ಕುಮಟಾ: ಮಹಾಸತಿ ಸಭಾಭವನದಲ್ಲಿ ಇತ್ತೀಚೆಗೆ ಹಮ್ಮಿಕೊಂಡ ಮಾಜಿ ಸೈನಿಕರ ಸಂಘವನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿ, ದೇಶಕ್ಕೆ ಸೈನಿಕರ ಸೇವೆ ಅನನ್ಯವಾದುದು. ಮಾಜಿ ಸೈನಿಕರೆಲ್ಲ ಸೇರಿ ಒಂದು ಸಂಘವನ್ನು ಸ್ಥಾಪಿಸಿಕೊಂಡು ಸಮಾಜಮುಖಿ ಕಾರ್ಯದಲ್ಲಿ ಭಾಗಿಯಾಗುತ್ತಿರುವುದು ಸಂತೋಷದ ವಿಚಾರವೆಂದು ಅಭಿಪ್ರಾಯಪಟ್ಟರು. ನೂತನವಾಗಿ ಅಸ್ತಿತ್ವಕ್ಕೆ ಬಂದ ಸಂಘದಿಂದ ಮಾಜಿ ಸೈನಿಕರಲ್ಲಿಯ ಪ್ರತಿಭೆ ಅನಾವರಣಗೊಳ್ಳಲು ಸೂಕ್ತ ವೇದಿಕೆಯಾಗಬಲ್ಲದು ಎಂದರು. ವೀರ ನಾರಿಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಮಾಜಿ ಸೈನಿಕರಾದ ನಾಗೇಶ ನಾಯ್ಕ ಕಾಗಾಲ, ಯುವಬ್ರಿಗೇಡಿನ ಸತೀಶ ಪಟಗಾರ, ಉದ್ಯಮಿ ಎಚ್. ಆರ್. ನಾಯ್ಕ, ರಿಕ್ಷಾ ಚಾಲಕ ಮಂಜುನಾಥ ಜಿ. ಗುನಗ ಅವರನ್ನು ಗೌರವಿಸಲಾಯಿತು. 20 ವೀರ ನಾರಿಯರಿಗೆ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಮಾಜಿ ಲೆಫ್ಟಿನೆಂಟ್ ಕರ್ನಲ್ ಪಿ.ಎಂ. ನಾಯ್ಕ, ಮಾಜಿ ವಿಂಗ್ ಕಮಾಂಡರ್ ಗಣೇಶ ಶಾಸ್ತ್ರಿ ಉಪಸ್ಥಿತರಿದ್ದು ಮಾತನಾಡಿದರು. ಪ್ರಾರಂಭದಲ್ಲಿ ಖುಷಿ ಸುಧಾಕರ ನಾಯ್ಕ ಪ್ರಾರ್ಥಿಸಿದರು. ಗೌರವಾಧ್ಯಕ್ಷತೆಯನ್ನು ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಎ. ಆರ್. ಮಾಸೂರಕರ್ ವಹಿಸಿದ್ದರು. ಅಧ್ಯಕ್ಷರಾಗಿ ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ವಿನಾಯಕ ಡಿ. ನಾಯ್ಕ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ, ರೋಟರಿ ಸದಸ್ಯ ಗಣೇಶ ಎಲ್. ನಾಯ್ಕ ಮಿರ್ಜಾನ್ ವಂದಿಸಿದರು.
