ಗೋಕರ್ಣ: ಹಿರೇಗುತ್ತಿಯ ಸೆಕೆಂಡರಿ ಹೈಸ್ಕೂಲಿನಲ್ಲಿ ಶಿಕ್ಷಕರಾಗಿ, ಮುಖ್ಯಾಧ್ಯಾಪಕರಾಗಿ ಸೇವೆಸಲ್ಲಿಸಿ ವಿಶ್ರಾಂತ ಜೀವನ ನಡೆಸುತ್ತಿರುವ ವಿದ್ಯಾರ್ಥಿಗಳ ಅಚ್ಚು-ಮೆಚ್ಚಿನ ಗುರುಗಳಾದ ಮೋಹನ ಬಿ ನಾಯಕ ಕೆರೆಮನೆರವರಿಗೆ ಹೈಸ್ಕೂಲಿನಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನೆ ಸಲ್ಲಿಸಲಾಯಿತು.
ಗುರುವಂದನೆ ಕಾರ್ಯಕ್ರಮದ ನೇತೃತ್ವ ವಹಿಸಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಜಗದೀಶ ನಾಯಕ ಮೊಗಟಾ ಮಾತನಾಡಿ “ಆಷಾಢ ಶುದ್ಧ ಪೌರ್ಣಿಮೆಯ ಈ ದಿವಸ ಸದ್ಗುರುಗಳನ್ನು ಗೌರವಿಸುವ ಶುಭ ದಿವಸ. ಗುರು ಎಂದರೆ ಅಜ್ಞಾನ ಅಂದಕಾರವನ್ನು ಹೋಗಲಾಡಿಸಿ ಜ್ಞಾನವನ್ನು ನೀಡಿ ಜೀವನದಲ್ಲಿ ಬೆಳಕನ್ನು ತುಂಬುವವನು ಅಂತಹ ಗುರುಗಳಾದ ಮೋಹನ ಬಿ ನಾಯಕ ಕೆರೆಮನೆ ಸರ್ರವರಿಗೆ ನಾವೆಲ್ಲ ಗೆಳೆಯರು ಗೌರವ ಸಲ್ಲಿಸುತ್ತಿರುವುದು ನಮ್ಮ ಪುಣ್ಯ” ಎಂದರು.
ಮೋಹನ ಬಿ ನಾಯಕ ಕೆರೆಮನೆ ಮಾತನಾಡಿ “ಹಿಂದಿನಕಾಲದ ಶಿಕ್ಷಣ ಪದ್ದತಿಯಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಹೆಚ್ಚಿನ ಪ್ರಾಧಾನ್ಯತೆ ಇತ್ತು. ನೀವೆಲ್ಲ ನನ್ನ ಶಿಷ್ಯಂದಿರು ನನ್ನನ್ನು ಗೌರವಿಸಿರುವುದು ನನ್ನ ಮನಸಿಗೆ ತುಂಬಾ ಸಂತಸ ತಂದಿದೆ ಎಂದು ತನಗೆ ಕಲಿಸಿದ ಅಂದಿನ ಗುರುಗಳ ನೆನೆದು ಭಾವುಕರಾದರು.
ಗುರುವಂದನೆ ಕಾರ್ಯಕ್ರಮದಲ್ಲಿ ರಾಮು ಕೆಂಚನ್, ಹಮ್ಮಣ್ಣ ನಾಯಕ, ಮಹೇಶ(ಬಾಬು)ನಾಯಕ, ದೇವಿದಾಸ ನಾಯಕ, ಪ್ರಶಾಂತ ಅಗಸಾಲಿ, ಎನ್.ರಾಮು ಹಿರೇಗುತ್ತಿ ಉಪಸ್ಥಿತರಿದ್ದರು.
