“ಸ್ವಾತಂತ್ರ್ಯ, ಸಾಮಾಜಿಕತೆ, ಆರ್ಥಿಕ ಸಮಾನತೆ, ಹಿಂದುಳಿದ ವರ್ಗ- ಜಾತಿಗಳಿಗೆ ಉತ್ತಮ ಅವಕಾಶ, ವಿಕೇಂದ್ರೀಕರಣ ಮೊದಲಾದ ಹಲವು ವಿಚಾರಗಳಿಗೆ ಪಾರ್ಲಿಮೆಂಟರಿ ಪ್ರಜಾಪ್ರಭುತ್ವ ಉತ್ತಮ ಆಯ್ಕೆ ಎಂದು ಅಂಬೇಡ್ಕರ್ ನಂಬಿದ್ದರು ಎಂದು ತಹಶಿಲ್ದಾರ್ ಡಾ:ಪ್ರತಿಭಾ ಪ್ರತಿಪಾದಿಸಿದರು.
ಇಂದು ತಹಶಿಲ್ದಾರ್ ಕಚೇರಿಯಲ್ಲಿ ನಡೆದ ತಾಲ್ಲೂಕು ಮಟ್ಟದ ಅಂಬೇಡ್ಕರ್ ಜಯಂತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ದೀಪ ಬೆಳಗಿ ಕಾರ್ಯಕ್ರಮವನ್ನು ತಹಶಿಲ್ದಾರ್ ಡಾ. ಪ್ರತಿಭಾ ಆರ್ ಉದ್ಘಾಟಿಸಿದರು.
ಅಂಬೇಡ್ಕರ್ ಅವರು ಜೀವನದುದ್ದಕ್ಕೂ ಸಬಲೀಕರಣಕ್ಕೆ ಹೆಚ್ಚಿನ ಮಹತ್ವ ನೀಡಿದರು. ಇವರ ಆಲೋಚನೆ ಮತ್ತು ದೃಷ್ಟಿಕೋನಗಳು ಕಾಲವನ್ನು ಮೀರಿದವಾಗಿದ್ದವು.
ಆರ್ಥಿಕ ಅಭಿವೃದ್ಧಿ, ಕೈಗಾರಿಕೀಕರಣ, ರಾಜಕೀಯ ಭಾಗವಹಿಸುವಿಕೆ, ಮಹಿಳಾ ಸಬಲೀಕರಣ ಮತ್ತು ಸಮಾನತೆ ಹಾಗೂ ಸಾಮಾಜಿಕ ಏಕೀಕರಣದ ಬಗ್ಗೆ ಪ್ರಸ್ತುತಕ್ಕೆ ಸಂಬಂಧಿಸಿದಂತೆ ಮೊದಲೇ ಯೋಚಿಸಿದ್ದರು, ಯೋಚಿಸಿದ್ದನ್ನು ಸಂವಿಧಾನದಲ್ಲಿ ಅಡಕಗೊಳಿಸಿದರು ಎಂದು ತಹಶಿಲ್ದಾರ್ ಅಂಬೇಡ್ಕರ್ ರವರನ್ನು ಕೊಂಡಾಡಿದರು.
ಈಗಾಗಲೇ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲೂ ಅಸಮಾನತೆ ಇದೆ. ಆ ದೇಶಗಳು ಕೂಡಾ ಅಂಬೇಡ್ಕರ್ ರವರ ಆಶಯ ಮತ್ತು ಚಿಂತನೆಗಳಿಂದ ಪ್ರೇರಿತರಾಗಿ ಹೋರಾಟ ನಡೆಸುತ್ತಿರುವುದನ್ನು ಕಾಣಬಹುದಾಗಿದೆ. ಸಾಮಾಜಿಕ ಕಳಂಕ (social stigma) ದ ವಿರುದ್ಧ ಹೋರಾಟ ನಡೆಸಿದ್ದಕ್ಕಾಗಿ ಅವರನ್ನು ಬಹುಜನ ನಾಯಕ ಎಂದು ಕರೆಯಲಾಗಿದೆ ಎಂದು ಪ್ರತಿಭಾ ತಿಳಿಸಿದರು.
ಇಂದು ಅಂಬೇಡ್ಕರ್ ಜಯಂತಿ ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ವ್ಯಕ್ತಿಯ ಸ್ಪೂರ್ತಿದಾಯಕ ಪ್ರಯಾಣವನ್ನು ಆಧರಿಸಿದೆ ಶತಶತಮಾನಗಳಿಂದಲೂ ಭಾರತ ದೇಶದಲ್ಲಿರುವ ಜಾತಿ ವ್ಯವಸ್ಥೆಯನ್ನು ಮೀರಿ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಹೊಂದಲು ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರು ವಹಿಸಿದ ಶ್ರಮ ಮತ್ತು ಹೋರಾಟವನ್ನು ನಾವು ಸ್ಮರಿಸಿಕೊಳ್ಳಬೇಕಾಗಿದೆ.
ಅಮಾನವೀಯ ವರ್ತನೆಗಳು, ಬಹುಜನರ ವಿಶೇಷವಾದ ಭಾಷೆ, ವೇಷಭೂಷಣ, ಸಂಸ್ಕೃತಿ, ಆಚಾರ ವಿಚಾರಗಳು ಸಂಪ್ರದಾಯಗಳನ್ನು ಕೀಳಾಗಿ ಕಂಡು, ಆ ಸಮುದಾಯವನ್ನು ನಿಂದಿಸುವುದರೊಂದಿಗೆ ಮಾನಸಿಕ ಹಿನ್ನಡೆಯನ್ನು ಮೀರಿ ಸಮಾನತೆಗೆ ದಿಟ್ಟ ನಿರ್ಧಾರಗಳ ಬಗೆಗೆನ ಗ್ರಹಿಕೆಯನ್ನು ನಾವು ಪ್ರಶಂಸಿಸಲೇಬೇಕು. ಸ್ವತಹ ಜಾತಿ ತಾರತಮ್ಯವನ್ನು ಅನುಭವಿಸಿದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರು ಶೋಷಿತ ಸಮುದಾಯದ ನೋವುಗಳನ್ನು ಅರ್ಥ ಮಾಡಿಕೊಂಡು ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರು ಆ ಸಮುದಾಯಕ್ಕೆ ನ್ಯಾಯವನ್ನು ಒದಗಿಸಲು ಶ್ರಮಿಸಿದರು.
ಈ ಸಂದರ್ಭದಲ್ಲಿ ಉಪ ತಹಶಿಲ್ದಾರ್ ಗಳಾದ ರವಿಕಿರಣ್, ದೇವಕಿ, ತಾಲ್ಲೂಕು ಕಚೇರಿ ಸಿಬ್ಬಂದಿ, ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು.
ವರದಿ:ಡಾ.ನಂದುಪೂಜಾರಿ