ಹುಣಸೂರು
ಪೆಟ್ರೋಲ್ ಬಂಕ್ ಗೆ ನುಗ್ಗಿದ 6 ಮಂದಿ ಗ್ಯಾಂಗ್ ಸಿಬ್ಬಂದಿಗೆ ಬೆದರಿಕೆ ಹಾಕಿ ಹಣ ಕಸಿದು ಪರಾರಿಯಾದ ಘಟನೆ ಹುಣಸೂರು ತಾಲೂಕು ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಕರಿಮುದ್ದನಹಳ್ಳಿ ಗ್ರಾಮದ ಸ್ವಾಮಿ ಸರ್ವಿಸ್ ಸ್ಟೇಷನ್ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ನಲ್ಲಿ ಕೃತ್ಯ ನಡೆದಿದೆ.ಸಿಬ್ಬಂದಿಗಳಾದ ಅಜಯ್ ಕುಮಾರ್ ಹಾಗೂ ದಿನೇಶ್ ಎಂಬುವರಿಗೆ ಮೊಚ್ಚು,ಡ್ರಾಗರ್ ತೋರಿಸಿ ಬೆದರಿಕೆ ಹಾಕಿ 15,300/- ಕಸಿದು ಪರಾರಿಯಾಗಿದ್ದಾರೆ.ಈ ಸಂಬಂಧ ಅಜಯ್ ಕುಮಾರ್ ಹಾಗೂ ದಿನೇಶ್ ಎಂಬುವರು ಬಿಳಿಕರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಅಪರಿಚಿತ ವ್ಯಕ್ತಿ ನೀರು ತುಂಬಿಸುಕೊಳ್ಳುವ ನೆಪದಲ್ಲಿ ಪೆಟ್ರೋಲ್ ಬಂಕ್ ಕಚೇರಿಗೆ ಪ್ರವೇಶಿಸಿ ಕೃತ್ವೆಸಗಲು ಸಂಚು ರೂಪಿಸಿದ್ದಾನೆ.ನಂತರ ತನ್ನ ಸಹಚರರ ಜೊತೆ ಕಾರ್ ನಲ್ಲಿ ಮಾರಕಾಸ್ತ್ರಗಳ ಸಮೇತ ಬಂದು ಬೆದರಿಕೆ ಹಾಕಿ ಹಣ ಕಸಿದಿದ್ದಾನೆ.ಖದೀಮರ ಕಪಿಮುಷ್ಠಿಯಿಂದ ಬಿಡಿಸಿಕೊಂಡ ಅಜಯ್ ಕುಮಾರ್ ಕೂಗಾಡುತ್ತಾ ಅಕ್ಕಪಕ್ಕದವರ ನೆರವು ಕೋರಿದ್ದಾರೆ.ಜನ ಬರುತ್ತಿದ್ದಂತೆಯೇ ಗ್ಯಾಂಗ್ ಮಾಯವಾಗಿದೆ.ತಪ್ಪಿಸಿಕೊಳ್ಳುವ ಆತುರದಲ್ಲಿ ಗ್ಯಾಂಗ್ ಒಂದು ಮೊಚ್ಚನ್ನ ಬಿಟ್ಟು ಹೋಗಿದ್ದಾರೆ.ಸ್ಥಳಕ್ಕೆ ಬಿಳಿಕೆರೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.ದರೋಡೆಕೋರರ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ…
