಳ ಆಧಾರದಿಂದ ಜನ ಜೀವನ ಸುಖಮಯವಾಗಿಸಲು ಪ್ರಯತ್ನಗಳು ನಡೆದಿವೆ. ಅನೇಕ ದಾರ್ಶನಿಕರು , ಮಹಾತ್ಮರು ಇದಕ್ಕಾಗಿ ಅಹರ್ನಿಶಿ ದುಡಿದಿದ್ದಾರೆ.
ಭಾರತೀಯ ನೆಲೆಯಲ್ಲಿ ಅನೇಕ ಸಾಧು ಸಂತರು , ಧಾರ್ಮಿಕ ವ್ಯಕ್ತಿಗಳು, ರಾಜಕೀಯ ವ್ಯವಸ್ಥೆ, ಮುತ್ಸದಿಗಳು ಆಗಿ ಹೋಗಿದ್ದಾರೆ. ಕ್ರಿಸ್ತ ಪೂರ್ವದಲ್ಲೇ ಬುದ್ಧ ದೇವ ಸರ್ವಸಮಾನತೆಯನ್ನು ಶಾಂತಿ ಸೌಹಾರ್ದತೆಯನ್ನು ಭೋಧಿಸಿದರು. ಅವರ ನಂತರ ಹನ್ನೇರಡನೇ ಶತಮಾನದಲ್ಲಿ ಬಸವಾದಿ ಶರಣರು ಕರ್ನಾಟಕದಲ್ಲಿ ಉದಯಿಸಿ ಸಾಮಾಜಿಕ ಕ್ರಾಂತಿಯನ್ನೇ ಉಂಟುಮಾಡಿದರು. ಅವರ ಬಗ್ಗೆ ರಾಷ್ಟ್ರಪಿತ ಮಹಾತ್ಮಗಾಂಧಿಜಿಯವರು ಹೇಳುತ್ತಾರೆ ಬಸವಣ್ಣನವರು 800 ವರ್ಷಗಳ ಹಿಂದೆ ಮಾಡಿದಂತ ಸಾಮಾಜಿಕ ಸುಧಾರಣೆಯನ್ನು ಇನ್ನಾರು ಮಾಡಲು ಸಾಧ್ಯವಿಲ್ಲ. ಅವರು ನೀಡಿದ ತತ್ವಗಳನ್ನು ಸಿದ್ಧಾಂತಗಳನ್ನು ಪರಿಪೂರ್ಣವಾಗಿ ಕಾರ್ಯ ರೂಪಕ್ಕೆ ತಂದಿದ್ದೇಯಾದರೇ ಭಾರತವಷ್ಟೇ ಅಲ್ಲ ಇಡೀ ಜಗತ್ತನ್ನೇ ಸಂವೃದ್ಧಿ ಪಥದಲ್ಲಿ ಕೊಂಡೋಯ್ಯಬಹುದೆಂದು ಈ ವಿಚಾರಗಳನ್ನೇಲ್ಲಾ ಪರಿಭಾವಿಸಿ ವಿಶ್ವ ಸಂಸ್ಥೆಯು ಭಾರತೀಯ ಮೂಲದ ಸಾಮಾಜಿಕ ಸಾಂಸ್ಕøತಿಕ ಸಂದೇಶಗಳನ್ನು ಪರಿಪಾಲಿಸಿದ್ದೆ ಆದರೆ ಲೋಕ ಕಲ್ಯಾಣವಾಗುವುದರಲ್ಲಿ ಸಂಶಯವಿಲ್ಲ.
ಪ್ರಸ್ತುತ ಸಾಮಾಜಿಕ ಸಂಧರ್ಭ ಸಮಸ್ಯೆಗಳ ಸುಳಿಯಲ್ಲಿ ಮುಳುಗಿ ಹೋಗಿದೆ. ಜಾತಿಜಗಳ, ಅಸಮಾನತೆ, ಪ್ರತ್ಯೆಕತೆ, ಶೋಷಣೆಯಂತಹ ಜ್ವಲಂತ ಸಮಸ್ಯೆಗಳು ಈಗ ಮತ್ತಷ್ಟು ಉರಿಯುತ್ತದೆ. ಅಧಿಕಾರವನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡ ಅನೇಕರು ಸಮಸ್ಯೆಗಳನ್ನು ಹುಟ್ಟುಹಾಕುತ್ತಿದ್ದಾರೆ. ಪರಿಸರ ದಿನಿತ್ಯ ಮಲೀನವಾಗುತ್ತಿದೆ. ನಿಸರ್ಗ ಸಮತೋಲನವನ್ನು ಕಳೆದುಕೊಂಡು ಜಾಗತೀಕರಣವು ತುಚ್ಚೀಕರಿಸುತ್ತಾ ಸಾಗುತ್ತಿದೆ. ಇಂತಹ ಪ್ರಕ್ಷುಬ್ಧ ವಾತಾವರಣದಲ್ಲಿ ಅನೇಕ ಚಿಂತಕರ ಚಿಂತನೆಗಳು ನಮಗೆ ಮಾರ್ಗದರ್ಶನವಾಗಬಲ್ಲವು. ಬುದ್ಧನ ಜೀವನ ಪ್ರೀತಿ, ಬಸವಣ್ಣನ ದಯೆ, ಅಂಬೇಡ್ಕರರ ಹೋರಾಟ, ಗಾಂಧೀಜಿಯ ಸರಳತೆ, ಮತ್ತೆಮತ್ತೆ ನಮ್ಮ ಚಿಂತನೆಯ ಮೊರೆಯಲ್ಲಿ ಮೂಡಿಬಂದಾಗ ಹೊಸ ಬೆಳಕನ್ನು ಕಾಣಬಹುದಾಗಿದೆ.
ಈಗಿನ ಜಗತ್ತು ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದಿಂದಾಗಿ ಹೊರಗಿನ ಶೃಂಗಾರ ಒಳಗಣ ರಣರಂಗದಂತಾಗಿ ಮಾನಸೀಕ ಸ್ಥಿರತೆಯನ್ನು ಕಳೆದುಕೊಂಡಿದೆ. ವಿಜ್ಞಾನ ತಂತ್ರಜಾÐನದ ಕಾರಣದಿಂದಾಗಿ ವಿವೇಕವನ್ನು ಕಳೆದುಕೊಂಡು ಅಮಾನುಷವಾಗಿ ವರ್ತಿಸುತ್ತಾ ಕಡಿವಾಣವಿಲ್ಲದ ಕುದುರೆಯಂತೆ ಎತ್ತೆತ್ತಲೋ ಓಡುತ್ತಿದೆ. ಅದನ್ನು ತಹಬದಿಗೆ ತರಬೇಕಾದರೆ, ಸಮಾಜಿಕ ಪರಿವರ್ತನೆಯಾಗಬೇಕಾದರೆ ಒಂದು ರೂಢಿ ಮೂಲವಾದ ಪರಂಪರೆ ಬೇಕಾಗುತ್ತದೆ. ನೀತಿ ನಿಯಮ ಸ್ಥಿರತೆಯ ಪ್ರಜ್ಞೆ ಆಳುವವರಲ್ಲಿ ಮೂಢ ಬೇಕಾಗುತ್ತದೆ.
ಪ್ರಸ್ತುತ ಸಮಾಜಿಕ ಸಂಧರ್ಭದಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿಗೆ ಬಸವಣ್ಣನವರು , ಶರಣರ ವಚನಗಳಲ್ಲಿ ಉತ್ತರವಿದೆ. ಹನ್ನೇರಡನೆ ಶತಮಾನದಲ್ಲಿ ವಚನ ಚಳುವಳಿಯನ್ನು ಹುಟ್ಟುಹಾಕಿ ಸಹಸ್ರಾರು ನೊಂದ ಜೀವಿಗಳ ಧನಿಯಾಗಿ ನಿಂತ ಬಸವಾದಿ ಪ್ರಮಥರು ಅನೇಕ ನಿಷ್ಟುರತೆ ಪರಿಹಾರಗಳನ್ನು ಸೂಚಿಸಿದ್ದಾರೆ. ಅಲ್ಲಿಯ ಅನೇಕ ವಿಚಾರಗಳು ಇಂದಿಗೂ ಪ್ರಸ್ತುತವೆನಿಸಿವೆ. ಶರಣರ ಆದರ್ಶ ಜೀವನ ಮಾರ್ಗಗಳು ಅಂತರಂಗ ಬಹಿರಂಗ ಶುದ್ಧತೆಗೆ ಅಣಿ ಮಾಡಿದವುಗಳಾಗಿವೆ. ದಯೆ, ಕರುಣೆ, ಕಾಯಕ, ದಾಸೋಹ, ಸ್ತ್ರೀ ಸಮಾನತೆ, ಅಹಿಂಸೆಗಳನ್ನು ರೂಪಿಸಿ ವಚನಗಳಲ್ಲಿ ಬರೆದಂತೆ ಬದುಕಿ ತೋರಿಸಿದ್ದಾರೆ. ವೈಯಕ್ತಿಕ ವಿಕಾಸದೊಂದಿಗೆ ಸಾಮಾಜಿಕ ವಿಕಾಸವಾದವು ಹೇಗೆ ಪ್ರತಿಫಲಿತವಾಗಬಹುದೆಂಬುದನ್ನು ಸಾಕ್ಷ ಭೂತವಾಗಿ ತೋರಿಸಿಕೊಟ್ಟಿದ್ದಾರೆ.
ಶುದ್ಧ ಮನಸ್ಸಿನವರಾಗಿ ಕಾಯಕ ಜೀವಿಯಾಗಿ ಮಾನವೀಯ ಗುಣಗಳಿಂದ ಹೇಗೆ ಜೀವನ ನಡೆಸ ಬಹುದೆಂಬುದನ್ನು ಶರಣ ನುಲಿಯ ಚಂದಯ್ಯ ಈ ವಚನದಲ್ಲಿ ಹೇಳಿದ್ದಾರೆ.
ನೇಮದ ಕೂಲಿ ಅಂದಿನ ನಿತ್ಯ ನೇಮದಲ್ಲಿ ಸಂದಿರಬೇಕು
ನೇಮದ ಕೂಲಿಯ ಬಿಟ್ಟು ಹೇಮದಾಸೆಗೆ ಕಾಮಿಸಿ
ನಿನ್ನಾಸೆಯ ವೇಷದ ಪಾಶಕ್ಕೆ ನೀನೆ ಹೋಗುವೆ
ಚಂದೇಶ್ವರ ಲಿಂಗಕ್ಕೆ ದೂರಾಗುವೆ.
ಪ್ರತಿಯೊಬ್ಬನು ಆಸೆ ಆಮಿಷಕ್ಕೆ ಬಲಿಬೀಳದೆ ಸತ್ಯ ಪ್ರಮಾಣಿಕವಾಗಿ ಸ್ವ ದುಡಿಮೆ ಮಾಡಿದರೆ ಅವನ ಬದುಕಿನಲ್ಲಿ ಶ್ರೇಷ್ಟತೆ ಇರುತ್ತದೆ. ಅವನನ್ನು ದೇವರು ಮೆಚ್ಚುವನು. ಆಗಿಲ್ಲದಿದ್ದರೆ ವೇಷದ ಪಾಶಕ್ಕೆ ಹೋಗುವೆ ಎಂದು ಎಚ್ಚರಿಸುತ್ತಾರೆ. ವಚನಕಾರರು ಭ್ರಷ್ಟರನ್ನು ಅನಾಚಾರಿಗಳನ್ನು ಮತ್ತು ವೇಷಾಧಾರಿಗಳನ್ನು ಕಟುವಾಗಿ ಟೀಕಿಸಿದ್ದಾರೆ. ಶಿವಶರಣೆ ಅಕ್ಕಮ್ಮ ವಚನವೊಂದರಲ್ಲಿ ಹೀಗೆ ಹೇಳುತ್ತಾಳೆ.
ಗುರುವಾದಡೂ ಆಚಾರ ಭ್ರಷ್ಟನಾದಡೆ ಅನುಸರಿಸಲಾಗದು
ಜಂಗಮವಾದಡೂ ಆಚಾರ ದೋಷವಾದಲ್ಲಿ ಪೂಜಿಸಲಾಗದು.
ಲಿಂಗವಾದಡೂ ಆಚಾರ ಅನುಸರಣೆಯಾಗದಿದ್ದರೆ ಕೂಡಲಾಗದು
ಆಚಾರವೇ ವ್ರತ, ಪ್ರಾಣ ಕ್ರಿಯೆ, ಜ್ಞಾನ ಆಚಾರವೇ ಪ್ರಾಣವಾಗಿಪ್ಪ
ರಾಮೇಶ್ವರ ಲಿಂಗವು
ಇಂತಹ ಮೌಲ್ಯಯುತವಾದ ಸಾಮಾಜಿಕ ಅನಿವಾರ್ಯತೆಗಳಾದ ತತ್ವ ಸಿದ್ಧಾಂತಗಳನ್ನು ಬೆಳೆಸುವುದರ ಮೂಲಕ ಅಧಿಕಾರ ಅಂತಸ್ತು ಸಾಂಸ್ಕøತಿಕ ಸಮಾನತೆಯ ಅರಿವನ್ನುಂಟುಮಾಡಿ ಅದನ್ನು ಪಾಲಿಸುವುದರ ಮೂಲಕ ಏಕತೆಯಲ್ಲಿ ಐಕ್ಯತೆಯನ್ನು ಕಾಣಬಹುದಾಗಿದೆ. ಭಯೋತ್ಪಾದನೆ, ಕೋಮುಗಲಭೆ, ಜಾತಿ ವೈಷಮ್ಯ, ಲಿಂಗಭೇದಗಳಿಗೆ ಸಿದ್ಧೌಷಧವನ್ನು ಶರಣರು ತಮ್ಮ ವಚನಗಳಲ್ಲಿ ಪ್ರತಿಪಾದಿಸಸಿದ್ದಾರೆ. ಮೇಲು-ಕೀಳು ಭಾವನೆಗಳನ್ನು ತೊಡೆದು ಹಾಕುವುದು, ರಾಜಕೀಯ ವೈಷಮ್ಯಗಳನ್ನು ನಿಲ್ಲಿಸಿ ಏಕೋಭಾವನೆಯಿಂದ ರಾಷ್ಟ್ರಾಭಿವೃದ್ಧಿಗೆ ಶ್ರಮಿಸುವುದು, ಅಹಂಕಾರ ಮಮಕಾರಗಳನ್ನು ತೊರೆದು ಸಮಷ್ಠಿ ಪ್ರಜ್ಞೆಯನ್ನು ತಾಳುವುದು ಈಗಿನ ಸಂಧರ್ಭದಲ್ಲಿ ಪ್ರಸ್ತುತವೆನಿಸಿದೆ. ಇದಲ್ಲದೆ ಈ ಕೆಳಕಂಡ ಕೆಲವಂಶಗಳನ್ನು ತಮ್ಮ ವಚನಗಳಲ್ಲಿ ಪ್ರತಿಬಿಂಬಿಸಿದ್ದಾರೆ.ಅವುಗಳೆಂದರೆ

 1. ಧರ್ಮದ ಹೆಸರಿನಲ್ಲಿ ನಡೆಯುವ ಅನಾಚಾರಗಳನ್ನು ತಪ್ಪಿಸಿ ಸಾಮಾಜಿಕ ಭಯ ಭೀತಿಗಳನ್ನು ದೂರಿಕರಿಸುವುದು.
 2. ಜಾತಿ ವ್ಯವಸ್ಥೆಯನ್ನು ತಡೆದು ಎಲ್ಲರೂ ನಮ್ಮವರೆಂದು ಅಪ್ಪಿಕೊಳ್ಳುವುದು. ಅದನ್ನೇ ಬಸವಣ್ಣ “ಇವನಾರವ ಎನಿಸದಿರಯ್ಯ ಇವ ನಮ್ಮವನೆನಿಸಯ್ಯ” ಎಂದು ಹಾಡಿದ್ದಾರೆ.
 3. ಮೂಢನಂಬಿಕೆಗಳನ್ನು , ಅಂಧಸಂಪ್ರಾದಾಯಗಳನ್ನು ತಡೆದು ಜನರಲ್ಲಿ ವೈಚಾರಿಕ ಪ್ರಜ್ಞೆಯನ್ನು ಬೆಳೆಸುವುದು.
 4. ಕಾಯಕ-ದುಡಿಮೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದು. ಯಾವ ಕಾಯಕವಾದರೂ ಶ್ರೇಷ್ಠವೇ ಅದರಿಂದ ಪ್ರಮಾಣಿಕವಾದ ಆರ್ಥಿಕ ಸಮಾನತೆಯನ್ನು ತರುವುದು.
 5. ಮಹಿಳೆಯರಿಗೆ ಸಮಾನ ಸ್ಥಾನಮಾನ ನೀಡಿ ಅವರು ಸಾಂಸ್ಕøತಿಕವಾಗಿ ಸಾಮಾಜಿಕವಾಗಿ ಬೆಳೆಯಲು ಕಾರಣವಾಗುವುದು.
 6. ಅಹಿಂಸೆಯನ್ನು ಪ್ರತಿಪಾದಿಸುವುದು, ಸಕಲ ಜೀವಾತ್ಮರಿಗೆ ಲೇಸನೆ ಬಯುಸುವುದು ಅದನ್ನೇ ಬಸÀವಣ್ಣನವರು “ಕಳಬೇಡ ಕೊಲಬೇಡ ಹುಸಿಯನುಡಿಯಲು ಬೆಡ ತನ್ನ ಬಣ್ಣಿಸಬೇಡ ಇದಿರ ಅಳಿಯಲು ಬೇಡ” ಎಂಬ ಸಪ್ತ ಸೂತ್ರಗಳಲ್ಲಿ ಹೇಳಿದ್ದಾರೆ.
 7. ಅಸ್ಪøಶ್ಯತೆಯನ್ನು ಹೋಗಲಾಡಿಸಿ ಗುರು ಹಿರಿಯರಲ್ಲಿ ಭಕ್ತಿಭಾವದಿಂದ ವರ್ತಿಸುವುದು.
 8. ಸಾಂಘೀಕ ಜೀವನಕ್ಕೆ ಮಹತ್ವ ನೀಡುವುದು. ಅನುಭವ ಮಂಟಪವನ್ನು ಸ್ಥಾಪಿಸಿ, ನಿರಕ್ಷರ ಕುಕ್ಷಿಗಳಿಗೆ ಶಿಕ್ಷಣ ನೀಡಿದ್ದು ಮತ್ತು ವಚನ ಸಾಹಿತ್ಯವನ್ನು ರಚಿಸಿ ಜ್ಞಾನ ಪ್ರಸಾರ ಮಾಡಿದ್ದು ಶರಣರ ಹೆಗ್ಗಳಿಕೆ.
 9. ಧಾರ್ಮಿಕ ಕ್ಷೇತ್ರಗಳಲ್ಲಿ ಸರಳತೆ ನೈಜತೆಯಿಂದ ಏಕೋದೇವೋಪಾಸನೆಯನ್ನು ತರುವುದು.
 10. ಪರಿಸರ ಸಂರಕ್ಷಣೆ “ಮರಕ್ಕೆ ಬಾಯಿ ಬೇರೆಂದು ತಳಕ್ಕೆ ನೀರೆರೆದರೆ ಮೇಲೆ ಫಲ್ಲವಿಸಿತ್ತು ನೋಡಾ”
 11. ಆತ್ಮ ನಿರೀಕ್ಷಣೆ ಪ್ರತಿಯೊಬ್ಬನು ತನ್ನನ್ನು ತಾನು ಪ್ರಶ್ನಸಿಕೊಳ್ಳುವುದು ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುವುದು.
 12. ಅಪರಿಗ್ರಹ “ಬಯಸಿ ಬಂದುದು ಲಿಂಗಭೋಗ, ಬಯಸದೇ ಬಂದುದು ಅಂಗ ಭೋಗ” ಆಸೆ ಅಮಿಷಗಳನ್ನು ತೊರೆದು ಸಹಜವಾಗಿ ಬದುಕುವುದು.
 13. ಸ್ವಾಭಿಮಾನದಿಂದ ಬದುಕುವುದು, ಅರಸೊತ್ತಿಗೆಯ ಪರಿಸರದಲ್ಲಿದ್ದರೂ “ಆಸು ಓಲಿದಂತೆ ಹಾಡುವೆ ಎನ್ನುವಂತೆ’ “ಶರಣರಿಗೂ ಅಂಜುವವನಲ್ಲ” ಎಂಬ ಸ್ವಾಭಿಮಾನಿಯಾಗುವುದು.
 14. ಮಾನವೀಯತೆಯನ್ನು ಬೆಳೆಸಿಕೊಳ್ಳುವುದು, ಇಂತಹ ಅನೇಕ ಸಂಗತಿಗಳನ್ನು ಶರಣರು ತಮ್ಮ ವಚನಗಳಲ್ಲಿ ಹೇಳಿದ್ದಾರೆ. ಅದರಂತೆ ಅನುಸರಿಸಿದರೆ ಮಾನವನ ಬಾಳು ಬಂಗಾರವಾಗದಿರದು.
  ಇಂತಹ ವಿಷಯಗಳನ್ನು ಅನೇಕ ವಚನಗಳಲ್ಲಿ ಹೇಳಿರುವ ಸಂಗತಿಗಳು ಇಂದಿನ ಸಾಮಾಜಿಕ ಸಂದರ್ಭಕ್ಕೆ ತೀರಾ ಅಗತ್ಯವಗಿದೆ. ಬದುಕಿನ ಅದಮ್ಯತೆಯನ್ನು ಹೇಳಿದ ಬಸವಾದಿ ಪ್ರಮಾಥರು ಜೀವನೋತ್ಸವದ ಜತೆಗೆ ಜೀವದ ಪ್ರೀತಿಯನ್ನು ಕಲಿಸಿದವರು ಮಾನವೀಯ ಮೌಲ್ಯಗಳು ಬೆಳೆದಾಗ ಮನುಷ್ಯ ಬೆಳೆಯಬಲ್ಲನು. ಕೇವಲ ಆರ್ಥಿಕ , ಸಾಮಾಜಿಕ, ಸಮಾನತೆ ಬಂದಾಕ್ಷಣ ಮನುಷ್ಯ ಎತ್ತರಕ್ಕೆ ಹೇರಲಾರ ಮಾನವೀಯತೆ ಬೆಳೆದಾಗ ಮಾತ್ರ ಇದು ಸಾಧ್ಯ. ಇಂತಹ ಮಾನವೀಯ ಮೌಲ್ಯಗಳನ್ನು ಕೊಟ್ಟ ಬಸವಾದಿ ಪ್ರಮಥರ ವಿಚಾರಗಳು ಇಂದಿಗೂ ಸ್ವಾಗತಾರ್ಹವಾಗಿವೆ. ಎಂಟುನೂರು ವರ್ಷಗಳ ಹಿಂದೆ ಆಲೋಚಿಸಿದ ಅವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದೆ.
  ಕೆ.ಎಂ ರೇವಣ್ಣ
  ನಿವೃತ್ತ ತಹಸೀಲ್ದಾರರು
  ಬೆಂಗಳೂರು

Share