ಅರಸೀಕೆರೆ : ನಗರದಲ್ಲಿ ಇಂದು ಅಪರೂಪದ ಮತ್ತು ಸಂತಸದ ಕ್ಷಣಕ್ಕಾಗಿಯೇ ಹೆಸರಾಗುವಂತಹ ಒಂದು ಘಟನೆ ನಡೆದಿದೆ. ಅಂತಿಮ ವರ್ಷದ ಬಿಬಿಎ ವಿದ್ಯಾರ್ಥಿನಿಯಾಗಿರುವ ಅಲ್ಪಿಯಭಾನು ಅವರು ತಮ್ಮ ನಿಖಾ (ವಿವಾಹ) ನಿಗದಿಯಾಗಿದ್ದ ದಿನವೇ ಬೆಳಿಗ್ಗೆ ಪರೀಕ್ಷೆ ಬರೆದು, ನಂತರ ನೇರವಾಗಿ ಮದುವೆ ಮಂಟಪಕ್ಕೆ ತೆರಳಿದ್ದಾರೆ.
ಪಟ್ಟಣದ ಖಾಸಗಿ ಕಾಲೇಜಿನಲ್ಲಿ ಬಿಬಿಎ ಕೋರ್ಸ್ ನಲ್ಲಿ 6ನೇ ಸೆಮಿಸ್ಟರ್ ಓದುತ್ತಿರುವ ಅಲ್ಪಿಯಭಾನು, ಅರಸೀಕೆರೆ ನಗರಸಭೆಯ ಮಾಜಿ ಸದಸ್ಯರಾದ ಯೂನಸ್ ಸಾಬ್ ಹಾಗೂ ಹಾಲಿ ಸದಸ್ಯೆ ರೇಷ್ಮಾಭಾನು ದಂಪತಿಯ ಪುತ್ರಿ. ಅವರು ಇಂದು ತಮ್ಮ ಪರೀಕ್ಷೆ ಬರೆದು ಮುಗಿಸಿದ ನಂತರ ನಿಖಾ ಕಾರ್ಯಕ್ರಮಕ್ಕೆ ತೆರಳಿದ್ದು, ನಿಖಾ ಪಟ್ಟಣದ ಶಾದಿ ಮಹಲ್ನಲ್ಲಿ ರುಹಿತ್ ಪಾಷಾ ಅವರೊಂದಿಗೆ ನೆರವೇರಿದೆ.
ಈ ಅಪರೂಪದ ಸನ್ನಿವೇಶ ವಿದ್ಯಾರ್ಥಿ ವಲಯದಲ್ಲಿ ಗಮನ ಸೆಳೆದಿದ್ದು, ಶಿಕ್ಷಣ ಮತ್ತು ಜೀವನದ ಖಾಸಗಿ ಕ್ಷಣ ಎರಡರ ಮಧ್ಯೆ ಸಮತೋಲನ ಸಾಧಿಸಿರುವ ಅಲ್ಲಿಯಭಾನು ಅವರ ನಡೆಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.
ವರದಿ ಪರ್ವಿಜ್ ಅಹಮದ್ ಅರಸೀಕೆರೆ
