ಕಾರ್ಕಳ : ಪರಪುವಿನ ಗುತ್ತು ಕರೆಯ ಗುಳಿಗನೆಂದೆ ಪ್ರಸಿದ್ಧಿಯನ್ನು ಪಡೆದಿರುವ ಈ ಕಾರಣೀಕ ಕ್ಷೇತ್ರವು ಹಳೆಯ ಗುಡಿ ಕಟ್ಟೆಗಳನ್ನು ಧಾರ್ಮಿಕ ವಿಧಿ ವಿಧಾನಗಳ ಮುಖಾಂತರ ಇಂದು ನೂತನ ಶಿಲಾಮಯವಾಗಿ ಜೀರ್ಣೋದ್ಧಾರಗೊಂಡಿದೆ. ಆ ಪ್ರಯುಕ್ತ ಜರುಗಿದ ಗುಡಿಗೋಪುರ ಕಲಶ ಮೆರವಣಿಗೆಯು ಬಂಡೀಮಠ ಮೂಡುಮಹಾಗಣಪತಿ ದೇವಸ್ಥಾನದಿಂದ ಹೊರಟು ಪರಪು ದೈವಸ್ಥಾನಕ್ಕೆ ತಲುಪಿತು.
ಗುರುಪುರ ಸಂಸ್ಥಾನ ವಜ್ರದೇಹಿ ಮಠದ ಶ್ರೀ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿಗಳು ಪರಪುವಿನ ಈ ಪುಣ್ಯನೆಲೆಗೆ ಚಿತ್ತೈಸಿದ್ದು, ಈ ಮಣ್ಣಿನ ಚೈತನ್ಯ ಎಲ್ಲರೂ ಕೊಂಡಾಡುವಂತಾಗಲಿ, ಇಲ್ಲಿನ ಕಾರಣೀಕವು ಮುಂದಿನ ಯುವಪೀಳಿಗೆಗೆ ತಿಳಿಯಲಿ, ಪರಪು ಇನ್ನಷ್ಟು ಬೆಳಗಲಿ, ರಾಷ್ಟ್ರ ಸಮೃದ್ದವಾಗಲಿ ಎಂದು ಧಾರ್ಮಿಕ ಸಭೆಯಲ್ಲಿ ಶುಭಾಶೀರ್ವಚನ ನೀಡಿದರು.
ಗೌರವ ಉಪಸ್ಥಿತಿಯಲ್ಲಿ ಕುದರೆಮುಖ ವನ್ಯಜೀವಿ ವಿಭಾಗ ಕಾರ್ಕಳ ಇದರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಸತೀಶ್ಎನ್ ಮಾತನಾಡಿ, ಯೋಗಾನುಯೋಗ ನಮ್ಮೊಂದಿಗೆ ಇದ್ದರೆ ದೈವ ದೇವರ ಕೃಪೆ ನಮಗಿರುತ್ತದೆ ಆ ನಿಟ್ಟಿನಲ್ಲಿ ಇಂದು ಪರಪು ಗುತ್ತು ಕರೆಯ ದೈವಸ್ಥಾನವು ಜೀರ್ಣೋದ್ಧಾರಗೊಂಡಿದೆ ಎಂದರು.
ಉದ್ಯಮಿಗಳು, ಸಮಾಜಸೇವಕರು, ಬೋಳ ಪ್ರಶಾಂತ್ಕಾಮತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಶುಭ ಹಾರೈಸಿದರು. ಮುಂಬೈ ಉದ್ಯಮಿಗಳಾದ ಶ್ಯಾಮ್ ಎನ್. ಶೆಟ್ಟಿ ಇವರು ಮಾತನಾಡಿ ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎನ್ನುವ ಗಾದೆ ಮಾತಿನಂತೆ ಭಗವಂತನು ನೀಡಿರುವುದನ್ನು ಭಗವಂತನಿಗೆ ಸಮರ್ಪಿಸೋಣ ಎಂದು ದೈವಸ್ಥಾನಕ್ಕೆ ಆನೆಕಲ್ಲನ್ನು ನೀಡಿರುವ ಬಗ್ಗೆ ತಿಳಿಸಿದರು.
ದೂರದ ಊರಿನಿಂದ ಆಗಮಿಸಿರುವ ಬೆಂಗಳೂರಿನ ಉದ್ಯಮಿಗಳು ಆಗಿರುವ ಚಂದ್ರು ಅವರು ದೈವಸ್ಥಾನದ ಕಾರಣೀಕ ಏನೆಂದು ತಿಳಿಸಲು ಗುಳಿಗನನ್ನು ನೆನಪಿಸಿ ಮಗಳ ಮದುವೆ ಕಾರ್ಯವನ್ನು ವಿಜೈಂಬಣೆಯಿಂದ ನೆರವೇರಿಸಿದ್ದೇನೆ. ಇದಕ್ಕೆ ಸಾಕ್ಷಿ ಈ ಪರಪು ದೈವಸ್ಥಾನದಲ್ಲಿ ಮಾಡಿರುವ ಪ್ರಾರ್ಥನೆ. ಭಕ್ತಿಯಿಂದ ದೇವರನ್ನು ನೆನೆದರೆ ನಮ್ಮ ಭಾಳನ್ನು ಹಸನು ಮಾಡಲು ಭಗವಂತ ಕ್ಷಣ ಮಾತ್ರದಲ್ಲಿ ಬರುತ್ತಾನೆ ಎಂದರು.
ಈ ಪುಣ್ಯ ಕಾರ್ಯದಲ್ಲಿ ದೈವಗಳ ಶಿಲಾಮಯ ಗುಡಿ ನಿರ್ಮಾಣಕ್ಕಾಗಿ ಸ್ಥಳಿಯ ಭಕ್ತಾಭಿಮಾನಿಗಳು, ಊರ-ಪರವೂರ ದೈವ ಭಕ್ತರು ಗುಡಿಗೆ ಬೇಕಾದ ಆರ್ಥಿಕ ಸಹಾಯವನ್ನು ಮಾಡಿರುವವರಿಗೆ ಗೌರವ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಕುಕ್ಕುಂದೂರಿನ ಉದ್ಯಮಿ ವೃಷಭರಾಜ ಕಡಂಬ, ಅಧ್ಯಕ್ಷ ಕೆ. ವಸಂತ್, ಕಾರ್ಯಾಧ್ಯಕ್ಷ ರಾಜೇಶ್ರಾವ್ ಮತ್ತು ಕಾರ್ಯದರ್ಶಿ ರವೀಂದ್ರ ಶೆಟ್ಟಿ, ಮಹಿಳಾ ಸಮಿತಿ ಅಧ್ಯಕ್ಷೆ ಗೀತಾ ಶೆಟ್ಟಿ ಇವರು ಉಪಸ್ಥಿತರಿದ್ದರು. ಪ್ರಾರ್ಥನೆಯನ್ನು ಯೋಗೀಶ್ಕಿಣಿ ನೆರವೇರಿಸಿದರು. ಸ್ವಾಗತ ಪ್ರಸ್ತಾವನೆಯನ್ನು ರಾಜೇಶ್ರಾವ್ ನಡೆಸಿದರು. ಧನ್ಯವಾದ ಶಿವರಾಂ ರಾವ್ ನೆರವೇರಿಸಿ ನಿರೂಪಣೆ ಜ್ಯೋತಿ ರಮೇಶ್ ನಡೆಸಿದರು.
