ಭದ್ರಾವತಿ: ಈ ಬಾರಿ ನಗರಸಭೆ ಚುನಾವಣೆಯಲ್ಲಿ ಉಪ್ಪಾರ ಸಮಾಜ ಬಾಂಧವರು ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಕೆ ಗಿರೀಶ್ ಉಪ್ಪಾರ ಮತದಾರರಿಗೆ ಮನವಿ ಮಾಡಿದರು.
ಹಳೇ ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶುಕ್ರವಾರ ಸಂಜೆ ಮನೆ ಮನೆಗೆ ತೆರಳಿ ಮತಯಾಚನೆ ನಡೆಸುವ ಸಂದರ್ಭದಲ್ಲಿ ಸಮಾಜದ ಮುಖಂಡರೆಲ್ಲರೂ ಸೇರಿ ಈ ಬಾರಿ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಬೆಂಬಲಿಸುವ ನಿಟ್ಟಿನಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಬಿಜೆಪಿ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಉಪ್ಪಾರ ಸಮಾಜದ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿವೆ. ಪ್ರಸ್ತುತ ಸಮಾಜವನ್ನು ಗುರುತಿಸಿ ಎಲ್ಲಾ ರೀತಿಯಿಂದಲೂ ಪ್ರೋತ್ಸಾಹಿಸುತ್ತಿರುವ ಬಿಜೆಪಿ ಪಕ್ಷ ಬೆಂಬಲಿಸುವುದು ಸೂಕ್ತವಾಗಿದೆ. ಸಮಾಜದಲ್ಲಿ ಶಾಂತಿ, ಸೌಹಾರ್ದತೆಯನ್ನು ಉಪ್ಪಾರ ಸಮಾಜ ಬಯಸುತ್ತದೆ. ಸಮಾಜದವರನ್ನು ಬೆದರಿಸಿ ಅಥವಾ ಆಮಿಷಗಳ ಮೂಲಕ ಮತ ಪಡೆಯಲು ಯತ್ನಿಸುವುದನ್ನು ನಾವು ಖಂಡಿಸುತ್ತೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ತಮ್ಮ ಹಕ್ಕನ್ನು ಚಲಾಯಿಸುವ ಅಧಿಕಾರವಿದೆ. ಮತ ಚಲಾಯಿಸುವ ಹಕ್ಕಿಗೆ ಯಾವುದೇ ರೀತಿ ಚ್ಯುತಿ ಬರಬಾರದು ಎಂದರು.
ಗೋಷ್ಠಿಯಲ್ಲಿ ಉಪ್ಪಾರ ಸಮಾಜದ ಜಿಲ್ಲಾಧ್ಯಕ್ಷ ಸತ್ಯನಾರಾಯಣ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಅವಿನಾಶ್, ಭಗೀರಥ ಯುವಕರ ಸಂಘದ ಜಿಲ್ಲಾಧ್ಯಕ್ಷ ಮುರುಳಿ, ನಿಗಮದ ನಿರ್ದೇಶಕ ಓಂಕಾರಪ್ಪ, ಮುಖಂಡರಾದ ಅಣ್ಣಪ್ಪ, ಅವಿನಾಶ್, ಕೆ.ಟಿ ಶ್ರೀನಿವಾಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.