POST

ವಿಧಾನಸಭೆಯಿಂದ ಪರಿಷತ್ ಚುನಾವಣೆ: ಕಾಂಗ್ರೆಸ್ ನಿಂದ ಯತೀಂದ್ರ, ಬಿಜೆಪಿಯಿಂದ ಸಿ.ಟಿ ರವಿ, ಮಾಧುಸ್ವಾಮಿ ಆಯ್ಕೆಗೆ ಒಲವು!

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಕಾಂಗ್ರೆಸ್‌ನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಮತ್ತು ಬಿಜೆಪಿಯಿಂದ ಹಿರಿಯ ನಾಯಕ ಸಿ.ಟಿ.ರವಿ ಮುಂಚೂಣಿಯಲ್ಲಿದ್ದಾರೆ.

136 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಏಳು ಸ್ಥಾನಗಳನ್ನು, 66 ಶಾಸಕರನ್ನು ಹೊಂದಿರುವ ಬಿಜೆಪಿ ಮೂರು ಮತ್ತು 19 ಶಾಸಕರನ್ನು ಹೊಂದಿರುವುದರಿಂದ ಜೆಡಿಎಸ್ ಒಂದು ಸ್ಥಾನವನ್ನು ಗೆಲ್ಲಬಹುದು.

ಶಾಸಕರಾಗಿದ್ದ ಯತೀಂದ್ರ ವರುಣಾ ವಿಧಾನಸಭಾ ಸ್ಥಾನವನ್ನು 2023 ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ತಂದೆ ಸಿದ್ದರಾಮಯ್ಯ ಅವರಿಗೆ ತ್ಯಾಗ ಮಾಡಿದ್ದಾರೆ, ಹೀಗಾಗಿ ಅವರನ್ನು ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡುವ ಭರವಸೆಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.

ಸಿಎಂ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು ಅವರ ಹೆಸರು ಹಾಗೂ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಅವರ ಮರುನಾಮಕರಣ ಸಾಧ್ಯತೆ ಹೆಚ್ಚಿದೆ. ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಕೆ.ಪಿ.ನಂಜುಂಡಿ ಮತ್ತು ಸಂಗಣ್ಣ ಕರಡಿ ಅವರಿಗೂ ಕೂಡ ಕಾಂಗ್ರೆಸ್ ನಾಯಕತ್ವ ಭರವಸೆ ನೀಡಿದ್ದರಿಂದ ಸ್ಥಾನ ಪಡೆಯಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.ಉಳಿದ ಸ್ಥಾನಗಳಿಗೆ ತೀವ್ರ ಲಾಬಿ ನಡೆಯುತ್ತಿದೆ. ಮುಖಂಡರಾದ ವಿ.ಎಸ್.ಸುದರ್ಶನ್, ಕೆಪಿಸಿಸಿ ಮುಖ್ಯ ವಕ್ತಾರ ಎ.ಎನ್.ನಟರಾಜ್ ಗೌಡ, ಐವನ್ ಡಿಸೋಜಾ, ಬೆಂಗಳೂರು ಮಾಜಿ ಮೇಯರ್ ಗಂಗಾಬಿಕಾ ಮಲ್ಲಿಕಾರ್ಜುನ್, ಐಶ್ವರ್ಯ ಮಹದೇವ್, ಕವಿತಾ ರೆಡ್ಡಿ, ಮಹಿಳಾ ಕೋಟಾದಿಂದ ಕಮಲಾಕ್ಷಿ ರಾಜಣ್ಣ, ಎಂ.ಸಿ.ವೇಣುಗೋಪಾಲ್, ಬಿ.ಎಲ್.ಶಂಕರ್, ವಿ.ಎಸ್ ಉಗ್ರಪ್ಪ, ಡಿ.ಟಿ.ವೆಂಕಟೇಶ್, ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್, ಡಾ.ಸಿ.ಎಸ್.ದ್ವಾರಕಾನಾಥ್, ಬಿ.ಎಂ.ಸಂದೀಪ್, ಶ್ರೀವತ್ಸ, ಎಸ್.ಎ.ಹುಸೇನ್. ಐದು ಖಾತ್ರಿಗಳ ಅನುಷ್ಠಾನ ಸಮಿತಿಗೆ ಅಧ್ಯಕ್ಷರಾಗಿ ನೇಮಕಗೊಂಡಿರುವ ಎಚ್‌ಎಂ ರೇವಣ್ಣ ಸೇರಿದಂತೆ ಕೆಲ ಮುಖಂಡರು ಲಾಬಿ ನಡೆಸುತ್ತಿದ್ದಾರೆ. ಪಾಲಿಕೆ, ನಿಗಮಗಳಿಗೆ ನೇಮಕಗೊಂಡಿರುವ ಆರತಿ ಕೃಷ್ಣ, ರಘುನಂದನ ರಾಮಣ್ಣ ರೇಸ್‌ನಿಂದ ಹೊರಗುಳಿದಿದ್ದಾರೆ ಎಂದು ಮುಖಂಡರೊಬ್ಬರು ಅಭಿಪ್ರಾಯಪಟ್ಟರು.

ಬಿಜೆಪಿಯಿಂದ ರವಿ ಅವರ ನಾಮನಿರ್ದೇಶನ ಬಹುತೇಕ ಖಚಿತವಾಗಿದೆ. ಏಕೆಂದರೆ ವಿಧಾನ ಪರಿಷತ್ ನಲ್ಲಿ ಬಿಜೆಪಿ ಅವರ ಅನುಭವವನ್ನು ಬಳಸಿಕೊಳ್ಳಲು ಬಯಸುತ್ತದೆ ಎಂದು ಮೂಲಗಳು ತಿಳಿಸಿವೆ. ಎನ್ ರವಿಕುಮಾರ್ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿಎಲ್ ಸಂತೋಷ್ ಅವರ ಕಟ್ಟಾ ಬೆಂಬಲಿಗರಾದ ಮುನಿರಾಜು ಗೌಡ ಪಿಎಂ ಕೂಡ ಮರುನಾಮಕರಣದ ನಿರೀಕ್ಷೆಯಲ್ಲಿದ್ದಾರೆ.

ಆದರೆ ಮಾಜಿ ಮುಖ್ಯಮಂತ್ರಿ ಬಿಎಸ್ಆದರೆ ಪಕ್ಷದೊಳಗಿನ ಕೆಲವರು ಅವರ ಆಯ್ಕೆಯನ್ನು ವಿರೋಧಿಸಿದ್ದಾರೆ, ಏಕೆಂದರೆ ಅವರು ಪಕ್ಷದ ನಿಷ್ಠಾವಂತರಲ್ಲ ಎಂದು ಅವರು ಭಾವಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಮ್ಮ ಪಕ್ಷದಲ್ಲಿ ಸಾಕಷ್ಟು ಉತ್ತಮ ವಾಗ್ಮಿಗಳಿದ್ದಾರೆ, ಆದರೆ ಭವಿಷ್ಯದಲ್ಲಿ ಪಕ್ಷ ಸಂಘಟನೆಗೆ ಕೊಡುಗೆ ನೀಡುವವರು ನಮಗೆ ಬೇಕು ಎಂದು ಬಿಜೆಪಿ ನಾಯಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಹಾಗೂ ಮಾಜಿ ಎಂಎಲ್ ಸಿ ಅಶ್ವತ್ಥ್ ನಾರಾಯಣಗೌಡ ಹೆಸರು ಕೂಡ ಹರಿದಾಡುತ್ತಿದೆ.

ಜೆಡಿಎಸ್ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ಆದರೆ ಹಾಲಿ ಎಂಎಲ್ ಸಿ ಬಿ.ಎಂ.ಫಾರೂಕ್ ಮರುನಾಮಕರಣದ ನಿರೀಕ್ಷೆಯಲ್ಲಿದ್ದಾರೆ, ಯಶವಂತಪುರ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಜವರಾಯಿಗೌಡ ಕೂಡ ಪರಿಷತ್ ಗೆ ನಾಮ ನಿರ್ದೇಶನಗೊಳ್ಳಲು ಉತ್ಸುಕರಾಗಿದ್ದಾರೆ.

ಮೇ 27: ಅಧಿಸೂಚನೆ

ಜೂನ್ 3: ನಾಮನಿರ್ದೇಶನಕ್ಕೆ ಕೊನೆಯ ದಿನಾಂಕ

ಜೂನ್ 13: ಮತದಾನ ಮತ್ತು ಎಣಿಕೆ ದಿನಾಂಕ

Uttar Pradesh: ಒಂದೇ ದಿನ 8 ಬಾರಿ ಮತದಾನ ಮಾಡಿದ ಯುವಕನ ಬಂಧನ, ಇಟಾಹ್​ನಲ್ಲಿ ಮರು ಮತದಾನಕ್ಕೆ ಆದೇಶ!, ವಿಡಿಯೋ ವೈರಲ್!

ಲಖನೌ: ಲೋಕಸಭಾ ಚುನಾವಣೆಯ 5ನೇ ಹಂತದ ಮತದಾನ ಮುಕ್ತಾಯವಾಗಿದ್ದು, ಇದರ ನಡುವೆಯೇ ಮೂರನೇ ಹಂತದಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಮತದಾನದ ವೇಳೆ ವ್ಯಕ್ತಿಯೋರ್ವ ಒಂದೇ ದಿನ ಬರೊಬ್ಬರಿ 8 ಬಾರಿ ಮತದಾನ ಮಾಡಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.

ಉತ್ತರಪ್ರದೇಶದ ಇಟಾಹ್‌(Etah)ನಲ್ಲಿ ಮೂರನೇ ಹಂತದ ಮತದಾನದಲ್ಲಿ ಯುವಕನೊಬ್ಬ ಒಂದೇ ಬೂತ್‌ನಲ್ಲಿ 8 ಬಾರಿ ಮತ ಚಲಾಯಿಸಿ ಸಿಕ್ಕಿಬಿದ್ದಿದ್ದಾನೆ. ಅಷ್ಟೇ ಅಲ್ಲ ಪ್ರತಿ ಬಾರಿಯೂ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾನೆ.

2 ನಿಮಿಷ 20 ಸೆಕೆಂಡ್‌ನ ಈ ವಿಡಿಯೋದಲ್ಲಿ ಈ ಯುವಕ ಪ್ರತಿ ಬಾರಿಯೂ ಮತದಾನ ಮಾಡಿದ್ದಾನೆ. ಅವರು ಕಮಲದ ಚಿಹ್ನೆಯ ಮುಂಭಾಗದಲ್ಲಿರುವ ಗುಂಡಿಯನ್ನು ಒತ್ತುವುದನ್ನು ಕಾಣಬಹುದು.ಫರೂಖಾಬಾದ್‌ ಲೋಕಸಭಾ ಕ್ಷೇತ್ರದ ಆಲಿಗಂಜ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮತಗಟ್ಟೆಯಲ್ಲಿ ಘಟನೆ ನಡೆದಿದ್ದು, ಈ ಕ್ಷೇತ್ರದಲ್ಲಿ ಮೇ 13ರಂದು ಮತದಾನ ನಡೆದಿತ್ತು.ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಟ್ವಿಟ್ಟರ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ಅದರ ಮೇಲೆ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಎಚ್ಚೆತ್ತ ಚುನಾವಣಾ ಆಯೋಗ, ಮರು ಮತದಾನಕ್ಕೆ ಆದೇಶ

ವ್ಯಕ್ತಿಯ ಮತದಾನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಎಚ್ಚೆತ್ತುಕೊಂಡಿರುವ ಚುನಾವಣಾ ಆಯೋಗ ಇಟಾಹ್ ದಲ್ಲಿ ಮರುಮತದಾನಕ್ಕೆ ಆದೇಶ ಹೊರಡಿಸಿದೆ. ಈ ಬಗ್ಗೆ ಮಾತನಾಡಿರುವ ಉತ್ತರ ಪ್ರದೇಶ ಮುಖ್ಯ ಚುನಾವಣಾಧಿಕಾರಿ ನವದೀಪ್ ರಿನ್ವಾ ಅವರು, ‘ವಿಚಾರ ತಿಳಿಯುತ್ತಲೇ ತಕ್ಷಣ ಕಾರ್ಯಪ್ರವೃತ್ತರಾಗಿ ಯುವಕನನ್ನು ಬಂಧಿಸಲಾಗಿದೆ. ಚುನಾವಣಾ ತಂಡದ ಎಲ್ಲ ಸದಸ್ಯರನ್ನು ಅಮಾನತುಗೊಳಿಸಲಾಗಿದ್ದು, ಮರು ಮತದಾನಕ್ಕೆ ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದರು.ಬಂಧಿತ ಯುವಕನನ್ನು ಇಟಾ ಜಿಲ್ಲೆಯ ಖಿರಿಯ ಪಮರಾನ್ ಗ್ರಾಮದ ನಿವಾಸಿ ಎಂದು ಪೊಲೀಸರು ತಿಳಿಸಿದ್ದು, ಈತ ಸ್ಥಳೀಯ ಬಿಜೆಪಿ ಮುಖಂಡನ ಮಗ ಎನ್ನಲಾಗುತ್ತಿದೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನಂತರ ನಯಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಭಾನುವಾರ ರಾತ್ರಿ ಯುವಕನನ್ನು ಬಂಧಿಸಲಾಗಿದೆ.

LokSabhaElections2024: 5ನೇ ಹಂತದಲ್ಲಿ ಶೇ.60.09ರಷ್ಟು ಮತದಾನ, ಬಾರಾಮುಲ್ಲಾದಲ್ಲಿ ಇತಿಹಾಸದಲ್ಲೇ ಗರಿಷ್ಠ Voting

ನವದೆಹಲಿ: ಲೋಕಸಭಾ ಚುನಾವಣೆಯ 5ನೇ ಹಂತದ ಮತದಾನ ಮುಕ್ತಾಯವಾಗಿದ್ದು, ಒಟ್ಟಾರೆ ಶೇ.60.09ರಷ್ಟು ಮತದಾನವಾಗಿದೆ ಎಂದು ಕೇಂದ್ರ ಚುನವಣಾ ಆಯೋಗ ತಡರಾತ್ರಿ ಮಾಹಿತಿ ನೀಡಿದೆ.

ಸೋಮವಾರ ನಡೆದ ಮತದಾನ ಪ್ರಕ್ರಿಯೆ ಬಹುತೇಕ ಕಡೆ ಶಾಂತಿಯುತವಾಗಿ ಮತದಾನ ನಡೆದಿದ್ದು, ಪಶ್ಚಿಮ ಬಂಗಾಳದ ಕೆಲವೆಡೆ ಮಾತ್ರ ಗಲಾಟೆ ನಡೆದಿವೆ ಎಂದು ತಿಳಿದುಬಂದಿದೆ. ರಾತ್ರಿ 11.30ರ ಹೊತ್ತಿಗೆ ಮತದಾನ ಪ್ರಮಾಣದ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಚುನಾವಣಾ ಆಯೋಗ ಒಟ್ಟಾರೆ ಇಂದು ಶೇ.60.09ರಷ್ಟು ಮತದಾನವಾಗಿದೆ ಎಂದು ಹೇಳಿದೆ.ಆರು ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ 49 ಕ್ಷೇತ್ರಗಳಲ್ಲಿ ಇಂದು ಮತದಾನವಾಗಿದ್ದು, ಈ ಹಿಂದಿನ ಹಂತಗಳಿಗೆ ಹೋಲಿಕೆ ಮಾಡಿದರೆ 5ನೇ ಹಂತದಲ್ಲಿ ಮತದಾನ ಪ್ರಮಾಣ ಕಡಿಮೆಯಾದಂತಿದೆ.

ಪಶ್ಚಿಮ ಬಂಗಾಳದಲ್ಲಿ ಗರಿಷ್ಠ, ಮಹಾರಾಷ್ಟ್ರದಲ್ಲಿ ಕನಿಷ್ಠ ಮತದಾನ

ಇನ್ನು ಪಶ್ಚಿಮ ಬಂಗಾಳದಲ್ಲಿ ಐದನೇ ಹಂತದಲ್ಲಿ ಹೆಚ್ಚಿನ ಮತದಾನ ದಾಖಲಾಗಿದೆ. ರಾಜ್ಯದಲ್ಲಿ ಕೆಲವೆಡೆ ಹಿಂಸಾಚಾರ ಪ್ರಕರಣಗಳು ಸುದ್ದಿಯಾಗಿದ್ದರೂ ಶೇ.74.65ರಷ್ಟು ಮತದಾನ ದಾಖಲಾಗಿದೆ. ಇನ್ನು ಲಡಾಖ್ ನಲ್ಲಿ ಶೇ.69.62, ಜಾರ್ಖಂಡ್‌ನಲ್ಲಿ ಶೇ.63.07ರಷ್ಟು ಮತದಾನ ನಡೆದಿದೆ. ಇನ್ನು ಮಹಾರಾಷ್ಟ್ರದಲ್ಲಿ ಕೇವಲ ಶೇ.54.29ರಷ್ಟು ಮತದಾನ ದಾಖಲಾಗಿದ್ದು, ಐದನೇ ಹಂತದಲ್ಲಿ ಕನಿಷ್ಠ ಮತದಾನ ನಡೆದ ರಾಜ್ಯ ಎನಿಸಿದೆ. ನಾಲ್ಕನೇ ಹಂತದಲ್ಲೂ ಮಹಾರಾಷ್ಟ್ರದಲ್ಲೂ ಕನಿಷ್ಠ ಮತದಾನ ದಾಖಲಾಗಿತ್ತು.

ಉತ್ತರ ಪ್ರದೇಶದಲ್ಲಿ ಶೇ.57.79% ಮತದಾನವಾಗಿದ್ದು, ಒಡಿಶಾದಲ್ಲಿ 67.59% ಮತದಾನ, ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ 56.73% ಮತ್ತು ಬಿಹಾರದಲ್ಲಿ 54.85% ರಷ್ಟು ಮತದಾನ ದಾಖಲಾಗಿದೆ.

ದಾಖಲೆ ಬರೆದ ಬಾರಾಮುಲ್ಲಾ, ಉಗ್ರರ ಎಚ್ಚರಿಕೆ ನಡುವೆಯೂ ದಾಖಲೆಯ ಮತದಾನ

ಇನ್ನು ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಉಗ್ರ ಪೀಡಿತ ಬಾರಾಮುಲ್ಲಾದಲ್ಲಿ ಇತಿಹಾಸದಲ್ಲೇ ಗರಿಷ್ಠ ಮತದಾನ ದಾಖಲಾಗಿದೆ. ಉಗ್ರರ ಎಚ್ಚರಿಕೆ ನಡುವೆಯೂ ಇಲ್ಲಿ ಮತದಾರರು ಯಥೇಚ್ಚ ಪ್ರಮಾಣದಲ್ಲಿ ಮತಗಟ್ಟೆಗಳಿಗೆ ಆಗಮಿಸಿ ಮತದಾನ ಮಾಡಿದ್ದಾರೆ. ಸೋಮವಾರ ಸಂಜೆ ಮುಕ್ತಾಯವಾದ ಮತದಾನ ಪ್ರಕ್ರಿಯೆಯಲ್ಲಿ ಬಾರಾಲಮುಲ್ಲಾದಲ್ಲಿ ಬರೊಬ್ಬರಿ ಶೇ.59ರಷ್ಟು ಮತದಾನವಾಗಿದೆ. ಇದು ಬಾರಾಮುಲ್ಲಾ ಇತಿಹಾಸದಲ್ಲೇ ಗರಿಷ್ಟ ಮತದಾನ ಎಂದು ಹೇಳಲಾಗಿದೆ.”ಬಾರಾಮುಲ್ಲಾ ಲೋಕಸಭಾ ಕ್ಷೇತ್ರದಲ್ಲಿ 1967 ರಲ್ಲಿ ಮೊದಲ ಬಾರಿಗೆ ಸಂಸತ್ತಿಗೆ ಚುನಾವಣೆ ನಡೆದಾಗಿನಿಂದ ದಾಖಲೆಯ ಮತದಾನಕ್ಕೆ ಸಾಕ್ಷಿಯಾಗಿದೆ” ಎಂದು ಕೇಂದ್ರಾಡಳಿತ ಪ್ರದೇಶದ ಮುಖ್ಯ ಚುನಾವಣಾಧಿಕಾರಿ ಪಿ.ಕೆ.ಪೋಲ್ ಶ್ರೀನಗರದಲ್ಲಿ ತಿಳಿಸಿದ್ದಾರೆ. ಈ ಹಿಂದೆ ಅಂದರೆ 1984ರಲ್ಲಿ ಬಾರಾಮುಲ್ಲಾದಲ್ಲಿ ಶೇ.58.90ರಷ್ಚು ಮತದಾನವಾಗಿತ್ತು. ಇದು ಈ ವರೆಗಿನ ಗರಿಷ್ಠ ಮತದಾನವಾಗಿತ್ತು. ಆದರೆ ಇಂದು ಈ ಪ್ರಮಾಣವನ್ನೂ ಮೀರಿಸುವಷ್ಟು ಮತದಾನವಾಗಿದೆ. ಬಾರಾಮುಲ್ಲದಲ್ಲಿ 17,37,865 ನೋಂದಾವಣಿ ಮಾಡಿಕೊಂಡ ಮತದಾರರಿದ್ದಾರೆ ಎಂದು ಅಧಿಕಾರಿ ತಿಳಿಸಿದರು.

ಸೋಪೋರ್ ನಲ್ಲಿ ಶೇ.44.36ರಷ್ಟು, ಕುಪ್ವಾರದಲ್ಲೂ ಗರಿಷ್ಠ ಅಂದರೆ ಶೇ.67.50ರಷ್ಟು ಮತ್ತು ಗುರೇಜ್ ನಲ್ಲಿ ಕನಿಷ್ಟ ಅಂದರೆ ಶೇ.40.82ರಷ್ಟು ಮತದಾನವಾಗಿದೆ ಎಂದು ಅಧಿಕಾರಿ ಪೋಲ್ ತಿಳಿಸಿದರು.

ಉಳಿದಂತೆ ಲ್ಯಾಂಗೇಟ್‌ ಶೇ.66, ಸೋನಾವರಿ ಶೇ.64.61, ಕರ್ನಾ ಶೇ.61.53, ಟ್ರೆಗಮ್ ಶೇ.61.17, ಉರಿಯಲ್ಲಿ ಶೇ.60.27 ಮತದಾನವಾಗಿದೆ. ಅಲ್ಲದೆ ಬಂಡಿಪೋರಾ ಶೇ.60.24, ಬೀರ್ವಾ ಶೇ.56.63, ಬುದ್ಗಾಮ್ ಶೇ.51.76, ಗುಲ್ಮಾರ್ಗ್ ಶೇ.58.50, ಕುಪ್ವಾರ ಶೇ.58.90, ಲೋಲಾಬ್ ಶೇ.58, ಪಟ್ಟನ್ ಶೇ.59.87, ರಫಿಯಾಬಾದ್ ಶೇ.57.39, ವಾಗೂರ್-ಕ್ರೀರಿ ಶೇ.49.79 ಮತದಾನವಾಗಿದೆ.

ನೀವು ಮತವನ್ನೂ ಚಲಾಯಿಸಿಲ್ಲ, ಪಕ್ಷದ ಸಂಘಟನೆಯಲ್ಲೂ ತೊಡಗಿಸಿಕೊಂಡಿಲ್ಲ: ಜಯಂತ್ ಸಿನ್ಹಾಗೆ ಬಿಜೆಪಿ ನೊಟೀಸ್

ನವದೆಹಲಿ: ಮಾಜಿ ಕೇಂದ್ರ ಸಚಿವ, ಸಂಸದ ಜಯಂತ್ ಸಿನ್ಹಾಗೆ ಬಿಜೆಪಿ ನೊಟೀಸ್ ಜಾರಿ ಮಾಡಿದೆ. ನೆನ್ನೆ ನಡೆದ 5 ನೇ ಹಂತದ ಚುನಾವಣೆ ವೇಳೆ ಜಯಂತ್ ಸಿನ್ಹಾ ಮತದಾನ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಿಜೆಪಿ ಕಾರಣ ಕೇಳಿ ನೊಟೀಸ್ ನೀಡಿದೆ.
ಜಯಂತ್ ಸಿನ್ಹಾ ಪ್ರತಿನಿಧಿಸುತ್ತಿದ್ದ ಜಾರ್ಖಂಡ್ ನ ಹಜಾರಿಬಾಗ್ ಕ್ಷೇತ್ರದಿಂದ ಈ ಬಾರಿ ಮನೀಶ್ ಜೈಸ್ವಾಲ್ ಅವರಿಗೆ ಟಿಕೆಟ್ ನೀಡಲಾಗಿತ್ತು. ಅಭ್ಯರ್ಥಿಯ ಘೋಷಣೆಯಾದ ಬಳಿಕ ಜಯಂತ್ ಸಿನ್ಹಾ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರು. ಇದಕ್ಕೂ ಮುನ್ನ ಮಾರ್ಚ್ ನಲ್ಲಿ ಟ್ವೀಟ್ ಮಾಡಿದ್ದ ಜಯಂತ್ ಸಿನ್ಹಾ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡದೇ ಇರುವ ಇಂಗಿತ ವ್ಯಕ್ತಪಡಿಸಿದ್ದರು. ಇದೇ ಮಾದರಿಯಲ್ಲಿ ದೆಹಲಿಯ ಸಂಸದ ಗೌತಮ್ ಗಂಭೀರ್ ಸಹ ತಮ್ಮನ್ನು ಪಕ್ಷದ ಎಲ್ಲಾ ಹುದ್ದೆ ಮತ್ತು ಜವಾಬ್ದಾರಿಗಳಿಂದ ಮುಕ್ತಗೊಳಿಸುವಂತೆ ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದರು.

“ಹಜಾರಿಬಾಗ್ ಲೋಕಸಭಾ ಕ್ಷೇತ್ರದಿಂದ ಮನೀಶ್ ಜೈಸ್ವಾಲ್ ಅವರನ್ನು ಅಭ್ಯರ್ಥಿಯಾಗಿ ಪಕ್ಷ ಘೋಷಿಸಿದಾಗಿನಿಂದ ನೀವು ಸಂಘಟನಾ ಕಾರ್ಯ ಮತ್ತು ಚುನಾವಣಾ ಪ್ರಚಾರದಲ್ಲಿ ಯಾವುದೇ ಆಸಕ್ತಿ ವಹಿಸುತ್ತಿಲ್ಲ. ನಿಮಗೆ ಮತ ಚಲಾಯಿಸುವ ಅಗತ್ಯವಿದೆ ಎಂದೆನಿಸಲೂ ಇಲ್ಲ. ನಿಮ್ಮ ನಡವಳಿಕೆಯಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದೆ” ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆದಿತ್ಯ ಸಾಹು ನೋಟಿಸ್‌ನಲ್ಲಿ ತಿಳಿಸಿದ್ದಾರೆ.ಎರಡು ದಿನಗಳಲ್ಲಿ ತಮ್ಮ ನಿಲುವನ್ನು ವಿವರಿಸುವಂತೆ ಪಕ್ಷ ಸಿನ್ಹಾ ಅವರನ್ನು ಕೇಳಿದೆ. 61 ವರ್ಷದ ಸಿನ್ಹಾ ಇನ್ನೂ ನೋಟಿಸ್‌ಗೆ ಪ್ರತಿಕ್ರಿಯಿಸಿಲ್ಲ. ಸಿನ್ಹಾ ಅವರು 2019 ರಲ್ಲಿ ಕಾಂಗ್ರೆಸ್‌ನ ಗೋಪಾಲ್ ಸಾಹು ಅವರನ್ನು ಸೋಲಿಸಿ 4.79 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು.

ಲೋಕಸಭಾ ಚುನಾವಣೆ: ಬಿಜೆಪಿಗೆ ಬಹುಮತ ಬರದಂತೆ ತಡೆಯುವ ವಿಶ್ವಾಸ INDIA ಬಣಕ್ಕಿದೆ: ಖರ್ಗೆ

ನವದೆಹಲಿ: ತಮ್ಮ ಪಕ್ಷ ಮತ್ತು INDIA ಬಣದ ಬಗ್ಗೆ ಜನರ ಪ್ರತಿಕ್ರಿಯೆ ಗಮನಾರ್ಹವಾಗಿ ಬದಲಾಗಿದೆ ಮತ್ತು ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಬರದಂತೆ ತಡೆಯುವ ವಿಶ್ವಾಸವನ್ನು ವಿಪಕ್ಷಗಳ ಮೈತ್ರಿಕೂಟ ಹೊಂದಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಅವರು, ಸಮಾಜದಲ್ಲಿ ದ್ವೇಷ ಮತ್ತು ವಿಭಜನೆಯನ್ನು ಹರಡುವ ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಿದ್ಧಾಂತದ ವಿರುದ್ಧ ಈಗ ಜನರು ಹೋರಾಡುತ್ತಿದ್ದಾರೆ.ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವ ಹೋರಾಟ ಎಂದು ಜನರು ಭಾವಿಸಿದ್ದು, ಪಕ್ಷಕ್ಕೆ ಬೆಂಬಲ ನೀಡಿದ್ದಾರೆ ಎಂದರು.

ರಾಮಮಂದಿರ, ಹಿಂದೂ-ಮುಸ್ಲಿಂ ಮತ್ತು ಭಾರತ-ಪಾಕಿಸ್ತಾನದ ಹೆಸರಿನಲ್ಲಿ ಬಿಜೆಪಿ ಪದೇ ಪದೇ ಜನರನ್ನು ಪ್ರಚೋದಿಸುತ್ತದೆ ಮತ್ತು “ಭಾವನಾತ್ಮಕವಾಗಿ ಲೂಟಿ” ಮಾಡುತ್ತಿದೆ ಎಂದು ಆರೋಪಿಸಿದ ಖರ್ಗೆ ಅವರು ಈಗ ಅವರ ನಿಜವಾದ ಬಣ್ಣವನ್ನು ಜನರು ಅರ್ಥಮಾಡಿಕೊಂಡಿದ್ದಾರೆ. ದೇಶಾದ್ಯಂತ ಪ್ರಯಾಣಿಸಿದ ನಂತರ, ನಮ್ಮ ಪರವಾಗಿ ದೊಡ್ಡ ಒಲವಿದೆ ಎಂಬ ಭಾವನೆ ನಮಗೆ ಬರುತ್ತಿದೆ. ಕಾಂಗ್ರೆಸ್ ಪಕ್ಷ ಮತ್ತು ಮೈತ್ರಿ ಪಾಲುದಾರರು ಈ ಬಾರಿ ಹೆಚ್ಚು ಸ್ಥಾನಗಳನ್ನು ಪಡೆಯುತ್ತಾರೆ. ಬಿಜೆಪಿ ಅಧಿಕಾರಕ್ಕೆ ಬರಲು ಬೇಕಾದ ಸ್ಥಾನಗಳನ್ನು ಪಡೆಯದಂತೆ ತಡೆಯಲು ಸಾಧ್ಯವಾಗುತ್ತದೆ. ಬಿಜೆಪಿ ಸರ್ಕಾರ ರಚಿಸಲು ಸಾಧ್ಯವಾಗುವುದಿಲ್ಲ ಎಂದು ಭಾವಿಸುವುದಾಗಿ ತಿಳಿಸಿದರು.”ಸಾರ್ವಜನಿಕರೇ ನಮಗಾಗಿ ಹೋರಾಡುತ್ತಿದ್ದಾರೆ. ಅದು ನಮಗಾಗಿ ಮಾತ್ರ ಅಲ್ಲ. ಜನರು ನಾವು ಅನುಸರಿಸುವ ಸಿದ್ಧಾಂತವನ್ನು ಬೆಂಬಲಿಸುತ್ತಿದ್ದಾರೆ ಮತ್ತು ನಮಗಾಗಿ ಹೋರಾಡುತ್ತಿದ್ದಾರೆ, ಬಿಜೆಪಿ ಸಂಖ್ಯೆ ಕುಸಿಯಲಿದ್ದು, ನಾವು ಮುಂದುವರಿಯುತ್ತೇವೆ ಎಂಬುದು ಸ್ಪಷ್ಟವಾಗಿದೆ ಎಂದು ಖರ್ಗೆ ಹೇಳಿದರು. .

ಅವರಿಗೆ ಎಲ್ಲಿಂದ ವಿಶ್ವಾಸ ಬರುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಖರ್ಗೆ, ಜನರ ಪ್ರತಿಕ್ರಿಯೆ ಮತ್ತು ಅವರು ಹೇಗೆ ಬೆಂಬಲಿಸಲು ಪ್ರಾರಂಭಿಸಿದ್ದಾರೆ ಮತ್ತು ಅವರ ಸಿದ್ಧಾಂತಕ್ಕಾಗಿ ಹೋರಾಡುತ್ತಿದ್ದಾರೆ ಎಂಬುದು ನನಗೆ ಅಂತಹ ಆತ್ಮವಿಶ್ವಾಸವನ್ನು ನೀಡುತ್ತದೆ ಎಂದು ಹೇಳಿದರು.

ಮೆದುಳು ತಿನ್ನುವ ಅಮೀಬಾ!: ಅಪರೂಪದ ಸೋಂಕಿನಿಂದ ಮಗು ಸಾವು!

ತಿರುವನಂತಪುರಂ: ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ ಎಂಬ ಅಪರೂಪದ ಆರೋಗ್ಯ ಸಮಸ್ಯೆಯಿಂದ ಮಗುವೊಂದು ಸಾವನ್ನಪ್ಪಿರುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ವರದಿಯಾಗಿದೆ. ಕಲುಶಿತ ನೀರಿನಲ್ಲಿ ಪತ್ತೆಯಾದ ಅಮೀಬಾದಿಂದ ಉಂಟಾದ ಸೋಂಕಿನಿಂದ ಮಗು ಸಾವನ್ನಪ್ಪಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ಅಮೀಬಾವನ್ನು ಮೆದುಳು ತಿನ್ನುವ ಅಮೀಬಾ ಎಂದು ಸಾಮಾನ್ಯವಾಗಿ ಕರೆಯಲಾಗುತ್ತದೆ.ಮೂನ್ನಿಯೂರು ಪಂಚಾಯತ್ ನಲ್ಲಿ ಈ ಘಟನೆ ವರದಿಯಾಗಿದ್ದು, ಮಗುವನ್ನು ಕೋಝಿಕ್ಕೋಡ್ ಮೆಡಿಕಲ್ ಕಾಲೇಜ್ ಇನ್ಸ್ಟಿಟ್ಯೂಟ್ ಆಫ್ ಮೆಟರ್ನಲ್ ಅಂಡ್ ಚೈಲ್ಡ್ ಹೆಲ್ತ್ ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಕಳೆದ 1 ವಾರದಿಂದ ಮಗುವಿಗೆ ಚಿಕಿತ್ಸೆ ಕೊಡಿಸಲಾಗುತ್ತಿತ್ತು.ವೈದ್ಯಕೀಯ ತಜ್ಞರ ಪ್ರಕಾರ, ಸ್ವತಂತ್ರವಾಗಿ ವಾಸಿಸುವ, ಪರಾವಲಂಬಿಯಲ್ಲದ ಅಮೀಬಾ ಬ್ಯಾಕ್ಟೀರಿಯಾಗಳು ಕಲುಷಿತ ನೀರಿನಿಂದ ಮೂಗಿನ ಮೂಲಕ ದೇಹವನ್ನು ಪ್ರವೇಶಿಸಿದಾಗ ಸೋಂಕು ಉಂಟಾಗುತ್ತದೆ. ಬಾಲಕಿ ಮೇ 1 ರಂದು ಸಮೀಪದ ಕೊಳದಲ್ಲಿ ಸ್ನಾನ ಮಾಡಿದ್ದಳು ಮತ್ತು ಮೇ 10 ರ ವೇಳೆಗೆ ಜ್ವರ, ತಲೆನೋವು ಮತ್ತು ವಾಂತಿಯ ಲಕ್ಷಣಗಳು ಕಾಣಿಸಿಕೊಂಡಿವೆ ಎಂದು ಮೂಲಗಳು ತಿಳಿಸಿವೆ. ಮಗು ವೆಂಟಿಲೇಟರ್‌ ನಲ್ಲಿತ್ತು, ಆದರೆ ಚಿಕಿತ್ಸೆಗೆ ಸ್ಪಂದಿಸಲಿಲ್ಲ.

ಅದೇ ಕೊಳದಲ್ಲಿ ಬಾಲಕಿಯೊಂದಿಗೆ ಸ್ನಾನ ಮಾಡಿದ ಇತರ ಮಕ್ಕಳ ಮೇಲೆಯೂ ನಿಗಾ ವಹಿಸಲಾಗಿದೆ. ಆದಾಗ್ಯೂ, ಸೋಂಕು ಮುಕ್ತವಾಗಿರುವುದು ಕಂಡುಬಂದ ನಂತರ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಆರೋಗ್ಯ ಸಮಸ್ಯೆ ಮೊದಲು 2023 ಮತ್ತು 2017 ರಲ್ಲಿ ರಾಜ್ಯದ ಕರಾವಳಿ ಅಲಪ್ಪುಳ ಜಿಲ್ಲೆಯಲ್ಲಿ ವರದಿಯಾಗಿತ್ತು. ಜ್ವರ, ತಲೆನೋವು, ವಾಂತಿ ಮತ್ತು ರೋಗಗ್ರಸ್ತವಾಗುವಿಕೆಗಳು ರೋಗದ ಮುಖ್ಯ ಲಕ್ಷಣಗಳಾಗಿವೆ.

ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್​​ಪೋರ್ಟ್​ ರದ್ದುಗೊಳಿಸುವಂತೆ ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಪತ್ರ

ಬೆಂಗಳೂರು: ನೂರಾರು ಮಹಿಳೆಯರ ಜೊತೆಗಿನ ರಾಸಲೀಲೆ ವಿಡಿಯೋಗಳು ಬಹಿರಂಗಗೊಂಡ ನಂತರ ವಿದೇಶಕ್ಕೆ ಪರಾರಿಯಾಗಿರುವ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್​​ಪೋರ್ಟ್​ ರದ್ದು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಮಂಗಳಾವರ ತಿಳಿಸಿದ್ದಾರೆ.

ಇಂದು ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಗೃಹ ಸಚಿವರು, ಪ್ರಜ್ವಲ್ ರೇವಣ್ಣ ಬಂಧನಕ್ಕೆ ಈಗಾಗಲೆ ವಾರಂಟ್ ಜಾರಿ ಆಗಿದೆ. ಅದರ ಆಧಾರದ ಮೇಲೆ ರಾಜತಾಂತ್ರಿಕ ಪಾಸ್​ಪೋರ್ಟ್ ರದ್ದು ಕೋರಿ ಪತ್ರ ಬರೆಯಲಾಗಿದೆ. ಪಾಸ್​ಪೋರ್ಟ್​ ರದ್ದು ಮಾಡಿದರೆ ಪ್ರಜ್ವಲ್ ಭಾರತಕ್ಕೆ ಬರಬೇಕಾಗುತ್ತದೆ ಎಂದರು.

ಇದೇ ವೇಳೆ, ಎಸ್ಐಟಿ ಮುಂದೆ ಶರಣಾಗುವಂತೆ ಪ್ರಜ್ವಲ್​ ರೇವಣ್ಣ ಅವರಿಗೆ ಮಾಜಿ ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿ ಮನವಿ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ ಅವರು, ಇದು ಅವರ ಕುಟುಂಬದ ಆಂತರಿಕ ವಿಚಾರ ಎಂದರು.ಇನ್ನು ಫೋನ್​ ಟ್ಯಾಪ್​ ಆಗುತ್ತಿದೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಸರ್ಕಾರದ ವತಿಯಿಂದ ‌ಯಾರ ಫೋನ್ ಸಹ ಟ್ಯಾಪ್ ಮಾಡಿಲ್ಲ. ಒಂದು ವೇಳೆ ಫೋನ್​ ಟ್ಯಾಪ್​ ಆಗಿದ್ದರೆ ದಾಖಲೆ ಕೊಡಲಿ. ತನಿಖೆ ಮಾಡುತ್ತೇವೆ ಎಂದರು.

ವಕೀಲ ದೇವರಾಜೇಗೌಡ ಆಡಿಯೋ ಬಗ್ಗೆ ಎಸ್​ಐಟಿ ನೋಡಿಕೊಳ್ಳುತ್ತೆ. ಪ್ರತಿಯೊಂದು ಹಂತದಲ್ಲಿ ತನಿಖೆ ಮಾಡಲು ನಾವು ಹೇಳಲ್ಲ. ತನಿಖೆ ಮಾಡಲು ಎಸ್​ಐಟಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದೇವೆ ಎಂದು ಹೇಳಿದರು.

ಎಚ್​.ಡಿ ದೇವೇಗೌಡರ ಕುಟುಂಬ ಮುಗಿಸಲು ಷಡ್ಯಂತ್ರ್ಯ ನಡೆಸಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಎಚ್ ​ಡಿ ಕುಮಾರಸ್ವಾಮಿ ಅವರು ಯಾವ ಉದ್ದೇಶದಿಂದ‌ ಹೇಳಿದ್ದಾರೆ ಗೊತ್ತಿಲ್ಲ. ಕಾಂಗ್ರೆಸ್ ಸರ್ಕಾರಕ್ಕೆ ಬಹಳ‌ ಕೆಲಸ ಇದೆ. ಆಡಳಿತ ಮಾಡಬೇಕು. ಇಡೀ ದೇಶ ನಮ್ಮ ಕಾಂಗ್ರೆಸ್ ಸರ್ಕಾರದ ಕಡೆ ನೋಡುತ್ತಿದೆ ಎಂದರು.

ಇನ್ನು ಬೆಂಗಳೂರಿನ ಜಿ.ಆರ್.ಫಾರ್ಮ್​ಹೌಸ್​ನಲ್ಲಿ ನಡೆದಿದ್ದ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರ ದಾಳಿ ನಡೆಸಿದ ವೇಳೆ ಡ್ರಗ್ಸ್, ಸಿಂಥೆಟಿಕ್ ಡ್ರಗ್ಸ್ ಪತ್ತೆ ಆಗಿದೆ. ಪೊಲೀಸರು ಪಾರ್ಟಿಯಲ್ಲಿ ಭಾಗಿಯಾದವರ ಮಾಹಿತಿ ಪಡೆದಿದ್ದಾರೆ. ಡ್ರಗ್ಸ್ ಫ್ರೀ ರಾಜ್ಯ ಮಾಡಬೇಕು ಅಂತ ಕ್ರಮ ಕೈಗೊಳ್ಳುತ್ತಿದ್ದೇವೆ. ಗಾಂಜಾ ಎಲ್ಲಿಂದ ಬರುತ್ತೆ ಎಂಬ ಮಾಹಿತಿ ಮೇಲೆ ಆರೋಪಿಗಳನ್ನು ಹಿಡಿಯುತ್ತೇವೆ. ಪೆಡ್ಲರ್ಸ್ ಯಾರಿದ್ದಾರೆ ಅವರನ್ನು ಹಿಡಿಯವುದು ಬಹಳ ಮುಖ್ಯ. ರೇವ್ ಪಾರ್ಟಿ ಹತ್ತಿಕ್ಕುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಕೆಐಎಯಿಂದ ಬೆಂಗಳೂರಿಗೆ ಬಾಡಿಗೆಗೆ ಖಾಸಗಿ ಟ್ಯಾಕ್ಸಿ ಪಡೆಯುವಿರಾ? ಹೆಚ್ಚು ಶುಲ್ಕ ಪಾವತಿಸಲು ಸಿದ್ಧರಾಗಿರಿ!

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಗರಕ್ಕೆ ಬರುವ ಪ್ರಯಾಣಿಕರಿಗೆ ಪ್ರಯಾಣ ದರವನ್ನು ಹೆಚ್ಚಿಸುವ ಕ್ರಮವಾಗಿ, ನಿಲ್ದಾಣದ ಆಗಮನ ಪ್ರದೇಶಕ್ಕೆ ಪ್ರವೇಶಿಸುವ ಖಾಸಗಿ ಟ್ಯಾಕ್ಸಿಗಳಿಗೆ (ಹಳದಿ ಬೋರ್ಡ್‌ಗಳು) ಸೋಮವಾರ ಬೆಳಿಗ್ಗೆಯಿಂದ 150 ರೂಪಾಯಿ ಶುಲ್ಕವನ್ನು ಪರಿಚಯಿಸಲಾಗಿದೆ. ಈ ಶುಲ್ಕ ಕನಿಷ್ಠ ಮತ್ತು 7 ನಿಮಿಷಗಳವರೆಗೆ ಮಾತ್ರ ಮಾನ್ಯವಾಗಿರುತ್ತದೆ. ಮುಂದಿನ ಏಳು ನಿಮಿಷಕ್ಕೆ ಚಾಲಕರು 300 ರೂ. ಪಾವತಿಸಬೇಕಾಗುತ್ತದೆ.

ವೈಯಕ್ತಿಕ ವಾಹನಗಳಿಗೆ ಗರಿಷ್ಠ 7 ನಿಮಿಷಗಳವರೆಗೆ ಯಾವುದೇ ಶುಲ್ಕವಿಲ್ಲ, ಆದರೆ ಈ ಅವಧಿ ಮೀರಿದರೆ (14 ನೇ ನಿಮಿಷದವರೆಗೆ) 150 ರೂ. ಪಾವತಿಸಬೇಕಾಗುತ್ತದೆ. KIA ಎರಡೂ ಟರ್ಮಿನಲ್‌ಗಳಲ್ಲಿ ಶುಲ್ಕಗಳು ತಕ್ಷಣವೇ ಜಾರಿಗೆ ಬಂದಿವೆ. ಇದರಿಂದ ಆಘಾತ ಹಾಗೂ ಆಕ್ರೋಶಗೊಂಡ ಖಾಸಗಿ ಟ್ಯಾಕ್ಸಿ ನಿರ್ವಾಹಕರು ಬುಧವಾರ ವಿಮಾನ ನಿಲ್ದಾಣದ ಆವರಣದಲ್ಲಿ ದೊಡ್ಡ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದಾರೆ.ಓಲಾ ಅಥವಾ ಉಬರ್‌ನಂತಹ ಕ್ಯಾಬ್ ಗಳ ಮೂಲಕ ಬರುವವರ ಮೇಲೆ ಈ ಕ್ರಮವು ಪರಿಣಾಮ ಬೀರುವುದಿಲ್ಲ ಏಕೆಂದರೆ ಅವರು ವಿಮಾನ ನಿಲ್ದಾಣದೊಳಗೆ ಪ್ರತ್ಯೇಕ ಪಾರ್ಕಿಂಗ್ ಸ್ಥಳಗಳನ್ನು ಹೊಂದಿದ್ದಾರೆ. ಆದಾಗ್ಯೂ, ಈ ಟ್ಯಾಕ್ಸಿಗಳು ಪ್ರಯಾಣಿಕರನ್ನು ಹುಡುಕಲು ಆಗಮನ ವಲಯ ಪ್ರವೇಶಿಸಿದರೆ ಅವರು ಪಾವತಿಸಬೇಕಾಗುತ್ತದೆ.

ಶುಲ್ಕವನ್ನು ಬಿಐಎಎಲ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಕ್ಯಾಬ್‌ಗಳು ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಂಡಿರುವ ಎರಡೂ ಟರ್ಮಿನಲ್‌ಗಳಲ್ಲಿನ ಸ್ಥಳಾವಕಾಶವನ್ನು ಕಡಿಮೆ ಮಾಡುವುದು ಇದರ ಹಿಂದಿನ ಆಲೋಚನೆಯಾಗಿದೆ. ಹೆಚ್ಚಿನ ಶುಲ್ಕ, ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲಾಗುತ್ತದೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ ಮೂಲಗಳು ಹೇಳಿವೆ.“KIA ಆಗಮನದ ಪ್ರದೇಶದಲ್ಲಿ ಶುಲ್ಕ ಪಾವತಿಯ ಈ ಕ್ರಮ ಸುಗಮ ಸಂಚಾರವನ್ನು ಖಚಿತಪಡಿಸುತ್ತದೆ. ಸುಧಾರಿತ ಭದ್ರತೆಯು ವಾಹನಗಳ ಅಡ್ಡಾದಿಡ್ಡಿ ಪಾರ್ಕಿಂಗ್ ಇರುವುದಿಲ್ಲ ಎಂದು ಖಚಿತಪಡಿಸುತ್ತದೆ. ಇದು ಅಕ್ರಮ ನಿಲುಗಡೆಯನ್ನು ತಡೆಯುತ್ತದೆ ಎಂದು ಬಿಐಎಎಲ್ ಮೂಲಗಳು ತಿಳಿಸಿವೆ. ಈ ಹಿಂದೆ ರೈಲ್ವೇ ನಿಲ್ದಾಣಗಳಲ್ಲಿ ಆಟೋ ಚಾಲಕರು ಹೇಗೆ ಕ್ಯಾಬ್ ಚಾಲಕರು ಗಿರಾಕಿಗಳಿಗೆ ಅಡ್ಡಾಡುವ ದೃಶ್ಯ ಸಾಮಾನ್ಯವಾಗಿತ್ತು.

ಜೈ ಕರ್ನಾಟಕ ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಎನ್.ವಿ.ಶ್ರೀಧರ್ ಮಾತನಾಡಿ, ಸೋಮವಾರ ಖಾಸಗಿ ಟ್ಯಾಕ್ಸಿ ಚಾಲಕ 10 ನಿಮಿಷ ಕಾಯಲು 300 ರೂ. ಹೆಚ್ಚಿನ ಶುಲ್ಕ ವಿಧಿಸಲಾಗಿದೆ. ಇದರ, ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲಾಗುತ್ತದೆ. ಇದು ಅವರ ಪ್ರವಾಸಗಳನ್ನು ದುಬಾರಿಯಾಗಿಸುತ್ತದೆ ಎಂದು ಹೇಳಿದರು.

ಮತ್ತೊಬ್ಬ ಕ್ಯಾಬ್ ಚಾಲಕ ನವೀನ್, ಈ ಕ್ರಮದ ಬಗ್ಗೆ ಅನೇಕ ಅಸಮಾಧಾನ ಮತ್ತು ಕೋಪಗೊಂಡ ಟ್ಯಾಕ್ಸಿ ಚಾಲಕರು ದೂರು ನೀಡುತ್ತಿದ್ದಾರೆ. ಇದು ಆಘಾತಕಾರಿ ಮತ್ತು ನಾವು ಹಿಂದೆಂದೂ ಅಂತಹ ಶುಲ್ಕವನ್ನು ಪಾವತಿಸಿಲ್ಲ ಎಂದು ಹೇಳಿದರು.

ಈಗಾಗಲೇ ಅಸ್ತಿತ್ವದಲ್ಲಿರುವ ಇತರ ಶುಲ್ಕಗಳು ಒಂದೇ ಆಗಿರುತ್ತವೆ: ಬಸ್‌ಗೆ ಪ್ರವೇಶ ಶುಲ್ಕ – ರೂ 600, ಟೆಂಪೋ ಟ್ರಾವೆಲರ್‌ಗೆ – ರೂ 300 ಮತ್ತು ಟಿಕೆಟ್ ನಷ್ಟಕ್ಕೆ ರೂ 600 ದಂಡ ಹಾಕಲಾಗುತ್ತದೆ.

ಮೂಲ ಸೌಕರ್ಯ ಕಲ್ಪಿಸದ ಲೇಔಟ್‌ ಡೆವಲಪರ್‌ಗಳಿಗೆ ನೋಟೀಸ್: ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: ಯಲಹಂಕ ವಲಯದ ಗೇಟೆಡ್ ಕಮ್ಯುನಿಟಿ ವಿಲ್ಲಾಗಳಲ್ಲಿ ಹಠಾತ್ ಪ್ರವಾಹ ಸಂಭವಿಸಿದ ಒಂದು ದಿನದ ನಂತರ, ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

ಸೂಕ್ತ ಮೂಲಸೌಕರ್ಯ ಕಲ್ಪಿಸದ ಖಾಸಗಿ ಲೇಔಟ್‌ಗಳ ಡೆವಲಪರ್‌ಗಳಿಗೆ ನೋಟಿಸ್ ಜಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು. ನಗರದ ರಾಜಕಾಲುವೆಗಳನ್ನು ಪರಿಶೀಲಿಸಿದ ನಂತರ ಮಾತನಾಡಿದ ಉಪಮುಖ್ಯಮಂತ್ರಿ, ‘ಖಾಸಗಿ ಬಡಾವಣೆಗಳಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮನೆಗಳಿಗೆ ನೀರು ನುಗ್ಗುತ್ತಿದೆ. ಮಳೆ ನೀರು ಕೊಳಚೆ ನೀರಿನೊಂದಿಗೆ ಸೇರಿಕೊಂಡು ಸಮಸ್ಯೆಗಳು ಉಂಟಾಗುತ್ತವೆ.

ಲೇಔಟ್ ವಿನ್ಯಾಸ ಮಾಡುವಾಗ ಸರಿಯಾದ ವ್ಯವಸ್ಥೆ ಮಾಡದಿರುವುದು ಡೆವಲಪರ್‌ಗಳ ತಪ್ಪು. ಮಳೆ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಜನರು ಪರದಾಡುತ್ತಿದ್ದಾರೆ. ಜನರಿಂದ ಹಣ ಪಡೆದರೂ ಡೆವಲಪರ್‌ಗಳು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿಲ್ಲ. ಡೆವಲಪರ್‌ಗಳಿಂದ ಆಗಿರುವ ಅನಾನುಕೂಲವನ್ನು ಸರಿಪಡಿಸುವಂತೆ ಪೌರಕಾರ್ಮಿಕ ಅಧಿಕಾರಿಗಳಿಗೆ ಮನವಿ ಮಾಡಲಾಗುವುದು ಎಂದು ಶಿವಕುಮಾರ್ ಹೇಳಿದರು. ಪ್ರವಾಹ ಪೀಡಿತ ರಮಣಶ್ರೀ ಗಾರ್ಡೇನಿಯಾ ಮತ್ತು ನಾರ್ತ್‌ವುಡ್ ವಿಲ್ಲಾಗಳ ನಿವಾಸಿಗಳೊಂದಿಗೆ ಶಿವಕುಮಾರ್ ಸಭೆ ನಡೆಸಿದರು.ಅಪೂರ್ಣಗೊಂಡಿರುವ ಕಾಲುವೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಅನುಮತಿ ಪಡೆಯಲಾಗಿದೆ. ಮಳೆ ನೀರು ಹಾಗೂ ಚರಂಡಿ ನೀರು ಹರಿದು ಹೋಗಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿ, ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲಾಗುವುದು. ಪ್ರತಿ ವರ್ಷ ಮಳೆಯಿಂದ ಹಾನಿಯಾಗುವ ಪ್ರದೇಶಗಳನ್ನು ಗುರುತಿಸಿ, ಹಂತ ಹಂತವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದರು.

ರಾಜಕಾಲುವೆ ಒತ್ತುವರಿ ಕುರಿತು ಪ್ರಶ್ನಿಸಿದಾಗ, ಖಾಸಗಿ ಬಡಾವಣೆಗಳನ್ನು ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು. ಜತೆಗೆ ಎಸ್‌ಟಿಪಿ ಅಳವಡಿಸದವರಿಗೆ ನೋಟಿಸ್‌ ನೀಡಲಾಗುವುದು ಎಂದರು.

ರಾಚೇನಹಳ್ಳಿ ಕೆರೆಯ ಪಕ್ಕದಲ್ಲಿರುವ ಜವಾಹರ್ ಲಾಲ್ ನೆಹರು ಆಧುನಿಕ ವಿಜ್ಞಾನ ಸಂಶೋಧನಾ ಕೇಂದ್ರದ (ಜೆಎನ್‌ಸಿಎಸ್‌ಎಆರ್) ಮೂಲಕ ಹಾದು ಹೋಗುವ ರಾಜ ಕಾಲುವೆಯನ್ನು ಪರಿಶೀಲಿಸಿದ ಶಿವಕುಮಾರ್, ಮುಂದಿನ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು. ಮತ್ತೆ ಮಳೆಯಾದರೆ ಪ್ರವಾಹ ಪರಿಸ್ಥಿತಿ ತಡೆಯಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ನೈಸ್ ರಸ್ತೆಯಲ್ಲಿ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ

ಬೆಂಗಳೂರು: ನಗರದ ಪಶ್ಚಿಮ ಭಾಗದ ನೈಸ್ ರಸ್ತೆಯಲ್ಲಿ ಸೋಮವಾರ ಬೆಳಗ್ಗೆ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿ, ಪ್ರಯಾಣಿಕ ಗಾಯಗೊಂಡಿರುವ ಘಟನೆ ನಡೆದಿದೆ. ವಿನಾಯಕ್ (20) ಮತ್ತು ಗಿರೀಶ್ (22) ಜಿಗಣಿಯಲ್ಲಿ ಮನೆಯಿಂದ ತುಮಕೂರಿಗೆ ತೆರಳುತ್ತಿದ್ದಾಗ ಮಂಗನಹಳ್ಳಿ ಬಳಿ ವಾಹನ ಡಿಕ್ಕಿ ಹೊಡೆದು ವೇಗವಾಗಿ ಹೋಗಿದೆ. ಇದರಿಂದ ವಿನಾಯಕ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಿರೀಶ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.ಇಬ್ಬರೂ ನಗರದ ಹೊರವಲಯದಲ್ಲಿರುವ ತಾಂತ್ರಿಕ ಸಂಸ್ಥೆಯಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದರು ಎಂದು ಜ್ಞಾನಭಾರತಿ ಸಂಚಾರ ಪೊಲೀಸರು ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳಿದ್ದರೆ ಪರಿಶೀಲಿಸಲಾಗುವುದು, ಯಾವುದೇ ಪ್ರತ್ಯಕ್ಷದರ್ಶಿಗಳಿಂದ ವಿವರ ಪಡೆಯಲಾಗುವುದು ಎಂದು ಜ್ಞಾನಭಾರತಿ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಅಪಘಾತ ಹೇಗೆ ಸಂಭವಿಸಿತು ಎಂಬುದು ಖಚಿತವಾಗಿಲ್ಲ. ಅವರ ಕೂಡಾ ವೇಗವಾಗಿ ಚಲಿಸುತ್ತಿದ್ದರೆಂಬ ಅನುಮಾನವಿದೆ ಎಂದರು.

1 2 3 12