ಸಿರುಗುಪ್ಪ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಾಳೆ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ತೆಕ್ಕಲಕೋಟೆ ಪಟ್ಟಣದ ಮಡಿವಾಳ ಸಂಘದ ಸಂಪೂರ್ಣ ಬೆಂಬಲವನ್ನು ಸೂಚಿಸುವ ಮೂಲಕ ನಾವು ಸಹ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದೇವೆ ಎಂದು ತೆಕ್ಕಲಕೋಟೆ ಮಡಿವಾಳರ ಯುವಕರ ಸಂಘದ ಅಧ್ಯಕ್ಷ ಶರಣು ಮಡಿವಾಳ ಹೇಳಿದರು.
ತೆಕ್ಕಲಕೋಟೆಯಲ್ಲಿ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ಮಡಿವಾಳ ಸಮಾಜಕ್ಕೆ ಎಸ್ಸಿ ಮೀಸಲಾತಿ ನೀಡಬೇಕು. ನಮ್ಮ ಸಮಾಜ ರಾಜಕೀಯ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಬೆಳೆಯಲು ಅನುಕೂಲ ಕಲ್ಪಿಸಬೇಕೆಂದು ಹಲವಾರು ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದೇವೆ ಆದರೂ ಇಲ್ಲಿಯವರೆಗೆ ಸ್ಪಂದನೆ ಸಿಕ್ಕಿಲ್ಲ. ಚಿತ್ರದುರ್ಗ ಶ್ರೀ ಮಾಚಿದೇವ ಸಂಸ್ಥಾನಮಠದ ಜಗದ್ಗುರು ಡಾ.ಬಸವ ಮಾಚಿದೇವ ಸ್ವಾಮೀಜಿ ಹಾಗೂ ಮೂಡಬಿದ್ರೆ ಶ್ರೀಕ್ಷೇತ್ರ ಕರಿಂಜೆ ಶ್ರೀ ಮುಕ್ತಾನಂದ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟಕ್ಕೆ ಕರೆ ನೀಡಲಾಗಿದೆ ಎಂದರು.
ಕಳೆದ ಬಾರಿ ರಾಜ್ಯ ಮಡಿವಾಳರ ವಿವಿಧ ಸಂಘಗಳು ಸರ್ಕಾರಕ್ಕೆ ನಿರಂತರ ಒತ್ತಾಯ ಮಾಡಿದ್ದರಿಂದ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಮಾಜದ ಕುಲಶಾಸ್ತ್ರ ಅಧ್ಯಯನ ಮತ್ತು ಸಂಶೋಧನೆ ಮಾಡಿ ವರದಿ ನೀಡಲು ಮೈಸೂರು ವಿವಿ ಡಾ.ಅನ್ನಪೂರ್ಣ ಅವರನ್ನು ನೇಮಿಸಿದ್ದರು. 2009ರಲ್ಲಿ ಎರಡು ವರ್ಷಗಳ ಕಾಲ ರಾಜ್ಯದ 28 ಜಿಲ್ಲೆಗಳಲ್ಲಿ ಭೇಟಿ ಮಾಡಿ ಅಧ್ಯಯನ ನಡೆಸಿ ವರದಿ ನೀಡಿದ್ದಾರೆ. ಆದರೆ ಇದುವರೆಗೆ ಯಾವ ಸರ್ಕಾರವೂ ಆ ವರದಿಯನ್ನು ಪರಿಗಣಿಸಿಯೇ ಇಲ್ಲ. ಈ ಕುರಿತು ಸರ್ಕಾರ ಗಮನ ಹರಿಸಿ ಮಡಿವಾಳ ಸಮಾಜದ ಅಭಿವೃದ್ಧಿಗೆ ಮುಂದಾಗಬೇಕೆಂದು ಒತ್ತಾಯಿಸಿದರು.
ವರದಿ ಶೇಖರ್ ಹೆಚ್
ಸತ್ಯನಾರಾಯಣ
