ಕುಮಟಾ: ಸಮಾಜಮುಖಿ ಸೇವಾ ಕಾರ್ಯಗಳಿಂದ ಗುರುತಿಸಿಕೊಂಡಿರುವ ರೋಟರಿ ಕ್ಲಬ್ ಕುಮಟಾ ತನ್ನ ನೂತನ ಪದಾಧಿಕಾರಿಳ ಪದಗ್ರಹಣ ಸಮಾರಂಭವನ್ನು ಅದ್ಧೂರಿಯಾಗಿ ಆಚರಿಸಿತು. ನಾದಶ್ರೀ ಕಲಾಕೇಂದ್ರದಲ್ಲಿ ನಡೆದ ಈ ಕಾರ್ಯಕ್ರಮವನ್ನು ರೋಟರಿ 3170 ಜಿಲ್ಲೆಯ ನಿಯೋಜಿತ ಪ್ರಾಂತಪಾಲ ಡಾ. ಲೆನಿ ಡಿ ಕೋಸ್ಟಾ ಉದ್ಘಾಟಿಸಿದರು. ‘2026-27ರಲ್ಲಿ ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿರುವ ಈ ಕ್ಲಬ್ 25 ಮಹಿಳಾ ಸದಸ್ಯರನ್ನು ಒಳಗೊಂಡಂತೆ ಶತಕದ ಬಲದೊಂದಿಗೆ ಇನ್ನಷ್ಟು ಜಾಗತಿಕ ಅನುದಾನ ಪಡೆದು ಸಮಾಜೋಪಯೋಗಿ ಯೋಜನೆಗಳನ್ನು ಕೈಗೊಳ್ಳಬೇಕು’ ಎಂದು ಅವರು ಹೇಳಿದರು. ರೋಟರಿಯ ಸ್ಥಾಪಕ ಪಾಲ್ ಹ್ಯಾರಿಸ್ ಅವರ ಮಾನವೀಯ ದೃಷ್ಠಿಕೋನವನ್ನು ಸ್ಮರಿಸುತ್ತಾ ರೋಟರಿ ಒಂದು ಅಂತರರಾಷ್ಟ್ರೀಯ ಸೇವಾ ವೇದಿಕೆಯಾಗಿರುವುದನ್ನು ಅವರು ಒತ್ತಿ ಹೇಳಿದರು.
ನಂತರ ಅವರು ನೂತನ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಖಜಾಂಚಿಗಳಾದ ಕಿರಣ ನಾಯಕ, ನಿಖಿಲ್ ಕ್ಷೇತ್ರಪಾಲ ಮತ್ತು ಗುರುಪ್ರಸಾದ ಕಾಮತ ಅವರಿಗೆ ರೋಟರಿ ಬ್ಯಾಚ್ ತೊಡಿಸಿ ಸೇವಾ ದೀಕ್ಷೆ ಬೋಧಿಸಿದರು. ಅಧಿಕಾರ ಸ್ವೀಕರಿಸಿದ ನೂತನ ಪದಾಧಿಕಾರಿಗಳು ತಮ್ಮ ಅವಧಿಯಲ್ಲಿ ಸಾರ್ವಜನಿಕ ಸೇವೆಗಾಗಿ ಶ್ರಮಿಸುವ ಸಂಕಲ್ಪ ವ್ಯಕ್ತಪಡಿಸಿದರು. ರೋಟರಿ ಏನ್ಸ್ ಪದಾಧಿಕಾರಿಗಳಾದ ದೀಪಾ ನಾಯಕ, ನೇಹಾ ಕ್ಷೇತ್ರಪಾಲ ಮತ್ತು ಪ್ರಿಯಾಂಕ ಕಾಮತ ಅತಿಥಿಗಳಿಂದ ಗೌರವಿಸಲ್ಪಟ್ಟರು.
ರೋಟರಿ ಥೀಮ್ ಉದ್ಘಾಟಿಸಿದ ಸಹಾಯಕ ಪ್ರಾಂತಪಾಲ ಮಹೇಶ ಕಲ್ಯಾಣಪುರ ರೋಟರಿ ವರ್ಷದಲ್ಲಿ ಹಮ್ಮಿಕೊಳ್ಳಬಹುದಾದ ಕಾರ್ಯಯೋಜನೆಗಳನ್ನು ಪ್ರಸ್ತುತ ಪಡಿಸಿದರು. ನಿರ್ಗಮಿತ ಅಧ್ಯಕ್ಷ ಅತುಲ್ ಕಾಮತ ಸ್ವಾಗತಿಸಿದರು ಮತ್ತು ತಮ್ಮ ಅವಧಿಯಲ್ಲಿ ಕಾರ್ಯಗತಗೊಂಡ ವಿಶೇಷ ಯೋಜನೆಗಳಿಗೆ ಸಹಕರಿಸಿದ ಸದಸ್ಯರನ್ನು, ದೇಣಿಗೆ ನೀಡಿದ ಗಣ್ಯರನ್ನು ಸ್ಮರಿಸುತ್ತಾ ಸಾಮಾಜಿಕ ಅನ್ಯೋನ್ಯತೆಯನ್ನು ನೆನೆದು ಭಾವುಕರಾದರು.
ಶ್ರೀಯುತರಾದ ಜಗದೀಶ್ ಸುರೇಶ್ ಭಟ್, ಕಾರ್ತಿಕ್ ಗಣಪತಿ ಹೆಗಡೆ, ಸಿದ್ಧಾಂತ ಚರ್ತುವೇದಿ, ಮಂಜುನಾಥ ಅಂಬಿಗ ಮತ್ತು ಮಯೂರ ವೈಕುಂಠ ಶಾನಭಾಗ ಅವರನ್ನು ನೂತನ ಸದಸ್ಯರಾಗಿ ಪತಿಜ್ಞಾವಿಧಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಮಾರಂಭದಲ್ಲಿ ಉಪಸ್ಥಿತರಿದ್ದ ಕ್ಲಬ್ಬಿನ ವೈದ್ಯ ಸದಸ್ಯರಾದ ಡಾ. ನಿತಿಶ್ ಶಾನಭಾಗ, ಡಾ. ನಮೃತಾ ಶಾನಭಾಗ, ಡಾ. ವಾಗೀಶ್ ಭಟ್, ಡಾ. ಶ್ರೀದೇವಿ ಭಟ್, ಡಾ. ಚೈತ್ರಾ ನಾಯ್ಕ, ಡಾ. ನವೀನ ಬೆಳವಾಡಿ, ಡಾ. ಯೋಗೀಶ್ ಕಾಮತ ಹಾಗು ಬರಹಗಾರ ಎನ್. ಆರ್. ಗಜು ಅವರನ್ನು ವಿಶೇಷವಾಗಿ ಅಭಿನಂದಿಸಲಾಯಿತು.
ಕಾರ್ಯಕ್ರಮದ ಪ್ರಾರಂಭದಲ್ಲಿ ಕವಿತಾ ಶೇಟ್ ಪ್ರಾರ್ಥಿಸಿದರು. ಗಣೇಶ್ ನಾಯ್ಕ ಕಂಠಪಟ್ಟಿ ಧಾರಣೆಗೈದರು. ನಿರ್ಗಮಿತ ಕಾರ್ಯದರ್ಶಿ ಪವನ ಶೆಟ್ಟಿ ವಾರ್ಷಿಕ ವರದಿ ವಾಚಿಸಿದರು. ಸಂದೀಪ ನಾಯಕ ಮತ್ತು ವಿಶಾಲ್ ಶೇಟ್ ಅತಿಥಿಗಳನ್ನು ಪರಿಚಯಿಸಿದರು. ಜೈವಿಠ್ಠಲ ಕುಬಾಲ ಮತ್ತು ಡಾ. ಶ್ರೀದೇವಿ ಭಟ್ ನಿರೂಪಿಸಿದರು. ಕಾರ್ಯದರ್ಶಿ ನಿಖಿಲ್ ಕ್ಷೇತ್ರಪಾಲ ವಂದನೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
