ಹನುಮ ಜಯಂತಿ

ಹನುಮ ಜಯಂತಿ

Share

ಚೈತ್ರಮಾಸದಲ್ಲಿ ಶ್ರೀರಾಮನವಮಿಯ ನಂತರ ಆಚರಿಸಲ್ಪಡುವ ಮುಖ್ಯ ಹಬ್ಬ ಹನುಮ ಜಯಂತಿ. ಅಂದು ಆರಾಧಿಸಲ್ಪಡುವ ದೇವರು ಹನುಮಂತ, ಆಚಿಜನೇಯ, ಮಾರುತಿ, ಪ್ರಾಣದೇವರು,ತಿರುವಡಿ ಮುಂತಾದ ಹೆಸರುಗಳಿಂದ ಜ್ಞಾನಿಗಳ ಮತ್ತು ಭಕ್ತರ ಸಾಹಿತ್ಯದಲ್ಲಿ ಪ್ರಸಿದ್ಧನಾಗಿರುವ ಮಹಾತ್ಮ. ರಾಮನವಮಿಯಂದು ಶ್ರೀರಾಮನನ್ನು ಪೂಜಿಸಿದ ನಂತರ ಅದಕ್ಕೆ ಹತ್ತಿರದಲ್ಲಿ ಬರುವ ಒಂದು ಪರ್ವದಲ್ಲಿ, ಭಕ್ತ ಜನಪ್ರಿಯನೂ,ಬಹುಜನಪ್ರಿಯನೂ ಆಗಿರುವ ಈ ದೇವನನ್ನು ಆರಾಧಿಸುವುದು ವಾಡಿಕೆಯಾಗಿದೆ.
ರಾಮಾಯಣ, ಮಹಾ ಭಾರತ,ಪುರಾಣ, ಧರ್ಮಶಾಸ್ತ್ರ, ಸಂಗೀತ, ಕಾವ್ಯ ಮುಂತಾದಗಳು ಮಾತ್ರವಲ್ಲದೆ, “ರಾಮನ ಬಂಟ ಹನುಮಂತ, ತಿರುಪತಿಯೆಂಬುದೆ ವೈಕುಂಠ” ಹನುಮನಿಲ್ಲದ ಹಳ್ಳಿಯೇ ? ಗಣಪನಿಲ್ಲದ ಗ್ರಾಮವೇ ?’
ಇವೇ ಮುಂತಾದ ಜನಪದ ಸಾಹಿತ್ಯದ ವಚನಗಳೂ, ಬಗೆಬಗೆಯ ಭಾವಭಂಗಿಗಳಿಂದ ಶೋಭಿಸುತ್ತಿರುವ ಅವನ ವಿಗ್ರಹಗಳೂ, ಚಿತ್ರಗಳೂ, ಗುಡಿಗೋಪುರಗಳೂ ನಮ್ಮ ಮನಸ್ಸಿನ ಮೇಲೆ ಬೀರಿರುವ ಪ್ರಭಾವವನ್ನು ಸಾರುತ್ತವೆ. ಆಚಿಜನೇಯನನ್ನು ಉಪಾಸನೆ ಮಾಡುವವರು ಈ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾರೆ.
ಹನುಮಂತ ಕೇಸರಿಪುತ್ರ; ಸಿಂಹದ ಮರಿ, ಶೌರ್ಯ ಧೈರ್ಯಗಳ ಮೂರ್ತಿ, ವೀರರ ಕಣ್ಮಣಿ, ಆದರ್ಶ ಭಕ್ತ, ಭಕ್ತಿ ಶಕ್ತಿಗಳ ಸಂಗಮ, ರುದ್ರಾಂಶ ಸಂಭೂತ, ನ್ಯಾಯ ನೀತಿಗಳ ನೆಲೆಗಟ್ಟು,ಬುದ್ಧಿವಂತರಲ್ಲಿ ಅಗ್ರೇಸರ ಜಿತೇಂದ್ರಿಯ. ಸುಗ್ರೀವ್ ರಾಜನ ಸೇನಾಪತಿ ಹಾಗೂ ಆಪ್ತಮಿತ್ರ ಮಾರುತಿಯ ಜನ್ಮದಿನ ಒಂದು ರೀತಿಯ ವೀರಪೂಜೆ. ನಿಸ್ವಾರ್ಥಸೇವೆಗೆ ಸಲ್ಲುವ ಗೌರವ, ವೀರ್ಯ ವಿನಯಗಳ ಪ್ರಯೋಗವನ್ನು ಆಚಿಜನೇಯನಲ್ಲಿ ಕಾಣಬೇಕು. ಅವನು ಒಂದೆಡೆ ಶೌರ್ಯದ ಸಿರಿಯಾದರೆ, ಇನ್ನೊಂದೆಡೆ ಭಕ್ತಿಯ ಝರಿ.
ಸೂರ್ಯೋದಯ ಕಾಲದಲ್ಲಿ ಜನಿಸಿದ ಹನುಮಂತ ಹುಟ್ಟುತ್ತಲೇ ಕೆಂಪಾದ ಸೂರ್ಯನನ್ನು ಆಗಸದಲ್ಲಿ ಕಂಡು, ಹಣ್ಣೆಂದು ಭ್ರಮಿಸಿ ಸೂರ್ಯಮಂಡಲಕ್ಕೇ ಜಿಗಿದು ಸೂರ್ಯನಿಂದ ಶಹಭಾಸ್ ಗಿರಿ ಪಡೆದು ವಜ್ರದೇಹಿಯಾದವ, ರಾಮಕಥೆಯಿರುವತನಕ ತಾನು ಬದುಕಿರಬೇಕೆಂದು ವರಪಡೆದ ಚಿರಂಜೀವಿ-ಹನುಮಂತ. ಸದಾ ರಾಮನಿದ್ದಲ್ಲಿ ಅವನಿರಬೇಕು.
ಹನುಮಂತನ ಪರಿಚಯವನ್ನು ನಮಗೆ ಮಾಡಿಕೊಡುವ ಪ್ರಾಚೀನತಮ ಸಾಹಿತ್ಯವಾದ ವಾಲ್ಮೀಕಿ ರಾಮಾಯಣದ ಪ್ರಕಾರ ಹೇಳುವುದಾದರೆ., ಅವನೊಬ್ಬ ವಾನರ ಜಾತಿಯ ಮುಖಂಡ, ಕಿಷ್ಕಿಂಧೆಯ ಅರಸನಾದ ಕಪಿರಾಜ ಸುಗ್ರೀವನ ಮನೀಷಿಯೂ ಹಿತೈಷಿಯೂ ಆದ ಸಚಿವ, ಕೇಸರಿಯೆಂಬ ವಾನರ ನಾಯಕನ ಪತ್ನಿ ಅಚಿಜನಾದೇವಿಯ ಪುತ್ರ.
ಸಮುದ್ರಲಂಘನ, ಸೀತಾನ್ವೇಷಣ, ರಾಕ್ಷಸ ನಿಗ್ರಹ, ಲಂಕಾದಹನ,ಪರ್ವತಾರೋಹಣವೇ ಮುಂತಾದ ಇವನ ಎಲ್ಲಾ ಸಾಹಸಗಳೂ ರೋಮಾಂಚನಕರವಾದವು, ಬ್ರಹ್ಮಾದಿ ದೇವಪ್ರಧಾನರ ಅಸಾಧಾರಣ ವರಬಲದಿಂದ ಸಂಪನ್ನನಾದವನು,ಇಷ್ಟಾದರೂ ಆತ ಅತ್ಯಂತ ವಿನೀತ, ರಾಮನ ದಾಸನೆಂದು ತನ್ನನ್ನು ಕರೆದುಕೊಳ್ಳುವುದರಲ್ಲಿ ಹೆಮ್ಮೆ ಪಡುವ ದಾಸಶ್ರೇಷ್ಠ.
ಕಪಿಯ ರೂಪ ಮತ್ತು ಸ್ವಭಾವಗಳನ್ನು ಹೊಂದಿದ್ದರೂ, ಅವನು ದೇವತಾಪುತ್ರನೇ. ಇತಿಹಾಸ ರತ್ನವಾದ ಮಹಾಭಾರತವೂ ಮಾರುತಿಯ ವಿಷಯದಲ್ಲಿ ರಾಮಾಯಣವು ಹೇಳುವ ಅಭಿಪ್ರಾಯವನ್ನೇ ಸಮರ್ಥಿಸಿ ಆತನು ಭೀಮಸೇನನಿಗೂ ಅರ್ಜುನನಿಗೂ ಮಾಡಿದ ಪರಮೋಪಕಾರವನ್ನು ಉಲ್ಲೇಖಿಸುತ್ತದೆ. ಶ್ರೀಮದ್ಭಾಗವತವು ಆತನು ಪರಮಭಾಗವತ,ಕಿಂಪುರುಷ ವರ್ಷದಲ್ಲಿ ಸದಾ ಸೀತಾರಾಮನ ಉಪಾಸನೆಯಲ್ಲಿ ಮಗ್ನನಾಗಿರುವವನು ಎನ್ನುತ್ತದೆ. ಶಿವಪುರಾಣವು ಅವನ ದಿವ್ಯಮಹಿಮೆಯನ್ನು ಕೊಂಡಾಡುತ್ತಾ ಅವನು ರುದ್ರದೇವರ ಅವತಾರ ಎಂದು ಉದ್ಘೋಷಿಸುತ್ತದೆ.
ನಮ್ಮ ಸಂಪ್ರದಾಯವೂ ಕೂಡ ಮೇಲ್ಕಂಡ ಗ್ರಂಥಗಳ ಅಭಿಪ್ರಾಯವನ್ನು ಎತ್ತಿಹಿಡಿದು ಅವನನ್ನು ದೇವರನ್ನಾಗಿ ಆರಾಧಿಸುತ್ತಾ ಬಂದಿದೆ. ಹನುಮಜಯಂತಿಯನ್ನು ಅನುಷ್ಠಾನ ಮಾಡುವ ದಿವಸದ ಬಗೆಗೆ ಮೂರು ಸಂಪ್ರದಾಯಗಳನ್ನು ನೋಡುತ್ತೇವೆ. 1) ಚೈತ್ರ ಶುಕ್ಲ ಪೂರ್ಣಿಮೆಯಂದು ಆಚರಿಸುವ ಪದ್ಧತಿ 2) ಕಾರ್ತೀಕ ಕೃಷ್ಣ ಚತುರ್ದಶಿಯಂದು ಆಚರಿಸುವ ಪದ್ಧತಿ 3) ಮಾರ್ಗಶಿರ ಶುಕ್ಲ ತ್ರಯೋದಶಿಯಂದು ಆಚರಿಸುವ ಪದ್ಧತಿ, ಇವುಗಳಲ್ಲಿ ಕೊನೆಯದು ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಬಳಕೆಯಲ್ಲಿದೆ.
ಈ ದಿವಸ ವ್ರತವನ್ನು ಆಚರಿಸುವವರು ಉಪವಾಸ ಮಾಡಬೇಕು. ಉಪವಾಸ ಮಾಡಲು ಅಶಕ್ತರಾದವರು ದೇವರಿಗೆ ನಿವೇದನ ಮಾಡಿದ ಫಲಮೂಲ,ಕ್ಷೀರ ಮುಂತಾದ ಸಾತ್ವಿಕ ದ್ರವ್ಯಗಳನ್ನು ಸೇವಿಸಬಹುದು. ವ್ರತದ ಆಚರಣೆಯಿಲ್ಲದೆ ಪ್ರಾಣದೇವರ ಪೂಜೆಯನ್ನು ಮಾತ್ರ ಮಾಡುವವರು ಪೂಜಾಸಮಯದವರೆಗೂ ಉಪವಾಸವಿದ್ದು ಅನಂತರ ದೇವರ ಪ್ರಸಾದವನ್ನು ಸ್ವೀಕರಿಸಬೇಕು. ನೈವೇಧ್ಯಗಳಲ್ಲಿ ಪ್ರಶಸ್ತವಾದದು ಕಡಲೆ ಮತ್ತು ಬೆಲ್ಲಗಳಿಂದ ತಯಾರಾದ ಪ್ರಸಾದ. ದಾಸವರೇಣ್ಯನೂ ಭಗವಂತ ಭಗವತಿಯರಿಗೆ ಪ್ರಿಯತಮನೂ ಆಗಿರುವ ಶ್ರೀ ಹನುಮಂತನ ಜಯಂತಿಯ ಆಚರಣೆಯಿಂದ ಆದಿ-ವ್ಯಾಧಿ ಪರಿಹಾರಕ್ಕಾಗಿ ಭಗವತ್ ಪ್ರೀತಿ ಉಂಟಾಗುವುದರಿಂದ , ಶ್ರೇಯಸ್ಸನ್ನೂ, ಪ್ರೇಯಸ್ಸನ್ನೂ ಬಯಸುವ ಪ್ರತಿಯೊಬ್ಬನೂ ಆಚರಿಸಬೇಕಾದ ಮಂಗಳವ್ರತಗಳಲ್ಲಿ ಒಂದಾಗಿದೆ ಈ ಹಬ್ಬ.


Share