ಆನೇಕಲ್, ಜುಲೈ 14, 2025:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ವತಿಯಿಂದ ಆಯೋಜಿಸಲಾಗಿದ್ದ 1944ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭವು ಇಂದು ಯಶಸ್ವಿಯಾಗಿ ನಡೆಯಿತು. ವ್ಯಸನಮುಕ್ತ ಸಮಾಜ ನಿರ್ಮಾಣದ ಗುರಿಯೊಂದಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಡೆಸುತ್ತಿರುವ ಈ ಮಹತ್ತರ ಕಾರ್ಯಕ್ಕೆ ಮತ್ತೊಂದು ಯಶಸ್ಸು ದೊರೆತಿದೆ.
ಶ್ರೀ ಗಾಯತ್ರಿ ನಂಜುಂಡೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಶಿಬಿರದಲ್ಲಿ ಪಾಲ್ಗೊಂಡಿದ್ದ ನೂರಾರು ವ್ಯಸನಮುಕ್ತರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಹಲವು ದಿನಗಳ ಕಾಲ ನಡೆದ ಈ ಶಿಬಿರದಲ್ಲಿ ವೈದ್ಯರು, ಮನಃಶಾಸ್ತ್ರಜ್ಞರು ಮತ್ತು ಧಾರ್ಮಿಕ ಚಿಂತಕರಿಂದ ಉಪನ್ಯಾಸಗಳು, ಕೌನ್ಸಿಲಿಂಗ್, ಯೋಗ ಹಾಗೂ ಧ್ಯಾನದ ಮೂಲಕ ವ್ಯಸನಮುಕ್ತ ಜೀವನಕ್ಕೆ ಬೇಕಾದ ಮಾರ್ಗದರ್ಶನ ನೀಡಲಾಯಿತು.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಉಮಾರಬ್ಬ ರವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕರು “ಮದ್ಯಪಾನವು ಕೇವಲ ವ್ಯಕ್ತಿಯ ಆರೋಗ್ಯವನ್ನಷ್ಟೇ ಹಾಳು ಮಾಡುವುದಿಲ್ಲ, ಬದಲಾಗಿ ಕುಟುಂಬ ಮತ್ತು ಸಮಾಜದ ಶಾಂತಿಯನ್ನು ಕದಡುತ್ತದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಸಾವಿರಾರು ಮಂದಿಯನ್ನು ವ್ಯಸನಮುಕ್ತರನ್ನಾಗಿ ಮಾಡಿದೆ. ಈ 1944ನೇ ಶಿಬಿರವೂ ಆ ದಿಕ್ಕಿನಲ್ಲಿ ಮಹತ್ವದ ಮೈಲಿಗಲ್ಲು” ಎಂದು ಪ್ರಶಂಸಿಸಿದರು.
ಶಿಬಿರಾರ್ಥಿಗಳು ತಮ್ಮ ಜೀವನದಲ್ಲಿ ಕಂಡುಕೊಂಡ ಬದಲಾವಣೆಯನ್ನು ವ್ಯಕ್ತಪಡಿಸಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಯೋಜನೆಯ ಸ್ಥಳೀಯ ಪದಾಧಿಕಾರಿಗಳು, ಸ್ವಯಂಸೇವಕರು, ಶಿಬಿರಾರ್ಥಿಗಳ ಕುಟುಂಬದ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ :- ನಾಗರಾಜ್ ಪದ್ಮಶಾಲಿ
