ಅಪ್ಪ

ಅಪ್ಪ

Share

ಅಪ್ಪ ಈ ಎರಡು ಅಕ್ಷರದಲ್ಲಿ ತುಂಬಾ ಅರ್ಥವಿದೆ. ಅಪ್ಪ “ಕಣ್ಣಿಗೆ ಕಾಣೋ ದೇವರು” ಎಂದರೆ ತಪ್ಪಾಗಲಾರದು, ಅಪ್ಪ ಅನ್ನೋ ಪದದ ಬದಲಾಗಿ ಇತ್ತೀಚೆಗೆ “ಪಪ್ಪಾ, ಡ್ಯಾಡಿ” ಎಂದೆಲ್ಲಾ ಕರೆಯುತ್ತೇವೆ. ಹೇಗೇ ಕರೆದರೂ ಅದರ ಅರ್ಥ ಒಂದೇ ಅಪ್ಪ. ಸಂಸಾರವೆಂಬ ನೌಕೆಯಲ್ಲಿ ಅಪ್ಪನದೇ ಮುಖ್ಯ ಪಾತ್ರ. ಏಕೆಂದರೆ, ಅಷ್ಟು ಜವಾಬ್ದಾರಿ ಅಪ್ಪನ ಮೇಲಿರುತ್ತದೆ. ಮಗು ಹುಟ್ಟಿದ ತಕ್ಷಣ ಕನಸು ಕಾಣುವ ಮನಸ್ಸು ಅಪ್ಪನದು. ಆ ಮಗುವಿಗೆ ಏನು ಹೆಸರಿಡಬೇಕು, ಏನು ಓದಿಸಬೇಕು, ಯಾವ ರೀತಿ ಅವರಿಗೆ ಸಮಾಜದಲ್ಲಿ ಬದುಕುವ ರೀತಿ ನೀತಿಗಳನ್ನು ಕಲಿಸಬೇಕು, ಎಂದು ಮನಸ್ಸಿನಲ್ಲಿಯೇ ಲೆಕ್ಕಚಾರ ಮಾಡುವವರು ಅಪ್ಪ. ಈ ಅಪ್ಪ ಅನ್ನೋ ಪಾತ್ರ ಬರೀ ಮಕ್ಕಳನ್ನು ಮಾತ್ರವಲ್ಲ, ಅವರ ತಂದೆ, ತಾಯಿ, ಹೆಂಡತಿ ಎಲ್ಲರನ್ನೂ ಸರಿ ಸಮನಾಗಿ ನೋಡಿಕೊಳ್ಳುವ ಮಹಾನ್ ವ್ಯಕ್ತಿ ಅಪ್ಪ. ತಾನು ಎಷ್ಟೇನೊಂದರು ತನ್ನ ಮಕ್ಕಳಿಗೆ ಕಷ್ಟವನ್ನು ತೋರಿಸದೆ ಅವರ ಬೆಳವಣಿಗೆ ನೋಡಿ ಖುಷಿಪಡುವ ಮನಸ್ಸು ಆತನದು.ಆದರೆ ತನ್ನ ಪ್ರೀತಿಯನ್ನು ಎದೆಯಲ್ಲಿ ಬಚ್ಚಿಟ್ಟು ತನ್ನ ಮಕ್ಕಳ ಎದುರಿಗೆ ಕೆಲವೊಮ್ಮೆ ನಿಷ್ಠುರವಾಗಿ ನಡೆದುಕೊಳ್ಳುತ್ತಾರೆ. ಏಕೆಂದರೆ ಮಕ್ಕಳು ಮಾಡಿದ ತಪ್ಪನ್ನೆಲ್ಲಾ ಸಂತೋಷವಾಗಿ ಒಪ್ಪಿಕೊಂಡರೆ ಅಥವಾ ಸಮಾಧಾನವಾಗಿ ತಿದ್ದಲು ಹೋದರೆ, ಮಕ್ಕಳಿಗೆ ತಮ್ಮ ತಪ್ಪಿನ ಅರಿವಾಗುವುದಿಲ್ಲ ಆದ್ದರಿಂದ ತಪ್ಪು ಮಾಡಿದಾಗ ಕಠಿಣ ಶಿಕ್ಷೆಯನ್ನು ಅಂದರೆ ಹೊಡೆಯುವುದು ಅಥವಾ ಕಠೋರವಾಗಿ ಬೈಯುವುದರ ಮುಖಾಂತರ ತಿದ್ದಲು ಪ್ರಯತ್ನಿಸುತ್ತಾರೆ. ಆದರೆ ಆ ವಯಸ್ಸಿನಲ್ಲಿ ಅದನ್ನು ಅರ್ಥ ಮಾಡಿಕೊಳ್ಳದೇ ಮಕ್ಕಳಾದ ನಾವು ಅವರನ್ನು ದ್ವೇಷಿಸುತ್ತೇವೆ, ನಿಂದಿಸುತ್ತೇವೆ. ಆಗ ಅದರ ಒಳ ಅರ್ಥ ನಮಗೆ ತಿಳಿದಿರುವುದಿಲ್ಲ. ತಾಯಿಯಾದವಳು ತನ್ನ ಮಕ್ಕಳನ್ನು ಸೆರಗಿನಲ್ಲಿ ಬಚ್ಚಿಟ್ಟುಕೊಂಡರೆ, ತಂದೆ ತನ್ನ ಎದೆಗೂಡಿನಲ್ಲಿ ಆ ಮಕ್ಕಳನ್ನು ಜೋಪಾನವಾಗಿಟ್ಟು ಕೊಂಡಿರುತ್ತಾನೆ.
“ರವಿ ಕಾಣದ್ದನ್ನು ಕವಿ ಕಂಡ” ಎಂಬ ನಾಣ್ಣುಡಿಯಂತೆ ತಂದೆ ತಾನು ಕಾಣದ ಪ್ರಪಂಚವನ್ನು ತನ್ನ ಮಕ್ಕಳು ನೋಡಲಿ ಎಂದು ತನ್ನ ಹೆಗಲ ಮೇಲೆ ಕೂರಿಸಿಕೊಂಡು ಸುತ್ತಾಡಿಸುತ್ತಾರೆ. ತಾನು ಒಬ್ಬರ ಮನೆಯಲ್ಲಿ ಜೀತದಾಳಾಗಿ ದುಡಿದರೂ ನನ್ನ ಮಕ್ಕಳು ದೊಡ್ಡ ವ್ಯಕ್ತಿಗಳಾಗಲೀ ಎಂದು ಸದಾ ಹಂಬಲಿಸುತ್ತಿರುತ್ತಾರೆ. ತಾನು ಒಬ್ಬರ ಮುಂದೆ ಕೈ ಚಾಚಿದರೂ ಕೂಡ ತನ್ನ ಮಕ್ಕಳು ಕೈಚಾಚದಂತೆ ಸ್ವಾಭಿಮಾನಿಗಳನ್ನಾಗಿ ಬೆಳೆಸುತ್ತಾರೆ. ತನ್ನ ಕೊನೆಯ ಉಸಿರಿರುವವರೆಗೂ ತನ್ನ ಮಕ್ಕಳ ಶ್ರೇಯಸ್ಸನ್ನು ಬಯಸುತ್ತಾರೆ. ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಏನು ಮಾಡಬೇಕೆಂಬ ಪ್ರತಿ ವಿಷಯವನ್ನು ತಂದೆ ಮನಸ್ಸಿನಲ್ಲಿಯೇ ನಿರ್ಧರಿಸುತ್ತಾರೆ. ಮಕ್ಕಳಿಗೆ ಏನು ಬೇಕು ಏನು ಬೇಡ ಎಂಬ ಒಂದು ಚಿಕ್ಕ ವಿಷಯವೂ ಕೂಡ ತಂದೆಗೆ ತಿಳಿದಿರುತ್ತದೆ. ಮಕ್ಕಳ ಸಂತೋಷದಲ್ಲಿಯೇ ತನ್ನ ದುಃಖವನ್ನೆಲ್ಲಾ ಮರೆಯುವ ಏಕೈಕ ಜೀವಿ ಅಪ್ಪ.
ಆದರೆ ಮಕ್ಕಳಾದ ನಾವು ಮಾಡುತ್ತಿರುವುದೇನು? ಅಪ್ಪ ಬೈಯುತ್ತಾರೆಂದು ತಿಳಿದು ಅವರನ್ನು ಪ್ರೀತಿಸುವುದಿಲ್ಲ, ಅವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದಿಲ್ಲ, ಸದಾ ನನಗೆ ನನ್ನ ತಂದೆಯನ್ನು ಕಂಡರೆ ಭಯವಾಗುತ್ತದೆ, ಎಂದು ದೂರ ಉಳಿದು ಬಿಡುತ್ತೇವೆ. ಆದರೆ ಅದರ ಒಳ ಅರ್ಥ ಏನೆಂದು ನಮಗೆ ಆಗ ತಿಳಿದಿರುವುದಿಲ್ಲ, ಮುಂದೆ ನಾವು ತಂದೆಯಾದಾಗ ಅವರ ಸ್ಥಾನದಲ್ಲಿ ನಾವು ನಿಂತಾಗ ಅವರ ಜವಾಬ್ದಾರಿ ತಿಳಿದು ಬರುತ್ತದೆ. ಆಗ ನಮ್ಮ ತಂದೆ ಮಾಡಿದ್ದು ಇದನ್ನೇ ಎಂದು ನಾವು ತಿಳಿಯುವ ಹೊತ್ತಿಗೆ ನಮ್ಮ ತಂದೆ ನಮ್ಮಿಂದ ತುಂಬಾ ದೂರ ಉಳಿದಿರುತ್ತಾರೆ. ಅಥವಾ ಅವರು ನಮ್ಮನ್ನು ಬಿಟ್ಟು ಹೋಗಿರುತ್ತಾರೆ. ಆಗ ನಾವು ಮಾಡಿದ ತಪ್ಪಿಗೆ ಕ್ಷಮೆ ಕೇಳಲು ನಮ್ಮ ಮನಸ್ಸು ಒಪ್ಪುವುದಿಲ್ಲ. ಏಕೆಂದರೆ, ನಾವು ನಮ್ಮ ತಂದೆಯೊಡನೆ ನಡೆದುಕೊಂಡ ರೀತಿ.
ಅಪ್ಪನಾದವನು ತನ್ನ ಮಕ್ಕಳು ಒಂದು ವಯಸ್ಸಿಗೆ ಬಂದ ಮೇಲೆ ಅವರ ಜೊತೆ ಒಬ್ಬ ಒಳ್ಳೆಯ ಸ್ನೇಹಿತನಾಗಲು ಹಂಬಲಿಸುತ್ತಿರುತ್ತಾನೆ. ಏಕೆಂದರೆ, ಅವರ ಮಕ್ಕಳÀ ಆಗಿನ ಆಸೆ ಆಕಾಂಕ್ಷೆಗಳನ್ನು ತಿಳಿದು ಅವರ ಬೇಕು ಬೇಡಗಳನ್ನು ಅರ್ಥೈಸಿಕೊಂಡು ಅವರಿಗೆ ಒಂದು ಒಳ್ಳೆಯ ಮಾರ್ಗವನ್ನು ತೋರಿಸುತ್ತಾ, ತನ್ನ ಮಕ್ಕಳ ಏಳಿಗೆಯನ್ನು ನೋಡಿ ಸಂತಸ ಪಡುತ್ತಾನೆ. ತನ್ನ ಮಕ್ಕಳು ಇತರರಿಗೆ ಮಾದರಿಯಾಗ ಬೇಕೆಂದು ಆಶಿಸುತ್ತಾನೆ. ಹೀಗೆ ಮಗುವಾದಾಗಿನಿಂದಲೂ ತನ್ನ ಮಕ್ಕಳ ಯಶಸ್ಸು, ಶ್ರೇಯೋಭಿವೃದ್ಧಿಗಾಗಿ ತನ್ನ ಪ್ರಾಣವನ್ನು ಮುಡಿಪಾಗಿಟ್ಟು ತನ್ನ ಎಲ್ಲಾ ಆಸೆ ಆಕಾಂಕ್ಷೆಗಳನ್ನು ಮಕ್ಕಳಲ್ಲಿಯೇ ನೋಡಿ ಆನಂದಿಸುವ ಒಂದೇ ಒಂದು ಮಹಾನ್ ಜೀವ ಅದೇ ಆ ದೈವ ಸೃಷ್ಠಿಸಿದ ಜೀವ ಅಪ್ಪ.
ಅಂತಹ ಎಲ್ಲಾ ಅಪ್ಪಂದಿರಿಗೆ ನನ್ನ ತುಂಬು ಹೃದÀಯದ ಸಾವಿರ ಸಾವಿರ ವಂದನೆಗಳು


Share