ರಾಜ್ಯದಲ್ಲಿ ಜೈನ ಸಮಾಜದ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆ ಮಾಡಬೇಕು. ಮಹಿಳೆಯರಿಗಾಗಿ ಸಮ್ಮೇದ ಶಿಖರ್ಜಿ ತೀರ್ಥಯಾತ್ರೆ ಯೋಜನೆ ಘೋಷಿಸುವುದು ಸೇರಿದಂತೆ ಜೈನ ಸಮಾಜದ ಬೇಡಿಕೆಗಳನ್ನು ವರ್ಷದೊಳಗೆ ಈಡೇರಿಸಬೇಕು. ಇಲ್ಲವಾದರೆ, ೧೨ ತಿಂಗಳ ಬಳಿಕ ಸಲ್ಲೇಖನ ವ್ರತ ಕೈಗೊಳ್ಳಲಾಗುವುದು ಎಂದು ಶ್ರೀ ೧೦೮ ಗುಣಧರನಾಂದ ಮುನಿಮಹಾರಾಜರು ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಕಾಗವಾಡ ಐನಾಪೂರ ಪಟ್ಟಣದಲ್ಲಿನ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಖಿಲ ಭಟ್ಟಾರಕ ಸಮ್ಮೇಳನ ಹಾಗೂ ಜೈನ ಸಮಾವೇಶದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ರಾಜ್ಯ ಸರಕಾರವು ಜೈನ ಸಮಾಜವನ್ನು ಹಗುರವಾಗಿ ಪರಿಗಣಿಸಿ, ಸೌಲಭ್ಯ ಒದಗಿಸುವಲ್ಲಿ ಕಡೆಗಣಿಸುತ್ತಿದೆ. ನಮ್ಮ ಹಕ್ಕುಗಳನ್ನು ನಮಗೆ ಒದಗಿಸುವಲ್ಲಿ ನಿರ್ಲಕ್ಷ್ಯ ವಹಿಸಿದರೆ, ನಾವೂ ದೇಶ ಮತ್ತು ದೇಹ ತೊರೆಯಲು ಸಿದ್ದರಿದ್ದೇವೆ. ನಾನು ಹುಟ್ಟಿರುವುದೇ ಬಡವರಿಗಾಗಿ, ಜೀವಿಸುತ್ತಿರುವುದು ಬಡವರಿಗಾಗಿ. ಅಲ್ಲದೇ, ನನ್ನ ಸಾವೂ ಸಹ ಬಡವರಿಗಾಗಿಯೇ ಆಗಲಿದೆ ಎಂದರು.
ಬಡ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಆಸರೆಯಾಗಿದ್ದ ವಿದ್ಯಾರ್ಥಿ ವೇತನವನ್ನು ಈ ಹಿಂದಿನಂತೆಯೇ ಮುಂದುವರಿಸಬೇಕು. ರಾಜ್ಯದಲ್ಲಿ ಇತ್ತೀಚೆಗೆ ನಡೆಸಿರುವ ಜಾತಿಗಣತಿಯಲ್ಲಿ ಜೈನ ಸಮಾಜದವರ ಸಂಖ್ಯೆಯನ್ನು ಕೇವಲ 1.66 ಲಕ್ಷಕ್ಕಷ್ಟೇ ಸೀಮಿತಗೊಳಿಸಲಾಗಿದೆ. ಆದರೆ, 20 ಲಕ್ಷಕ್ಕೂ ಅಧಿಕ ಜೈನ ಸುಮುದಾಯ ಜನಸಂಖ್ಯೆ ರಾಜ್ಯದಲ್ಲಿದ್ದೇವೆ ಎಂದು ಸಮಾಜ ಜನ ಹೇಳುತ್ತಿದ್ದಾರೆ. ಹೀಗಾಗಿ, ಈ ಸಮೀಕ್ಷೆಯನ್ನು ನಾವು ಒಪ್ಪಿಕೊಳ್ಳುವುದಿಲ್ಲ. ಮತ್ತೊಮ್ಮೆ ಪಾರದರ್ಶಕವಾಗಿ ಸಮೀಕ್ಷೆ ನಡೆಸಿ, ತಪ್ಪು ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಹಸ್ತದ ಚಿಹ್ನೆಯನ್ನು ಎರವಲಾಗಿ ನೀಡಿರುವುದೇ ಜೈನ ಧರ್ಮ. ಆದರೆ, ಇದೀಗ ನಮ್ಮ ಬೇಡಿಕೆಗೆ ಸ್ಪಂದಿಸದೇ ಕಾಂಗ್ರೆಸ್ ಸರಕಾರವು ಇಡೀ ಜೈನ ಸಮಾಜಕ್ಕೆ ಕೈಕೊಡುತ್ತಿರುವುದು ಖಂಡನೀಯ. ನಮ್ಮ ನ್ಯಾಯಯುತ ಏಳು ಬೇಡಿಕೆಗಳಲ್ಲಿ ಸರಕಾರವು ಕೇವಲ ನಾಲ್ಕನ್ನು ಮಾತ್ರ ಈಡೇರಿಸಿದ್ದು, ಇನ್ನುಳಿದವುಗಳಿಗೆ ಸ್ಪಂದಿಸುತ್ತಿಲ್ಲ. ಅಹಿಂಸಾ ಪಾಲಕರಾದ ಜೈನ ಸಮಾಜ ತಮ್ಮ ಹಕ್ಕಿಗಾಗಿ ಕಲ್ಲೆಸೆಯುವುದು ಹಾಗೂ ಹಿಂಸಾಚಾರಕ್ಕಿಳಿದು ಎಂದೂ ಪ್ರತಿಭಟಿಸುವುದಿಲ್ಲ ಎಂಬ ಗ್ರಹಿಕೆ ಸರಕಾರಕ್ಕಿದೆ. ಸಮಾಜದ ಕೂಗನ್ನು ಕೇಳದೇ, ನಿದ್ರಾವಸ್ತೆಯಲ್ಲಿರುವ ಸಿಎಂ ಸಿದ್ದರಾಮಯ್ಯ ಅವರನ್ನು ಎಚ್ಚರಿಸಬೇಕಿದೆ. ಹೀಗಾಗಿ, ಇದುವೇ ನಮ್ಮ ಕೊನೆ ಸಮ್ಮೇಳನ. ಇನ್ನೇನಿದ್ದರೂ, ಆಂದೋಲನಗಳನ್ನೇ ಮಾಡೋಣ ಎಂದು ಕರೆ ನೀಡಿದರು.
ಅಲ್ಲದೇ, ಸಮಾಜದ ಅಭಿವೃದ್ಧಿಗೆ ಮೀಸಲಿಡುತ್ತಿದ್ದ ೫೦ ಕೋಟಿ ರೂ.ಹಣದಲ್ಲಿ ಈ ಬಾರಿ ೨೫ ಕೋಟಿ ರೂ.ಕಡಿತಗೊಳಿಸಿದ್ದೀರಿ, ಅದನ್ನು ಹೆಚ್ಚಿಸಿ ಕನಿಷ್ಠ ೨೦೦ ಕೋಟಿ ರೂ.ನೀಡಬೇಕು ಎಂದು ಸರಕಾರವನ್ನು ಆಗ್ರಹಿಸಿದ ಅವರು, ನಮಗೆ ನಮ್ಮ ಮತದಾನದ ಫಲಕೊಡಿ ಎಂದು ಕೇಳುತ್ತಿದ್ದು,. ಸಮಾಜದ ಜನ ಒಗ್ಗಟ್ಟಿನಿಂದ ಇದ್ದರೆ ಎಲ್ಲವೂ ಸಾಧ್ಯವಾಗುತ್ತದೆ ಎಂದು ಹೇಳಿದರು.
ಶಾಸಕರಾದ ಲಕ್ಷ್ಮಣ ಸವದಿ, ಗಣೇಶ ಹುಕ್ಕೇರಿ, ಭರಮಗೌಡ ಕಾಗೆ, ಅಭಯ್ ಪಾಟೀಲ, ಮಹಾರಾಷ್ಟ್ರದ ಶಿರೋಳ ಶಾಸಕ ರಾಜೇಂದ್ರ ಯಡ್ರಾಂವಕರ್, ಮಾಜಿ ಸಚಿವರಾದ ಶ್ರೀಮಂತ ಪಾಟೀಲ ಹಾಗೂ ವೀರಕುಮಾರ್ ಪಾಟೀಲ, ಸಂಜಯ ಪಾಟೀಲ, ಜೈನ ಸಮಾಜದ ಅಧ್ಯಕ್ಷ ಸುನಿಲ ಪಾಟೀಲ, ಅರಿಹಂತ ಉದ್ಯೋಗ ಸಮೂಹದ ಅಧ್ಯಕ್ಷ ಉತ್ತಮ ಪಾಟೀಲ, ಉದ್ಯಮಿ ಮಹಾವೀರ ನಿಲಜಗಿ, ಸುಶೀಲ ಬೆಳಗಲಿ, ಅರುಣ ಯಲಗುದರಿ, ಈರಗೌಡ ಪಾಟೀಲ, ಡಾ.ಎನ್.ಎ.ಮಗದುಮ್, ದಾದಾ ಪಾಟೀಲ, ಸಂಜಯ ಉಗಾರ ಗ್ರಾಮದ ಶೀತಲ ಅನ್ನಾ ಪಾಟೀಲ್ ಕುಚನೂರೆ ಹಾಗೂ ಸೇರಿದಂತೆ ಇತರರಿದ್ದರು.
ವರಧಿಗಾರ: ಪವನಕುಮಾರ ಕೃಷ್ಣಶರ್ಮಾ
