ಅರ್ಥವಾಗದ ಭಾಷೆಯನ್ನು ಧಿಕ್ಕರಿಸಿ, ದೂರದ ದೇಶಗಳಿಂದ ಬಂದ ಸೂಫಿ ಸಂತರು,ದೇಶದ ಬೇರೆ ಬೇರೆ ರಾಜ್ಯಗಳಿಂದ ಬಂದ ಕಾಶಿಯ ರಾಜ ದಂಪತಿಗಳು ಇನ್ನು ಅನೇಕ ಶರಣ ದಂಪತಿಗಳಿಗೆ ಕನ್ನಡವನ್ನು ಕಲಿಸಿ ಸರಳ ಕನ್ನಡದಲ್ಲಿ ವಚನಗಳನ್ನು ಬರೆಯುವಂತೆ ಪ್ರೇರಣೆ ನೀಡಿದ ಅಪ್ಪಟ ಕನ್ನಡಿಗ.
ವೇದ,ಉಪನಿಷತ್ತು,ಸಂಸ್ಕೃತ,ಹಿಂದಿ ಹೀಗೆ ಎಲ್ಲಾ ಪಾಂಡಿತ್ಯ ಗೊತ್ತಿದ್ದರೂ ಕನ್ನಡದಲ್ಲಿ ವಚನಗಳನ್ನು ರಚಿಸಿ ಇನ್ನಿತರರು ಕನ್ನಡದಲ್ಲಿ ವಚನಗಳನ್ನು ರಚಿಸುವಂತೆ ಮಾರ್ಗದರ್ಶನ ನೀಡಿ ಅಪ್ಪಟ ಕನ್ನಡ ಪ್ರೇಮಿ ಎಂದೆನಿಸಿದ ಕನ್ನಡದ ಚಳುವಳಿಗಾರ.
ಹನ್ನೆರಡನೇ ಶತಮಾನದಲ್ಲಿ ಅಂತರ್ಜಾತಿ ವಿವಾಹವನ್ನು ಮಾಡಿ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಮುನ್ನುಡಿ ಬರೆದ ಕ್ರಾಂತಿಕಾರಿ.
ಮಹಿಳೆಯರಿಗೂ ಲಿಂಗ ದೀಕ್ಷೆಯನ್ನು ನೀಡಿ ಅವರಿಗೂ ವಿದ್ಯೆ ಕಲಿಸಿ ಅನುಭವ ಮಂಟಪದಲ್ಲಿ ಚರ್ಚಿಸಲು ಅವಕಾಶ ನೀಡಿ ಅಂದೇ ಸಂಸತ್ತನ್ನು ಪರಿಚಯಿಸಿ ಜಗತ್ತಿನ ಮೊಟ್ಟ ಮೊದಲ ಬಾರಿಗೆ ಆ ಕಲ್ಪನೆ ನೀಡಿದ ಮಹಾಮಾನವತಾವಾದಿ.
ಜಾತಿ,ವರ್ಣ,ಲಿಂಗ,ಅಸ್ಪೃಶ್ಯತೆ
ಇಂತವುಗಳನ್ನು ಧಿಕ್ಕರಿಸಿ
ಕಾಯಕ,ದಾಸೋಹ,ಸಮಾನತೆ,ಭಕ್ತಿ ತಳಹದಿಯ ಮೇಲೆ ಸಮಾಜವನ್ನು ಕಟ್ಟಿದ ಲಿಂಗಾಯತ ಧರ್ಮ ಸ್ಥಾಪಕ.
ಇಂದಿನ ವಿಶ್ವಸಂಸ್ಥೆಯ ಮತ್ತು ಜಗತ್ತಿನ ಎಲ್ಲಾ ಪ್ರಜಾಪ್ರಭುತ್ವ ರಾಷ್ಟ್ರಗಳ ಬಹುತೇಕ ಆಶಯಗಳನ್ನು, ಆ ಕಲ್ಪನೆಗಳನ್ನು ಜಗತ್ತಿಗೆ ಮೊಟ್ಟಮೊದಲಬಾರಿಗೆ ನೀಡಿದ ಮಹಾಜ್ಞಾನಿ.
ನಿರ್ಗತಿಕರಿಗೆ,ಅಸಹಾಯಕರಿಗೆ,ದಲಿತರಿಗೆ ತುಳಿಯಲ್ಪಟ್ಟ ಜೀವಿಗಳಿಗೆ ಕೇವಲ ಮನುಷ್ಯನಷ್ಟೇ ಅಲ್ಲದೆ ಸಕಲ ಜೀವಾತ್ಮರಿಗೆ ಲೇಸನೇ ಬಯಸಿ ಎಲ್ಲರನ್ನೂ ಎತ್ತಿ ಕೈ ಹಿಡಿದು ಮುನ್ನಡೆಸಿ ಮುಖ್ಯ ವೇದಿಕೆಗೆ ಬರಲು ಕಾರಣಿಭೂತನಾದ ಕರ್ತೃ.
ಪ್ರಭು ಪ್ರಭುತ್ವದ ಪರಂಪರೆಯಲ್ಲಿ ಮನು ಸ್ಮೃತಿಯಂತಹ ಬದುಕಲು ಬಿಡದ ಮತ್ತು ಅರ್ಥವಾಗದ,ಜನಸಾಮಾನ್ಯರಿಗೆ ಸಿಗದ ಪುರಾಣ,ವೇದ,ಉಪನಿಷತ್ಗಳತಹ
ಮಹಾನ್ ಗ್ರಂಥಗಳನ್ನು ಧಿಕ್ಕರಿಸಿ ವಚನ ಚಳುವಳಿಗೆ ಮುನ್ನುಡಿ ಬರೆದ ಮಹಾತ್ಮ.
ನೀನು ಈ ಭೂಮಿಗೆ ಬರದಿದ್ದರೆ ನಮ್ಮ ಅಸ್ತಿತ್ವ ಎಲ್ಲಿರುತ್ತಿತ್ತು ಹೇಗಿರುತ್ತಿತ್ತು ಎಂದು ನಮ್ಮೊಳಗೆ ಪ್ರಶ್ನಿಸುವ ಕಾಲ ಬಂದಿದೆ.
ಭಕ್ತಿಭಂಡಾರಿ,ಆದರ್ಶ ಪ್ರಧಾನಿ,
ಬಿಜ್ಜಳನ ಬಸವ ರಾಜ್ಯದ ಮಾದರಿ, ಲಿಂಗಾಯಿತ ಧರ್ಮದ ರುವಾರಿ.
ಕಾಯಕದ ಮಹತ್ವವನ್ನು ತಿಳಿಸಿ ಕಾರ್ಮಿಕ, ರೈತರ ಕ್ಷಮತೆಯನ್ನು ಹೆಚ್ಚಿಸಿ ಬೆಳೆ ಮತ್ತು ಉತ್ಪಾದನೆ ಅಧಿಕಗೊಳಿಸಿ ಬಿಜ್ಜಳನ ಬಂಡಾರಕ್ಕೆ ಸ್ವಯಂ ಪ್ರೇರಿತ ಸುಂಕ ಬರುವಂತೆ ಮಾಡಿ, ಸೋಹo ಎನಿಸದೆ ದಾಸೋಹo ಎನಿಸಿ ಹಸಿವಿನ ಆಹಾಕಾರ ನೀಗಿಸಿದ ನಿಪುಣ.
ವೈಜ್ಞಾನಿಕ,ವೈಚಾರಿಕ,ಸಮಾನತೆ ಮುಖೇನ ದೇವರ ಸ್ಪಷ್ಟ ಕಲ್ಪನೆಯನ್ನು ಇಷ್ಟಲಿಂಗವೆಂಬ ಕುರುವಿನ ಮುಖಾಂತರ ಶಿವ ಅಥವಾ ಪರಮಾತ್ಮನ ಅಗೋಚರ ಶಕ್ತಿಯನ್ನು ಏಕದೇವೋಪಾಸನೆ ಮಾಡಿ ಆತ್ಮ ಜಾಗೃತಿಗೊಳಿಸಿ ಲಿಂಗೈಕ್ಯನಾಗುವ ಅಥವಾ ಪರಮಾತ್ಮನಲ್ಲಿ ವಿಲೀನಗೊಳ್ಳುವ ಸಾಕ್ಷಾತ್ ಪರಮಾತ್ಮನೇ ತಾನೇ ಆಗುವ ಮಾರ್ಗ ತೋರಿ ದೇಹವನ್ನೇ ದೇಗುಲವನ್ನು ಮಾಡಿ ಕೆಲವರಿಗೆ ಮಾತ್ರ ಮೀಸಲಾಗಿದ್ದ ಕಲ್ಲು-ಮಣ್ಣಿನ ಗುಡಿಗಳನ್ನು ದಿಕ್ಕರಿಸಿದ ಧೀರ.
ದೇವರ ಹೆಸರಿನಲ್ಲಿ ಮೋಸ ಮಾಡುವ, ಗುಡಿ-ಗುಂಡಾರದ ಹೆಸರಿನಲ್ಲಿ ಜ್ಯೋತಿಷ್ಯರು ಬ್ರಹ್ಮ ಜ್ಞಾನವನ್ನೇ ಹೇಳುತ್ತೇವೆ ಎನ್ನುವ ಕಲ್ಪನೆಯಲ್ಲಿರುವವರನ್ನು ಧಿಕ್ಕರಿಸಿ ಸರಳ ಸಹಜ ಧರ್ಮವನ್ನು ನೀಡಿದ ಧರ್ಮ ಕರ್ತೃವೇ
ನಿನ್ನಂತೆ ಹಲವು ಶರಣರನ್ನು ಬಸವಾದಿ ಪ್ರಮಥರನ್ನು ಜಗತ್ತಿಗೆ ಪರಿಚಯಿಸಿ ಕನ್ನಡದ ಕಂಪನ್ನು,ಕನ್ನಡದ ಕೀರ್ತಿಯನ್ನು,ಕನ್ನಡಿಗರ ಸ್ವಾಭಿಮಾನವನ್ನು,ಕನ್ನಡದ ಹೆಮ್ಮೆಯನ್ನು, ಕನ್ನಡದ ಭಾಷೆಯನ್ನು,ಕನ್ನಡದ ಸಾಹಿತ್ಯವನ್ನು, ಕನ್ನಡದ ಧರ್ಮವನ್ನು,ಕನ್ನಡಿಗರನ್ನು ಜಗತ್ತಿಗೆ ಗುರುತಿಸುವಂತೆ ಮಾಡಿದ ಕನ್ನಡತನವನ್ನು ನೀಡಿದ-
ಓ ಮಹಾತ್ಮನೇ,
ಓ ಕ್ರಾಂತಿಕಾರಿಯೇ,
ಹೇ ಜಗಜ್ಯೋತಿಯೇ
ಹೇ ವಿಶ್ವ ಗುರುವೇ
ನಮ್ಮ ಉಸಿರೊಳಗೆ ಉಸಿರಾಗಿರುವ
ನಮ್ಮ ದಾರಿದೀಪವೇ, ಮಹಾನ್ ಚೇತನವೇ,
ನಿಮ್ಮ ಹುಟ್ಟು ನಮಗೊಂದು ಬೆಳಕು.
ನಿಮ್ಮ ನಡೆ ನಮಗೊಂದು ಮಾರ್ಗ.
ನಿಮ್ಮ ಬದುಕು ನಮಗೊಂದು ಭರವಸೆ.
ನಿಮ್ಮ ವಚನ ನಮ್ಮ ಧರ್ಮ ಗ್ರಂಥ.
ನೀವೇ ನಮ್ಮ ಮಹಾದೇವ.
ಬಸವಜಯಂತಿ ಅಂದರೆ ನಮ್ಮ-ನಿಮ್ಮೆಲ್ಲರ ಮರುಹುಟ್ಟು.
ಸಮಾಜದ ಅಜ್ಞಾನವನ್ನು ಕಳೆದು,
ನಮ್ಮ ಜ್ಞಾನದ,ನಮ್ಮ ಸಮಾನತೆಯ ಹುಟ್ಟು.
ನಾವು ಜಗತ್ತಿನಲ್ಲಿ ಜಯಿಸುವ ಹುಟ್ಟು.
ತಮ್ಮೆಲ್ಲ ಶರಣ ಬಂಧುಗಳಿಗೆ ಬಸವ ಜಯಂತಿಯ ಶುಭಾಶಯಗಳು
✍ ಮಹೇಶ ಏನ್ ಕೆ
ಕರ್ನಾಟಕ ಪ್ರೆಸ್ ಕ್ಲಬ್ ಜಿಲ್ಲಾಧ್ಯಕ್ಷರು
