ತಹಶಿಲ್ದಾರ್ ಭೇಟಿ ನೀಡಿ ನಿರ್ದೇಶನ ನೀಡಿದ ಎರಡೇ ದಿನದಲ್ಲಿ ಫಲಿಮಾರು ಕಿಂಡಿ ಅಣೆಕಟ್ಟಿನಲ್ಲಿ ಜಮಾವಣೆಗೊಂಡಿದ್ದ ರೆಂಬೆ, ಪ್ಲಾಸ್ಟಿಕ್ ಕಸಕಡ್ಡಿಯಂತಹ ಘನ ತ್ಯಾಜ್ಯಗಳನ್ನು ಪೂರ್ಣ ಸ್ವಚ್ಛ ಮಾಡಲಾಗಿದೆ. ಗ್ರಾಮ ಪಂಚಾಯತಿ ಯ ಅಧ್ಯಕ್ಷರಾದ ಸೌಮ್ಯಲತಾ ಶೆಟ್ಟಿ, ಉಪಾಧ್ಯಕ್ಷರಾದ ರಾಯೇಶ್ವರ ಪೈ
ಹಾಗೂ ಇತರ ಸದಸ್ಯರ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಗಿದೆ.
ತಹಶಿಲ್ದಾರ್ ಅಭಿನಂದನೆ
“ಫಲಿಮಾರು ಗ್ರಾಮ ಪಂಚಾಯತಿಯ ಚುನಾಯಿತ ಬಾಡಿ ಉತ್ತಮ ರೀತಿಯಲ್ಲಿ ಸ್ಪಂದಿಸಿ ತಹಶಿಲ್ದಾರ್ ರವರ ನಿರ್ದೇಶನದಂತೆ ತಕ್ಷಣವೇ ಎಲ್ಲಾ ಘನ ತ್ಯಾಜ್ಯಗಳನ್ನು ತೆಗೆದು ನೀರಿನ ಸರಾಗ ಹರಿವಿಗೆ ಅವಕಾಶ ಮಾಡಿಕೊಟ್ಟಿರುತ್ತಾರೆ. ಇದಕ್ಕಾಗಿ ಗ್ರಾಮ ಪಂಚಾಯತಿಗೆ ಅಭಿನಂದನೆಗಳು. ಸಾರ್ವಜನಿಕರ ಸಮಸ್ಯೆಗಳಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿರುವ ಗ್ರಾಮ ಪಂಚಾಯತಿ ಇದೇ ರೀತಿ ಮುಂದುವರೆಯಲಿ ಎಂದು ಆಶಿಸುತ್ತೇನೆ… ಅದಕ್ಕೆ ತಾಲ್ಲೂಕು ಆಡಳಿತದ ಸಹಕಾರ ಸದಾ ಇದ್ದೇ ಇರುತ್ತದೆ.”*
ಎಂದು ತಹಶಿಲ್ದಾರ್ ಪ್ರತಿಭಾ ಆರ್ ತಿಳಿಸಿದ್ದಾರೆ.
ಮಾಧ್ಯಮಗಳು ಇದನ್ನು ಗಮನ ಸೆಳೆದಿದ್ದವು
ತಹಶಿಲ್ದಾರ್ ಪ್ರತಿಭಾ ಆರ್ ಭೇಟಿ ನೀಡಿ ಅಣೆಕಟ್ಟಿನಲ್ಲಿ ಜಮಾವಣೆಗೊಂಡಿದ್ದ ಘನ ತ್ಯಾಜ್ಯಗಳನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿ ಕೂಡಲೇ ಸ್ವಚ್ಛಗೊಳಿಸಿ ನೀರಿನ ಹರಿವಿಗೆ ಅನುವು ಮಾಡಿಕೊಡಲು, ಪ್ರವಾಹ ಭೀತಿ ತಗ್ಗಿಸಲು ಖಡಕ್ ಆದೇಶ ನೀಡಿದ್ದನ್ನು ಮಾಧ್ಯಮಗಳು ವರದಿ ಮಾಡಿದ್ದವು. ಆ ವರದಿಗಳ ಇಂಪ್ಯಾಕ್ಟ್ ಇಂದು ಕಾಣ್ತಿದೆ.
ಗ್ರಾಮ ಪಂಚಾಯತಿಯವರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಅಣೆಕಟ್ಟಿನ ಕಸ ತೆಗೆದು ಸ್ವಚ್ಚಗೊಳಿಸಿದ್ದಾರೆ.
ಪ್ರತಿ ವರ್ಷ ಗ್ರಾಮ ಪಂಚಾಯತಿಯವರು ಕಾಲಕಾಲಕ್ಕೆ ಸ್ವಚ್ಚಗೊಳಿಸುತ್ತಾರೆ. ಅದರಂತೆ ಈ ವರ್ಷವೂ ಮಳೆಗಾಲದ ಪೂರ್ವಸಿದ್ಧತೆಯಾಗಿ ಸ್ವಚ್ಚಗೊಳಿಸಿದ್ದಾರೆ.
ಪ್ರತಿಭಾ ಆರ್ ಹೇಳಿಕೆ
” ಎರಡು ದಿನದ ಹಿಂದೆ ನಾನು ಭೇಟಿ ನೀಡಿ ಕೂಡಲೇ ಘನ ತ್ಯಾಜ್ಯ ಸ್ವಚ್ಚಗೊಳಿಸುವಂತೆ ಆದೇಶ ನೀಡಲಾಗಿತ್ತು. ಅದರಂತೆ ಗ್ರಾಮ ಪಂಚಾಯತಿಯವರು ಸ್ಪಂದಿಸಿ ಸ್ವಚ್ಚಗೊಳಿಸಿರುತ್ತಾರೆ. ಇದನ್ನು ತಾಲ್ಲೂಕು ಆಡಳಿತ ಶ್ಲಾಘಿಸಿದೆ.
ಮಳೆಗಾಲಕ್ಕೆ ಪೂರ್ವ ಸಿದ್ದತೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಮತ್ತು ಗ್ರಾಮ ಪಂಚಾಯತಿಗಳಿಗೆ ತಿಳಿಸಲಾಗಿದೆ. ನೆರೆ ಭೀತಿ ಇರುವ ಕಡೆ ಈಗಾಗಲೇ ಜನರಿಗೆ ಜಾಗೃತಿ ಮೂಡಿಸಿ ಮುಂಜಾಗ್ರತೆ ಕೈಗೊಳ್ಳಲಾಗಿದೆ. ತಾಲ್ಲೂಕು ಆಡಳಿತ ನೆರೆ ಪರಿಸ್ಥಿತಿ ಎದುರಿಸಲು ಸರ್ವ ಸನ್ನದ್ಧವಾಗಿದೆ. ಬೋಟುಗಳನ್ನು ರೆಡಿ ಇಟ್ಟುಕೊಳ್ಳಲಾಗಿದೆ. ನುರಿತ ಈಜುಗಾರರ ತಂಡ ಸದಾ ಸೇವೆಗೆ ಲಭ್ಯವಿದೆ. ತಹಶಿಲ್ದಾರ್ ಕಚೇರಿ ಕಂಟ್ರೋಲ್ ರೂಮ್ 24 ಗಂಟೆಯೂ ಕಾರ್ಯ ನಿರ್ವಹಿಸುತ್ತಿದೆ (0820-2551444).
ಸಾರ್ವಜನಿಕರು ಯಾವುದೇ ಸಂದರ್ಭದಲ್ಲಿ ಕರೆ ಮಾಡಿ ಸಹಾಯ ಪಡೆಯಬಹುದು.*
ವರದಿ:ಡಾ.ನಂದುಪೂಜಾರಿ
