ಡಾ. ರಾಮಕೃಷ್ಣ

ಮಾನವನ ಮನಸ್ಸುಗಳನ್ನು ಮೆಸೆದ ಮಹಾನ್ ಮಾನವತಾವಾದಿ ಮಹಾತ್ಮ ಬಸವೇಶ್ವರರು.
ಕಾಯಕವೇ ಕೈಲಾಸ ಎಂದು ಸಾರಿ ದುಡಿಮೆಗೆ ಮಹತ್ವ ನೀಡಿದರು. ಆ ಮೂಲಕ ದುಡಿಮೆಯ ಬಗ್ಗೆ ಇರುವ ಮೇಲು ಮತ್ತು ಕೀಳು ಭಾವನೆಗಳನ್ನು ತೊಡೆದು ಕಾರ್ಮಿಕರ ಘನತೆ ಮತ್ತು ಗೌರವವನ್ನು ಹೆಚ್ಚಿಸಿದರೊ. ಕೊಲ್ಲುವವನೇ ಮಾದಿಗ, ಹೊಲಸು ತಿನ್ನುವವನೇ ಹೊಲೆಯ ಎನ್ನುವುದರ ಮೂಲಕ ಆಹಾರಾಧಾರಿತ ಜಾತಿ ವ್ಯವಸ್ಥೆಯನ್ನು ಖಂಡಿಸಿದರು. ಲಿಂಗ ಮಧ್ಯ ಜಗತ್ತು ಸರ್ವಂ, ಎನ್ನುವ ವಿಚಾರದಲ್ಲಿ ಅಂಗದಲ್ಲಿ ಲಿಂಗ ಪೂಜೆ ಮಾಡಿದರೆ ಇಡೀ ಭೂಮಂಡಲ ಪೂಜಿಸಿದಂತೆ, ಚರಾಚರ ಜೀವರಾಶಿಗಳನ್ನು ಗೌರವಿಸಿದ್ದಂತೆ. ಆದ್ದರಿಂದಲೇ ಸಕಲ ಜೀವಿಗಳ ಲೇಸನ್ನು ಬಯಸಿದರು. ದೇಹವೇ ದೇಗುಲ, ಶಿರವೇ ಹೊನ್ನ ಕಳಸ… ಎನ್ನುವ ವಿಚಾರದಲ್ಲಿ ನೂರಾರು ದೇಗುಲಗಳನ್ನು ಸುತ್ತಾಡಿದರೆ ಮುಕ್ತಿ ಸಿಗುವುದಿಲ್ಲ. ನಮ್ಮ ನಿಜವಾದ ದೇಗುಲ ಇರುವ ದೇಹದಲ್ಲಿನ ಮನಸೆಂಬ ಗರ್ಭಗುಡಿಯಲ್ಲಿ ಸತ್ಯ ನುಡಿದರೆ ಆಚಾರ ಅನುಸರಿಸಿದರೆ
ಮುಕ್ತಿ ಸಿಗುವುದು ಎಂದರು. ಇದರಿಂದಲೇ ಆಚಾರವೇ ಸ್ವರ್ಗ, ಅನಾಚಾರವೇ ನರಕ, ಸತ್ಯ ನುಡುವುದೇ ಸ್ವರ್ಗ ಲೋಕ ಮಿತ್ಯ ನುಡಿಯುವುದೇ ಮೃತ್ಯು ಲೋಕ… ಎಂದರು. ಮಾನವನ ಸೂಕ್ಷ್ಮ ಭಾವನೆಗಳಿಗೆ ಗೌರವಿಸಬೇಕು ಎಂದು ಹೇಳಲು ನುಡಿದರೆ ಮುತ್ತಿನ ಹಾರದಂತಿರಬೇಕು,… ಲಿಂಗ ಮೆಚ್ಚಿ ಅಹುದಹುದೆನ್ನಬೇಕು ಎಂದರು. ಒಟ್ಟಾರೆಯಾಗಿ ಮಾನವ ದಾನವವಾಗಿರದೆ ಭೂಮಿ ಮೇಲೆ ಬದುಕುವ ತನಕ ಮನುಷ್ಯನಾಗಿ ಹೇಗೆ ಬಾಳಬೇಕು ಎಂಬ ವಿಚಾರವನ್ನು ಅರುಹಿಸಿದರು. ಭೋಗ ಸಂಸ್ಕೃತಿಯನ್ನು ತೊರೆದು ಯೋಗ ಸಂಸ್ಕೃತಿಯನ್ನು ಅನುಸರಿಸಲು, ಕದ್ದು ತಿನ್ನುವುದನ್ನು ಬಿಟ್ಟು ದುಡಿದು ತಿನ್ನಲು, ತೋರ್ಪಡಿಕೆಯನ್ನು ಬಿಟ್ಟು ನೈಜತೆ ಇಂದಿರಬೇಕು. ಹೀಗೆ ಲಿಂಗ, ಜಾತಿ, ವಿಚಾರ ಭೇದಗಳನ್ನು ತೊಡೆದು ಹಾಕಲು ಶ್ರಮಿಸಿದರು. ತಮ್ಮ ವಿಚಾರಗಳನ್ನು ಅನುಭವ ಮಂಟಪ ಎಂಬ ವಿಶ್ವದ ಪ್ರಥಮ ವಿಚಾರ ವೇದಿಕೆ ಮತ್ತು ಸಂಸತ್ತಿನಲ್ಲಿ ಮೊಳಗಿಸಿ ಬೆಳಗಿಸಿ ಹೊರ ತಂದರು. ಅವರ ವಿಚಾರದಂತೆ, ಹಾಕಿದ ಮಾನವನ ಅಡಿಪಾಯದಂತೆ ಅವರ ನಂತರದ ಅವರ ಅನುಯಾಯಿಗಳು ನಡೆದಿದ್ದರೆ ಭಾರತ ನಿಜ ಅರ್ಥದಲ್ಲಿ ವಿಶ್ವಗುರು ಆಗುತ್ತಿತ್ತು. ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳು ಈ ನಾಡಿನಲ್ಲಿ ನೆಲೆಗೊಳ್ಳುತ್ತಿರಲಿಲ್ಲ. ಇಂದು ನಡೆಯುತ್ತಿರುವ ಜಾತಿ ಮತ್ತು ಧರ್ಮ ಸಂಘರ್ಷ ಭಾರತದಲ್ಲಿ ಕಂಡುಬರುತ್ತಿರಲಿಲ್ಲ. ಅನಾಚಾರ, ಅತ್ಯಾಚಾರ , ಭ್ರಷ್ಟಾಚಾರ , ಪರಿಸರ ನಾಶ, ಜಲ , ವಾಯು ನಾಶ, ಮುಂತಾದ ಮಾನವೀಯ ಕೃತ್ಯಗಳು ಸಂಭವಿಸುತ್ತಿರಲಿಲ್ಲ. ಸತ್ಯಂ ಶಿವಂ ಸುಂದರಂ ಎಲ್ಲೆಡೆ ಕಂಡು ಬರುತ್ತಿತ್ತು. ಮಾನವ ಪ್ರೇಮ ಪತಾಕೆ ಹಾರಾಡುತ್ತಿತ್ತು. ಇಂಥ ಮಹಾತ್ಮರನ್ನು ಪಡೆದ ನಾಡು ಧನ್ಯತೆಯಿಂದ ಅವರನ್ನು ಸ್ಮರಿಸಬೇಕಿದೆ. ಅವರ ಜಯಂತಿ ನಿಮಿತ್ಯ ಅವರು ಹಾಕಿದ ಮಾನವ ಪ್ರೇಮದ ಮಾರ್ಗದಲ್ಲಿ ಮುಂದೆ ಸಾಗುವ ಸಂಕಲ್ಪ ಮಾಡಬೇಕಿದೆ. ಹಾಗೆ ಆಗಲು ಮಾನವನ ಮನಸ್ಸುಗಳಲ್ಲಿ ಮಹಾತ್ಮ ಬಸವೇಶ್ವರರು ವಿಚಾರಗಳನ್ನು ಮತ್ತೊಮ್ಮೆ ಸ್ಮರಿಸಲಿ ಎಂದು ಪ್ರಾರ್ಥಿಸುವೆ.
ಡಾ. ದಿವ್ಯಾ ಕೆ ವಾಡಿ ಮತ್ತು ಡಾ. ರಾಮಕೃಷ್ಣ ಬಿ ಸಹಾಯಕ ಪ್ರಾಧ್ಯಾಪಕರು ಇತಿಹಾಸ ವಿಭಾಗ ಮತ್ತು ಅರ್ಥಶಾಸ್ತ್ರ ವಿಭಾಗ,
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ
ಶ್ರೀಮತಿ. ಚಿನ್ನಮ್ಮ ಬಸಪ್ಪ ಪಾಟೀಲ್ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ ಚಿಂಚೋಳಿ. ತಾ. ಚಿಂಚೋಳಿ,
ಜಿ. ಕಲ್ಬುರ್ಗಿ
