ಪಾಂಡವಪುರ ತಾಲೂಕಿನ ಬೋರಾಪುರ ಗ್ರಾಮದಲ್ಲಿ ಜವರೇಗೌಡ ಎಂಬುವವರ ಮಂಗಳೂರು ಹೆಂಚಿನ ಮನೆಯೊಂದು ಕುಸಿದು ಬಿದ್ದಿರುವ ಹಿನ್ನೆಲೆ ಬಿಜೆಪಿ ಮುಖಂಡ ಎಸ್‌ಎನ್‌ಟಿ ಸೋಮಶೇಖರ್ ಭೇಟಿ ನೀಡಿ ಪರಿಶೀಲಿಸಿದರು.

ಪಾಂಡವಪುರ ತಾಲೂಕಿನ ಬೋರಾಪುರ ಗ್ರಾಮದಲ್ಲಿ ಜವರೇಗೌಡ ಎಂಬುವವರ ಮಂಗಳೂರು ಹೆಂಚಿನ ಮನೆಯೊಂದು ಕುಸಿದು ಬಿದ್ದಿರುವ ಹಿನ್ನೆಲೆ ಬಿಜೆಪಿ ಮುಖಂಡ ಎಸ್‌ಎನ್‌ಟಿ ಸೋಮಶೇಖರ್ ಭೇಟಿ ನೀಡಿ ಪರಿಶೀಲಿಸಿದರು.

Share

ಪಾಂಡವಪುರ : ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ತಾಲೂಕಿನ ಬೋರಾಪುರ ಗ್ರಾಮದಲ್ಲಿ ಜವರೇಗೌಡ ಎಂಬುವವರ ಮಂಗಳೂರು ಹೆಂಚಿನ ಮನೆಯೊಂದು ಕುಸಿದು ಬಿದ್ದಿರುವ ಘಟನೆ ನಡೆದಿದೆ.
ಕೊಟ್ಟಿಗೆ ಸೇರಿದಂತೆ ಮನೆಯ ಒಂದು ಭಾಗ ಸಂಪೂರ್ಣ ನೆಲ ಕಚ್ಚಿದ್ದು, ಹಸು ಮತ್ತು ಕರು ಗಂಭೀರವಾಗಿ ಗಾಯಗೊಂಡಿವೆ. ಹತ್ತು ಕೋಳಿಗಳು ಘಟನೆಯಲ್ಲಿ ಮೃತಪಟ್ಟಿದ್ದು, ಮನೆ ಕುಸಿದ ಸಂದರ್ಭದಲ್ಲಿ ಒಳಗೆ ಮಲಗಿದ್ದ ಮೂವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಮನೆ ಕುಸಿತಕ್ಕೆ ಸಮೀಪದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಕಾರಣವಾಗಿದ್ದು, ನಿರಂತರ ಗಣಿ ಸ್ಪೋಟದಿಂದಾಗಿ ಇಲ್ಲಿನ ಹಲವಾರು ಮನೆಗಳು ಬಿರುಕು ಬಿಟ್ಟಿವೆ. ಮಳೆಯ ಸಂದರ್ಭದಲ್ಲಿ ಇವು ಕುಸಿಯುತ್ತಿವೆ ಎಂದು ಸಾರ್ವಜನಿಕರು ಆರೋಪಿಸಿದರು.
`ಗುರುವಾರ ರಾತ್ರಿಯಿಂದಲೇ ಈ ಭಾಗದಲ್ಲಿ ಮಳೆ ಪ್ರಾರಂಭವಾಯಿತು. ಊಟ ಮುಗಿಸಿ ನಾವು ಮಲಗಿದ್ದೇವು. ಸುಮಾರು ೧೧ ಗಂಟೆಗೆ ಇದ್ದಕ್ಕಿದ್ದಂತೆ ಮನೆಯ ಜಂತಿಗಳು ಮುರಿಯುವ ಸದ್ದು ಕೇಳಿ ಎಚ್ಚರವಾಗಿ ಮನೆಯವರನ್ನು ಎಬ್ಬಿಸುವಷ್ಟರಲ್ಲಿ ಮನೆ ಕುಸಿದು ಬಿತ್ತು. ಕಗ್ಗತ್ತಲು, ಹಸು ಕರು ಛಾವಣಿಯ ಕೆಳಗೆ ಸಿಲುಕಿ ಕಿರುಚಾಡುತ್ತಿದ್ದವು. ಈ ವೇಳೆ ಗ್ರಾಮಸ್ಥರು ಬಂದು ಹಸು ಕರುವನ್ನು ಎಳೆದು ತಂದರು’ ಎಂದು ಜವರೇಗೌಡರ ಪತ್ನಿ ನರಸಮ್ಮ ತಿಳಿಸಿದರು.
ಯಜಮಾನನ ಪ್ರಾಣ ಉಳಿಸಿದ ಸೊಳ್ಳೆ ಪರದೆ : ಮನೆಯ ಒಳಗೆ ಗೋಡೆ ಮಗ್ಗುಲಲ್ಲಿ ಮಲಗಿದ್ದ ಮನೆ ಯಜಮಾನ ಜವರೇಗೌಡರ ಮೇಲೆ ಹೆಂಚು ಮತ್ತು ಇಟ್ಟಿಗೆ ಉರುಳಿ ಬಿದ್ದಿದೆ. ಆದರೆ, ಅವರು ಸೊಳ್ಳೆ ಪರದೆ ಕಟ್ಟಿಕೊಂಡಿದ್ದ ಕಾರಣ ಮೇಲಿನಿಂದ ಬಿದ್ದ ಹೆಂಚು ಮತ್ತು ಇಟ್ಟಿಗೆಯನ್ನು ಸೊಳ್ಳೆ ಪರದೆ ತಡೆದ ಕಾರಣ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಿಜೆಪಿ ಮುಖಂಡ ಎಸ್.ಎನ್.ಟಿ.ಸೋಮಶೇಖರ್ ಭೇಟಿ : ಘಟನಾ ಸ್ಥಳಕ್ಕೆ ಜಕ್ಕನಹಳ್ಳಿ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಸ್.ಎನ್.ಟಿ.ಸೋಮಶೇಖರ್ ಭೇಟಿ ನೀಡಿ ಜವರೇಗೌಡರ ಕುಟುಂಬಕ್ಕೆ ಸಾಂತ್ವನ ಹೇಳಿ ವೈಯುಕ್ತಿಕವಾಗಿ ಆರ್ಥಿಕ ನೆರವು ನೀಡಿ ಧೈರ್ಯ ತುಂಬಿದರು.
ಬಳಿಕ ಅವರು ಮಾತನಾಡಿ, ಸ್ಥಳೀಯ ಕಲ್ಲು ಗಣಿಗಾರಿಕೆಯಿಂದ ಇಲ್ಲಿನ ಮನೆಗಳು ಬಿರುಕು ಬಿಟ್ಟು ಮಳೆಯ ಸಂದರ್ಭದಲ್ಲಿ ಕುಸಿಯುತ್ತಿವೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಈ ಹಿಂದೆ ಸಂಸದೆ ಸುಮಲತಾ ಅಂಬರೀಶ್ ಅವರು ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಇದೇ ಮನೆ ಬಿರುಕು ಬಿಟ್ಟಿರುವುದನ್ನು ನೋಡಿ ಪರಿಶೀಲಿಸಿದ್ದರು. ಈ ಬಗ್ಗೆ ಸರ್ಕಾರ ಸಮಗ್ರ ತನಿಖೆಗೆ ಆದೇಶ ನೀಡಬೇಕು ಎಂದು ಒತ್ತಾಯಿಸಿದ ಅವರು, ಶೀಘ್ರದಲ್ಲೆ ಗ್ರಾಮಕ್ಕೆ ಜಿಲ್ಲಾ ಉಸ್ತುವಾರಿ ಮಂತ್ರಿ ಕೆ.ಸಿ.ನಾರಾಯಣಗೌಡ ಅವರನ್ನು ಕರೆಸುವುದಾಗಿಯೂ, ಜತೆಗೆ ಸರ್ಕಾರದಿಂದ ಸಿಗುವ ನೆರವನ್ನೂ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.
ಈ ವೇಳೆ ಮನೆಯ ಮಾಲಿಕರಾದ ಟೀಪು ಜವರೇಗೌಡ, ನರಸಮ್ಮ, ಗ್ರಾ.ಪಂ ಸದಸ್ಯ ಕೆಂಪೇಗೌಡ, ಮಾಜಿ ಸದಸ್ಯ ಸ್ವಾಮಿಶೆಟ್ಟಿ, ತಾಲೂಕು ಬಿಜೆಪಿ ಉಪಾಧ್ಯಕ್ಷ ಪುರುಷೋತ್ತಮ, ಮುಖಂಡರಾದ ಕರೀಗೌಡ, ಕಾರ್ತಿಕ್, ಸಂಜಯ್, ಸಂತೋಷ್, ಪ್ರಕಾಶ್, ಶಶಿಧರ್, ವಿನೋದ್, ಮಹದೇವು, ಅನಿಲ್, ಲೋಕೇಶ್, ಶಂಭೂನಹಳ್ಳಿ ರವಿ ಇತರರು ಇದ್ದರು.
ಗ್ರಾಮಕ್ಕೆ ತಹಸೀಲ್ದಾರ್ ಪ್ರಮೋದ್ ಎಲ್.ಪಾಟೀಲ್ ಭೇಟಿ ನೀಡಿದ್ದರು. ಇದೇ ವೇಳೆ ತಾಲೂಕಿನ ಕಾಮನಾಯಕನಹಳ್ಳಿಯಲ್ಲಿ ಬೋರಮ್ಮ ಎಂಬುವರ ಮನೆ ಕುಸಿದು ಬಿದ್ದಿದೆ.


Share