“ತ್ವರಿತ ಕ್ರಮ: ಅಂತರಾಷ್ಟ್ರೀಯ ಮಹಿಳಾ ದಿನ -2025 ಲಿಂಗ ಸಮಾನತೆಯ ತ್ವರಿತ ಪ್ರಗತಿಗಾಗಿ ಕರೆ ನೀಡುತ್ತದೆ”
ಮಾರ್ಚ್ 8, 2025, ಅಂತರಾಷ್ಟ್ರೀಯ ಮಹಿಳಾ ದಿನ (IWD) ಆಗಿದ್ದು, ಇದು ಮಹಿಳೆಯರ ಸಾಧನೆಗಳು ಮತ್ತು ಕೊಡುಗೆಗಳನ್ನು ಜಾಗತಿಕವಾಗಿ ಆಚರಿಸುವ ದಿನವಾಗಿದೆ. ಈ ವರ್ಷದ ವಿಷಯ “ತ್ವರಿತ ಕ್ರಮ” (Accelerate Action) ಎಂಬುದಾಗಿದ್ದು, ಲಿಂಗ ಸಮಾನತೆಯನ್ನು ವೇಗವಾಗಿ ಮುನ್ನಡೆಸುವ ಅಗತ್ಯವನ್ನು ಒತ್ತಿಹೇಳುತ್ತದೆ. ಹಲವಾರು ವಿಷಯ/ ಕ್ಷೇತ್ರಗಳಲ್ಲಿ ಪ್ರಗತಿ ಸಾಧನೆಯಾಗಿದ್ದರೂ, ಬದಲಾವಣೆಯ ವೇಗ ನಿಧಾನವಾಗಿದೆ. ಮಹಿಳೆಯರನ್ನು ಶಶಕ್ತಿಗೊಳಿಸಲು ಮತ್ತು ಸಮಾನತೆಯ ಸಮಾಜವನ್ನು ನಿರ್ಮಿಸಲು ದಿಟ್ಟ ಹೆಜ್ಜೆಗಳ ಅಗತ್ಯವಿದೆ.
ತ್ವರಿತ ಕ್ರಮದ ಅವಶ್ಯಕತೆ
ಹಲವಾರು ವರ್ಷಗಳ ಹೋರಾಟ ಮತ್ತು ನೀತಿ ಹಸ್ತಕ್ಷೇಪಗಳಾದರೂ, ಶಿಕ್ಷಣ, ಉದ್ಯೋಗ, ರಾಜಕೀಯ, ಆರೋಗ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಲಿಂಗ ಅಸಮಾನತೆ ಇನ್ನೂ ಮುಂದುವರಿದಿದೆ. ಜಾಗತಿಕ ವರದಿಗಳ ಪ್ರಕಾರ, ಮಹಿಳೆಯರು ಇನ್ನೂ ವೇತನ ಅಂತರ, ನಾಯಕತ್ವ ಹುದ್ದೆಗಳಲ್ಲಿ ಕಡಿಮೆ ಪ್ರತಿನಿಧಿ, ಹಾಗೂ ವ್ಯವಸ್ಥಾತ್ಮಕ ಅಡೆತಡೆಗಳನ್ನು ಎದುರಿಸುತ್ತಿದ್ದಾರೆ. “ತ್ವರಿತ ಕ್ರಮ” ಎಂಬ ಈ ವರ್ಷದ ಘೋಷಣೆಯು ಈ ಅಡೆತಡೆಗಳನ್ನು ಶೀಘ್ರವಾಗಿ ಮತ್ತು ಸ್ಥಿರವಾಗಿ ನಿವಾರಿಸುವಂತೆ ಒತ್ತಾಯಿಸುತ್ತದೆ.
ಶಿಕ್ಷಣ ಮತ್ತು ಆರ್ಥಿಕ ಅವಕಾಶಗಳ ಮೂಲಕ ಮಹಿಳಾ ಶಶಕ್ತೀಕರಣ
ಲಿಂಗ ಸಮಾನತೆಯನ್ನು ಸಾಧಿಸುವ ಅತ್ಯುತ್ತಮ ಮಾರ್ಗಗಳಲ್ಲಿ ಶಿಕ್ಷಣ ಪ್ರಮುಖವಾಗಿದೆ. ವಿಶೇಷವಾಗಿ, ಅಭಿವೃದ್ಧಿಶೀಲ ಪ್ರದೇಶಗಳಲ್ಲಿ ಬಾಲಕಿಯರಿಗೆ ಗುಣಾತ್ಮಕ ಶಿಕ್ಷಣವನ್ನು ಲಭ್ಯವಾಗುವಂತೆ ಮಾಡುವುದು ದಾರಿದ್ರ್ಯ ಮತ್ತು ಲಿಂಗ ವೈಷಮ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸರ್ಕಾರಗಳು ಮತ್ತು ಸಂಘ ಸಂಸ್ಥೆಗಳು ವಿದ್ಯಾರ್ಥಿವೇತನ, ಮಾರ್ಗದರ್ಶನ ಕಾರ್ಯಕ್ರಮಗಳು, ಮತ್ತು STEM (ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ಗಣಿತ) ಶಿಕ್ಷಣ ಕ್ಷೇತ್ರಗಳಲ್ಲಿ ಮಹಿಳಾ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲು ಬಂಡವಾಳ ಹೂಡಬೇಕು.
ಆರ್ಥಿಕ ಶಶಕ್ತೀಕರಣವು ಮತ್ತೊಂದು ಪ್ರಮುಖ ಪ್ರಭಾವಿ ಕ್ಷೇತ್ರವಾಗಿದೆ. ಮಹಿಳೆಯರ ಉದ್ಯಮಗಳಿಗೆ ಬೆಂಬಲ, ಸಮಾನ ವೇತನ, ಮತ್ತು ಸಮಾನ ಉದ್ಯೋಗದ ಅವಕಾಶಗಳನ್ನು ಒದಗಿಸಬೇಕು. ಕಂಪನಿಗಳು ಸಮಾನ ವೇತನ, ಪೋಷಕರ ರಜೆ, ಮತ್ತು ಸುರಕ್ಷಿತ ಕೆಲಸದ (ಉದ್ಯೋಗ) ಪರಿಸರ ನೀತಿಗಳನ್ನು ಅನುಷ್ಠಾನಗೊಳಿಸಬೇಕು. ಇದಲ್ಲದೆ, ಮಹಿಳಾ ಉದ್ಯಮಿಗಳನ್ನು ಬೆಂಬಲಿಸಲು ಹಣಕಾಸು ಸಂಸ್ಥೆಗಳು ಸಾಲ ಹಾಗೂ ವಿತ್ತೀಯ ಸಂಪತ್ತಿನ ಸೌಲಭ್ಯತೆಯನ್ನು ಹೆಚ್ಚಿಸಬೇಕು.
ಲಿಂಗಾಧಾರಿತ ಹಿಂಸಾಚಾರ ಮತ್ತು ಆರೋಗ್ಯ ಅಸಮಾನತೆಯ ವಿರುದ್ಧ ಹೋರಾಟ
ಮಹಿಳೆಯರು ಎದುರಿಸಬೇಕಾದ ಪ್ರಮುಖ ಸವಾಲುಗಳಲ್ಲಿ ಲಿಂಗಾಧಾರಿತ ಹಿಂಸಾಚಾರ (GBV) ಪ್ರಮುಖವಾಗಿದೆ. ಗೃಹಹಿಂಸೆ, ಉದ್ಯೋಗ ಸ್ಥಳದ ಕಿರುಕುಳ, ಮತ್ತು ಭೌತಿಕ-ಮಾನಸಿಕ ಹಿಂಸೆಯಂತಹ ಸಮಸ್ಯೆಗಳು ಇನ್ನೂ ನಿಂತಿಲ್ಲ. ಸರ್ಕಾರಗಳು ಕಠಿಣ ಕಾನೂನುಗಳನ್ನು ಅನುಷ್ಠಾನಗೊಳಿಸಿ, ಜಾರಿಗೆ ತರಲು ಬಲಿಷ್ಠ ವ್ಯವಸ್ಥೆಗಳನ್ನು ರೂಪಿಸಿ, ಮತ್ತು ಸಂತ್ರಸ್ತರಿಗೆ ಸಹಾಯ ಸೇವೆಗಳನ್ನು ಒದಗಿಸಬೇಕು. ಸಮುದಾಯ ಜಾಗೃತ ಅಭಿಯಾನಗಳು ಮತ್ತು ಪುರುಷರ ಸಹಭಾಗಿತ್ವವನ್ನು ಉತ್ತೇಜಿಸುವ ಕಾರ್ಯಕ್ರಮಗಳು ಮಹಿಳೆಯರಿಗೆ ಸುರಕ್ಷಿತ ಪರಿಸರವನ್ನು ನಿರ್ಮಿಸಲು ಸಹಕಾರಿಯಾಗುತ್ತವೆ.
ಆರೋಗ್ಯದ ವಿಷಯದಲ್ಲಿ, ಗುಣಮಟ್ಟದ ಆರೋಗ್ಯ ಸೇವೆ, ಪುನರುತ್ಪಾದನಾ ಹಕ್ಕುಗಳು, ಮತ್ತು ತಾಯಂದಿರ ಆರೋಗ್ಯ ಸೇವೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಮಹಿಳಾ ಆರೋಗ್ಯ ಸಂಬಂಧಿತ ವೈದ್ಯಕೀಯ ಸಂಶೋಧನೆಗಳಿಗೆ ಬಂಡವಾಳ ಹೂಡಿಕೆ ಮಾಡುವುದು ಚಿಕಿತ್ಸೆಯಲ್ಲಿ ಅಸ್ಥಿರತೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
ನಾಯಕತ್ವ ಮತ್ತು ನಿರ್ಧಾರಾತ್ಮಕ ಹುದ್ದೆಗಳಲ್ಲಿ ಮಹಿಳೆಯರ ಪಾತ್ರ
ರಾಜಕೀಯ ಮತ್ತು ಉದ್ಯಮ ಕ್ಷೇತ್ರಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಇನ್ನೂ ಕಡಿಮೆಯಾಗಿದೆ. “ತ್ವರಿತ ಕ್ರಮ” ಹೋರಾಟವು ಮಹಿಳೆಯರನ್ನು ನಿರ್ಧಾರಾತ್ಮಕ ಹುದ್ದೆಗಳಿಗೆ ಪ್ರೋತ್ಸಾಹಿಸಲು ಮತ್ತು ಅವರ ಧ್ವನಿಗೆ ಪ್ರಾಮುಖ್ಯತೆ ನೀಡಲು ಒತ್ತಾಯಿಸುತ್ತದೆ. ಸರ್ಕಾರಗಳು, ಸಂಘ ಸಂಸ್ಥೆಗಳು, ಮತ್ತು ಸೌಹಾರ್ದ ಸಂಘಟನೆಗಳು ಮಹಿಳೆಯರನ್ನು ಬೆಂಬಲಿಸಲು ನಾಯಕತ್ವ ತರಬೇತಿ, ಲಿಂಗಾಧಾರಿತ ಮೀಸಲು (Gender based Quotas) ವ್ಯವಸ್ಥೆ ಮತ್ತು ಮಾರ್ಗದರ್ಶನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕು.
ಸರ್ವಜನಾಂಗದ ಹೊಣೆಗಾರಿಕೆ
ಲಿಂಗ ಸಮಾನತೆ ಸಾಧಿಸುವುದು ಮಹಿಳೆಯರ ಮೇಲೆ ಮಾತ್ರ ಹೊಣೆಗಾರಿಕೆ ಇಲ್ಲ — ಇದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಪುರುಷರು, ಸರ್ಕಾರಗಳು, ಸಂಘ ಸಂಸ್ಥೆಗಳು, ಉದ್ಯಮಗಳು ಮತ್ತು ನಾಗರಿಕ ಸಮಾಜಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕು. ಪ್ರತಿಯೊಬ್ಬರ ಸಣ್ಣ ಪ್ರಯತ್ನವೂ ದೊಡ್ಡ ಬದಲಾವಣೆಗೆ ಕಾರಣವಾಗಬಹುದು.
ಅಂತರಾಷ್ಟ್ರೀಯ ಮಹಿಳಾ ದಿನ 2025ನ್ನು ಆಚರಿಸುವ ಈ ಸಂದರ್ಭದಲ್ಲಿ, ನಾವೆಲ್ಲ ಶಬ್ದ (rhetoric) ದಿಂದಾಚೆ ಹೋಗಿ, ಧೈರ್ಯಶಾಲಿ ಮತ್ತು ನಿರ್ಧಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳೋಣ. ಪ್ರತಿ ಮಹಿಳೆ ಮತ್ತು ಹುಡುಗಿ ತಮ್ಮ ಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು ಸಾಧ್ಯವಾಗುವ ಭವಿಷ್ಯವನ್ನು ನಿರ್ಮಿಸೋಣ. “ತ್ವರಿತ ಕ್ರಮ” ತೆಗದುಕೊಳಲ್ಲು ಇದು ಸೂಕ್ತ ಸಮಯ.
ಡಾ. ರಾಮಕೃಷ್ಣ. ಬಿ ಮತ್ತು ಡಾ. ದಿವ್ಯಾ ಕೆ ವಾಡಿ
ಸಹಾಯಕ ಪ್ರಾಧ್ಯಾಪಕರು
ಅರ್ಥಶಾಸ್ತ್ರ ವಿಭಾಗ ಮತ್ತು ಇತಿಹಾಸ ವಿಭಾಗ.
ಹೈದರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ
ಶ್ರೀಮತಿ. ಚಿನ್ನಮ್ಮ ಬಸಪ್ಪ ಪಾಟೀಲ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಚಿಂಚೊಳಿ, ಕಲಬುರಗಿ.