ಯಾವುದೇ ಅಭಿವೃದ್ಧಿ ನಿಲ್ಲಿಸುವುದಿಲ್ಲ: ಜಿ.ಪರಮೇಶ್ವರ್

ಯಾವುದೇ ಅಭಿವೃದ್ಧಿ ನಿಲ್ಲಿಸುವುದಿಲ್ಲ: ಜಿ.ಪರಮೇಶ್ವರ್

Share

ಅರಸೀಕೆರೆ: ನಾವು ಕೊಟ್ಟ ಭರವಸೆಯಂತೆ ನಡೆದುಕೊಳ್ಳುತ್ತಿದ್ದು ಯಾವುದೇ ಅಭಿವೃದ್ಧಿಯನ್ನು ನಿಲ್ಲಿಸುವುದಿಲ್ಲ ಎಂದು ಗೃಹಸಚಿವ ಜಿ.ಪರಮೇಶ್ವರ್ ಹೇಳಿದರು. ಭಾನುವಾರ ಪತ್ನಿ ಸಮೇತ ಅರಸೀಕೆರೆ ತಾಲೂಕಿನ, ಹಾರನಹಳ್ಳಿಯಲ್ಲಿರುವ ಕೋಡಿಮಠಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಗ್ಯಾರೆಂಟಿ ಯೋಜನೆಯನ್ನು ಚುನಾವಣೆಗೆ ಮೊದಲೆ ಹೇಳಿದ್ದು ಅದನ್ನು ಈಗ ಅನುಷ್ಠಾನ ಮಾಡ್ತಾ ಇದ್ದೇವೆ. ನಾವು ಜನರ ಮೇಲೆ ಹಾಗೂ ರಾಜ್ಯದ ಅಭಿವೃದ್ಧಿ ಮೇಲೆ ಸಾಮಾಜಿಕ ನ್ಯಾಯದ ಮೇಲೆ ಮಾತನಾಡಿದ್ದು, ಇದೇ ತಿಂಗಳ 30 ರಂದು ಗೃಹಲಕ್ಷಿ÷್ಮ ಯೋಜನೆಗೆ ರಾಹುಲ್‌ಗಾಂಧಿ ಚಾಲನೆ ಕೊಡಲಿದ್ದು, ಅಂದೇ ಜನರ ಖಾತೆಗೆ ಹಣ ಹೋಗಲಿದೆ. ಇನ್ನು ಮುಂದೆ ಪ್ರತಿ ತಿಂಗಳು ಹಣ ಹೋಗುತ್ತೆ ಎಂದರು. ಸ್ವಾಮೀಜಿ ನಮ್ಮ ತಂದೆಯವರ ಕಾಲದಿಂದ ಪರಿಚಯ ಹಾಗಾಗಿ ಅವರನ್ನು ನೋಡಬೇಕು ಅನ್ನಿಸಿತು ಬಂದಿದ್ದೀನಿ ಇದರಲ್ಲಿ ವಿಶೇಷತೆ ಏನಿದೆ, ಏನಾದ್ರು ವಿಶೇಷತೆ ನಿಮಗೆ ಅನ್ಸಿದೆಯಾ ಎಲ್ಲಾ ಬರ್ತಾ ಇರ್ತಾರೆ, ಶ್ರೀಮಠ ಅಂದರೆ ಭಕ್ತಾಧಿಗಳು ಬರಬೇಕಲ್ವಾ ಹಾಗೇ ನಾನು ಬಂದಿದ್ದೀನಿ ಅಷ್ಟೇ, ಬೇರೆ ಅರ್ಥೈಸುವುದು ಅಗತ್ಯವಿಲ್ಲ ಎಂದು ತಿಳಿಸಿದರು. ಮೊದಲು ಬೊಮ್ಮಾಯಿ ಬಜೆಟ್ ಕೊಟ್ಟಿದ್ದರು ಅದರಲ್ಲಿ ನಮ್ಮ ಗ್ಯಾರೆಂಟಿಗೆ ಅನುದಾನ ಇರಲಿಲ್ಲ, ಹಾಗಾಗಿ ಈಗ ಮತ್ತೊಮ್ಮೆಬಜೆಟ್ ನೀಡಿದ್ದು ಬೇರೆ ಬಜೆಟ್ ಆಗಿದೆ. ಒಂದಿಷ್ಟು ಹಣಕಾಸು ವ್ಯವಸ್ಥೆ ಮಾಡಲು ಕಠಿಣ ಆಗಬಹುದು. ಅದಕ್ಕೆ ಅನಗತ್ಯ ಖರ್ಚು ನಿಲ್ಲಿಸುತ್ತೇವೆ. ಜನರಿಗೆ ಅನುಕೂಲವಿರುವ ಯಾವುದೇ ಯೋಜನೆಗಳು ನಿಲ್ಲಲ್ಲ ಎಂದು ಹೇಳಿದರು. ಗೃಹಜ್ಯೋತಿ ಹೆಸರಿನಲ್ಲಿ ಸರ್ಕಾರ ಜನರಿಗೆ ಟೋಪಿ ಹಾಕ್ತಿದೆ ಎಂದಿದ್ದ ಮಾಜಿಸಿಎಂ ಎಚ್.ಡಿ.ಕುಮಾರಸ್ವಾಮಿಗೆ ಟಾಂಗ್ ನೀಡಿದರು. ಪ್ರಕೃತಿ ನಮ್ಮನ್ನು ಹೇಳಿ ಕೇಳಿ ಮಾಡೋದಿಲ್ಲ, ಈ ಬಾರಿ ಒಂಭತ್ತು ಜಿಲ್ಲೆಗಳಲ್ಲಿ ಮಳೆ ಇಲ್ಲ. ನಮಗೆ ಇದುವರೆಗೆ ಮುಂಗಾರು ಕೊರತೆ ಇದೆ, ಬಹುತೇಕ ಕಡೆ 40 ರಷ್ಟು ಮಳೆ ಕೊರತೆ ಇದ್ದು, ನಮಗೆ ಹೈಡ್ರೋ ಪವರ್ ಉತ್ಪಾದನೆ ಕಡಿಮೆ ಆಗಿದೆ. ಹಾಗಾಗಿ ಸ್ವಲ್ಪ ದಿನ ಹಾಗೇ ಆಗುತ್ತೆ ಅದು ಪ್ರಕೃತಿಯಿಂದ ಆಗುವುದೇ ಹೊರತು ನಾವೇನು ಅದನ್ನು ಮಾಡಿರುವುದಲ್ಲ, ಆದರೂ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತೇವೆ ಎನ್ನುವ ಮೂಲಕ ಪರೋಕ್ಷವಾಗಿ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಬಗ್ಗೆ ಸಮರ್ಥನೆ ಮಾಡಿಕೊಂಡರು.


Share