ಗಣರಾಜ್ಯೋತ್ಸವದ ಹಿನ್ನಲೆಯನ್ನು ಹಾಗೂ ನಮ್ಮ ದೇಶದ ಸಂವಿಧಾನದ ಮಹತ್ವವನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕಿದೆ ಡಾ ದಿವ್ಯಾ ಹಾಗೂ ಡಾ. ರಾಮಕೃಷ್ಣ( ಬಿ) ಅಭಿಮತ
76 ನೇ ಗಣರಾಜ್ಯೋತ್ಸವ ದಿನದ ಪ್ರಯುಕ್ತ ಎಲ್ಲರಿಗೂ ಗಣರಾಜ್ಯೋತ್ಸವ ಶುಭಾಶಯಗಳು
ನಮ್ಮ ದೇಶ, ನಮ್ಮ ಹೆಮ್ಮೆ, ಭಾರತ ದೇಶ, ವಿವಿಧತೆಯಲ್ಲಿ ಏಕತೆಯನ್ನು, ಸರ್ವ ಧರ್ಮಗಳಿಂದ ಕೂಡಿದ, ಹಲವು ಸಂಸ್ಕೃತಿಗಳಿಂದ ಕೂಡಿದ, ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಈ ಹಿನ್ನೆಲೆಯಲ್ಲಿ ಈ ರಾಷ್ಟ್ರದ ಮೂಲಭೂತ ಶಾಸನವೇ ಸಂವಿಧಾನ.
ಭಾರತಕ್ಕೆ ಸಂವಿದಾನ ಜಾರಿಗೆ ಬಂದ ದಿನವನ್ನು ನಾವು ಗಣರಾಜ್ಯೋತ್ಸವ ದಿನ ಎಂದು ಆಚರಣೆ ಮಾಡುತ್ತಿದ್ದೇವೆ. ಹಾಗಾದರೆ ಜಾರಿಯಾದ ಇತಿಹಾಸವನ್ನು ತಿಳಿದುಕೊಳ್ಳಬೇಕಾದದ್ದು ಅವಶ್ಯ ಅಲ್ಲವೇ? ಪ್ರಪಂಚದ ಎಲ್ಲಾ ರಾಷ್ಟ್ರಗಳಿಗೂ ತನ್ನದೇ ಆದ ಸಂವಿಧಾನ ಇದೆ ಅದರಂತೆ ನಮ್ಮ ದೇಶದ ಸಂವಿಧಾನವು ವಿಶಿಷ್ಟ ಹಾಗೂ ವಿಶೇಷತೆಗಳಿಂದ ಕೂಡಿದ್ದಾಗಿದೆ.
ಭಾರತದ ರಾಜಕೀಯ ಭವಿಷ್ಯವನ್ನು ನಿರ್ಧರಿಸುವ ಏಕೈಕ ತಿರ್ಪುದಾರ ಬ್ರಿಟನ್ ಎಂಬುವದು ಅಂಗ್ಲರ ಅಹಂಕಾರವಾಗಿತ್ತು ಇದಕ್ಕೆ ಸೈಮನ್ ಕಮಿಷನ ಆಯೋಗವೆ ಸಾಕ್ಷಿ (1927-30). ಬ್ರಿಟನ್ ಸರ್ಕಾರದ ವಕೀಲರಾದ ಸರ್ ಜಾನ್ ಸೈಮನ ಅವರ ಅಧ್ಯಕ್ಷತೆಯಲ್ಲಿ ನವಂಬರ್ 8, 1927 ರಂದು ಆಯೋಗ ನೇಮಿಸಿತು. ಈ ಆಯೋಗದಲ್ಲಿ 7 ಜನ ಸದಸ್ಯರಿದ್ದು ಅವರೆಲ್ಲ ಬಿಳಿಯರೇ (ಬ್ರಿಟಿಷರೇ) ಆಗಿದ್ದರು. ಈ ಸಮಿತಿ ಫೆಬ್ರವರಿ 28, ರಂದು 1930 ಕ್ಕೆ ವರದಿ ಸಲ್ಲಿಸಿತು .
01.) ಪ್ರಾಂತಗಳಲ್ಲಿ ದ್ವಿ ಸರ್ಕಾರ ರದ್ದು ಪಡಿಸಿ ಜವಾಬ್ದಾರಿ ಸರ್ಕಾರ ಸ್ಥಾಪಿಸುವುದು.
02.) 10 ವರ್ಷಗಳ ನಂತರ ಸಂವಿಧಾನ ಸುಧಾರಣೆಗೆ ಮತ್ತೊಂದು ಆಯೋಗ ನೇಮಿಸುವುದು.
ಈ ಸಮಿತಿya ವರದಿಗಳು ಯಾವ ಪಕ್ಷಕ್ಕೂ ತೃಪ್ತಿಯಾಗಲಿಲ್ಲ. ಭಾರತದ ರಾಜ್ಯ ಕಾರ್ಯದರ್ಶಿಯವರಾದ ಬರ್ಕನ ಮುಂದೆ ಮುಖ್ಯವಾಗಿ, ಲಾಹೋರ್ ಕಾಂಗ್ರೆಸ್ ಅಧಿವೇಶನ 1929 ಪೂರ್ಣ ಸ್ವರಾಜ್ಯ ಘೋಷಣೆ, 1929 ರಲ್ಲಿ ಕಾಂಗ್ರೆಸ್ಸಿನ ವಾರ್ಷಿಕ ಅಧಿವೇಶನವು, ಜವಾಹರಲಾಲ್ ನೆಹರು ಅವರ ಅಧ್ಯಕ್ಷತೆಯಲ್ಲಿ ಡಿಸೆಂಬರ್ 31, ರಂದು ರಾತ್ರಿ ರಾವಿ ನದಿಯ ದಂಡೆಯಲ್ಲಿ ತ್ರಿವರ್ಣ ರಾಷ್ಟ್ರ ಧ್ವಜವನ್ನು ಹಾರಿಸಿದ ನೆಹರು ಪೂರ್ಣ ಸ್ವರಾಜ್ಯ ಘೋಷಣೆ ಹೊರಡಿಸಿ ಅದೇ ಕಾಂಗ್ರೆಸ್ಸಿನ ದ್ಯೇಯ ವೆಂದು ಸಾರಿದರು .
ಅದರಂತೆ ಜನವರಿ 26, 1930 ರಂದು ಭಾರತದಾದ್ಯಂತ ಸ್ವಾತಂತ್ರ ದಿನವಾಗಿ ಆಚರಿಸಲಾಯಿತು.ಈ ಕಾರಣಕ್ಕಾಗಿ ಭಾರತದ ಗಣರಾಜ್ಯ ದಿನವನ್ನಾಗಿ ಜನವರಿ 26 ನ್ನು ಇಂದಿಗೂ ಆಚರಿಸಲಾಗುತ್ತದೆ.
1935 ರ ಕಾಯಿದೆ: ಈ ಕಾಯಿದೆ ಭಾರತ ಸಂವಿಧಾನ ಬೆಳವಣಿಗೆಯಲ್ಲಿ ಒಂದು ಮೈಲಿಗಲ್ಲು. ಕೇಂದ್ರದಲ್ಲಿ ಭಾರತೀಯ ಮಂತ್ರಿಗಳಿಗೆ ಆಡಳಿತದಲ್ಲಿ ಭಾಗವಹಿಸುವ ಅಧಿಕಾರ ಕೊಟ್ಟಿತು ಹಾಗೂ ಜವಾಬ್ದಾರಿ ಸರ್ಕಾರ ಸ್ಥಾಪಿಸುವ ಮೂಲಕ ಸ್ವರಾಜ್ಯದ ಬಾಗಿಲನ್ನು ತೆರೆಯಿತು.
1936 ರಲ್ಲಿ ಕಾಂಗ್ರೆಸ್ ತನ್ನ ಅಧಿವೇಶನದಲ್ಲಿ ಸಂವಿಧಾನ ರಚನೆಗೆ ಒತ್ತಾಯಿಸಿತು.
1939 ರಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಗೊತ್ತುವಳಿಯನ್ನು ಅಂಗೀಕರಿಸಿತು, ಇದರಲ್ಲಿ ನಾವು ಸಂವಿಧಾನ ಸಭೆ ಹೊಂದಲಿದ್ದು ಪ್ರಜಾಸತ್ತಾತ್ಮಕವಾಗಿ ರಚಿತವಾಗಬೇಕೆಂದು ಬಯಸಿದ್ದೇವೆ ಎಂದು ಹೇಳಿತು.
1942 ರಲ್ಲಿ ಸರ್ ಸ್ಟಾಪೋರ್ಡ ಕ್ರಿಪ್ಸ್ ನೇತೃತ್ವದಲ್ಲಿ ಬ್ರಿಟನ್ ಪ್ರಧಾನಿ ಚರ್ಚಿಲ್ ಒಂದು ನಿಯೋಗವನ್ನು ಕಳುಹಿಸಿದರು. ಈ ನಿಯೋಗವು 1942 ಮಾರ್ಚ್ 22 ರಿಂದ ಏಪ್ರಿಲ್ 12 ರ ವರೆಗೆ ಭಾರತದ ಸರ್ವ ಪಕ್ಷಗಳೊಡನೆ ಚರ್ಚಿಸಿ ಈ ಕೆಳಗಿನಂತೆ ವರದಿ ನೀಡಿತು.
ಎರಡನೇ ಮಹಾಯುದ್ಧದ ನಂತರ ಹೊಸ ಸಂವಿಧಾನ ರಚಿಸಲು ಸಂವಿಧಾನ ಸಭೆ ರಚನೆಗೆ ಒಪ್ಪಿಗೆ ನೀಡುವುದಾಗಿ ಹೇಳಿತು ಇದು ಭಾರತೀಯರ ಪಾಲಿಗೆ ಸಂವಿಧಾನ ರಚನೆಗೆ ಆಶಾಕಿರಣವಾಯಿತು.
ಮುಂದೆ 1945 ರಲ್ಲಿ ಬ್ರಿಟನ್ ಪ್ರಧಾನಿ ಕ್ಲಮೆಂಟ್ ಆಟ್ಟೆ ಅವರು ಬ್ರಿಟನ್ನಿನ ಸಂಸತ್ತಿನ ಸಾಮಾನ್ಯ ಸಭೆಯಲ್ಲಿ ಭಾರತ ತನ್ನದೇ ಆದ ಸಂವಿಧಾನ ರಚಿಸಿಕೊಳ್ಳಬಹುದಾಗಿದೆ ಎಂದು ಘೋಷಿಸಿದರು ಜೊತೆಗೆ ಕ್ಯಾಬಿನೆಟ್ ಮಿಷನ್ ಎನ್ನುವ ಆಯೋಗ ಮಾರ್ಚ್ 24, 1946 ರಂದು ದೆಹಲಿಗೆ ಬಂದಿತು. ಲಾರ್ಡ್ ಪೆಥಿಕ್ ವಾರೆನ್ಸ, ಸರ್ ಸ್ಟಾಫೋರ್ಡ್ ಕ್ರಿಪ್ಸ್, ಎ ವಿ ಅಲೆಕ್ಸಾಂಡರ್ ಸದಸ್ಯರು ಆಗಿದ್ದರು. ಕ್ಯಾಬಿನೆಟ್ ಮಿಷನ್ ಸಹ ಸಂವಿಧಾನ ರಚನಾ ಸಭೆಗೆ ಸಂಬಧಿಸಿದಂತೆ ಚರ್ಚಿಸಿತು. ಅದರ ಸಲಹೆಗೆ ಅನುಗುಣವಾಗಿ 1946 ರಲ್ಲಿ ಸಂವಿಧಾನ ಚುನಾವಣಾ ನಡೆಯಿತು. ಮುಂದೆ ಅಗಸ್ಟ್ 15, 1947 ಭಾರತ- ಪಾಕಿಸ್ತಾನ ಸ್ವಾತಂತ್ರ್ಯ ಮತ್ತು ವಿಭಜನೆಗೊಂಡಿತು. ಅದರಂತೆ ಸಂವಿಧಾನ ರಚನಾ ಸಭೆಯ ರಚನೆ ಅಯಿತು. ಡಿಸೆಂಬರ್ 9, 1946 ರಂದು ಸಂವಿಧಾನ ರಚನಾ ಸಭೆಯ ಮೊದಲ ಅಧಿವೇಶನ ನಡೆಯಿತು. ತಾತ್ಕಾಲಿಕವಾಗಿ ಡಾ.ಸಚ್ಚಿದಾನಂದ ಸಿನ್ಹಾ ಅವರು ಸಭೆಯ ಅಧ್ಯಕ್ಷರಾಗಿದ್ದರು.
ಡಿಸೆಂಬರ್ 11, 1949 ರಂದು ಡಾ. ರಾಜೇಂದ್ರ ಪ್ರಸಾದ್ ರವರನ್ನು ರಚನಾ ಸಮಿತಿಯ ಅಧ್ಯಕ್ಷರಾಗಿ ನೇಮಿಸಲಾಯಿತು.
ಡಾ. ಬಿ ಆರ್ ಅಂಬೇಡ್ಕರ ರವರು ಕರಡು ರಚನಾ ಸಮಿತಿಯ ಅದ್ಯಕ್ಷರಾದರು ಹೀಗೆ ಒಟ್ಟು 387 ಸದಸ್ಯರಿದ್ದರು.
ಭಾರತ ಸಂವಿಧಾನ ರಚನಾ ಸಭೆಯ ಸದಸ್ಯರುಗಳೆಂದರೆ ಡಾ. ರಾಜೇಂದ್ರ ಪ್ರಸಾದ್ (ಅಧ್ಯಕ್ಷರು), ಟಿ.ಟಿ. ಕೃಷ್ಣಚಾರಿ ಹಾಗೂ ಎಚ್.ಸಿ. ಮುಖರ್ಜಿ (ಉಪಾಧ್ಯಕ್ಷರುಗಳು), ಹಾಗೂ ಜವಾಹರಲಾಲ್ ನೆಹರೂ, ವಲ್ಲಭಾಯಿ ಪಟೇಲ್, ಆಚಾರ್ಯ ಕೃಪಲಾನಿ, ಅಬ್ದುಲ್ ಕಲಂ ಆಜಾದ್, ಪಟ್ಟಾಭಿ ಸೀತಾರಾಮಯ್ಯ, ಕೆಂ.ಎಂ ಮುನ್ಸಿ, ಡಾ. ಮೆಥಾಯ್, ಸರ್ದಾರ್ ಹುಕುಮ ಸಿಂಗ್, ಇಸ್ಮಾಯಿಲ್ ಖಾನ್, ಕೆ.ಟಿ.ಪಾ, ಎಚ್.ವಿ.ರಾಮನ್, ಕೃಷ್ಣಸ್ವಾಮಿ ಅಯ್ಯಾಂಗರ್, ಕೆ. ಸಂತಾನಂ, ಮಹಾರಾಜ ಪ್ರಸಾದ ಮುಖರ್ಜಿ, ಎಚ್.ಎನ್.ಕುಂಜ್ರು, ಗೋಪಾಲಸ್ವಾಮಿ ಅಯ್ಯಾಂಗರ್, ಫ್ರಾಂಕ್ ಅಂಥೋನಿ, ಶ್ರೀಮತಿ ಹಂಸಮೆಹತಾ, ಶ್ರೀಮತಿ ವಿಜಯಲಕ್ಷ್ಮಿ ಪಂಡಿತ್, ಶ್ರೀಮತಿ ಸರೋಜನಿ ನಾಯ್ಡು, ಶ್ರೀಮತಿ ಅಮೃತ್ಕೌರ್, ಶ್ರೀಮತಿ ಸುಚೇತನ ಕೃಪಲಾನಿ, ಇವರೇ ಮೊದಲಾದವರಾಗಿದ್ದಾರೆ. ಸಂವಿಧಾನ ರಚನಾ ಸಭೆಯಲ್ಲಿ ಕ್ರಮಬದ್ಧವಾಗಿ ಹಾಗೂ ದಕ್ಷತೆಯಿಂದ ಕಾರ್ಯನಿರ್ವಹಿಸಲು ಸುಮಾರು 22 ಸಮಿತಿಗಳನ್ನು ರಚಿಸಲಾಯಿತು.
ಡಾ. ಬಿ ಆರ್ ಅಂಬೇಡ್ಕರ ರವರ ನೇತೃತ್ವದಲ್ಲಿ ಎಲ್ಲರೂ ಸೇರಿಕೊಂಡು 2 ವರ್ಷ 11 ತಿಂಗಳು ಹಾಗೂ 18 ದಿನಗಳು ಅಂದರೆ ಸರಿಸುಮಾರು 3 ವರ್ಷಗಳಲ್ಲಿ ಸಂವಿಧಾನವನ್ನು ರಚಿಸಿ ಅದನ್ನು ನವೆಂಬರ್ 26,1949 ರಂದು ಅಂಗೀಕರಿಸಲಾಯಿತು, ಮುಂದೆ ಜನವರಿ 26, 1950 ರಂದು ಜಾರಿಗೆ ಬಂದಿತು.
ಅಂದಿನಿಂದ ಇಲ್ಲಿಯವರೆಗೆ ಜನವರಿ 26 ನ್ನು ಭಾರತದ ಗಣರಾಜ್ಯ ದಿನವನ್ನು ಆಚರಿಸಲಾಗುತ್ತಿದೆ.
ಸಹಾಯಕ
ಪ್ರಾಧ್ಯಾಪಕರು
ಡಾ ದಿವ್ಯ ಕೆ ವಾಡಿ ಮತ್ತು ಡಾ. ರಾಮಕೃಷ್ಣ ಬಿ ಇತಿಹಾಸ ವಿಭಾಗ ಮತ್ತು ಅರ್ಥಶಾಸ್ತ್ರ ವಿಭಾಗ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಶ್ರೀಮತಿ ಚಿನ್ನಮ್ಮ ಬಸಪ್ಪ ಪಾಟೀಲ್ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ ತಾ ಚಿಂಚೋಳಿ
ಜಿ ಕಲ್ಬುರ್ಗಿ