ಸಚಿವರ ಹೇಳಿಕೆಗೆ ಜೆಡಿಎಸ್ ಘಟಕದಿಂದ ಖಂಡನೆ
ಕುಮಟಾ: ‘ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಗ್ಗೆ
ಅವಹೇಳನಕಾರಿ ಪದ ಬಳಕೆ ಮಾಡಿರುವ ಸಚಿವ ಜಮೀರ್ ಅಹಮದ್ ಖಾನ್
ಅವರ ಹೇಳಿಕೆಗೆ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಘಟಕ ತೀವ್ರವಾಗಿ ಖಂಡಿಸಿದೆ.
ಈ ಕುರಿತು ಮಂಗಳವಾರ ಕುಮಟಾ ಜೆಡಿಎಸ್ ಘಟಕದ ತಾಲೂಕಾಧ್ಯಕ್ಷ ಸಿ.ಜಿ.ಹೆಗಡೆ ಪತ್ರಿಕಾ ಪ್ರಕಟಣೆ ನೀಡಿ, ಚನ್ನಪಟ್ಟಣ ಉಪ ಚುನಾವಣೆ ಪ್ರಚಾರ ಸಂದರ್ಭದಲ್ಲಿ ನಮ್ಮ ನಾಯಕರ ಬಗ್ಗೆ ಕಾಂಗ್ರೆಸ್ ಸಚಿವ ಜಮೀರ ಅವರು ವರ್ಣಭೇದ ನೀತಿ ತೋರುವ ರೀತಿ ಹೇಳಿಕೆ ಕೊಟ್ಟಿರುವುದು ಸರಿಯಲ್ಲ. ಅವರ ಈ ಹೇಳಿಕೆಯಿಂದ ಕುಮಟಾ-ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ಬೇಸರ ತಂದಿದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯವರು ಬಡವರ ಬಂಧು ಹುಟ್ಟಿನಿಂದ ರೈತರು, ಹೊಲ-ತೋಟಗಳಲ್ಲಿ ಕೆಲಸ ಮಾಡುವ ಶ್ರಮ ಜೀವಿಗಳು. ಬೆವರು ಸುರಿಸಿ ದುಡಿಯುವ ರೈತರಲ್ಲಿ ಕುಮಾರಸ್ವಾಮಿ ಅವರೂ ಒಬ್ಬರಾಗಿದ್ದಾರೆ. ಈ ಕಾರಣದಿಂದಲೆ ಅವರ ಮೈಬಣ್ಣ ಕಪ್ಪಗಿದೆ. ಹೀಗಿರುವಾಗ ರೈತರ ಮಕ್ಕಳಿಗೆ ಹೀನಾಯ ಹೇಳಿಕೆ ಕೊಡುವ ಸಚಿವ ಜಮೀರ್ ಒಬ್ಬ ಹೊರದೇಶದ ಸಂಜಾತನೇ ಎನ್ನುವ ಸಂಶಯ ಜನತೆಗೆ ಹಾಗೂ ಕಾರ್ಯಕರ್ತರಿಗೆ ಮೂಡಿದೆ. ಆದ್ದರಿಂದ ಇಂತಹ ಬಾಲಿಶತನದ ಹೇಳಿಕೆ ನೀಡಿರುವುದನ್ನು ಕುಮಟಾ-ಹೊನ್ನಾವರ ವಿಧಾನಸಭಾ ಜೆ.ಡಿ.ಎಸ್ ಪಧಾಧಿಕಾರಿಗಳು ಹಾಗೂ ಅಭಿಮಾನಿಗಳು ಖಂಡಿಸುತ್ತೇವೆ. ಜಮೀರ್ ಅವರು ತಮ್ಮ ಮಿತಿಯನ್ನು ಅರಿತು ಮಾತನಾಡಬೇಕು. ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸಚಿವರನ್ನ ಹಿಡಿತದಲ್ಲಿಟ್ಟುಕೊಳ್ಳಬೇಕು. ಈ ರೀತಿಯಾಗದಂತೆ ಗಮನ ಹರಿಸಿ, ತಮ್ಮ ಸಚಿವರ ಬಾಯಿ ಹರಿಬಿಡದಂತೆ ಎಚ್ಚರ ವಹಿಸಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ಹೊನ್ನಾವರ ತಾಲೂಕಾಧ್ಯಕ್ಷ ಟಿ.ಟಿ.ನಾಯ್ಕ, ಪ್ರಧಾನ ಕಾರ್ಯದರ್ಶಿ ದತ್ತ ಪಟಗಾರ, ಪ್ರಮುಖರಾದ ಚಿನ್ನು ಅಂಬಿಗ, ಯಶವಂತ ಗೌಡ, ನಾರಾಯಣ ಗೌಡ ಕಲ್ಲಬ್ಬೆ, ಈಶ್ವರ ಗೌಡ ಹಟ್ಟಿಕೇರಿ, ಚಂದ್ರಕಾಂತ ಪಾಲೇಕರ, ಮಂಜು ನಾಯ್ಕ, ರಾಘು ನಾಯ್ಕ ಸೇರಿದಂತೆ ಜೆಡಿಎಸ್ ಸದಸ್ಯರು ಜಮೀರ್ ಹೇಳಿಕೆಗೆ ಖಂಡನೆ ವ್ಯಕಪಡಿಸಿದರು.
