ಆನ್ಲೈನ್ ಫುಡ್ ಡೆಲಿವರಿ ಕಂಪೆನಿ ಝೊಮ್ಯಾಟೋದಿಂದ ಜುಲೈ 14ನೇ ತಾರೀಕು ಐಪಿಒ (Zomato IPO) ಬಿಡುಗಡೆ ಮಾಡಲಾಗಿದ್ದು, ಜುಲೈ 16ನೇ ತಾರೀಕು ಸಬ್ಸ್ಕ್ರಿಪ್ಷನ್ ಕೊನೆಯಾಗಲಿದೆ. ಈ ಐಪಿಒಗೆ ಯುವ ತಲೆಮಾರು, ಮೊದಲ ಬಾರಿಗೆ ಹೂಡಿಕೆ ಮಾಡುತ್ತಿರುವವರು ಭಾರೀ ಆಸಕ್ತಿ ತೋರುತ್ತಿದ್ದಾರೆ ಎಂದು ಪೇಟಿಎಂ ಮನಿ ತಿಳಿಸಿದೆ. ಗಮನಾರ್ಹ ಸಂಗತಿ ಏನೆಂದರೆ, ಪೇಟಿಎಂ ಮನಿ ಮೂಲಕ ಝೊಮ್ಯಾಟೋ ಐಪಿಒಗೆ ಅರ್ಜಿ ಹಾಕಿರುವವರ ಪೈಕಿ ಶೇ 55ರಷ್ಟು ಮಂದಿ 30 ವರ್ಷ ವಯಸ್ಸಿನ ಒಳಗಿನವರು. ಮೊದಲ ದಿನದ ಲೆಕ್ಕಾಚಾರವನ್ನು ಮುಂದಿಟ್ಟಿರುವ ಪೇಟಿಎಂ ಮನಿ, ಶೇ 60ರಷ್ಟು ಮಂದಿ 30 ವರ್ಷದೊಳಗಿನವರು. ಇದನ್ನು ಇನ್ನೂ ಕೂದಲು ಸೀಳುವಂತೆ ಹೇಳುವುದಾದರೆ, ಶೇ 27ರಷ್ಟು ಮಂದಿ 25 ವರ್ಷ ವಯಸ್ಸಿನೊಳಗಿವರು. ಇನ್ನೂ ಒಂದು ಪ್ರಮುಖ ಸಂಗತಿ ಏನೆಂದರೆ, ಮೊದಲ ದಿನ ಅರ್ಜಿ ಹಾಕಿಕೊಂಡವರ ಪೈಕಿ ಶೇ 10ರಷ್ಟು ಮಹಿಳೆಯರಿದ್ದಾರೆ. ಪೇಟಿಎಂ ಮನಿ ಪ್ಲಾಟ್ಫಾರ್ಮ್ನಲ್ಲಿ ಈ ಹಿಂದಿನ ಐಪಿಒಗಳಿಗೆ ಮೊದಲ ದಿನ ಬರುತ್ತಿದ್ದ ಅರ್ಜಿಯ ಸಂಖ್ಯೆಗಿಂತ ಝೊಮ್ಯಾಟೋಗೆ ಶೇ 20ರಷ್ಟು ಜಾಸ್ತಿ ಬಂದಿದೆ ಎಂದು ತಿಳಿಸಲಾಗಿದೆ.
ಪೇಟಿಎಂ ಮನಿ ಎಂಬುದು ಫಿನ್ಟೆಕ್ ಆದ ಪೇಟಿಎಂನ ವೆಲ್ತ್ ಮ್ಯಾನೇಜ್ಮೆಂಟ್ ವಿಭಾಗದ. ಐಪಿಒ ಸಬ್ಸ್ಕ್ರಿಪ್ಷನ್ ಆರಂಭವಾಗುವ ಕೆಲ ದಿನಗಳ ಮುಂಚೆಯೇ ಬಳಕೆದಾರರು ಅದಕ್ಕೆ ಅಪ್ಲೈ ಮಾಡುವ ಫೀಚರ್ ಅನ್ನು ಘೋಷಣೆ ಮಾಡಿದೆ. ಈ ಫೀಚರ್ ಅನ್ನು ಪ್ರೀ ಓಪನ್ ಐಪಿಒ ಅಪ್ಲಿಕೇಷನ್ ಎಂದು ಕರೆಯಲಾಗುತ್ತದೆ. ಐಪಿಒಗಳಲ್ಲಿ ರೀಟೇಲ್ ಹೂಡಿಕೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂಬ ಕಾರಣಕ್ಕೆ ಈ ಫೀಚರ್ ಪರಿಚಯಿಸಲಾಗಿದೆ. ಝೊಮ್ಯಾಟೋ ಐಪಿಒ ಈ ಫೀಚರ್ ಅನ್ನು ಬಳಸಿಕೊಂಡ ಮೊದಲ ಕಂಪೆನಿಯಾಗಿದೆ. ಬಳಕೆದಾರರು ಇನ್ನೂ ಹೆಚ್ಚು ಸಕ್ರಿಯವಾಗಿ ಪಾಲ್ಗೊಳ್ಳುವುದಕ್ಕೆ ಅನುಕೂಲ ಆಗುವ ನಿಟ್ಟಿನಲ್ಲಿ ಒನ್-ಕ್ಲಿಕ್ ಐಪಿಒ ಅಪ್ಲಿಕೇಷನ್, ಷೇರುದಾರರ ವಿಭಾಗದ ಅಡಿಯಲ್ಲಿ ಐಪಿಒ ಅಪ್ಲಿಕೇಷನ್ ಮತ್ತು ಲೈವ್ ಐಪಿಒ ಸಬ್ಸ್ಕ್ರಿಪ್ಷನ್ ಸಂಖ್ಯೆಯ ಟ್ರ್ಯಾಕಿಂಗ್ ಇವೆಲ್ಲ ಫೀಚರ್ಸ್ ತಂದಿದೆ.
ಝೊಮ್ಯಾಟೋ ಐಪಿಒಗೆ ಈ ಪರಿಯ ಪ್ರತಿಕ್ರಿಯೆ ಬರುವುದಕ್ಕೆ ಕಾರಣ ಆಗಿರುವುದು ಸಣ್ಣ ಮತ್ತು ಪಟ್ಟಣಗಳ ಹೂಡಿಕೆದಾರರ ಭಾಗವಹಿಸುವಿಕೆ. ಸಾಮಾನ್ಯವಾಗಿ ಮುಂಬೈ, ದೆಹಲಿಯಂಥ ಮೆಟ್ರೋ ನಗರಗಳ ಹೂಡಿಕೆದಾರರು ಸಿದ್ಧವಾಗಿ ಐಪಿಒಗಳಲ್ಲಿ ಭಾಗಿ ಆಗಿದ್ದಾರೆ. ಜತೆಗೆ ಸಣ್ಣ ಪ್ರದೇಶಗಳವರೂ ಪಾಲ್ಗೊಂಡಿದ್ದಾರೆ. ಗುಜರಾತ್ನ ಕೊಡಿನರ್, ನಾಗಾಲ್ಯಾಂಡ್ನ ತ್ಯುನ್ಸಂಗ್ ಮತ್ತು ಅಸ್ಸಾಂನ ರಂಗಾಪುರದಂಥ ಸ್ಥಳಗಳಿಂದಲೂ ಈ ಐಪಿಒನಲ್ಲಿ ಭಾಗವಹಿಸಿದ್ದಾರೆ. ಐಪಿಒ ಸಬ್ಸ್ಕ್ರಿಪ್ಷನ್ನ ಆರಂಭದ ದಿನವೇ ಹೆಚ್ಚು ಬೇಡಿಕೆ ಪಡೆದಿದೆ. ರೀಟೇಲ್ ಹೂಡಿಕೆದಾರರಿಗೆ ಮೀಸಲಿರುವ ಷೇರುಗಳಿಗಿಂತ 2.7 ಪಟ್ಟು ಹೆಚ್ಚು ಬೇಡಿಕೆ ಸಲ್ಲಿಸಿದ್ದಾರೆ. ಇನ್ನು ಪಿಟಿಐ ಸುದ್ದಿ ಸಂಸ್ಥೆ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಝೊಮ್ಯಾಟೋದ ಐಪಿಒ ಗಾತ್ರ ರೂ. 71.92 ಕೋಟಿಯಾದರೆ, ಮೊದಲ ದಿನವೇ ರೂ. 75.60 ಕೋಟಿ ರೂಪಾಯಿಯ ಈಕ್ವಿಟಿ ಷೇರಿಗೆ ಬಿಡ್ಡಿಂಗ್ ಬಂದಿದೆ. ಇನ್ನು ಉದ್ಯೋಗಿಗಳಿಗಾಗಿ ಮೀಸಲಿಟ್ಟಿರುವ ಪ್ರಮಾಣದಲ್ಲಿ ಶೇ 18ರಷ್ಟು ಸಬ್ಸ್ಕ್ರೈಬ್ ಆಗಿದೆ.
ಇಲ್ಲಿಯ ತನಕದ ಲೆಕ್ಕ ನೋಡಿದರೆ, ಮಾರುಕಟ್ಟೆಯಲ್ಲಿ ಈ ವರ್ಷದ ಅತಿ ದೊಡ್ಡ ಐಪಿಒ ಇದು. ಶುಕ್ರವಾರದ ತನಕ ಇರುತ್ತದೆ. ಪ್ರತಿ ಷೇರಿಗೆ 72 ರೂ.ನಿಂದ 76 ರೂಪಾಯಿ ದರದ ಬ್ಯಾಂಡ್ ನಿಗದಿ ಆಗಿದೆ. ಆರಂಭದಲ್ಲಿ ಐಪಿಒ ಗಾತ್ರ 9,375 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿತ್ತು. ಆದರೆ ನಂತರದಲ್ಲಿ ಅದನ್ನು 5178 ಕೋಟಿ ರೂಪಾಯಿಗೆ ಇಳಿಸಲಾಯಿತು. ಜುಲೈ 13ನೇ ತಾರೀಕಿನಂದೇ ಝೊಮ್ಯಾಟೋ 186 ಆಂಕರ್ ಹೂಡಿಕೆದಾರರಿಂದ 4,196.51 ಕೋಟಿ ರೂಪಾಯಿ ಸಂಗ್ರಹಿಸಿಯಾಗಿದೆ.