ಏಪ್ರಿಲ್-1 ಬಂತೆಂದರೆ ಸಾಕು ಮನಸ್ಸಿನಲ್ಲಿ ಅದೇನೋ ಪುಳಕ ಕಚಗುಳಿ ಇಟ್ಟ ಅನುಭವ. ʻʻಅನುಭವವು ಸವಿಯಲ್ಲ ಅದರ ನೆನಪೆ ಸವಿʼʼ ಎಂಬ ಕವಿವಾಣಿ ಬಿಸಿಲ್ಗುದುರೆಯಂತೆ ಮನದಲ್ಲಿ ಮೂಡಿ ಮಾಯವಾದಾಗ ನೆನಪುಗಳು ಕಣ್ಣಮುಂದೆ ಬಂದು ತುಟಿಯಲ್ಲಿ ತೆಳುವಾದ ನಗುವಿನೊಂದಿಗೆ ಮೂಡಿ ಮಾಯವಾಗುವುದು. ಏಪ್ರಿಲ್ 1 ಎಂದರೆ ಸಾಮಾನ್ಯವಾಗಿ ಮೂರ್ಖರ ದಿನ ಎಂದೆ ಪ್ರಸಿದ್ಧಿ. ಈ ದಿನವನ್ನು ಮೊದಲು ಯಾವಾಗ ಆಚರಣೆ ಮಾಡಲಾಯಿತು ಎನ್ನುವುದು ಇನ್ನು ನಿಗೂಢವಾಗಿ ಉಳಿದಿದೆ. ಇತಿಹಾಸಕಾರರು ಇದು 1582ರ ಹಿಂದೆಯೆ ಶುರುವಾಗಿತ್ತು ಎನ್ನುತ್ತಾರೆ. ಇದು ಮೊದಲು ಹುಟ್ಟಿದ್ದು ಫ್ರಾನ್ಸ್ ದೇಶದಲ್ಲಿ ಬಳಿಕ ಯುರೋಪ್ ದೇಶಗಳಲ್ಲೂ ಆಚರಣೆಗೆ ಬಂತು. ನಂತರ ಹಲವು ದೇಶಗಳಿಗೆ ವ್ಯಾಪಿಸಿತು. ಏನೇ ಆಗಲಿ ಏಪ್ರಿಲ್ ಫಸ್ಟ್ ಎನ್ನುವುದು ಒಂದು ರೀತಿಯ ಮಜಾ ತೆಗೆದುಕೊಳ್ಳುವ ದಿನ. ನಮ್ಮ ಪ್ರೀತಿ ಪಾತ್ರರಲ್ಲಿ ಯಾರನ್ನಾದರೂ ಫೂಲ್ ಮಾಡದೆ ಇದ್ದರೆ ಆ ದಿನ ಸಮಾಧಾನ ಆಗುತ್ತಿರಲಿಲ್ಲ. ಹಾಗಾಗಿ ಈ ದಿನಕ್ಕಾಗಿ ಮಾರ್ಚ್ 30 ಮತ್ತು 31 ರಂದೆ ತಯಾರಿ ಯಾರಿಗೆ ಹೇಗೆ ಫೂಲ್ ಮಾಡುವುದು? ಎಂದು. ವಯಸ್ಸಿಗೆ ತಕ್ಕಂತೆ ಉಪಾಯಗಳು ನಮ್ಮ ಬುದ್ಧಿಮತ್ತೆಗೆ ಸೀಮಿತವಾಗಿತ್ತು. ಕಾಲಲ್ಲಿ ರಕ್ತ ಬರ್ತಾ ಇದೆ, ನಿನ್ನ ಬಟ್ಟೆ ಅರಿದಿದೆ, ತಲೆಯಲ್ಲಿ ಕಾಗೆ ಹಿಕ್ಕೆ ಹಾಕಿದೆ, ಪ್ಲಾಸ್ಟಿಕ್ ಹಾವು ತೋರಿಸುವುದು, ಸತ್ತ ಜಿರಳೆ ಬಿಸಾಡುವುದು, ಸಿಹಿ ತಿಂಡಿಗೆ ಉಪ್ಪು ಮಿಕ್ಸ್ ಮಾಡುವುದು, ಜೂಸ್ ತಯಾರಿಸುವಾಗ ಉಪ್ಪು ಬೆರೆಸುವುದು. ಹೀಗೆ ಒಂದಲ್ಲ ಒಂದು ಉಪಾಯಗಳು ಕಣ್ಣೆದುರು ಬಂದು ಅದನ್ನು ಪ್ರಯೋಗಿಸಲು ತವಕಿಸುತ್ತಿದ್ದೆವು.
ಒಮ್ಮೊಮ್ಮೆ ಫೂಲ್ ಮಾಡಲು ಹೋಗಿ ನಾವೇ ಫೂಲ್ ಆಗುವುದಿದೆ. ನಾನು ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತದ್ದ ಸಂದರ್ಭದಲ್ಲಿ ಒಮ್ಮೆ ನಾನು ಚಹಾಕ್ಕೆ ಆರ್ಡರ್ ಮಾಡಿದ್ದೆ. ಮಾಣಿ ಚಹಾವನ್ನು ಮೇಜಿನ ಮೇಲೆ ಇಟ್ಟು ಹೋಗಿದ್ದ. ನಾಲ್ವರು ಟೀಚರ್ಸ್ ಅವರ ತರಗತಿ ಮುಗಿಸಿ ಬಂದರು. ನಾನು ಚಹಾಕ್ಕೆ ಸ್ವಲ್ಪ ಉಪ್ಪು ಬೆರೆಸಿ ಕುಡಿಯಲು ಕೊಟ್ಟೆ . ಆದರೆ ಚಹ ಕುಡಿದವರ ಬಾಯಿಂದ ಯಾವ ಮಾತು ಬರಲಿಲ್ಲ. ಆಶ್ಚರ್ಯವಾಗಿ ಕೇಳಿದೆ ಚಹಾ ಹೇಗಿದೆ ?"ಅಷ್ಟು ಟೇಸ್ಟ್ ಇಲ್ಲ ಅಂತ ಹೇಳಿದ್ರು" ನನಗೆ ಒಳಗೊಳಗೆ ನಗು. ನನ್ನ ಮೋರೆ ನೋಡಿ ಸಂಶಯದಿಂದ ದಿಟ್ಟಿಸಿದರು ಆದರೆ ಯಾರು ಪ್ರಶ್ನಿಸಲಿಲ್ಲ. ಅವರ ಮೌನ ನನಗೆ ನುಂಗಲಾಗದ ತುತ್ತಾಯಿತು. ಕೊನೆಗೆ ನಾನೆ ಹೇಳಿದೆ, ಸುದೈವ ಸಿಟ್ಟಾಗಲಿಲ್ಲ ಬದಲಿಗೆ ಅವರು ನಗುತ್ತ ಇಲ್ಲಿ ʻʻನೀವೇ ಫೂಲ್ ಆದ್ರಿʼʼ ಎಂದಾಗ ಮುಜುಗರವಾಯಿತು..
ಜನಪದರ ಬದುಕನ್ನು ಗಮನಿಸಿದರೆ ಎಪ್ರಿಲ್ 1 ಮಾತ್ರ ಮೂರ್ಖರ ದಿನ ಆಗಿರದೆ, ಸಂದರ್ಭ ಸಿಕ್ಕಾಗಲೆಲ್ಲಾ ಅತ್ತಿಗೆ – ಮೈದುನರ , ಬಾವ ನಾದಿನಿಯರ ಮಧ್ಯೆ ಕಾಲೆಳೆಯುವಿಕೆ ನಡೆಯುತ್ತಿತ್ತು.. ಹಿಂದೆಲ್ಲ ಮದುವೆಗಳಲ್ಲಿ ಮದುಮಗಳನ್ನು ಅಡಗಿಸುವುದು, ʻಕುರುಂಟುʼ ತಪ್ಪಿಸಿಕೊಳ್ಳದಂತೆ ಎಚ್ಚರವಹಿಸುವುದು, ಮದುಮಗನಿಗೆ ಮೂಂಡಿಗೆಡ್ಡೆಯನ್ನು ಬೊಂಡದಂತೆ ಕೆತ್ತಿ ಕುಡಿಯಲು ಕೊಡುವುದು, ಹೆಂಗಸರು ವಿಶೇಷವಾಗಿ ತಯಾರಿಸಿದ ಚಟ್ನಿಯ ಹೆಸರು ಹೇಳುವಂತೆ ಮದುಮಗನನ್ನು ಸತಾಯಿಸುವುದು, ಮೊದಲಾದವುಗಳು ಮೂರ್ಖರನ್ನಾಗಿಸುವುದರ ಜೊತೆ ನಗುವಿನ ಅಲೆಯನ್ನು ಮೂಡಿಸುತ್ತಿತ್ತು. ಹಾಗೆಯೆ ಮಾವಿನ ಹಣ್ಣಿನ ಕಾಲದಲ್ಲಿ ಹಣ್ಣಿನ ರಸವನ್ನು ಚೆನ್ನಾಗಿ ಸವಿದು ಗೊರಟು ಬಿಸಾಡುವ ಮೊದಲು ನಮ್ಮ ಅಕ್ಕ ಪಕ್ಕದ ಮಕ್ಕಳು ಹಿರಿಯರು ಕಿರಿಯರು ಎನ್ನದೆ ಅವರನ್ನು ಕರೆದು ʻಕೊರಂಟುʼ ಎಂದು ಲೇವಡಿ ಮಾಡುತ್ತಾ ಅವರನ್ನು ಮೂರ್ಖರಾಗಿಸಿ ನಗುತ್ತಾ ಬಿಸಾಡುತ್ತಿದ್ದ; ಆ ನೆನಪು ಇಂದಿಗೂ ಅಚ್ಚಳಿಯದೆ ಮನಃ ಪಟಲದಲ್ಲಿ ಸ್ಥಾಯಿಯಾಗಿದೆ. ಇದರ ಸಂತಸವು ಕೂಡ ಅನನ್ಯವಾದದ್ದು. ಮನುಷ್ಯರು ಮಾತ್ರ ಮೂರ್ಖರನ್ನಾಗಿಸುವುದಲ್ಲ. ಪ್ರಕೃತಿಯಲ್ಲಿ ಜೀವಿಗಳಲ್ಲಿಯೂ ಅದನ್ನು ಕಾಣಬಹುದು. ಭಕ್ಷಕ ಪ್ರಾಣಿಗಳಿಂದ ತಪ್ಪಿಸಿಕೊಳ್ಳಲು ಅನೇಕ ಜೀವಿಗಳು ಪರಿಸರದ ಬಣ್ಣವನ್ನೆ ಹೋಲುವ ಬಣ್ಣವನ್ನು, ರೂಪವನ್ನು ಹೊಂದಿಸಿಕೊಂಡು ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತವೆ. ಅಕ್ಟೋಪಸ್ಗಿಂತ ಉತ್ತಮ ಉದಾಹರಣೆ ಬೇರೊಂದಿಲ್ಲ. ಬಲಿಪ್ರಾಣಿಗಾಗಿ ಕಾಯುವ ಮೊಸಳೆಗಳು ನದಿ ತೀರದಲ್ಲಿ ಮೌನವಾಗಿ ಸಜ್ಜನರಂತೆ ವರ್ತಿಸಿ, ಸಮಯ ಸಂದರ್ಭ ನೋಡಿ ಪ್ರಾಣಿಗಳ ಮೇಲೆ ಆಕ್ರಮಣ ನಡೆಸುವ ಪರಿ ಒಂದರ್ಥದಲ್ಲಿ ಮೂರ್ಖರಾಗಿಸುವ ಪ್ರಯತ್ನ ಹೌದಲ್ಲವೇ ? ಪ್ರಕೃತಿಯಲ್ಲಿ ಇದೆಲ್ಲ ಸಹಜ ಹಾಗೂ ಸಾಧುವೂ ಹೌದು.
ಆಧುನಿಕ ಜಗತ್ತಿನಲ್ಲಿ ವಿದ್ಯಾವಂತ ಜನರನ್ನು ಮೂರ್ಖರಾಗಿಸುವುದು ನಿರಂತರವಾಗಿ ಕಾಣುತ್ತೇವೆ. ದಿನ ಬೆಳಗಾದರೆ ಪತ್ರಿಕೆಯ ಮುಖಪುಟದಲ್ಲಿ ಅ ʻಸ್ಕೀಮುಗಳುʼ ಈ ʻಸ್ಕೀಮುಗಳುʼ ವಂಚಿಸಿವೆ ಎಂದು ಬರೆದರೆ ಅದರ ಮುಂದಿನ ಪುಟದಲ್ಲಿ ಒಂದು ರುಪಾಯಿ ನೀಡಿ ವಾಷಿಂಗ್ಮೆಶಿನ್, ಟಿವಿ ಮನೆಗೆ ಕೊಂಡುಹೋಗಿ ಎಂಬ ಜಾಹಿರಾತುಗಳು, ಜನರನ್ನು ಮೊದಲ ಪುಟದ ʻಎಚ್ಚರಿಕೆಯನ್ನುʼ ಕಡಿಮೆ ಬೆಲೆಗೆ ಸಿಗುವ ವಸ್ತುಗಳು ಮರೆಸುತ್ತವೆ. ಆಧುನಿಕ ಬದುಕಿನ ವಿಶ್ವಕೋಶದಂತೆ ಬಿಂಬಿಸಲ್ಪಡುವ ವಾಟ್ಸಪ್ ಫೇಸ್ಬುಕ್ ಜನರನ್ನು ವಂಚಿಸುವ ಪರಿ ಹೇಳತೀರದು. ತಮ್ಮ ಅಭಿರುಚಿಗೆ ತಕ್ಕಂತೆ ಮಾಹಿತಿಯನ್ನು ತಿರುಚಿ ಸಂಪೂರ್ಣ ಸತ್ಯವೆಂಬಂತೆ ಬಿಂಬಿಸುತ್ತಾರೆ. ಇಷ್ಟಕ್ಕೇ ನಿಂತರೆ ಪರವಾಗಿಲ್ಲಬಿಡಿ, ಫೆಸ್ಬುಕ್ ಗಳಲ್ಲಿ ಪರಿಚಯ ಮಾಡಿಕೊಂಡು ಅವರ ಅಭಿರುಚಿಗೆ ತಕ್ಕಂತೆ ಮೆಸ್ಸೆಜ್ ಫಾರ್ವರ್ಡ ಮಾಡಿ ದಾರಿತಪ್ಪಿಸುವುದು, ಹಾಗೂ ಸುಲಭದ ಮಿಕಗಳನ್ನು ಬಲೆಗೆ ಬೀಳಿಸುವ ವ್ಯಕ್ತಿಗಳಿಗೇನು ಕೊರತೆ ಇಲ್ಲ . ಇಂತಹಾ ವಂಚನೆಗಳಿಗೆ ಒಳಗಾಗಿ ಸಂಸಾರ ಹಾಳುಮಾಡಿಕೊಂಡವರೇನು ಕಮ್ಮಿಯಿಲ್ಲ. ಇಂಥವರು ಕೇವಲ ಕಲಹಮಾತ್ರ ತಂದೊಡ್ಡುವುವರಲ್ಲ, ಸಾವಿನ ತುದಿ ತಲುಪಿಸುವವರು ಇದ್ದಾರೆ.
ದೇವರ ಹೆಸರಲ್ಲಿ ನಮ್ಮನ್ನು ಯಾಮಾರಿಸುವವರು ತುಂಬಾ ಜನ ಇರುತ್ತಾರೆ. ಅಗತ್ಯ ಇದೆಯೋ ಇಲ್ಲವೊ ದೇವರಿಗೆ ಪೂಜೆ ಹೋಮ ಹವನ ಮಾಡಿಸುವಂತೆ ನಾನಾ ತಂತ್ರಗಳನ್ನು ಹೆಣೆಯುವ ಜ್ಯೋತೀಷಿಗಳು, ದಿನ ಬೆಳಗಾದರೆ ದೂರದರ್ಶನದಲ್ಲಿ ನಮ್ಮನ್ನು ಮೂರ್ಖರಾಗಿಸಲು ಬಲೆ ಹೆಣೆದು ಕಾಯುತ್ತಿರುವುದು; ಇದೆಲ್ಲವೂ ನಮ್ಮ ಕಣ್ಣಿಗೆ ಕಾಣದೇ ಇರುವುದು ಮೂರ್ಖತನಕ್ಕೆ ಸಾಕ್ಷಿಯಾಗಿದೆ. ಹಬ್ಬ- ಹರಿದಿನ, ಹೊಸವರ್ಷ, ರಾಷ್ಟ್ರೀಯ ಹಬ್ಬಗಳ ಆಚರಣೆಯ ದಿನಗಳಲ್ಲಿ ಆಫರ್ ಗಳು ಎಲ್ಲೆಲ್ಲೂ ತಲೆಯೆತ್ತಿರುತ್ತವೆ. ರಿಯಾಯಿತಿ ದರದಲ್ಲಿ ಸಿಗುವ ಉಡುಪುಗಳು ಹಾಗೂ ವಸ್ತುಗಳು ಜನರನ್ನು ಆಕರ್ಷಿಸುತ್ತವೆ. ಮಾಲೀಕರು ಯಾವುದೇ ಲಾಭವಿಲ್ಲದೆ ಗ್ರಾಹಕರಿಗೆ ರಿಯಾಯಿತಿ ಬೆಲೆಗೆ ಕೊಡುವುದಿಲ್ಲ ಎಂಬುದು ಗೊತ್ತಿದ್ದರೂ, ಸುಶಿಕ್ಷಿತ ವರ್ಗ ಅದರ ಹಿಂದೆ ಓಡುವುದು ನೋಡಿದರೆ ಮೂರ್ಖರು ಯಾರು ಎಂಬುದೇ ಗೊತ್ತಾಗುವುದಿಲ್ಲ. 50 ರೂಪಾಯಿಗೆ ಒಂದು ಉತ್ತಮ ಕರವಸ್ತ್ರ ಸಿಗದ ಕಾಲದಲ್ಲಿ l00 ರೂಪಾಯಿಗೆ ಉತ್ತಮ ಗುಣಮಟ್ಟದ ಎರಡು ಸೀರೆ ಸಿಗುವುದು ಹೇಗೆ ಸಾಧ್ಯ ? ಇಷ್ಟಕ್ಕೆ ಸುಮ್ಮನಾದರೆ ಹೋಗಲಿ ಅದನ್ನು ಧರಿಸಿ ಬಂದವರು ಆತ್ಮೀಯರೊಂದಿಗೆ ಇದು 50 ರೂಪಾಯಿಯ ಸೀರೆ ಎಂದು ಟಾಂಟಾಂ ಹೊಡೆಯುವುದು. ಹೌದಾ ! 50 ರೂಪಾಯಿಯ ಸೀರೆಯಾ ? ಗೊತ್ತಗುವುದೇ ಇಲ್ಲ ಎಂದು ಹೇಳಿ ಮುಸಿ ಮುಸಿ ನಗುತ್ತಾ ಮತ್ತೊಮ್ಮೆ ಅವರನ್ನು ಮೂರ್ಖರಾಗಿಸುವವರಿದ್ದಾರೆ. ಇನ್ನು ಸೆಲ್ಫಿಗಳ ವಿಚಾರಕ್ಕೆ ಬಂದರೆ ಇನ್ನಷ್ಟೂ ನಗು ತರಿಸುತ್ತದೆ. ಕ್ಯಾಮರವನ್ನು ಬ್ಯೂಟಿ ಮೋಡ್ ಗೆ ಹಾಕಿ ಪೊಟೋ ತೆಗೆದು ಸ್ಟೇಟಸ್ ಹಾಕಿ ನಾನು ತುಂಬಾ ಚಂದ ಇದ್ದೇನೆ ಎಂದು ಬೀಗುವವರ ಸಂಖ್ಯೆಗೇನು ಕಮ್ಮಿ ಇಲ್ಲ. ಕೆಲವೊಮ್ಮೆ ಹುಡುಗಿ ನೋಡುವ ಸಂದರ್ಭದಲ್ಲಿ ಏನಾದರೂ ಸೆಲ್ಫಿ ನೋಡಿ ಹೋದರೆ ಅಂತವರ ದೇವರೆ ರಕ್ಷಿಸಬೇಕು. ಕೆಲವೊಮ್ಮೆ ನಾವು ತೆಗೆದ ಛಾಯಾಚಿತ್ರ ನಾವು ಇದ್ದಂತೆ ಬಂದರೆ ಕ್ಯಾಮರ ಚೆನ್ನಾಗಿಲ್ಲ ಎಂದು ದೂರುವುದು ಇದೆ. ಒಟ್ಟಿನಲ್ಲಿ ಮುಖದಲ್ಲಿದ್ದ ನೆರಿಗೆ ಕಾಣದೆ ವರ್ಣ ಬೆಳ್ಳಗಿದ್ದರೆ ಏನೋ ನೆಮ್ಮದಿ.

ನಮ್ಮನ್ನು ದೊಡ್ಡ ಮೂರ್ಖರಾಗಿಸುವುದು ಕನ್ನಡಿ, ತಲೆ ಕೂದಲು,ಗಡ್ಡ ಮೀಸೆ ಬಿಳಿಯಾದರೆ ಅದನ್ನು ತೋರಿಸುವುದೇ ಕನ್ನಡಿ ಮರುಕ್ಷಣದಲ್ಲಿ ಕಪ್ಪು ಬಣ್ಣದ ಲೇಪ ಅದನ್ನು ಹಾಕಿದ ಕೂಡಲೇ ಒಂದತ್ತು ವರ್ಷ ಕಡಿಮೆಯಾಯಿತು ಅಂತ ಕನ್ನಡಿ ನೋಡಿದ ಮನಸ್ಸು ಪಿಸುಗುಟ್ಟುತ್ತದೆ. ನಾವು ಬಹಳ ಉತ್ಸಾಹಿಗಳಾಗುತ್ತೇವೆ. ಇದು ಒಂದು ರೀತಿಯ ಆರೋಗ್ಯಕರವಾದ ಮೂರ್ಖತನ ಎಂದು ಹೇಳಿದರು ತಪ್ಪಾಗದು.”ದೇಹಕ್ಕೆ ವಯಸ್ಸು ಮನಸಿಗಲ್ಲ, ತಿದ್ದಿ ತೀಡಲು ಕನ್ನಡಿ ಎದುರಿದ್ದರೆ ಸಾಕು, ಮುಪ್ಪು ನೀ ಓಡುವೆ ” ಎಂದು ಮನ ಗುನುಗಿತು. ಇತ್ತೀಚೆಗೆ ನಡೆದ ಒಂದು ಘಟನೆ ನೆನಪಾಯಿತು.. ಮಧ್ಯಮ ವಯಸ್ಸಿನ ಕೆಲವರು ಮದುವೆಯ ಕಾರ್ಯಕ್ರಮದಲ್ಲಿ ಜೊತೆಯಾಗಿ ಕುಳಿತ್ತಿದ್ದರು. ಅವರಲ್ಲಿ ಕೆಲವರು ಡೈ ಮಾಡಿ ಯುವಕರಂತೆ ಕಾಣುತ್ತಿದ್ದರು. ಇವರ ನಡುವೆ ಅವರದೆ ವಯಸ್ಸಿನ ವ್ಯಕ್ತಿಯೊಬ್ಬರು ಯಾವುದೇ ಕೃತಕ ಬಣ್ಣ ತಲೆ ಕೂದಲಿಗೆ ಹಚ್ಚದೆ ಕುಳಿತ್ತಿದ್ದರು. ಮದುಮಗಳು ಇವರೆಲ್ಲರ ಮಧ್ಯೆ ಬಂದು ಅವರ ಕಾಲಿಗೆ ನಮಸ್ಕರಿಸಿ ಹೋದಳು. ಇದನ್ನು ಕಂಡು ಎಲ್ಲರೂ ಮುಸಿಮುಸಿ ನಕ್ಕರು..
ಇದೆ ರೀತಿ ಘಟನೆ ನನ್ನ ಬದುಕಿನಲ್ಲಿಯೂ ಆಗಿದೆ ಬಸ್ ಸ್ಟಾಪ್ ನಲ್ಲಿ ನಾನು ತಂಗಿ ಮತ್ತು ಮಾವನ ಮಗಳು ಬಸ್ ಗಾಗಿ ಕಾಯುತ್ತಿದ್ದೆವು. ಅನತಿ ದೂರದಲ್ಲಿ ಡಾಮರ್ ರಸ್ತೆ, ಬೈಕ್ ನಲ್ಲಿ ಹೋಗುತ್ತಿದ್ದವರು ಬಸ್ ಸ್ಟಾಪ್ ಅತ್ತ ಕಣ್ಣು ಹಾಯಿಸಿದರು. ನೋಡಿದರೆ ನನಗೆ ತೀರಾ ಪರಿಚಯದ ಅಣ್ಣ ಕೂಡಲೆ ಕೈ ಬೀಸಿದೆ ಥಟ್ಟನೆ ಬೈಕ್ ನಿಂತಿತು, ನಡುರಸ್ತೆಯಲ್ಲಿಯೆ ಹೇಗಿದ್ದೀರ ಅಣ್ಣ? ದೊಡ್ಡಮ್ಮ,ಅತ್ತಿಗೆ, ಮಕ್ಕಳು ಹೇಗಿದ್ದಾರೆ ? ಹೀಗೆ ಒಂದೆರೆಡು ಮಾತನ್ನು ಆಡಿದೆ ಎಲ್ಲಾದಕ್ಕೂ ಉತ್ತರಿಸಿದರು. ನಂತರ ನಾನು ಬಸ್ ಸ್ಟಾಪ್ ಗೆ ಹೋದೆ ಮಾವನ ಮಗಳು ಕೇಳಿದಳು “ಅತ್ತಿಗೆ ಅವರು ಯಾರು ಗೊತ್ತಾ?” ಗೊತ್ತು, ನಾನು ಊಟಕ್ಕಿದ್ದ ಮನೆಯ ಅಣ್ಣ ಎಂದೇ ಅವಳು ಬಿದ್ದು ಬಿದ್ದು ನಕ್ಕಳು “ಅವರು ನಮ್ಮ ಊರಿನ ಪಕ್ಕದವರು ಎಂದಾಗ ನನಗಂತೂ ಆ ದಿನ ತುಂಬಾ ನಾಚಿಕೆಯಾಯಿತು”.
ಅನೇಕ ಜಾಹಿರಾತುದಾರರು ನಮ್ಮನ್ನು ದಾರಿ ತಪ್ಪಿಸುವ ಪರಿ ವಿಪರೀತ. ಬುದ್ದಿವಂತನಾಗಲು, ಉದ್ದವಾಗಲು, ಬಿಳಿಯಾಗಲು ಅದನ್ನು ಬಳಸಿ ಇದನ್ನು ಬಳಸಿ ಎಂದು ನಮ್ಮನ್ನು ಪ್ರಚೋದಿಸುವ ಸೆಲೆಬ್ರೆಟಿಗಳಿಗೆ ಏನೂ ಕಮ್ಮಿ ಇಲ್ಲ. ಪ್ರತಿ ತಂದೆ ತಾಯಿಗು ತಮ್ಮ ಮಕ್ಕಳು ಉದ್ದವಾಗಬೇಕು ಬುದ್ದಿವಂತರಾಗಬೇಕು ಎಂಬ ಆಸೆ ಇದ್ದೇ ಇರುತ್ತದೆ. ಹಾಗಾಗಿ ಎಳವೆಯಲ್ಲಿ ಅಂತಹಾ ಸಂಸ್ಕರಿಸಿದ ಆಹಾರಗಳನ್ನು ಮನೆಗೆ ತಂದು; ಮಕ್ಕಳಿಗೆ ಇಷ್ಟವಿಲ್ಲದಿದ್ದರೂ ಒತ್ತಾಯಪೂರ್ವಕವಾಗಿ ಕೊಟ್ಟು, ನಿರೀಕ್ಷೆ ಈಡೇರಲಿಲ್ಲ ಎಂದು ಕೊರಗುವವರ ಸಂಖ್ಯೆಗೇನು ಕೊರತೆಇಲ್ಲ. ಈ ಜಾಹೀರಾತುಗಳು ನಮ್ಮನ್ನು ಮೂರ್ಖರಾಗಿಸುತ್ತಿದೆ ಎಂದು ನಾವೇ ಅರ್ಥ ಮಾಡಿಕೊಳ್ಳಬೇಕು. ಮೈ ಉಜ್ಜುವ ಸಾಬೂನು, ಮುಖಕ್ಕೆ ಹಚ್ಚುವ ಕ್ರೀಮ್ ಬಿಳಿವರ್ಣ ತರುತ್ತದೆ. ಎಂದು ಆಧುನಿಕತೆಗೆ ಮೊರೆಹೋಗಿ ಹಠಮಾಡಿಕೊಂಡು ಕೊಳ್ಳುವವರು ಹಲವಾರು ಜನರಿದ್ದಾರೆ. ಅದನ್ನು ಲೇಪಿಸಿದಾಗ ಏನೋ ಹೊಳಪು ಕಂಡತೆ ಭಾಸವಾದರೂ ಬೆವರು ಹರಿದಾಗ ನಮ್ಮ ನೈಜ ಬಣ್ಣ ಮಾತ್ರ ಕದಲದೆ ಇರುವುದು ಗಮನಿಸಬಹುದು. ಬದುಕಿನ ಭಯವನ್ನೆ ಬಂಡವಾಳವಾಗಿಸಿಕೊಂಡ ಕೆಲವೊಂದು ಇನ್ಶುರೆನ್ಸ್ ಕಂಪನಿಗಳು ಜನರ ರಕ್ಷಣೆಗಾಗಿ ಹುಟ್ಟಿಬಂದ ಸಂಸ್ಥೆಗಳು ಎಂಬ ರೀತಿಯಲ್ಲಿ ಬಿಂಬಿಸಿ, ಮುಂದಿನ ಕೆಲವೇ ದಿನಗಳಲ್ಲಿ ಯಮ ನಮ್ಮ ಮುಂದೆ ಪ್ರತ್ಯಕ್ಷನಾಗುತ್ತಾನೆ ಎಂದು ಭ್ರಮೆಗೊಳಗಾಗುವಂತೆ ಮಾಡುವುದೂ ಇದೆ. ಇಷ್ಟಕ್ಕೇ ಸುಮ್ಮನಿದ್ದರೆ ಸರಿ ಅದನ್ನೂ ಮೀರಿ ದಿನಕ್ಕೆ ಕೇವಲ ಕೆಲವು ರೂಪಾಯಿ ಕಟ್ಟಿ ಕೋಟಿ ಕೋಟಿ ಸಂಪಾದಿಸಿ ಎಂದು ನಮ್ಮನ್ನು ಕೋಟ್ಯಾಧೀಶ್ವರರನ್ನಾಗಿಸುವವರು ಇದ್ದಾರೆ.
ಕೆಲವೊಮ್ಮೆ ಸಭೆ ಸಮಾರಂಭಗಳಲ್ಲಿ ಭಾಷಣ ಮಾಡುವಾಗ ನಮ್ಮ ಮಾತುಗಳನ್ನು ಆಲಿಸದಿದ್ದರು, ಸುಮ್ಮನೆ ಚಪ್ಪಾಳೆ ತಟ್ಟುವುದು ಇದರಿಂದ ಭಾಷಣಕಾರರು ಹಿಗ್ಗುವುದು. ಮೈಕ್ ನಲ್ಲಿ ಚಪ್ಪಾಳೆ ತಟ್ಟಿ ಎಂದು ಹೇಳಿ ಹೇಳಿ ಚಪ್ಪಾಳೆ ಗಿಟ್ಟಿಸಿಕೊಳ್ಳುವುದು. ಇದೆಲ್ಲವೂ ಬುದ್ಧಿವಂತರನ್ನು ಮೂರ್ಖರಾಗಿಸುವ ಪರಿ. ಇನ್ನು ಮುಖ್ಯವಾದ ಸಂಗತಿ ಎಂದರೆ ಗಂಡ ಹೆಂಡತಿಯರ ನಡುವಿನ ಪ್ರಸಂಗ. ಹೆಚ್ಚಾಗಿ ಗಂಡಸರು ಹೆಂಡತಿಯನ್ನು ಹೊಗಳಿ ತಮ್ಮೆಲ್ಲಾ ಕೆಲಸವನ್ನು ಮಾಡಿಸಿಕೊಳ್ಳುವವರು ಇದ್ದಾರೆ .. ಇದರಿಂದ ಹೆಂಡತಿ ಸಂಭ್ರಮ ಪಡುತ್ತಾ ಅಂದಿನ ದಿನವನ್ನು ಬಹಳ ಸಂತಸದಿಂದ ಕಳೆಯುತ್ತ, ಇನ್ನಷ್ಟು ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾಳೆ. ತನ್ನನ್ನು ಬಕ್ರ ಮಾಡುತ್ತಿದ್ದಾರೆ ಎನ್ನುವ ಅರಿವಿದ್ದರು; ಸಣ್ಣದಾದ ಸಂತಸದ ಅಲೆ ಅವಳ ಮನವ ಸಾವರಿಸಿಕೊಂಡು ಹೋಗುವುದರಲ್ಲಿ ಸಂಶಯವಿಲ್ಲ. ಇದರೆಡೆಯಲ್ಲಿ ಮಕ್ಕಳು ದೊಡ್ಡವರಾದಂತೆ ನಮ್ಮನ್ನು ಮೂರ್ಖರಾಗಿಸುವುದು ಸಹಜ ಅವರು ಏನೇ ಹೇಳಿದರು ನಾವು ನಂಬುತ್ತೇವೆ. ಮಕ್ಕಳು ಏನೋ ಸಾಧಿಸಿ ಅಪ್ಪ ಅಮ್ಮನವರನ್ನು ಫೂಲ್ ಮಾಡಿದೆವು ಎಂದು ಬೀಗುತ್ತಾರೆ. ಹೀಗೆ ಮೂರ್ಖರಾಗಿಸುವ ಜನರು ನಮ್ಮ ಸುತ್ತಮುತ್ತಲಿನಲ್ಲಿಯೆ ಇರುತ್ತಾರೆ. ಸಮಾಜದಲ್ಲಿ ಬದುಕುವ ನಾವೆಲ್ಲರೂ ಒಂದಲ್ಲೊಂದು ರೀತಿಯಲ್ಲಿ ಮೂರ್ಖರಾಗುತ್ತಾ ಮೂರ್ಖರಾಗಿಸುತ್ತ.. ಸಜ್ಜನರಂತೆ ವರ್ತಿಸುತ್ತೇವೆ. ಇದೆಲ್ಲದರ ನಡುವೆ ಎಪ್ರಿಲ್ 1 ರ ಮೂರ್ಖರ ದಿನದಂದು ಮೂರ್ಖರಾದರೂ ಚಿಂತೆ ಇಲ್ಲ ಆದರೆ ಜೀವನದಲ್ಲಿ ಎಂದೂ ಮೂರ್ಖರಾಗದಿರಿ ಎಂಬುದು ನನ್ನ ಆಶಯ.
✍🏻ವಿಮಲಾರುಣ ಪಡ್ಡoಬೈಲು,ಅಜ್ಜಾವರ,ಸುಳ್ಯ