ಕೆ.ಎ.ಎಸ್. ಅಧಿಕಾರಿಗಳು ಕಷ್ಟಪಟ್ಟು cutting edge ನಲ್ಲಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ವಿವಿಧ ಹಂತಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೂ ಕೇವಲ ಒಬ್ಬರಿಗೆ ಮಾತ್ರ ಸರ್ವೋತ್ತಮ ಸೇವಾ ರಾಜ್ಯ ಪ್ರಶಸ್ತಿ ಲಭಿಸಿದೆ. ಇದರರ್ಥ ಏನು?
ಕೆ.ಎ.ಎಸ್. ಅಧಿಕಾರಿಗಳು ಈ ಪ್ರಶಸ್ತಿಗೆ ನಾಮನಿರ್ದೇಶನ ಮಾಡುವವರು ಅತಿ ಕಡಿಮೆ. ಹಿರಿಯ ಮೇಲಾಧಿಕಾರಿಗಳೂ ಶಿಫಾರಸ್ಸು ಮಾಡಬಹುದು. ಅವರೂ ಮಾಡಲಾರರು.
ಕೆ.ಎ.ಎಸ್. ಅಧಿಕಾರಿಗಳ ಸಂಘವು ಸರ್ವೋತ್ತಮ ಸೇವೆ ಮಾಡುತ್ತಿರುವ ಕೆಲ ಅಧಿಕಾರಿಗಳನ್ನು ಗುರುತಿಸಿಯೂ ಶಿಫಾರಸ್ಸು ಮಾಡಬಹುದು. ಅದೂ ಇಲ್ಲವೆಂದರೆ ಹೇಗೆ? ಕೆ.ಎ.ಎಸ್. ಅಧಿಕಾರಿಗಳ ಸಂಘದ ಈಗಿನ ಅಧ್ಯಕ್ಷರು ಪ್ರಭಾವ ಬೀರುವಂತಹ ಅಧಿಕಾರಿಯಾಗಿದ್ದಾರೆ. ಅವರ ಗಮನಕ್ಕೂ ಇದು ಬರಲಿಲ್ಲವೇ?!
ಈ ಹಿಂದೆ ಒಟ್ಟಾರೆ 10 ಜನರಿಗೆ ಪ್ರಶಸ್ತಿ ನೀಡುತ್ತಿದ್ದರು. ಆಗ ಕನಿಷ್ಠ 3 ಕೆ.ಎ.ಎಸ್. ಅಧಿಕಾರಿಗಳು ಈ ಲಿಸ್ಟ್ನಲ್ಲಿರುತ್ತಿದ್ದರು.
ವರಪ್ರಸಾದ್ ರೆಡ್ಡಿ ಈ ಪ್ರಶಸ್ತಿ ಪಡೆದವರಲ್ಲಿ ಮೊದಲಿಗರು. ನಂತರ ನನಗೆ, ಅಕ್ರಂ ಪಾಷರವರಿಗೆ, ಡಾ ಬಿಎಸ್ಮಂಜುನಾಥ ಸ್ವಾಮಿರವರಿಗೆ ನಂತರ ಹಲವಾರು ಅಧಿಕಾರಿಗಳಿಗೆ ಲಭಿಸಿದೆ.
ಕನಿಷ್ಟ ಪಕ್ಷ ಐದಾರು ಮಂದಿಗಾದರೂ ಬೇಡವೇ?! ಅಂದರೆ ಕೆ.ಎ.ಎಸ್. ಅಧಿಕಾರಿಗಳಲ್ಲಿ ಇದಕ್ಕೆ ಅರ್ಹರಿರುವ ಪ್ರತಿಭಾವಂತರು ಯಾರೂ ಇಲ್ಲವೇ?!
ಪ್ರತಿಭಾವಂತರಿಗೆ ಕೆಲಸದಲ್ಲಿ ಇನ್ನೂ ಹೆಚ್ಚಿನ ಉತ್ತೇಜನಬೇಕೆಂದರೆ ಇಂತಹ ಪ್ರಶಸ್ತಿ ಸಹಾ ದೊರಕಬೇಕು.
ಅಂದ ಮಾತ್ರಕ್ಕೆ ಈಗ ಅಯ್ಕೆಯಾಗಿರುವ ಅಧಿಕಾರಿ ನೌಕರರು ಅರ್ಹರಲ್ಲವೆಂತಲ್ಲ. ಹಿರಿಯ ಅಧಿಕಾರಿಗಳ ಸಮಿತಿ ಆಯ್ಕೆ ಮಾಡಿರುವಾಗ, ಅವರೂ ಅರ್ಹರಿದ್ದಾರೆಂದು ಒಪ್ಪಬೇಕಾದ ವಿಷಯ.
ನಾನು ಈ ಹಿಂದೆ ಹಿರಿಯ ಅಧಿಕಾರಿಗಳನ್ನು ಈ ಬಗ್ಗೆ ವಿಚಾರಿಸಿದಾಗ ಕಂಡುಬಂದ ಅಂಶವೇನೆಂದರೆ, ಕೆ.ಎ.ಎಸ್. ಅಧಿಕಾರಿಗಳಿಂದ ಪ್ರಸ್ತಾವನೆಗಳು ಬರುವುದೇ ಕಡಿಮೆ. ಬಂದರೂ ಪ್ರಸ್ತಾವನೆಯು ನಿಗಧಿತ ನಮೂನೆಯಲ್ಲಿ ಕೋರಿರುವ ಎಲ್ಲ ಅಂಶಗಳಿಗೆ ಸರಿಯಾದ ಮಾಹಿತಿ ತುಂಬಿರುವುದಿಲ್ಲವೆಂಬುದು.
ಬಹಳಷ್ಟು ಕೆ.ಎ.ಎಸ್. ಅಧಿಕಾರಿಗಳು ಇಲಾಖಾ ಮುಖ್ಯಸ್ಥರಾಗಿದ್ದೀರಿ. ಇನ್ನೂ ಹಲವಾರು ಜನ ಬೋರ್ಡ್ ಕಾರ್ಪೊರೇಶನ್ ಗಳಲ್ಲಿ ಎಂಡಿ ಮತ್ತು ಹಿರಿಯ ಹುದ್ದೆಗಳಲ್ಲಿರುವುದನ್ನು ಗಮನಿಸಿರುವೆ. ನಾನು ಬಹಳ ಹತ್ತಿರದಿಂದ ಇಂತಹ ಹಲವಾರು ಕೆ.ಎ.ಎಸ್. ಅಧಿಕಾರಿಗಳು ಶ್ರಮವಹಿಸಿ ಇಲಾಖೆಯ ಸರ್ವತೋಮುಖ ಏಳ್ಗೆಗಾಗಿ ಶ್ರಮಿಸುತ್ತಿರುವುದನ್ನು ನೋಡಿದ್ದೇನೆ. ಆದರೆ ಇಂತಹ ಪ್ರಶಸ್ತಿಗೆ ಪ್ರಸ್ತಾವನೆಗಳು ಅತಿ ವಿರಳವಾಗಿ ಬರುತ್ತವೆ ಹಾಗಾಗಿ ಅತಿವಿರಳವಾಗಿ ಲಭಿಸುತ್ತಿವೆ ಎನ್ನಬಹುದು.
ಕೆಲ ಇಲಾಖೆಗಳಲ್ಲಿ ಕೇಡರ್ ಸಂಖ್ಯೆ 10-15 ಇರುವಂತಹ ಹಲವಾರು ಇಲಾಖಾ ನೌಕರರು ಜಿಲ್ಲಾ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರು ಅಧಿಕಾರಿಗಳು ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆಯಾಗುತ್ತಿದ್ದಾರೆಂದರೆ, ಕೆ.ಎ.ಎಸ್. ವೃಂದದ ಪ್ರಸ್ತಾವನೆಗಳು ಸಾಕಷ್ಟಿಲ್ಲ ಎಂದರ್ಥ.
ಕೆ.ಎ.ಎಸ್. ಅಧಿಕಾರಿಗಳ ಸಂಘವು ಈ ಬಗ್ಗೆ ಗಮನಹರಿಸಬೇಕು. ಇದು ಪ್ರಶಸ್ತಿಗೆ ಒತ್ತಾಯಿಸಬೇಕೆಂದು ನಾನು ಹೇಳುವುದಲ್ಲ. ಪ್ರಶಸ್ತಿಗೆ ಸಾಕಷ್ಟು ಸಂಖ್ಯೆಯ ಕೆ.ಎ.ಎಸ್ ಅಧಿಕಾರಿಗಳ ಪ್ರಸ್ತಾವನೆಗಳು ನಿಗಧಿತ ನಮೂನೆಯಲ್ಲಿ ಇಲಾಖಾ ಮುಖ್ಯಸ್ಥರ ಶಿಫಾರಸ್ಸಿನೊಂದಿಗೆ ಸಂಬಂಧಿತ ಪ್ರಾಧಿಕಾರಕ್ಕೆ ಸಲ್ಲಿಕೆಯಾಗಬೇಕು. ನಂತರ ಆಯ್ಕೆ ಸಮಿತಿಯವರ ಗಮನಕ್ಕೆ ತರುವ ವಿಚಾರ ಬರುತ್ತದೆ.
ಇದು ಅತ್ಯಂತ ನೋವಿನ ಸಂಗತಿ. ಈಗಲಾದರೂ ಕೆ.ಎ.ಎಸ್. ಅಧಿಕಾರಿಗಳು ಎಚ್ಚೆತ್ತುಕೊಂಡು ತಮ್ಮ ಸರ್ವೋತ್ತಮ ಸೇವೆಯನ್ನು ದಾಖಲಿಸಿ ಸರ್ಕಾರದ ಗಮನಕ್ಕೆ ತನ್ನಿರಿ. ಇದು ವರ್ಷಕ್ಕೊಮ್ಮೆ ಮಾತ್ರ ಅವಕಾಶವಿರುತ್ತದೆ. ಕಾಲ ಮಿಂಚಿಹೋಗಿದೆ. ಮುಂದೆ ಈ ಪ್ರಶಸ್ತಿಗೆ ಆಹ್ವಾನಿಸಿದಾಗಲಾದರೂ ತಮ್ಮ ಪ್ರತಿಭಾನ್ವಿತ ಸೇವೆಯ ಬಗ್ಗೆ ಪ್ರಸ್ತಾವನೆ ಸಲ್ಲಿಸಿರಿ.
ಕೆ.ಎ.ಎಸ್. ಅಧಿಕಾರಿಗಳ ಸಂಘವು ಸಕಾಲಕ್ಕೆ ಈ ಬಗ್ಗೆ ಅಧಿಕಾರಿಗಳಿಗೆ ಸೂಕ್ತ ತಿಳುವಳಿಕೆ ನೀಡಿ ಹುರಿದುಂಬಿಸಲಿ. ಮುಂದುವರೆದು, ಕೆಲವು ಅಧಿಕಾರಿಗಳು ಅತ್ಯುತ್ತಮವಾಗಿ ಸೇವೆ ಸಲ್ಲಿಸಿದ್ದರೂ ಪ್ರಸ್ತಾವನೆ ಸಲ್ಲಿಸುವಲ್ಲಿ ಪರಿಣಿತರಿರುವುದಿಲ್ಲ. ಅಂತಹವರಿಗೆ ಮಾಹಿತಿ ಸಂಗ್ರಹಿಸಿ ಹುರಿದುಂಬಿಸಿ ಪ್ರಸ್ತಾವನೆ ಮಾಡಿಸುವ ಕಾರ್ಯ ಸಂಘವು ಮಾಡಲಿ.
ಗೀತಾ ಹುಡೇದ ಕೆ.ಎ.ಎಸ್. ಅವರಿಗೆ ಈ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ನನ್ನ ಅಭಿನಂದನೆಗಳು. ಸರ್ವೋತ್ತಮ ಸೇವಾಪ್ರಶಸ್ತಿ ಪಡೆದ ಕೆ.ಎ.ಎಸ್. ಅಧಿಕಾರಿಗಳ ಪಟ್ಟಿಯನ್ನು ಸಂಘದಲ್ಲಿ ಮಾಡಿಸಿ ಫಲಕ ಹಾಕಿರಿ. ಇದರಿಂದಾದರೂ ಎಲ್ಲರೂ ಉತ್ತೇಜನಗೊಳ್ಳಲಿ. ಈ ವರ್ಷ ಆಯ್ಕೆಯಾದ ಕೆ.ಎ.ಎಸ್. ಅಧಿಕಾರಿಗಳಿಗೆ ಸಂಘವು ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಿ.ಇದು ಸಂಘದ ಆದ್ಯ ಕರ್ತವ್ಯ.
ಶ್ರೀ. ಜಯವಿಭವ ಸ್ವಾಮಿ
ನಿವೃತ್ತ ಭಾ.ಆ.ಸೇ. ಹಾಗೂ ನಿಕಟಪೂರ್ವ ಕೆ.ಎ.ಎಸ್.*ಅಧಿಕಾರಿಗಳು ಮತ್ತು ಮಾಜಿ ಅಧ್ಯಕ್ಷರು, ಕೆ.ಎ.ಎಸ್. ಅಧಿಕಾರಿಗಳ ಸಂಘ
