ಈಶ್ವರಪ್ಪನ ದೇಶ ದ್ರೋಹಕ್ಕೆ : ಕಾಂಗ್ರೆಸ್ ತೆರಿಗೆ ಗುಳುಂ

ಈಶ್ವರಪ್ಪನ ದೇಶ ದ್ರೋಹಕ್ಕೆ : ಕಾಂಗ್ರೆಸ್ ತೆರಿಗೆ ಗುಳುಂ

Share

ವಿಧಾನ ಸಭೆ ಮತ್ತು ವಿಧಾನ ಪರಿಷತ್ 2022ರ ಮೊದಲ ಅಧಿವೇಶನವು ಪ್ರಾರಂಭವಾಗುತ್ತಲೇ ಈಶ್ವರಪ್ಪನ ದೇಶ ದ್ರೋಹದ ಹೇಳಿಕೆಗಳು ತೀವ್ರ ಚರ್ಚೆಗೀಡಾದವು. “ಇನ್ನು ಕೆಲವೇ ದಿನಗಳಲ್ಲಿ ಕೆಂಪು ಕೋಟೆಯ ಮೇಲೆ ರಾಷ್ಟ್ರ ಧ್ವಜದ ಜೊತೆಗೆ ಕೇಸರಿ ಧ್ವಜವನ್ನು ಹಾರಿಸಲಾಗುತ್ತದೆ” ಎಂದು ಈಶ್ವರಪ್ಪ ಹೇಳಿರುವ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷವು ತೀವ್ರವಾಗಿ ಖಂಡಿಸಿ ಅಹೋ ರಾತ್ರಿ ಧರಣಿ ಸತ್ಯಾಗ್ರಹ ಪ್ರತಿಭಟನೆಯಿಂದ ಕರ್ನಾಟಕ ವಿಧಾನ ಸಭೆಯ ಕಲಾಪಗಳಿಗೆ ಅಡ್ಡಿಯಾಗಿ ಯಾವುದೇ ರೀತಿಯ ಮಹತ್ವದ ಚರ್ಚೆಗಳಿಗೆ ವಿರೋಧ ಪಕ್ಷ ಕಾಂಗ್ರೆಸ್ ಬಿಡದೇ ರಾಜ್ಯದ ತೆರಿಗೆ ಹಣವನ್ನು ಪೋಲುಮಾಡಿತ್ತಿದೆ. ಒಂದು ದಿನದ ಕಲಾಪಗಳು ನಡೆಯಲು ಶಾಸಕರ ಭತ್ಯೆ ಸೇರಿದಂತೆ ಊಟ-ತಿಂಡಿ, ವಸತಿಗೆ ಒಟ್ಟಾರೆಯಾಗಿ ಸರಿಸುಮಾರು 80 ಲಕ್ಷ ಖರ್ಚಾಗುತ್ತದೆ. ಈ 80 ಲಕ್ಷವು ಯಾವುದೇ ಪಕ್ಷಕ್ಕೆ ಸೇರಿದ ಹಣವಲ್ಲ. ಅದು ಸಾಮಾನ್ಯ ವ್ಯಕ್ತಿಯ ತೆರಿಗೆ ಹಣವಾಗಿರುತ್ತದೆ. ಬಿ.ಜೆ.ಪಿ ಪಕ್ಷದ ಪರವಾಗಿ ಹೇಳುವುದಾದರೆ ಬಸವರಾಜ್ ಯತ್ನಾಳ್ , ಈಶ್ವರಪ್ಪ ಆಗಾಗ ನಾಲಿಗೆಯನ್ನು ಹರಿಬಿಡುತ್ತಾರೆ. ಆದರೆ ಈ ಹಿಂದಿನ ಹೇಳಿಕೆಯನ್ನು ಮುಖ್ಯಮಂತ್ರಿ ಸೇರಿದಂತೆ ಬಿ.ಜೆ.ಪಿಯ ಎಲ್ಲಾ ಶಾಸಕರು ಸಮರ್ಥಿಸಿ ಕೊಳ್ಳುತ್ತಿದ್ದಾರೆ. ಕಾನೂನಿನ ವ್ಯಾಖ್ಯಾನಗಳನ್ನು ಮಾಡುವಾಗ ಈ ಹೇಳಿಕೆಯು ಅತ್ಯಂತ ಸೂಕ್ಷ್ಮವಾಗಿದ್ದು ರಾಷ್ಟ್ರಧ್ವಜಕ್ಕೆ ಅವಮಾನ ಮತ್ತು ಗೌರವಗಳೊಂದಿಗೆ ಸಂವಿಧಾನದಲ್ಲಿ ಸಾಕಷ್ಟು ಉಲ್ಲೇಖಗಳಿದ್ದರೂ ಕೂಡ ರಾಷ್ಟ್ರಧ್ವಜದ ಜೊತೆಗೆ ಇನ್ನೊಂದು ಧ್ವಜವನ್ನು ಏರಿಸುತ್ತೇನೆ ಎಂಬುದಕ್ಕೆ ಸ್ಪಷ್ಟ ನಿರ್ದೇಶನಗಳಿಲ್ಲ. ಆದರೂ ಕೂಡ ತ್ರಿವರ್ಣ ಧ್ವಜದ ಜೊತೆಗೆ ಅದರ ಪಕ್ಕದಲ್ಲಿಯೇ ರಾಷ್ಟ್ರಧ್ವಜಕ್ಕಿಂತ ಎತ್ತರದಲ್ಲಿ ಇನ್ನೊಂದು ಧ್ವಜವನ್ನು ಏರಿಸುವುದು ದೇಶ ದ್ರೋಹದ ಕೆಲಸವಾಗುತ್ತದೆ. ಅದಕ್ಕೆ ಕಾನೂನಿನಲ್ಲಿ ತಕ್ಕ ಶಿಕ್ಷೆಯುಂಟು. ಆದರೆ ಈಶ್ವರಪ್ಪನ ಹೇಳಿಕೆಯಲ್ಲಿ ಈ ಸ್ಪಷ್ಟತೆಯಿಲ್ಲದಿರುವುದರಿಂದ ದೇಶ ದ್ರೋಹದ ಕಾನೂನಿನಡಿ ಶಿಕ್ಷೇ ನೀಡಲು ಸಾಧ್ಯವೇ? ಈ ಹೇಳಿಕೆಯನ್ನು ವಿಧಾನ ಸಭೆಯ ಹೊರಗಡೆ ವಿರೋಧಿಸುವ ಮೂಲಕ ಕಾಂಗ್ರೆಸ್ ಪಕ್ಷವು ತನ್ನ ಪ್ರಬುದ್ಧತೆಯನ್ನು ಮೆರೆಯಬೇಕಾಗಿತ್ತು ಆದರೂ ಕೂಡ ವಿಧಾನ ಸಭೆ ಮತ್ತು ವಿಧಾನ ಪರಿಷತ್ ನಲ್ಲಿ ಈಶ್ವರಪ್ಪ ಒಬ್ಬನನ್ನು ಹಿಡಿದುಕೊಂಡು ಪ್ರತಿಭಟನೆಯ ಹೆಸರಿನಲ್ಲಿ ಕಲಾಪಗಳಲ್ಲಿ ನಡೆಯ ಬೇಕಾದ ಚರ್ಚೆಗಳು ಮತ್ತು ನಿಡುವಳಿಗಳು ಮತ್ತು ಅಂಗೀಕಾರಗಳಿಗೆ ಅಡ್ಡಿಪಡಿಸುತ್ತಿದ್ದಾರೆ. ಕಾಂಗ್ರೆಸ್‍ನ ಶಾಸಕರು ಮೊದಲು ರಾಜ್ಯದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಪ್ರಯತ್ನ ಮಾಡಬೇಕು. ರಾಜ್ಯದಲ್ಲಿ ಹಿಜಾಬ್ ಕೇಸರಿ ಕದನವು ಶಾಂತಿಯನ್ನು ಕದಲುತ್ತಿದೆ. ರಾಜ್ಯ ವ್ಯಾಪ್ತಿ ಮೂಲಭೂತ ಸೌಲಭ್ಯಗಳನ್ನು ನೀಡುವಲ್ಲಿ ಸರ್ಕಾರವು ಸೋತಿದೆ. ಕೋವಿಡ್ ಸಮಸ್ಯೆ, ನಿರುದ್ಯೋಗ, ಶಾಲಾ-ಕಾಲೇಜುಗಳ ಸಮಸ್ಯೆಗಳು ಹೀಗೆ ಹತ್ತಾರು ಸಮಸ್ಯೆಗಳಿರುವಾಗ ಈಶ್ವರಪ್ಪನ ಒಂದು ಹೇಳಿಕೆಯನ್ನು ದೊಡ್ಡದು ಮಾಡಿಕೊಂಡು ನಾಲ್ಕೈದು ದಿನ ಕಲಾಪಗಳನ್ನು ಅಡ್ಡಿಪಡಿಸುವುದು ಯಾವ ನ್ಯಾಯ? ಒಂದು ದಿನಕ್ಕೆ 80 ಲಕ್ಷ ಖರ್ಚಾಗುತ್ತದೆ ಎಂದರೆ 5 ದಿನಕ್ಕೆ 4 ಕೋಟಿ ಆಗುತ್ತದೆ. ಇದು ಯಾರಪ್ಪನ ದುಡ್ಡು? ಕಾನೂನಿನ ಪದವಿ ಓದಿದ ಸಿದ್ದರಾಮಯ್ಯಗೆ ಇಷ್ಟು ಜ್ಞಾನವಿಲ್ಲವೇ? ಡಿ.ಕೆ.ಶಿಯ ಮಾತಿಗೆ ನಿಂತು ಸಿದ್ದರಾಮಯ್ಯ ರಾಜಕೀಯ ನೈತಿಕತೆಯನ್ನು ಕಳೆದುಕೊಂಡರೆ ಈಶ್ವರಪ್ಪನ ಹೇಳಿಕೆಯನ್ನು ಕುರಿತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಸೂಕ್ಷ್ಮವಾಗಿ ಪ್ರತಿಕ್ರಿಯಿಸಿ ರಾಜ್ಯದ ಹಿತಕ್ಕಾಗಿ ಕಾಂಗ್ರೆಸ್‍ವು ಪ್ರತಿಭಟನೆ ನಿಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಪ್ರತಿಭಟನೆಯನ್ನು ನಿಲ್ಲಿಸದಿದ್ದರೆ ಸ್ಪೀಕರ್ ಆದ ಖಾಗೇರಿಯವರಿಗೆ ಕಲಾಪಗಳನ್ನು ಅನಿರ್ಧಿಷ್ಟ ಅವಧಿಗೆ ಮುಂದೂಡಲು ಸೂಚಿಸಿದ್ದಾರೆ. ಕಾಂಗ್ರೆಸ್‍ನ ಹೋರಾಟವನ್ನು ಚಿಕ್ಕ ಮಕ್ಕಳು ಮತ್ತು ಬುದ್ಧಿ ಹೇಡಿಗಳು ಮಾಡುವ ಹೋರಾಟ ಎನ್ನಬಹುದು. ಭವಿಷ್ಯದಲ್ಲಿ ಇದರಿಂದ ಕಾಂಗ್ರೆಸ್‍ಗೆ ಏನು ದೊಡ್ಡ ಪ್ರಯೋಜನವಾಗುವುದಿಲ್ಲ. ಇಂತಹ ಸಿಲ್ಲಿ ಹೋರಾಟಗಳನ್ನು ಬಿಟ್ಟು ಪ್ರಭುತ್ವ ಪಕ್ಷದಂತೆ ಮತ್ತು ಪ್ರಬುದ್ಧ ವಿಚಾರಗಳತ್ತ ಕಾಂಗ್ರೆಸ್ ಪಕ್ಷವು ಪ್ರಯತ್ನಿಸಬೇಕು. ಕಾಂಗ್ರೆಸ್ ನಡೆಯನ್ನು ರಾಜ್ಯವು ಸೂಕ್ಷ್ಮವಾಗಿ ಗಮನಿಸುತ್ತಿದ್ದು ಹತ್ತಾರು ಪ್ರಮುಖ ಸಮಸ್ಯೆಗಳಿದ್ದರು ಒಂದು ಸಣ್ಣ ವಿಚಾರಕ್ಕೆ ದೊಡ್ಡ ಮಟ್ಟದ ಹೋರಾಟ ಮಾಡುತ್ತಿರುವುದು ಅತ್ಯಂತ ಕೀಳು ಮಟ್ಟದ ವಿಚಾರವಾಗಿದೆ. ಕಾಂಗ್ರೆಸ್ ಪಕ್ಷದ ಮುಖಂಡರು ತಮ್ಮ ಹೋರಾಟದ ಕುರಿತು ಕರ್ನಾಟಕ ಜನತೆಗೆ ಸರಿಯಾದ ಉತ್ತರ ಕೊಡುವುದರ ಜೊತೆಗೆ ತಕ್ಷಣ ಕಲಾಪದಲ್ಲಿ ಹೋರಾಟ ಮಾಡುವುದನ್ನು ಬಿಟ್ಟು ಬೇರೆ ಪ್ರಮುಖ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ ಜನರಿಗೆ ಸರ್ಕಾರದತ್ತ ಇನ್ನಷ್ಟು ಉತ್ತಮವಾದ ಸೌಲಭ್ಯಗಳನ್ನು ಕೊಡಿಸುವಲ್ಲಿ ಪ್ರಮಾಣಿಕ ಪ್ರಯತ್ನ ಮಾಡಬೇಕು.


Share