Zomato IPO: ಝೊಮ್ಯಾಟೋ ಐಪಿಒಗೆ ಭರ್ಜರಿ ಬೇಡಿಕೆ; ಶೇ 60ರಷ್ಟು ಅರ್ಜಿದಾರರು 30 ವರ್ಷದ ಒಳಗಿನವರು

Share

ಆನ್​ಲೈನ್ ಫುಡ್​ ಡೆಲಿವರಿ ಕಂಪೆನಿ ಝೊಮ್ಯಾಟೋದಿಂದ ಜುಲೈ 14ನೇ ತಾರೀಕು ಐಪಿಒ (Zomato IPO) ಬಿಡುಗಡೆ ಮಾಡಲಾಗಿದ್ದು, ಜುಲೈ 16ನೇ ತಾರೀಕು ಸಬ್​ಸ್ಕ್ರಿಪ್ಷನ್ ಕೊನೆಯಾಗಲಿದೆ. ಈ ಐಪಿಒಗೆ ಯುವ ತಲೆಮಾರು, ಮೊದಲ ಬಾರಿಗೆ ಹೂಡಿಕೆ ಮಾಡುತ್ತಿರುವವರು ಭಾರೀ ಆಸಕ್ತಿ ತೋರುತ್ತಿದ್ದಾರೆ ಎಂದು ಪೇಟಿಎಂ ಮನಿ ತಿಳಿಸಿದೆ. ಗಮನಾರ್ಹ ಸಂಗತಿ ಏನೆಂದರೆ, ಪೇಟಿಎಂ ಮನಿ ಮೂಲಕ ಝೊಮ್ಯಾಟೋ ಐಪಿಒಗೆ ಅರ್ಜಿ ಹಾಕಿರುವವರ ಪೈಕಿ ಶೇ 55ರಷ್ಟು ಮಂದಿ 30 ವರ್ಷ ವಯಸ್ಸಿನ ಒಳಗಿನವರು. ಮೊದಲ ದಿನದ ಲೆಕ್ಕಾಚಾರವನ್ನು ಮುಂದಿಟ್ಟಿರುವ ಪೇಟಿಎಂ ಮನಿ, ಶೇ 60ರಷ್ಟು ಮಂದಿ 30 ವರ್ಷದೊಳಗಿನವರು. ಇದನ್ನು ಇನ್ನೂ ಕೂದಲು ಸೀಳುವಂತೆ ಹೇಳುವುದಾದರೆ, ಶೇ 27ರಷ್ಟು ಮಂದಿ 25 ವರ್ಷ ವಯಸ್ಸಿನೊಳಗಿವರು. ಇನ್ನೂ ಒಂದು ಪ್ರಮುಖ ಸಂಗತಿ ಏನೆಂದರೆ, ಮೊದಲ ದಿನ ಅರ್ಜಿ ಹಾಕಿಕೊಂಡವರ ಪೈಕಿ ಶೇ 10ರಷ್ಟು ಮಹಿಳೆಯರಿದ್ದಾರೆ. ಪೇಟಿಎಂ ಮನಿ ಪ್ಲಾಟ್​ಫಾರ್ಮ್​ನಲ್ಲಿ ಈ ಹಿಂದಿನ ಐಪಿಒಗಳಿಗೆ ಮೊದಲ ದಿನ ಬರುತ್ತಿದ್ದ ಅರ್ಜಿಯ ಸಂಖ್ಯೆಗಿಂತ ಝೊಮ್ಯಾಟೋಗೆ ಶೇ 20ರಷ್ಟು ಜಾಸ್ತಿ ಬಂದಿದೆ ಎಂದು ತಿಳಿಸಲಾಗಿದೆ.

ಪೇಟಿಎಂ ಮನಿ ಎಂಬುದು ಫಿನ್​ಟೆಕ್​ ಆದ ಪೇಟಿಎಂನ ವೆಲ್ತ್​ ಮ್ಯಾನೇಜ್​ಮೆಂಟ್ ವಿಭಾಗದ. ಐಪಿಒ ಸಬ್​ಸ್ಕ್ರಿಪ್ಷನ್ ಆರಂಭವಾಗುವ ಕೆಲ ದಿನಗಳ ಮುಂಚೆಯೇ ಬಳಕೆದಾರರು ಅದಕ್ಕೆ ಅಪ್ಲೈ ಮಾಡುವ ಫೀಚರ್​ ಅನ್ನು ಘೋಷಣೆ ಮಾಡಿದೆ. ಈ ಫೀಚರ್ ಅನ್ನು ಪ್ರೀ ಓಪನ್ ಐಪಿಒ ಅಪ್ಲಿಕೇಷನ್ ಎಂದು ಕರೆಯಲಾಗುತ್ತದೆ. ಐಪಿಒಗಳಲ್ಲಿ ರೀಟೇಲ್ ಹೂಡಿಕೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂಬ ಕಾರಣಕ್ಕೆ ಈ ಫೀಚರ್ ಪರಿಚಯಿಸಲಾಗಿದೆ. ಝೊಮ್ಯಾಟೋ ಐಪಿಒ ಈ ಫೀಚರ್​ ಅನ್ನು ಬಳಸಿಕೊಂಡ ಮೊದಲ ಕಂಪೆನಿಯಾಗಿದೆ. ಬಳಕೆದಾರರು ಇನ್ನೂ ಹೆಚ್ಚು ಸಕ್ರಿಯವಾಗಿ ಪಾಲ್ಗೊಳ್ಳುವುದಕ್ಕೆ ಅನುಕೂಲ ಆಗುವ ನಿಟ್ಟಿನಲ್ಲಿ ಒನ್-ಕ್ಲಿಕ್ ಐಪಿಒ ಅಪ್ಲಿಕೇಷನ್, ಷೇರುದಾರರ ವಿಭಾಗದ ಅಡಿಯಲ್ಲಿ ಐಪಿಒ ಅಪ್ಲಿಕೇಷನ್ ಮತ್ತು ಲೈವ್ ಐಪಿಒ ಸಬ್​ಸ್ಕ್ರಿಪ್ಷನ್ ಸಂಖ್ಯೆಯ ಟ್ರ್ಯಾಕಿಂಗ್ ಇವೆಲ್ಲ ಫೀಚರ್ಸ್ ತಂದಿದೆ.

ಝೊಮ್ಯಾಟೋ ಐಪಿಒಗೆ ಈ ಪರಿಯ ಪ್ರತಿಕ್ರಿಯೆ ಬರುವುದಕ್ಕೆ ಕಾರಣ ಆಗಿರುವುದು ಸಣ್ಣ ಮತ್ತು ಪಟ್ಟಣಗಳ ಹೂಡಿಕೆದಾರರ ಭಾಗವಹಿಸುವಿಕೆ. ಸಾಮಾನ್ಯವಾಗಿ ಮುಂಬೈ, ದೆಹಲಿಯಂಥ ಮೆಟ್ರೋ ನಗರಗಳ ಹೂಡಿಕೆದಾರರು ಸಿದ್ಧವಾಗಿ ಐಪಿಒಗಳಲ್ಲಿ ಭಾಗಿ ಆಗಿದ್ದಾರೆ. ಜತೆಗೆ ಸಣ್ಣ ಪ್ರದೇಶಗಳವರೂ ಪಾಲ್ಗೊಂಡಿದ್ದಾರೆ. ಗುಜರಾತ್​ನ ಕೊಡಿನರ್, ನಾಗಾಲ್ಯಾಂಡ್​ನ ತ್ಯುನ್​ಸಂಗ್ ಮತ್ತು ಅಸ್ಸಾಂನ ರಂಗಾಪುರದಂಥ ಸ್ಥಳಗಳಿಂದಲೂ ಈ ಐಪಿಒನಲ್ಲಿ ಭಾಗವಹಿಸಿದ್ದಾರೆ. ಐಪಿಒ ಸಬ್​ಸ್ಕ್ರಿಪ್ಷನ್​ನ ಆರಂಭದ ದಿನವೇ ಹೆಚ್ಚು ಬೇಡಿಕೆ ಪಡೆದಿದೆ. ರೀಟೇಲ್ ಹೂಡಿಕೆದಾರರಿಗೆ ಮೀಸಲಿರುವ ಷೇರುಗಳಿಗಿಂತ 2.7 ಪಟ್ಟು ಹೆಚ್ಚು ಬೇಡಿಕೆ ಸಲ್ಲಿಸಿದ್ದಾರೆ. ಇನ್ನು ಪಿಟಿಐ ಸುದ್ದಿ ಸಂಸ್ಥೆ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಝೊಮ್ಯಾಟೋದ ಐಪಿಒ ಗಾತ್ರ ರೂ. 71.92 ಕೋಟಿಯಾದರೆ, ಮೊದಲ ದಿನವೇ ರೂ. 75.60 ಕೋಟಿ ರೂಪಾಯಿಯ ಈಕ್ವಿಟಿ ಷೇರಿಗೆ ಬಿಡ್ಡಿಂಗ್ ಬಂದಿದೆ. ಇನ್ನು ಉದ್ಯೋಗಿಗಳಿಗಾಗಿ ಮೀಸಲಿಟ್ಟಿರುವ ಪ್ರಮಾಣದಲ್ಲಿ ಶೇ 18ರಷ್ಟು ಸಬ್​ಸ್ಕ್ರೈಬ್ ಆಗಿದೆ.

ಇಲ್ಲಿಯ ತನಕದ ಲೆಕ್ಕ ನೋಡಿದರೆ, ಮಾರುಕಟ್ಟೆಯಲ್ಲಿ ಈ ವರ್ಷದ ಅತಿ ದೊಡ್ಡ ಐಪಿಒ ಇದು. ಶುಕ್ರವಾರದ ತನಕ ಇರುತ್ತದೆ. ಪ್ರತಿ ಷೇರಿಗೆ 72 ರೂ.ನಿಂದ 76 ರೂಪಾಯಿ ದರದ ಬ್ಯಾಂಡ್ ನಿಗದಿ ಆಗಿದೆ. ಆರಂಭದಲ್ಲಿ ಐಪಿಒ ಗಾತ್ರ 9,375 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿತ್ತು. ಆದರೆ ನಂತರದಲ್ಲಿ ಅದನ್ನು 5178 ಕೋಟಿ ರೂಪಾಯಿಗೆ ಇಳಿಸಲಾಯಿತು. ಜುಲೈ 13ನೇ ತಾರೀಕಿನಂದೇ ಝೊಮ್ಯಾಟೋ 186 ಆಂಕರ್ ಹೂಡಿಕೆದಾರರಿಂದ 4,196.51 ಕೋಟಿ ರೂಪಾಯಿ ಸಂಗ್ರಹಿಸಿಯಾಗಿದೆ.


Share

Xiaomi: ಆಪಲ್ ಕಂಪೆನಿಯನ್ನು ಪಕ್ಕಕ್ಕೆ ಸರಿಸಿ ವಿಶ್ವದ ಎರಡನೇ ಅತಿ ದೊಡ್ಡ ಸ್ವಾರ್ಟ್​ಫೋನ್ ತಯಾರಕ ಆದ ಶಿಯೋಮಿ

Share

ಆಪಲ್ ಕಂಪೆನಿಯನ್ನು ಹಿಂದಿಕ್ಕಿರುವ ಶಿಯೋಮಿ ವಿಶ್ವದ ಎರಡನೇ ಅತಿದೊಡ್ಡ ಸ್ಮಾರ್ಟ್​ಫೋನ್ ತಯಾರಕ ಆಗಿದೆ. ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಕ ಕಂಪೆನಿಯು ಸ್ಥಳೀಯ ಪ್ರತಿಸ್ಪರ್ಧಿ ಹುವೈ ಅಂತ್ಯದೊಂದಿಗೆ ಲಾಭ ಪಡೆದಿದೆ. ಮತ್ತು ಈಗ ಸ್ಯಾಮ್‌ಸಂಗ್‌ನ ಅಗ್ರ ಸ್ಥಾನದಲ್ಲಿದೆ. ಕ್ಯಾನಲಿಸ್ ಬಿಡುಗಡೆ ಮಾಡಿದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, 2021ರ ಎರಡನೇ ತ್ರೈಮಾಸಿಕದಲ್ಲಿ, ಶಿಯೋಮಿ ಮಾರಾಟದ ದೃಷ್ಟಿಯಿಂದ ಜಾಗತಿಕವಾಗಿ ಎರಡನೇ ಅತಿದೊಡ್ಡ ಸ್ಮಾರ್ಟ್​ಫೋನ್ ತಯಾರಕ ಸಂಸ್ಥೆಯಾಗಿದೆ. ದಕ್ಷಿಣ ಕೊರಿಯಾದ ಸ್ಮಾರ್ಟ್‌ಫೋನ್ ತಯಾರಕ ಸ್ಯಾಮ್ಸಂಗ್ ಶೇಕಡಾ 19 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಶಿಯೋಮಿಯು ಸ್ಪರ್ಧೆಯ ಅಂತರವನ್ನು ಸಾಕಷ್ಟು ಕಡಿಮೆ ಮಾಡಿದ್ದು, ಶೇಕಡಾ 17ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಶಿಯೋಮಿಯ ಶಿಪ್​ಮೆಂಟ್ ಲ್ಯಾಟಿನ್ ಅಮೆರಿಕಾದಲ್ಲಿ ಶೇಕಡಾ 300ಕ್ಕಿಂತಲೂ ಹೆಚ್ಚಾಗಿದ್ದು, ಆಫ್ರಿಕಾದಲ್ಲಿ ಶೇ 150 ಮತ್ತು ಪಶ್ಚಿಮ ಯುರೋಪಿನಲ್ಲಿ ಶೇ 50ರಷ್ಟು ಹೆಚ್ಚಾಗಿದೆ. ಎಂಐ 11 ಅಲ್ಟ್ರಾನಂತಹ ಫೋನ್‌ಗಳ ಮಾರಾಟವನ್ನು ಹೆಚ್ಚಿಸುವುದು ಶಿಯೋಮಿಯ ಉದ್ದೇಶವಾಗಿರಬೇಕು ಎಂದು ಕ್ಯಾನಲಿಸ್ ಹೇಳಿದೆ. ಆದರೆ ಸ್ಮಾರ್ಟ್‌ಫೋನ್ ತಯಾರಕ ಕಂಪೆನಿಯಾದ ಶಿಯೋಮಿಗೆ ಚೀನಾದ ಇತರ ಬ್ರಾಂಡ್‌ಗಳಾದ ಒಪ್ಪೊ ಮತ್ತು ವಿವೊಗಳಿಂದ ಸವಾಲು ಎದುರಿಸಬೇಕಾಗಿದೆ.

ಆದರೂ ಶಿಯೋಮಿ ಕಂಪೆನಿಯು ಸ್ಯಾಮ್ಸಂಗ್ ಅನ್ನು ಹಿಂದಿಕ್ಕಲು ಉತ್ತಮ ಅವಕಾಶವನ್ನು ಹೊಂದಿದೆ. ಮತ್ತು ಈ ವೇಗದಲ್ಲಿ ಮಾರಾಟ ಸಾಗಿದರೆ ವಿಶ್ವದ ನಂಬರ್ 1 ಸ್ಮಾರ್ಟ್‌ಫೋನ್ ಬ್ರಾಂಡ್ ಆಗಬಹುದು ಎಂದು ಸಂಖ್ಯೆಗಳು ಸೂಚಿಸುತ್ತವೆ. ಇದೇ ಮೊದಲ ಬಾರಿಗೆ ಸ್ಯಾಮ್ಸಂಗ್ ಮತ್ತು ಆಪಲ್ ಕಂಪೆನಿಯನ್ನು ಮೊದಲ ಎರಡು ಸ್ಥಾನದಿಂದ ಬದಿಗೆ ಸರಿಸುವಂತಹ ಸಾಮರ್ಥ್ಯವನ್ನು ಶಿಯೋಮಿ ತೋರುತ್ತಿದೆ. ಇದಕ್ಕೆ ಪ್ರಮುಖ ಕಾರಣವಾಗಿ ಕಂಡುಬರುವುದು ಮಿಡ್​ ಪ್ರೀಮಿಯಂ ವಿಭಾಗ, ನೋಟ್ 10 ಅನಾವರಣ ಮತ್ತು ಎಂಐ ಸರಣಿಯ ಸ್ಮಾರ್ಟ್‌ಫೋನ್‌ಗಳು.

ಆಪಲ್ ಈಗ ಶೇಕಡಾ 14 ರಷ್ಟು ಮಾರುಕಟ್ಟೆ ಪಾಲನ್ನು ಹೊಂದುವ ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಆದರೆ ಒಪ್ಪೋ ಮತ್ತು ವಿವೊ ತಲಾ ಶೇ 10 ರಷ್ಟು ದೊಡ್ಡ ಬೆಳವಣಿಗೆಯನ್ನು ಹೊಂದಿವೆ. ಆದರೂ 2020ರ ಎರಡನೇ ತ್ರೈಮಾಸಿಕದಲ್ಲಿ ಶಿಯೋಮಿಯ ಶೇಕಡಾ 83ರ ಬೆಳವಣಿಗೆಗೆ ಹೋಲಿಸಿದರೆ ಇದು ಏನೂ ಇಲ್ಲ. ಪ್ರೀಮಿಯಂ ಸ್ಮಾರ್ಟ್‌ಫೋನ್ ಮಾರುಕಟ್ಟೆಯಿಂದ ಹುವೈ ನಿರ್ಗಮಿಸಿದ್ದರಿಂದ ಖಾಲಿಯಾದ ಸ್ಥಳವನ್ನು ತುಂಬಲು ಹೆಚ್ಚಿನ ಬ್ರ್ಯಾಂಡ್‌ಗಳು ಯತ್ನಿಸುತ್ತಿವೆ. ಬಹಳ ಹಿಂದೆಯೇ ಹುವೈ ಕಂಪೆನಿಯು ಆಪಲ್ ಅನ್ನು ಪಕ್ಕಕ್ಕೆ ಸರಿಸುವಲ್ಲಿ ಯಶಸ್ವಿಯಾಗಿತ್ತು ಮತ್ತು ಸ್ಮಾರ್ಟ್​ಫೋನ್ ತಯಾರಕರಲ್ಲಿ ಎರಡನೇ ಸ್ಥಾನವನ್ನು ಗಳಿಸಿತ್ತು. ಆದರೂ ಶೀಘ್ರದಲ್ಲೇ ಅದರ ಮೇಲೆ ನಿರ್ಬಂಧಗಳನ್ನು ವಿಧಿಸಲಾಯಿತು ಮತ್ತು ಕಂಪೆನಿಯು ಅಂತಿಮವಾಗಿ ಹೈ ಎಂಡ್ ಪ್ರೀಮಿಯಂ ಫೋನ್ ಮಾರುಕಟ್ಟೆಯಿಂದ ಹಿಂದೆ ಸರಿಯಿತು.

ಆ ನಂತರ ಶಿಯೋಮಿ, ಒನ್‌ಪ್ಲಸ್ ಮತ್ತು ಇತರ ಕಂಪೆನಿಗಳು ಹುವೈನಿಂದ ಖಾಲಿಯಾದ ಸ್ಥಳವನ್ನು ತುಂಬಲು ಪ್ರಯತ್ನಿಸುತ್ತಲೇ ಇವೆ. ಬೆಳೆಯುತ್ತಿರುವ ಸ್ಪರ್ಧೆಯ ಮಧ್ಯೆ ಮುಂದಿನ ಕೆಲವು ತ್ರೈಮಾಸಿಕಗಳಲ್ಲಿ ಶಿಯೋಮಿ ಸ್ಥಾನವನ್ನು ಉಳಿಸಿಕೊಳ್ಳುತ್ತದೆಯೇ ಎಂದು ಕಾದು ನೋಡಬೇಕಾಗಿದೆ.


Share

Investor Success Story: 25 ವರ್ಷಕ್ಕೇ ಕೋಟ್ಯಧಿಪತಿಯಾದ ಈ ಯುವಕನ ಬಳಿ ಸ್ವಂತ ಕಾರಿಲ್ಲ; ಅರುಣ್ ಹೇಳಿದ ಹೂಡಿಕೆ ಸೂತ್ರ

Share

“ಇಂಗ್ಲಿಷ್ ಹಾಗೂ ಗಣಿತದ ಮೇಲೆ ಗಮನ ಕೊಡು. ಯಾವುದೇ ಕಾರಣಕ್ಕೂ ಷೇರು ಮಾರ್ಕೆಟ್​ ಕಡೆ ತಲೆ ಕೂಡ ಹಾಕಬೇಡ,” – ಈ ಎರಡು ಸಲಹೆಗಳನ್ನು ಬಂಗಾಲಿಗಳು ತಮಗಿಂತ ಕಿರಿಯರಿಗೆ ನೀಡುತ್ತಾರೆ. ಮಕ್ಕಳು ಶಾಲೆಯಲ್ಲಿ ಇರುವಾಗಲೇ ಅವರನ್ನು ಹೀಗೆ ಬೆಳೆಸಲಾಗುತ್ತದೆ. ಈ ಕಾರಣಕ್ಕೆ ಷೇರು ಮಾರ್ಕೆಟ್​ ಅಂದರೆ ಬಂಗಾಲಿಗಳಲ್ಲಿ ಒಂದು ಭಯ ಹಾಗೇ ಉಳಿದುಹೋಗುತ್ತದೆ. ಆದರೆ 32 ವರ್ಷದ ಅರುಣ್ ಮುಖರ್ಜಿ ಮಾತ್ರ ಬೇರೆಯದೇ ದಾರಿಯನ್ನು ಆರಿಸಿಕೊಂಡು, ಇವತ್ತಿಗೆ ಯಶಸ್ವಿಯಾಗಿ ಕಣ್ಣೆದುರು ನಿಂತಿದ್ದಾರೆ. ತಮ್ಮ ಮಗನಿಗೆ ಒಳ್ಳೆ ಇಂಗ್ಲಿಷ್ ಕಲಿಸಬೇಕು ಅನ್ನೋ ಕಾರಣಕ್ಕೆ ಅರುಣ್ ಪೋಷಕರು ಪ್ರತಿ ನಿತ್ಯ ಇಂಗ್ಲಿಷ್ ಪತ್ರಿಕೆ ಓದಿಸುತ್ತಿದ್ದರು. ಈ ಮೂಲಕವೇ ಷೇರು ಮಾರುಕಟ್ಟೆಗೆ ಪರಿಚಯವಾದರು. ತಮಗೆ ಎಲ್ಲರೂ ಹೇಳುತ್ತಾ ಬಂದಿದ್ದ ಸಲಹೆಗಳನ್ನೆಲ್ಲ ಮೀರಿ ಆ ಕಡೆಗೆ ಆಕರ್ಷಿತರಾದರು.

“ಬೇರೆಲ್ಲರಂತೆ ನನ್ನ ತಂದೆ ಕೂಡ ತಮ್ಮ ಹಿರಿಯ ಮಗನಿಗೆ ಅಸ್ಖಲಿತ ಇಂಗ್ಲಿಷ್ ಬರುವಂತೆಯೇ ಯೋಚಿಸಿದವರು. ಮನೆಗೆ ತರಿಸುತ್ತಿದ್ದ ಬಿಜಿನೆಸ್ ನ್ಯೂಸ್ ಪೇಪರ್​ಗಳನ್ನು ಓದುವಂತೆ ಹೇಳುತ್ತಿದ್ದರು. ಒಂದು ದಿನ ದಿನಪತ್ರಿಕೆ ಓದುತ್ತಾ ಇದ್ದೆ. Excel sheetನಂಥದ್ದನ್ನು ನೋಡುವಾಗ ಅಲ್ಲಿ ನಿಂತುಬಿಟ್ಟೆ. ಅದೇನು ಅಂತ ಕೇಳಿದಾಗ, ಸ್ಟಾಕ್ ಬೆಲೆಗಳು ಅಂತ ಹೇಳಲಾಯಿತು,” ಎನ್ನುವುದನ್ನು ನೆನಪಿಸಿಕೊಳ್ಳುತ್ತಾರೆ ಮುಖರ್ಜಿ. ಆದರೆ ಅರುಣ್ ಅವರ ತಂದೆ ಸಲಹೆ ಏನಾಗಿತ್ತೆಂದರೆ, ಷೇರು ಮಾರ್ಕೆಟ್​ನಲ್ಲಿ ಶೇ 90ರಷ್ಟು ಹೂಡಿಕೆದಾರರು ಹಣ ಕಳೆದುಕೊಳ್ಳುತ್ತಾರೆ ಎನ್ನುವುದಾಗಿತ್ತು. “ನನ್ನಲ್ಲೊಂದು ಕ್ರಾಂತಿಕಾರಿ ಆಲೋಚನೆ ಇತ್ತು. ಬಹುತೇಕರು ದೊಡ್ಡ ಸಮಯವನ್ನು ಎಲ್ಲಿ ಕಳೆದುಕೊಳ್ಳುತ್ತಾರೋ ಅಲ್ಲಿ ಗೆಲುವು ಸಾಧಿಸಬೇಕು ಎಂಬುದೇ ನನ್ನ ಪಾಲಿಗೆ ಸ್ಫೂರ್ತಿಯಾಯಿತು,” ಎನ್ನುತ್ತಾರೆ ಅರುಣ್ ಮುಖರ್ಜಿ.

16ನೇ ವಯಸ್ಸಿಗೇ ಸಿದ್ಧತೆ
ಇತರ ಗೆಳೆಯರು ಲವ್ ಅಂದುಕೊಂಡು ಹುಡುಗಿಯರ ಕಡೆಗೊಂದು ಬೆರಗಿನ ನೋಟ ಬೀರುತ್ತಾ ಇರುವಾಗಲೇ, ಅಂದರೆ 16 ವರ್ಷಗಳ ಹಿಂದೆ ಅರುಣ್ ಮುಖರ್ಜಿ ಮಾತ್ರ ಪ್ರತಿ ನಿತ್ಯ ವಾಣಿಜ್ಯ ನಿಯತಕಾಲಿಕೆಗಳನ್ನು ಓದುತ್ತಿದ್ದರು ಹಾಗೂ ಸ್ಟಾಕ್, ಷೇರು ಮಾರುಕಟ್ಟೆ ಹೇಗೆ ಕೆಲಸ ಮಾಡುತ್ತದೆ ಎಂದು ಕಲಿಯಲು ಆರಂಭಿಸಿದ್ದರು. ಈ ಪರಿಶ್ರಮದಿಂದಲೇ ಅರುಣ್​ಗೆ ಕ್ಯಾಪ್ಲಿನ್ ಪಾಯಿಂಟ್, ಅವಂತಿ ಫೀಡ್ಸ್, ಸಿಂಫೋನಿ, ಸೆರಾ ಸ್ಯಾನಿಟಿವೇರ್, ಮಿಂಡಾ ಇಂಡಸ್ಟ್ರೀಸ್ ಹಾಗೂ ಹೆಸ್ಟರ್ ಬಯೋದಂಥ ಸ್ಟಾಕ್​ಗಳನ್ನು ಗುರುತಿಸಲು ನೆರವಾಯಿತು ಮತ್ತು ಅರುಣ್​ಗೆ 25 ವರ್ಷದೊಳಗೆ ಕೋಟ್ಯಧಿಪತಿ ಆಗಲು ಕಾರಣವಾಯಿತು. ಸದ್ಯಕ್ಕೆ ಅವರು ಲಿಸ್ಟೆಡ್ ಕಂಪೆನಿಗಳು ಮತ್ತು ಸ್ಟಾರ್ಟ್​ ಅಪ್​ಗಳ ಕಂಪೆನಿಗಳಲ್ಲಿ ಹೂಡಿಕೆ ಮಾಡುತ್ತಾರೆ. ದೇಶದಾದ್ಯಂತ ಹಾಗೂ ಹೊರದೇಶಗಳಲ್ಲೂ ಹೂಡಿಕೆದಾರರ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸುತ್ತಾರೆ.

ಹೂಡಿಕೆ ಮಾಡುವಾಗ ಅನುಸರಿಸುವ ಪದ್ಧತಿ ಏನು?
ನಾನು ವಿಶ್ವದಾದ್ಯಂತ ಪ್ರಯಾಣ ಮಾಡ್ತೀನಿ, ಬುದ್ಧಿವಂತ ಜನರನ್ನು ಭೇಟಿ ಆಗ್ತೀನಿ. ಅವರೊಂದಿಗೆ ಚರ್ಚೆ ಮಾಡ್ತಿರ್ತೀನಿ. ನನ್ನ ಸಂಶೋಧನೆಯಲ್ಲಿ ಸೂಕ್ತ ಎಂದು ಕಂಡುಬರುತ್ತದೋ ಅದನ್ನು ಸೇರ್ಪಡೆ ಮಾಡುತ್ತೇನೆ. ಈ ರೀತಿಯ ವಿಚಾರ ವಿನಿಮಯ ನನ್ನ ಪಾಲಿಗೆ ಅದ್ಭುತಗಳನ್ನು ಮಾಡಿವೆ ಎನ್ನುತ್ತಾರೆ ಮುಖರ್ಜಿ. ಆದರೆ ಕೆಲವು ಮ್ಯಾನೇಜ್​ಮೆಂಟ್​ನವರು ಉತ್ಪ್ರೇಕ್ಷೆ ಮಾಡಿ ಹೇಳುವಂಥ ವಿಚಾರಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಸಹ ಸೇರಿಸುತ್ತಾರೆ.

ಮುಖರ್ಜಿ ತಮ್ಮದೇ ಸ್ವಂತದ್ದನ್ನು ಮಾಡಲು ಬಯಸುತ್ತಾರೆ. ಹೂಡಿಕೆದಾರರ ಮಧ್ಯೆ ಅರುಣ್​ಗೆ ಭಾರೀ ಫಾಲೋಯಿಂಗ್ ಇದೆ. ಟ್ವಿಟ್ಟರ್​ನಲ್ಲಿ 80 ಸಾವಿರಕ್ಕೂ ಹೆಚ್ಚು ಫಾಲೋವರ್ ಇದ್ದಾರೆ. ಈಗ ಬಂಗಾಲಿಗಳು, ಯಾರು ತಮ್ಮ ಕುಟುಂಬದವರಿಂದ ಉತ್ತೇಜನ ಸಿಕ್ಕಿರಲ್ಲವೋ ಅಂಥವರು ತಮ್ಮ ಪೋರ್ಟ್​ಫೋಲಿಯೋ ವಿಚಾರದಲ್ಲಿ ಗೊಂದಲಗಳಿದ್ದಲ್ಲಿ ಅರುಣ್ ಅವರ ಸಲಹೆ ಕೇಳುತ್ತಾರೆ.

ಅಮದಹಾಗೆ, ವಯಸ್ಸು ಮುಖರ್ಜಿ ಅವರ ಪರವಾಗಿದೆ. ಆದ್ದರಿಂದ ರಿಸ್ಕ್ ತೆಗೆದುಕೊಳ್ಳುವುದಕ್ಕೆ ಹೆದರುವುದಿಲ್ಲ. ಉತ್ತಮ ತಂಡ ಹಾಗೂ ದೃಷ್ಟಿಕೋನ ಇರುವ ತಂಡ ಇರುವ ಸಂಸ್ಥೆಗಳ ಹುಡುಕಾಟ ನಡೆಸುತ್ತಾರೆ. ಸ್ಟಾರ್ಟ್ ಅಪ್ಸ್ ಮತ್ತು ಅನ್​ಲಿಸ್ಟೆಡ್ ಕಂಪೆನಿಗಳಲ್ಲಿ ಸಿಕ್ಕಾಪಟ್ಟೆ ಹೂಡಿಕೆ ಮಾಡುತ್ತಾರೆ. ಲಿಸ್ಟೆಡ್ ಕಂಪೆನಿಗಳಿಗಿಂತ ಹೆಚ್ಚಾಗಿ ಅನ್​ಲಿಸ್ಟೆಡ್​ನಲ್ಲೇ ಮುಖರ್ಜಿ ಅವರ ಹೂಡಿಕೆ ಹೆಚ್ಚಾಗಿದೆ. ಇನ್ನು ಅರುಣ್ ಹೇಳುವಂತೆ, ಆರಂಭದ ತಪ್ಪುಗಳಿಂದ ಪಾಠ ಕಲಿಯುತ್ತೇವೆ. ಅದನ್ನು ಪುನರಾವರ್ತನೆ ಮಾಡಬಹುದು, ಅಷ್ಟೇ ಎನ್ನುತ್ತಾರೆ. ಬುದ್ಧಿವಂತ ಹೂಡಿಕೆದಾರ ಯಾವಾಗಲೂ ಏರಿಕೆ ಆಗುವ ಆಸ್ತಿಗಳ ಮೇಲೆ ಹೂಡಿಕೆ ಮಾಡುತ್ತಾನೆ ಹೊರತು ಇಳಿಕೆ ಆಗುವುದರ ಮೇಲಲ್ಲ ಎನ್ನುತ್ತಾರೆ.

ಈಗಲೂ ಅರುಣ್ ಬಳಿ ಸ್ವಂತ ಕಾರಿಲ್ಲ
ಆ ಕಾರಣಕ್ಕೆ ಇಂದಿಗೂ ನನ್ನ ಬಳಿ ಸ್ವಂತ ಕಾರಿಲ್ಲ. ಮನೆ ಎಂಬುದು ಅಗತ್ಯ. ನನ್ನ ಬಳಿ ಹೆಚ್ಚು ಮನೆಗಳಿವೆ. ಹೊಸ ಮನೆ ನನಗೆ ಹೆಚ್ಚು ಸ್ಥಳಾವಕಾಶ ಹಾಗೂ ವಿಶ್ರಾಂತಿ ನೀಡುತ್ತದೆ. ಆದ್ದರಿಂದ ನನ್ನ ಗುರಿಯು ಬೆಲೆ ಹೆಚ್ಚಳ ಆಗುವ ಆಸ್ತಿಗಳ ಕಡೆಗೆ ಇರುತ್ತದೆ ಎನ್ನುತ್ತಾರೆ.

ಆರಂಭದ ಹೂಡಿಕೆದಾರರಿಗೆ ಸಲಹೆ ಏನು?
ಈಗಿನ ತಲೆಮಾರು ನೋಟು ನಿಷೇಧದ ನಂತರ ಬ್ಯಾಂಕಿನ ಎಫ್​ಡಿಯಲ್ಲಿ ಹಣ ಹಾಕುತ್ತಿಲ್ಲ. ಒಂದು ಕಂಪ್ಯೂಟರ್ ಇಟ್ಟುಕೊಂಡು ಮಾಡುವ ಬಿಜಿನೆಸ್​ ಕೂಡ ಆಕರ್ಷಕವಾಗಿದೆ. ಆ ಲಕ್ಷಣಗಳು ಕಾಣುತ್ತಿವೆ. ಯಾಕೆ ನಿವೃತ್ತಿ ಆಗುವುಕ್ಕೆ 60ರ ತನಕ ಕಾಯಬೇಕು, 40ನೇ ವಯಸ್ಸಿನಲ್ಲೇ ಆಗಬಹುದಲ್ಲಾ? ಶ್ರೀಮಂತರಾಗಿ ನಿವೃತ್ತರಾಗಲು ಈಕ್ಷಿಟಿ ಷೇರು ಸರಿಯಾದ ದಾರಿ, ಬೇಗ ರಿಟೈರ್ ಆಗಿ ಎನ್ನುವುದು ಅರುಣ್ ಮಾತು.

ಈಕ್ವಿಟಿಯೇ ಊಟ, ನಿದ್ರೆ ಎಲ್ಲವೂ
“ದೀರ್ಘಾವಧಿಯ ಬಂಡವಾಳ ಲಾಭದ ಪ್ರಮಾಣ ಕೇವಲ ಶೇ 10ರಷ್ಟು ಮಾತ್ರ. 26 ಪರ್ಸೆಂಟ್​ನ ಕಾಂಪೌಂಡ್​ ಬೆಳವಣಿಗೆಯು ನಿಮ್ಮ ಸಂಪತ್ತನ್ನು 10 ವರ್ಷಗಳಲ್ಲಿ 10 ಪಟ್ಟು ಹೆಚ್ಚಿಸುತ್ತದೆ ಮತ್ತು ಇದು ಹಣದುಬ್ಬರವನ್ನು ಮೀರಿ ಬೆಳೆದಿರುತ್ತದೆ. ನೀವು ಸರಿಯಾಗಿ ಹೂಡಿಕೆ ಮಾಡಲು ಸಾಧ್ಯವಾದರೆ 30 ವರ್ಷಗಳಲ್ಲಿ 1000 ಪಟ್ಟು ಗಳಿಸುವುದೂ ದೊಡ್ಡ ವಿಷಯವಲ್ಲ. ವಿಶ್ವದ ಯಾವುದೇ ಆಸ್ತಿ ಕ್ಲಾಸ್ ಆ ಪ್ರಮಾಣದ ಸಂಪತ್ತನ್ನು ಸೃಷ್ಟಿಸಲು ಸಾಧ್ಯವಿಲ್ಲ. ನೀವು ಮಾಸಿಕ ಸ್ಟಾಕ್ ಎಸ್‌ಐಪಿ ಮಾಡುತ್ತೀರಿ ಅಥವಾ ಲಾಭಾಂಶವನ್ನು ಮತ್ತೆ ಹೂಡಿಕೆ ಮಾಡುತ್ತೀರಿ ಅಂತಾದರೆ ಇದೆಲ್ಲವೂ ನಿಮ್ಮ ಪೋರ್ಟ್​ ಫೋಲಿಯೊವನ್ನು ಅಂತಹ ಮಟ್ಟಕ್ಕೆ ಕೊಂಡೊಯ್ಯುತ್ತದೆ. ಅದು ನೀವು ಸಹ ಅರಿಯಬಹುದು,” ಎಂದು ಅರುನ್ ಹೇಳುತ್ತಾರೆ.

ಅಂದಹಾಗೆ, ಈ ಲೆಕ್ಕಾಚಾರಗಳನ್ನೆಲ್ಲ ಬಾಲ್ಯದ ಗಣಿತಶಾಸ್ತ್ರದ ಪಾಠಗಳಲ್ಲಿ ಕಲಿತಿರುತ್ತೀರಿ ಎಂದು ಹೇಳುವುದನ್ನು ಅವರು ಮರೆಯುವುದಿಲ್ಲ.


Share