ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ವಿಜ್ಞಾನ ಶಿಕ್ಷಕರಾದ ಶ್ರೀ ಚಿದಂಬರ ಎಸ್ ಕೆ ರವರು ಉದ್ಘಾಟಿಸಿ ಮಾತನಾಡುತ್ತಾ ಸರ್ ಸಿವಿ ರಾಮನ್ ರವರ ರಾಮನ್ ಎಫೆಕ್ಟ್ ಸಂಶೋಧನೆಯ ಜ್ಞಾಪಕಾರ್ಥವಾಗಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು ಸರ್ ಸಿವಿ ರಾಮನ್ ರವರು ವಿಜ್ಞಾನ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ ಹಾಗೂ ಏಷ್ಯಾದ ಮೊದಲಿಗರಾಗಿದ್ದಾರೆ ಎಂದರು. ಥಾಮಸ್ ಅಲ್ವಾ ಎಡಿಸನ್ ಮತ್ತು ಆಲ್ಬರ್ಟ್ ಐನ್ಸ್ಟೀನ್ ರವರ ಬಾಲ್ಯದ ಸವಾಲುಗಳ ಬಗ್ಗೆ ವಿವರಿಸಿ ಎಲ್ಲ ಸವಾಲುಗಳನ್ನು ಮೀರಿ ಜಗತ್ತಿನ ಪ್ರಸಿದ್ಧ ವಿಜ್ಞಾನಿಗಳಾಗಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಪ್ರಕಾಶ್ ಕೆ ರವರು ಮಾತನಾಡಿ ವಿಜ್ಞಾನ ಕ್ಷೇತ್ರಕ್ಕೆ ಭಾರತವು ಪ್ರಾಚೀನ ಕಾಲದಲ್ಲೇ ಅಮೋಘ ಕೊಡುಗೆ ನೀಡಿರುವುದು ಹೆಮ್ಮೆಯ ವಿಷಯವಾಗಿದೆ. ಭಾರತೀಯ ವಿಜ್ಞಾನಿಗಳು ವಿಶ್ವಮಾನ್ಯರಾಗಿದ್ದಾರೆ, ವಿಜ್ಞಾನ ಕ್ಷೇತ್ರಕ್ಕೆ ಸರ್ ಸಿ ವಿ ರಾಮನ್ ರವರ ಕೊಡುಗೆ ತುಂಬಾ ಮಹತ್ವಪೂರ್ಣದ್ದಾಗಿದೆ ಎಂದರು. ವಿಜ್ಞಾನ ಸತ್ಯದ ತಳಹದಿಯ ಮೇಲೆ ನಿಂತಿದ್ದು ಪ್ರತಿಯೊಂದನ್ನು ವೈಜ್ಞಾನಿಕವಾಗಿ ವಿಮರ್ಶಿಸಿ, ವಿಶ್ಲೇಷಿಸಿ ಒಪ್ಪಿಕೊಳ್ಳುತ್ತದೆ. ವಿಜ್ಞಾನದಲ್ಲಿ ಊಹೆಗೆ ಅವಕಾಶವಿಲ್ಲ. ವಿಜ್ಞಾನ ಮತ್ತು ಸತ್ಯ ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಎಂದರು. ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳುವಂತೆ ಕರೆ ನೀಡುತ್ತಾ ಅನ್ವೇಷಣೆಯಲ್ಲಿ ತೊಡಗಿಸಿಕೊಳ್ಳುವ ಗುಣ ಇರುವವರು ವಿಜ್ಞಾನಿಗಳಾಗುತ್ತಾರೆ ಎಂದರು. ಜಗತ್ಪ್ರಸಿದ್ಧ ವಿಜ್ಞಾನಿಗಳಾದ ಐಸಾಕ್ ನ್ಯೂಟನ್, ಮೇರಿ ಕ್ಯೂರಿ, ಗ್ರಹಾಂಬೆಲ್, ಮಾರ್ಕೊನಿ, ಆರ್ಕಿಮಿಡೀಸ್ ಮುಂತಾದವರು ಶ್ರೇಷ್ಠ ವಿಜ್ಞಾನಿಗಳಾಗಲು ಕಾರಣ ಅವರಲ್ಲಿದ್ದ ಅತೀವ ಅನ್ವೇಷಣಾ ಮನೋಭಾವವೇ ಆಗಿದೆ, ತಮ್ಮ ಅನ್ವೇಷಣೆಗಳ ಮೂಲಕ ವಿಜ್ಞಾನಿಗಳು ಇಡೀ ಜಗತ್ತಿಗೆ ಬೆಳಕಾಗಿದ್ದಾರೆ ಎಂದರು. ವಿಜ್ಞಾನ ಮತ್ತು ತಂತ್ರಜ್ಞಾನಗಳು ಜನರ ಜೀವನವನ್ನು ಸರಳ ಹಾಗೂ ಸುಂದರಗೊಳಿಸಿವೆ ಎಂದು ಬಣ್ಣಿಸಿದರು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ವಿಜ್ಞಾನ ನಾಟಕ ಪ್ರದರ್ಶಿಸಿದರು. ವಿದ್ಯಾರ್ಥಿಗಳು ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿ ಗಮನ ಸೆಳೆದರು. ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ವೀಕ್ಷಿಸಿದರು.
ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಶ್ರಾವ್ಯ ಯು ವಿ ನಿರೂಪಿಸಿ, …. ವಂದಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಆಸಿಫ್, ಮಂಜು, ನಾಗೇಂದ್ರ , ದಿನೇಶ್ ಆಚಾರಿ, ದೊಡ್ಡಯ್ಯ, ತ್ರಿವೇಣಿ, ಹರಿಣಾಕ್ಷಿ, ಗಾನವಿ, ಮೀನಾ, ಕವಿತಾ ಹಾಜರಿದ್ದರು.
