ಅಕ್ಷಯ ತೃತೀಯಾ

ಅಕ್ಷಯ ತೃತೀಯಾ

Share

ವೈಶಾಖ ಮಾಸದಲ್ಲಿ ಬರುವ ಅತಿ ಮುಖ್ಯವಾದ ವ್ರತ, ಪರ್ವಗಳಲ್ಲಿ ಅಕ್ಷಯ ತೃತೀಯಾ ಮುಖ್ಯವಾದದ್ದು. ಗಂಗಾಸ್ನಾನಕ್ಕೆ ಮತ್ತು ಶ್ರೀ ಕೃಷ್ಣನನ್ನು ಧೂಪ, ದೀಪ ಹೂವು ಮತ್ತು ವಿಶೇಷವಾಗಿ ಚಂದನ ಲೇಪದಿಂದ ಅರ್ಚನೆ ಮಾಡುವುದಕ್ಕೆ ಈ ದಿವನ್ನು ಅತಿ ಪ್ರಶಸ್ತವನ್ನಾಗಿ ಹೇಳಿದೆ.
‘ಬೆನ್ನು ಗೂನಾಗಿ ಕೋಲೂರಿ ನಡೆಯುತ್ತಾ ಕೆಮ್ಮುತ್ತಿರುವ ಸ್ಥಿತಿಯು ಬರುವುದಕ್ಕೆ ಮೊದಲೇ ಬದರೀ ತೀರ್ಥಯಾತ್ರೆ ಮಾಡು, ಅದು ಮುಕ್ತಿದ್ವಾರ’ ಎಂದು ಭಕ್ತ ಶ್ರೇಷ್ಠರಾದ ತಿರುಮಂಗೈ ಆಳ್ವಾರ್ ಅವರು ಘೋಷಿಸುತ್ತಾರೆ. ಇಂತಹ ಪವಿತ್ರವಾದ ಬದರೀ ನಾರಾಯಣ ಮಂದಿರದ ದ್ವಾರವನ್ನು ತೆರೆಯುವುದು ಅಕ್ಷಯ ತೃತೀಯೆಯಂದು. ಅದು ಮುಕ್ತಿ ದ್ವಾರವನ್ನು ತೆರೆಯುವ ತಿಥಿ ಎಂದು ಪರ್ಯಾಯವಾಗಿ ಹೇಳಬಹುದು.
ಭಗವಂತನ ದಶಾವತಾರಗಳಲ್ಲಿ ಆರನೇಯದಾಗಿ ‘ಬ್ರಹ್ಮ-ಕ್ಷತ್ರ ಅವತಾರ’ ಎನಿಸಿರುವ ಪರಶುರಾಮದೇವರ ಶ್ರೀ ಜಯಂತಿಯೂ ಈ ದಿನದಲ್ಲಿ ಕೂಡಿಬರುತ್ತದೆ.
ದೇವತೆಗಳ ಪೂಜೆಗೆ ಮಾತ್ರವಲ್ಲದೇ ಪಿತ್ರಗಳ ಪೂಜೆಗೂ ಪ್ರಶಸ್ತವೆನಿಸಿರುವ ತಿಥಿ ಅಕ್ಷಯ ತೃತೀಯಾ ಪರ್ವ.
ಎಲ್ಲಾ ಯುಗಗಳಿಗೂ ಆಧ್ಯವಾಗಿರುವ ಸತ್ಯಯುಗಕ್ಕೆ ಆದಿ ದಿನವಾದ ‘ಕೃತಯುಗಾದಿ’ ಎಂದೂ ಇದು ಪರಿಗಣಿತವಾಗಿದೆ. ಕ್ಷೇತ್ರಗಳಲ್ಲಿ ಬೀಜವನ್ನು ಬಿತ್ತುವುದಕ್ಕೂ, ಇದನ್ನು ಪ್ರಶಸ್ತ ದಿನವನ್ನಾಗಿ ಲೆಕ್ಕಿಸುತ್ತಾರೆ. ಈ ಹಬ್ಬದಲ್ಲಿ ಆಚರಿಸುವ ಸ್ನಾನ, ಜಪ, ತಪಸ್ಸು, ಅಧ್ಯಯನ, ತರ್ಪಣ, ದಾನಾದಿಗಳೆರಲ್ಲವೂ ಅಕ್ಷಯವಾದ ಫಲವನ್ನು ನೀಡುವ ಉದರಿಂದ ಇದನ್ನು ಅಕ್ಷಯ ತೃತೀಯಾ ( ಅಕ್ಷಯ ಫಲ ತೃತೀಯಾ) ಎಂದು ಕರೆಯಲಾಗಿದೆ. ಅಕ್ಷಯವಾದ ಮೋಕ್ಷಕ್ಕೆ ಕಾರಣವಾಗಿರುವುದರಿಂದಲೂ ಇದಕ್ಕೆ ಆ ಹೆಸರು ಹೊಂದಿಕೆಯಾಗುತ್ತದೆ. ಕನ್ನಡ ಭಾಷೆಯಲ್ಲಿರುವ ‘ಅಕ್ಷಯ ತದಿಗೆ’ ಎಂಬುದು ಈ ಅಕ್ಷಯ ತೃತೀಯೆಯ ದೇಶೀಯರೂಪ. ಈ ದಿವಸದಲ್ಲಿಸೋಮವಾರ ಅಥವಾ ಬುಧವಾರ ಮತ್ತು ರೋಹಿಣಿ ನಕ್ಷತ್ರಗಳು ಕೂಡಿ ಬಂದರೆ ಅದು ಅಕ್ಷಯವಾದ ಸುಕೃತದ ಫಲವಾದ ಯೋಗವೆಂದು ಯೊಗಿಗಳು ಹೇಳುತ್ತಾರೆ. ಏಕೆಂದರೆ ಆ ವಾರ ಮತ್ತು ನಕ್ಷತ್ರಗಳು ಶ್ರೀ ಕೃಷ್ಣನ ಪೂಜೆಗೆ ಅತ್ಯಂತ ಪ್ರಶಸ್ತವಾದವು. ಈ ದಿನ ಬೆಳಗ್ಗೆ ಸಂಕಲ್ಪ ಸಹಿತ ಗಂಗಾನದಿಯಲ್ಲಿ ಸ್ನಾನ ಮಾಡಬೇಕು. ಸಾಕ್ಷಾತ್ ಗಂಗಾನದಿಯಲ್ಲಿ ಸ್ನಾನ ಮಾಡುವ ಅವಕಾಶವಿಲ್ಲದವರು ತಾವು ಸ್ನಾನ ಮಾಡುವ ನೀರಿನಲ್ಲಿಯೇ ಗಂಗೆಯನ್ನು ಆವಾಹನೆ ಮಾಡಿ, ಆರಾಧಿಸಿ, ಅದರಲ್ಲಿ ಅವಗಾಹನೆ ಮಾಡಬೇಕು. ಗಂಗಾ ಶಬ್ದಕ್ಕೆ ಸದ್ಗತಿಯನ್ನು ಹೊಂದಿಸುವುದು. (‘ಸದ್ಗತಿಂ ಗಮಯತೀತಿ ಗಂಗಾ’) ಎಂದು ಅರ್ಥ. ಈ ಶಬ್ದವು ಒಂದು ದೇವತೆಗೂ ಮತ್ತು ಅದರಿಂದ ಅಧಿಷ್ಠಿತವಾಗಿರುವ ಒಂದು ನದಿಗೂ ಅನ್ವಯಿಸುತ್ತದೆ. ಗಂಗೆಯೂ ಭಗವಂತನ ಜಲರೂಪವಾದ ‘ಮೂರ್ತಿ’ಯೇ ಆಗಿದೆ. ಆಕೆಯನ್ನು ಪೂಜಿಸಿದರೆ ಎಲ್ಲಾ ದೇವತೆಗಳನ್ನೂ ಪೂಜಿಸಿದಂತೆ. ಪರಮಾತ್ಮ ದರ್ಶನದಿಂದ ಯಾವ ಫಲವೋ ಅದೇ ಫಲವು ಅದರ ದರ್ಶನದಿಂದ ಉಂಟಾಗುತ್ತದೆ. ಗಂಗಾನದಿಯ ಆರೋಗ್ಯಕರ ಗುಣಗಳಿಗೆ ಸನಾತನ ಧರ್ಮಿಯರು ಮಾತ್ರವಲ್ಲ, ಇತರ ಮತದವರೂ ಕುಡ ಆಕರ್ಷಿತರಾದರು. ಉದಾಹರಣೆಗೆ ಸುಲ್ತಾನ್ ತುಘಲಕ್‍ನು ದೌಲತಾಬಾದನಿಂದ ನಿರಂತರವಾಗಿ ಗಂಗಾ ಜಲವನ್ನು ತರಿಸಿಕೊಳ್ಳುತ್ತಿದ್ದನು. ಇದು ಅವನ ಬಳೀಗೆ ತಲುಪಲು ನಲವತ್ತು ದಿನಗಳು ಹಿಡಿಸುತ್ತಿದ್ದವೆಂದು ಇಬ್ನಾ ಬೂತಾತ್ ಎಂಬ ಆ ಕಾಲದ ಯಾತ್ರಿಕ ಲೇಖಕ ಹೇಳುತ್ತಾನೆ. ಅಡುಗೆ ಮಾಡಲು ಮಳೆಯನೀರನ್ನು ಅಥವಾ ಯಮುನಾಜಲವನ್ನು ಉಪಯೋಗಿಸಿದರೂ ಅದಕ್ಕೆ ಸ್ವಲ್ಪ ಗಂಗಾಜಲವನ್ನೂ ಸೇರಿಸಲಾಗುತ್ತದೆ.’ ಇದು ಅಕ್ಬರನ ವಿಷಯದಲ್ಲಿ ‘ಆಯಿನೇ ಅಕ್ಬರಿ’ ಎಂಬ ಗ್ರಂಥವಿ ತಿಳಿಸುತ್ತದೆ. ಇಂತಹ ಇನ್ನೂ ಅನೇಕ ಉದಾಹರಣೆಗಳ ದಾಖಲೆಗಳು ಇವೆ. ‘ತೃತೀಯೆಯಂದು ಶ್ರೀ ಕ್ರಷ್ಣನನ್ನು ಗಂಧದಿಂದ ಅಲಂಕರಿಸಿ ಅವನಿಗೆ ಧಾನ್ಯರಾಜನಾದ ಯವೆ(ಜವೆಗೋಧಿ)ಯನ್ನು ಸಮರ್ಪಿಸುವವನು ವೈಕುಂಠವನ್ನು ಹೊದುತ್ತಾನೆ’, ಎಂಬುದು ಈ ಹಬ್ಬದ ಮಹತ್ವ.
ಜೈನಧರ್ಮೀಯರೂ ಈ ಹಬ್ಬವನ್ನು ಆಚರಿಸುತ್ತಾರೆ. ಇದು ಆದಿ ತೀರ್ಥಕರನಾದ ವೃಷಭನಾಥ ತಪಸ್ವಿಯಾಗಿದ್ದ ಸಮಯದಲ್ಲಿ ಮೊದಲನೆಯ ಆಹಾರದಾನ ಪಡೆದ ನಿಮಿತ್ತದ ಪರ್ವದಿನ. ಮಹಾರಾಜ ಶ್ರೇಯಾಂಸ ತನ್ನ ಅಣ್ಣನೊಡನೆ ಬಂದು ವೃಷಭನಿಗೆ ಕಬ್ಬಿನ ಹಾಲಿ ರೂಪದಲ್ಲಿ ಆಹಾರವನ್ನು ಕೊಟ್ಟನೆಂದು ಅದರಿಂದ ಅವನ ದೇಶದಲ್ಲಿ ಆಹಾರ ಅಕ್ಷಯವಾಯಿತೆಂದೂ ಪ್ರತೀತಿ. ವೃಷಭ ತೀರ್ಥಂಕರನಿಗೆ ಅಂದು ನಡೆದ ಅಭಿಷೇಕದಲ್ಲಿ ಕಬ್ಬಿನ ಹಾಲು ವಿಶೇಷ ವಸ್ತು. ಮಿಕ್ಕಂತೆ ಗೃಹಸ್ಥರ ಮನೆಗಳಲ್ಲಿ ದಾನ ಧರ್ಮ ವೃಷಭ ಚರಿತ್ರೆಯ ಪಠಣ , ಉತ್ಸವ ನಡೆಯುತ್ತವೆ. ವೈಶಾಖ ಶುಕ್ಲ ತೃತೀಯಾ ಕೃತಯುಗದ ಪ್ರಾರಂಭದ ದಿನ. ಈ ದಿನದಿಂದ ಜಗತ್ತಿನಲ್ಲಿ ಸೃಷ್ಟಿ ಆರಂಭವಾಯಿತು ಎಂಬುದು ನಂಬಿಕೆ. ವರ್ಷದ ಅತ್ಯಂತ ಪವಿತ್ರವಾದ ಮೂರುವರೆ ದಿಗಳಲ್ಲಿ ಇದನ್ನು ಅರ್ಧದಿನ ಎಂದು ಕರೆಯುತ್ತಾರೆ.


Share