ಸಾವಳಗಿ: ಜಮಖಂಡಿ ತಾಲೂಕಿನ ಪಕ್ಕದಲ್ಲಿರುವ ಕಡಕೋಳ ಪುನರ್ವಸತಿ ಕೇಂದ್ರದಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು ಶೌಚಕ್ಕೂ ನೀರಿಲ್ಲ. ಇಂದಲ್ಲ ನಾಳೆಗೆ ನೀರಿನ ಸಮಸ್ಯೆ ಬಗೆ ಹರಿಯಲಿದೆ ಎಂದು ಕೊಂಡಿದ್ದ ನಿವಾಸಿಗಳ ಗೋಳು ಹೇಳತೀರದಾಗಿದೆ. ಕಳೆದ ೨೦ ದಿನಗಳಿಂದ ನೀರು ಪೂರೈಕೆ ಸ್ಥಗಿತಗೊಂಡಿದೆ. ಮೊದಲು ಬೇಸಿಗೆ ಕಾಲದಲ್ಲಿ ನದಿಯಲ್ಲಿ ನೀರಿಲ್ಲ ಅದಕ್ಕಾಗಿ ಸರಬರಾಜು ಮಾಡಲಾಗಿಲ್ಲ ಎಂದೆಲ್ಲ ಸಬೂಬು ಹೇಳುತ್ತಿದ್ದ ಅಧಿಕಾರಿಗಳು ಈಗ ಕೃಷ್ಣಾನದಿಯಲ್ಲಿ ನೀರು ಇದ್ದರೂ ಕಡಕೋಳ ಪುನರವಸತಿ ಕೇಂದ್ರದ ೧೦೦ಕ್ಕೂ ಹೆಚ್ಚು ಕುಟುಂಬಗಳಿಗೆ ನೀರು ಪೂರೈಕೆ ಆಗುತ್ತಿಲ್ಲ.
ಕಡಕೋಳ ಪುನರ್ವಸತಿ ಕೇಂದ್ರದಲ್ಲಿ ಗ್ರಾಮೀಣ ಕುಡಿಯುವ ನೀರಿನ ನಲ್ಲಿಗಳನ್ನು ಅಳವಡಿಸಲಾಗಿದೆ ನೀರು ಮಾತ್ರ ಬರುತ್ತಿಲ್ಲ. ಅಂದಾಜು ೧೦೦ ಕುಟುಂಬಗಳು ವಾಸವಾಗಿವೆ. ಇವರೆಲ್ಲ ಬಡ ಮತ್ತು ಹಿಂದುಳಿದ ವರ್ಗದವರು, ಪ್ರತಿನಿತ್ಯ ಹೆಣ್ಣು ಮತ್ತು ಗಂಡುಮಕ್ಕಳು ಕೂಲಿ ಕೆಸಲಕ್ಕೆ ಹೋಗುತ್ತಾರೆ. ಮನೆಯಲ್ಲಿನ ವೃದ್ಧರು ನೀರು ಸಂಗ್ರಹಿಸಿಟ್ಟು ಕೊಳ್ಳಬೇಕಾದ ಅನಿವಾರ್ಯತೆಯಿದೆ. ದೂರದಲ್ಲಿ ದೊರೆಯುವ ಕೊಳವೆ ಬಾವಿಗಳು, ಕೈಪಂಪಗಳಿAದ ನೀರು ತಂದುಕೊಳ್ಳಬೇಕು ಕುಡಿಯುವ ನೀರಂತೂ ಇಲ್ಲಿ ಸಿಕ್ಕುವದೇ ಇಲ್ಲ.
ದೇವರಾಜ ಅರಸು ಹೆಸರಿನಲ್ಲಿ ಶುದ್ಧ ಕುಡಿವ ಘಟಕ ಸ್ಥಗಿತಗೊಂಡು ಹಲವು ವರ್ಷಗಳು ಕಳೆದಿವೆ. ಮನೆಗೊಬ್ಬರು ನೀರು ತರುವ ಕೆಲಸ ಮಾಡಬೇಕಾಗಿದೆ. ಪ್ರತಿ ಮನೆಯಲ್ಲಿ ೪ ರಿಂದ ೫ ಬ್ಯಾರಲಗಳು ಹತ್ತಾರು ಕೊಡಗಳನ್ನು ಕಾಣಬಹುದು. ವಿದ್ಯುತ್ ಕಂಬಗಳಿದ್ದರು ರಸ್ತೆ ದೀಪಗಳಿಲ್ಲ, ರಸ್ತೆಗಳು ಇಲ್ಲ, ಎಲ್ಲಿ ನೋಡಿದರಲ್ಲಿ ಬಳ್ಳಾರಿ ಜಾಲಿ ಮುಳ್ಳಿನ ಮರಗಳು ಬೆಳೆದಿವೆ. ಮಳೆಯಾದರೇ ರಸ್ತೆಗಳೆಲ್ಲ ಕೆಸರುಮಯವಾಗಿ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಹಾಗಂತ ಇಲ್ಲಿರುವ ನಿವಾಸಿಗಳು ಸುಮ್ಮನೆ ಕುಳಿತಿಲ್ಲ. ಹಲವು ಬಾರಿ ಹಿರಿಯ ಅಧಿಕಾರಿಗಳು ಚುನಾಯಿತ ಪ್ರತಿನಿಧಿಗಳನ್ನು ಸಂಪರ್ಕಿಸಿ, ಸಮಸ್ಯೆ ಹೇಳಿದ್ದು ಸಮಸ್ಯೆಗೆ ಸ್ಪಂದಿಸುವ ಗೋಜಿಗೆ ಹೋಗುತ್ತಿಲ್ಲ.
ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಒಂದೆರಡು ದಿನ ನೀರು ಪೂರೈಕೆ ಮಾಡಿದಂತೆ ಮಾಡಿ ಮತ್ತದೇ ಹಳೇ ಚಾಳಿ ಮುಂದು ವರೆಸುತ್ತಾರೆಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನೀರು ಪೂರೈಸಲು ನಗರಸಭೆಯವರು ಒಬ್ಬರನ್ನು ನೇಮಕ ಮಾಡಿದ್ದು ಆ ವ್ಯಕ್ತಿ ಸರಿಯಾಗಿ ನೀರು ಪೂರೈಕೆ ಮಾಡುತ್ತಿಲ್ಲ ಕೆಲಭಾಗಗಳಲ್ಲಿ ಮಾತ್ರ ನೀರು ಪೂರೈಕೆ ಮಾಡುವ ಮೂಲಕ ಉಳಿದ ಮನೆಗಳಿಗೆ ನೀರು ಪೈರೈಕೆ ಮಾಡುತ್ತಿಲ್ಲ ಆರೋಪಿಸಿದ್ದಾರೆ. ಅಧಿಕಾರಿಗಳು ಮಾತ್ರ ಹಾರಿಕೆ ಉತ್ತರ ನೀಡುತ್ತಿದ್ದು ನೀರು, ಬೀದಿದೀಪ ಹಾಗೂ ರಸ್ತೆಗಳ ಸುಧಾರಿಸುವತ್ತ ಕ್ರಮಗಳನ್ನು ಜರುಗಿಸಿಲ್ಲ ಎಂದು ನಿವಾಸಿಗಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪುನರ್ವಸತಿ ಕೇಂದ್ರದ ನಿವಾಸಿಗಳು ಅಧಿಕಾರಿಗಳಗೆ, ಜನಪ್ರತಿನಿಧಿಗಳಿಗೆ ಅಂಗಲಾಚುವ ಮೂಲಕ ಪ್ರತಿಸಲ ಖಾಲಿ ಕೊಡಗಳನ್ನು ಪ್ರದರ್ಶಿಸಿ ತಮ್ಮ ಸಮಸ್ಯೆಗಳನ್ನು ಬಗೆ ಹರಿಸುವಂತೆ ಮನವಿ ಮಾಡುವದು ಸಾಮಾನ್ಯವಾಗಿದೆ. ಆದರೇ ಯಾರೊಬ್ಬರು ಶಾಶ್ವತವಾಗಿ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಜರುಗಿಸಿಲ್ಲ. ಶಾಸಕರು, ಜನಪ್ರತಿನಿಧಿಗಳನ್ನು ಕೆಟ್ಟ ಪದಗಳಿಂದ ನಿಂದಿಸುವ ನಿವಾಸಿಗಳು ತಮ್ಮ ಆಕ್ರೋಶವನ್ನು ಹೊರಹಾಕುತ್ತಾರೆ. ಬಡವನ ಕೋಪ ದವಡೆಗೆ ಮೂಲ ಎಂಬAತಾಗಿದೆ ಇಲ್ಲಿಯ ನಿವಾಸಿಗಳ ಪರಿಸ್ಥಿತಿ.
ಪ್ರತಿಭಟನೆಯಲ್ಲಿ ಸತ್ಯವ್ವ ಗಸ್ತಿ, ಮಲ್ಲಪ್ಪ ಯಂಕಾಂಚಿ, ಆಕಾಶ ಶಿವನಕ್ಕನವರ, ಸಿದ್ದರಾಜ ಶಿವನಕ್ಕನವರ, ದೇವರಾಜ ಕೆಳಗಡೆ, ಮಾಂತೇಶ, ವಿಠಲ ಶಿವನಕ್ಕನವರ, ಆಕಾಶ ಯಂಕಾಂಚಿ, ರುಕುಮವ್ವ ಕಾಂಬಳೆ, ಬಾಗವ್ವ ಹಳಿಂಗಳಿ, ಬಾಳವ್ವ ಗಸ್ತಿ, ಕಾಸವ್ವ ಯಂಕಾAಚಿ, ರುಕುಮವ್ವ ಕೆಳಗಡೆ, ನಿಂಬೆವ್ವ ಕಾಂಬಳೆ, ಶೃತಿ ಚಿನಗುಂಡಿ, ಶಾಮಲಾ ಗಸ್ತಿ, ನಗಮವ್ವ ಯಂಕಾAಚಿ, ಸತ್ಯವ್ವ ನಾಗನೂರು, ಸುಂದರವ್ವ ಗಸ್ತಿ ಸಹಿತ ಹಲವರು ಪಾಲ್ಗೊಂಡಿದ್ದರು.

1) ಬಾಕ್ಸ್:ಹಿಪ್ಪರಗಿಯಿಂದ ನೀರು ಸರಬರಾಜು ಮಾಡುವ ಪೈಪಲೈನ್ ದುರಸ್ತಿ ಇದ್ದುದರಿಂದ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಪೈಪಲೈನ್ ದುರಿಸ್ತಿ ಕಾರ್ಯ ಮುಕ್ತಾಯವಾಗಿದ್ದು, ಪ್ರತಿ ಮೂರು ದಿನಗಳಿಗೊಮ್ಮೆ ನೀರು ಪೂರೈಕೆ ವ್ಯವಸ್ಥೆ ಮಾಡಲಾಗುವದು ಸಾರ್ವಜನಿಕರು ಸಹಕರಿಸಬೇಕು.
-ಯಲ್ಲಪ್ಪ ಬಿದರಿ ಕಂದಾಯ ಅಧಿಕಾರಿಗಳು ನಗರಸಭೆ ಜಮಖಂಡಿ.
ಕಡಕೋಳ ಪುನರ್ವಸತಿ ಕೇಂದ್ರದಲ್ಲಿ ಕುಡಿಯುವ ನೀರನ್ನಂತೂ ಕೇಳಬೇಡಿ ಶೌಚ್ಯಕ್ಕೂ ನೀರಿಲ್ಲ. ಹಲವು ಬಾರಿ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕ ತಂದರೂ ಯಾವುದೇ ಪ್ರಯೋಜನ ವಾಗಿಲ್ಲ. ಸಾರ್ವಜನಿಕರು ಪ್ರತಿನಿತ್ಯ ಪರದಾಡ ಬೇಕಾದ ಪರಿಸ್ಥಿತಿ ಎದುರಾಗಿದೆ. ನಮ್ಮ ಗೋಳು ಕೇಳುವರು ಯಾರೂ ಇಲ್ಲ ಎಂಬಂತಾಗಿದೆ. ಪತ್ರಕರ್ತರಿಂದ ಸಹಕಾರ ಲಭಿಸುವ ಆಶಾಭಾವನೆ ನಮ್ಮಲ್ಲಿ ಮೂಡಿದೆ.
-ಮಲ್ಲಪ್ಪ ಯಂಕಂಚಿ, ಕಡಕೋಳ ಪುನರವಸತಿ ಕೇಂದ್ರದ ನಿವಾಸಿ.
