ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಭಂಡಿವಾಳ ಗ್ರಾಮದಲ್ಲಿ ನೆಲೆಸಿರುವ ಹೊನ್ನಾವರ ತಾಲೂಕಿನ ಕೆರೆಕೋಣ ಗ್ರಾಮದಲ್ಲಿ ಶ್ರೀಮತಿ ಸುಬ್ಬಿ ಮತ್ತು ಶ್ರೀ ನಾರಾಯಣ ಸುಬ್ರಾಯ ಭಂಡಾರಿ ಇವರ ಮಗಳಾಗಿ ಜನಿಸಿದ ಶ್ರೀಮತಿ ವಿಜಯಾ ನಾರಾಯಣ ಭ೦ಡಾರಿಯವರು ಸರಳ ಸಜ್ಜನರು. 01-06-1965 ರಂದು ಜನಿಸಿದ ಇವರು ಕಡು ಬಡತನದಲ್ಲಿಯೆ ಕೆರೆಕೋಣದಲ್ಲಿ ೧ನೇ ತರಗತಿ ಯಿಂದ ಏಳನೇ ತರಗತಿಯವರೆಗೆ ಕಲಿತು ಎ೦ಟನೇ ತರಗತಿಯಿಂದ ಪಿ.ಯು.ಸಿ. ದ್ವಿತೀಯ ವರ್ಷದವರೆಗೆ ಎಸ್.ಕೆ.ಪಿ. ಜೂನಿಯರ್ ಕಾಲೇಜು. ಅರೇಅಂಗಡಿಯಲ್ಲಿ ವಿದ್ಯಾಭ್ಯಾಸ ಮಾಡಿ ಅಲ್ಲಿಯೆ ಇಂಟರ್ನ್ಶಿಪ್ ಮುಗಿಸಿದರು. ತದನಂತರ ಬಿ.ಎ. ಪದವಿಯನ್ನು ಎಸ್.ಡಿ.ಎಮ್. ಕಾಲೇಜು. ಹೊನ್ನಾವರದಲ್ಲಿ ಪೂರ್ಣಗೊಳಿಸಿ ನಂತರದಲ್ಲಿ 1991ರಲ್ಲಿ ಕುಮಟಾ ತಾಲೂಕಿನ ಅಳಕೋಡ ಗ್ರಾ.ಪಂ. ವ್ಯಾಪ್ತಿಯ ಭ೦ಡಿವಾಳ ಗ್ರಾಮದ ಶ್ರೀ ವಿಷ್ಣು ನಾರಾಯಣ ಭಂಡಾರಿಯವರ ಧರ್ಮಪತ್ನಿಯಾಗಿ ಆಮೇಲೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಜನತಾ ಕಾಲೋನಿ ಅಳಕೋಡದಲ್ಲಿ ಶಿಕ್ಷಕಿಯಾಗಿ 01-01-1996ರಲ್ಲಿ ತಮ್ಮ ಸೇವೆಯನ್ನು ಪ್ರಾರಂಭಿಸಿದರು. ಎಲ್ಲಿ ತಮ್ಮ ವೃತ್ತಿ ಪ್ರಾರಂಭಿಸಿದರೋ ಅಲ್ಲಿಯೇ ಸುಮಾರು ಮೂವತ್ತು ವರ್ಷಗಳ ಸುದೀರ್ಘ ಕಾಲ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಜನತಾ ಕಾಲೋನಿ ಅಳಕೋಡದಲ್ಲಿಯೇ ಸೇವೆಗೈದು ದಿನಾಂಕ: 31-05-2025 ರಂದು ಇಲಾಖಾ ನಿಯಮದಂತೆ ಮೇ-31-2025 ರಂದು ನಿವೃತ್ತರಾಗಿದ್ದಾರೆ.
ಕಿರಿಯ ಪ್ರಾಥಮಿಕ ಶಾಲೆ ಜನತಾ ಕಾಲನಿ ಅಳಕೂಡ ಶಾಲೆಯಲ್ಲಿ ೧.೧.೧೯೯೬ ರಂದು ಶಾಲಾ ಶಿಕ್ಷಕಿಯಾಗಿ ನಿಯುಕ್ತರಾಗಿ ಅದೇ ಶಾಲೆಯಲ್ಲಿ 31-05-2025 ರಂದು 29 ವರ್ಷ 5 ತಿಂಗಳುಗಳ ಕಾಲ ಒಂದೇ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ತಮ್ಮ ಸೇವೆಯಿಂದ ಉತ್ತಮ ಶಿಕ್ಷಕಿ ಎ೦ದು ಗುರುತಿಸಲ್ಪಟ್ಟು ನಿವೃತ್ತರಾದ ಶಿಕ್ಷಕಿ ಶ್ರೀಮತಿ ವಿಜಯಾ ನಾರಾಯಣ ಭಂಡಾರಿ ದಂಪತಿಯರನ್ನು ಶಾಲಾ ಎಸ್.ಡಿ.ಎಮ್.ಸಿ ವಿದ್ಯಾರ್ಥಿಗಳು ಪಾಲಕರು, ಹಳೆಯ ವಿದ್ಯಾರ್ಥಿಗಳು ಅಡಿಗೆ ಸಿಬ್ಬಂಧಿಗಳು, ಊರ ನಾಗರಿಕರು ಅಭಿಮಾನ ಪೂರ್ವಕವಾಗಿ ಆತ್ಮೀಯತೆಯಿಂದ ಸನ್ಮಾನಿಸಿ ಗೌರವದೊಂದಿಗೆ ಬೀಳ್ಕೊಟ್ಟರು.
ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರಾಪಂ. ಸದಸ್ಯ ಮಹೇಶ ದೇಶಭಂಡಾರಿ ಒಂದೇ ಶಾಲೆಯಲ್ಲಿ 30 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾಘುವುದು ವಿಶೇಷ,
ನನ್ನ ಜೀವನದಲ್ಲಿ ಇದು ಸಿಕ್ಕಿರುವುದು ತುಂಬಾ ಸಂತೋಷದ ವಿಷಯವಾಗಿದೆ. ಸರಕಾರಿ ಶಾಲೆಗಳನ್ನು ಉಳಿಸಿ. ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಬೇಕು ಹಾಗೂ ಸರ್ಕಾರಿ ಶಾಲೆಗಳನ್ನು ಬೆಳೆಸುವಲ್ಲಿ ಊರಿನವರೆಲ್ಲಾ ಸಹಕರಿಸಬೇಕೆಂದು ವಿನಂತಿಸಿದರು.
ಗ್ರಾ.ಪo ಉಪಾಧ್ಯಕ್ಷೆ ಶ್ರಿಮತಿ ನಳಿನಿ ಎಮ್, ನಾಯ್ಕ ನಿವೃತ್ತಿ ಹೊಂದಿದ ವಿಜಯಕ್ಕೋರಿಗೆ ಮುಂದಿನ ಜೀವನಕ್ಕೆ ಶುಭವಾಗಲಿ ಎಂದು ಹಾರೈಸಿದರು.
ಹಳೆಯ ವಿದ್ಯಾರ್ಥಿ ಪ್ರಸನ್ನ ಭಂಡಾರಿ ಮಾತನಾಡಿ ನನಗೆ ಅವರು ಸಂಬoಧದಲ್ಲಿ ಅತ್ತೆಯೇ ಆದರೂ ಶಾಲೆಯಲ್ಲಿ ಅದ್ಯಾವುದೂ ತೋರ್ಪಡಿಸದೇ ಉತ್ತಮ ಶಿಕ್ಷಣ ಕೊಡುವಲ್ಲಿ ವಿಜಯಾ ಅಕ್ಕೋರು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.
ಶಾಲೆಯ ಪೂರ್ವ ವಿದ್ಯಾರ್ಥಿ ಶಂಭು ಭಟ್ ಮಾತನಾಡಿ ವಿಜಯಕ್ಕೋರು ಸದಾ ಶಾಂತ ರೀತಿಯವರು, ಸಿಟ್ಟು ಮಾಡಿಕೊಂಡವರಲ್ಲ. ಅವರು ಹಾಗೂ ಅವರ ಜೊತೆಯಲ್ಲಿ ಕಲಿಸಿದ ಎಲ್ಲಾ ಶಿಕ್ಷಕರನ್ನು ನೆನೆಸಿಕೊಂಡು ಅವರಿಂದ ನಾವು ಇಂದು ಸಮಾಜದಲ್ಲಿ ಸುಸಂಸ್ಕೃತರಾಗಿ ಬೆಳೆಯಲು ಅನುಕೂಲವಾಯಿತು ಎಂದು ಸ್ಮರಿಸಿದರು.
ನಂತರ ಸಿಆರ್ಪಿ ಈಶ್ವರ ಭಟ್ ಮಾತನಾಡಿ ಊರಿನವರ ಸಹಕಾರ, ಶಾಲೆಗೆ ಗ್ರಾಪಂ ಅವರ ಕೊಡುಗೆ, ಶಾಲೆ ಪ್ರಾರಂಭದ ಸಮಯದಲ್ಲಿ ಊರಿನವರು ಬೆಳಿಗ್ಗೆ ಕೆಲಸಕ್ಕೆ ಹೋಗಿ ಬಂದು ರಾತ್ರಿ ಬೆಳಕಿನ ವ್ಯವಸ್ಥೆಯಲ್ಲಿ ಶಾಲೆಯ ಜಾಗದ ಕೆಲಸ ಮಾಡಿರುವುದನ್ನು ಸ್ಮರಿಸಿಕೊಂಡು ಧನ್ಯವಾದಗಳನ್ನು ತಿಳಿಸಿದರು.
ಅಳಕೋಡ ಶಾಲೆಯ ಮುಖ್ಯ ಶಿಕ್ಷಕರಾದ ಸುಧಾಕರ ಮಡಿವಾಳ ಮಾತನಾಡಿ ವಿಜಯ ಭಂಡಾರಿ ಅವರೊಟ್ಟಿಗೆ ಕಳೆದ 5-6 ವರ್ಷಗಳಿಂದ ಕೆಲಸ ಮಾಡಿದ್ದೇನೆ. ಅವರೊಬ್ಬ ಉತ್ತಮ ಶಿಕ್ಷಕಿ, ಅವರಲ್ಲಿ ಸಹನೆ, ತಾಳ್ಮೆ ತುಂಬಾ ಇದೆ. ಅವರಲ್ಲಿ ಕಲಿತ ವಿದ್ಯಾರ್ಥಿಗಳು ಉತ್ತಮ ಗುಣ ನಡತೆ ಹೊಂದಿದ್ದಾರೆ ಎಂಬುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ ಎಂದು ಹೇಳಿದರು.
ಕಾರ್ಯಕ್ರಮದ ಕೊನೆಯಲ್ಲಿ ಮಾತನಾಡಿದ ನಿವೃತ್ತ ಶಿಕ್ಷಕಿ ವಿಜಯಾ ಭಂಡಾರಿ ಇಷ್ಟೆಲ್ಲಾ ಜನರು ಬಂದು ತುಂಬಾ ಪ್ರೀತಿ- ಅಬಿಮಾನದಿಂದ ನನಗೆ ಸನ್ಮಾನ ಮಾಡಿರುವುದನ್ನು ಕಂಡರೆ ತುಂಬಾ ಖುಷಿ ಎನ್ನಿಸುತ್ತದೆ. ನಾನು ಮೊದಲು ಶಾಲೆಗೆ ಸೇರಿದಾಗ ಕಟ್ಟಡದ ಸಮಸ್ಯೆ ತುಂಬಾ ಇತ್ತು, ಆಗ ಶಾಲೆಯಲ್ಲಿ ಆಟಕ್ಕೆ ಬಿಟ್ಟಾಗ ಮಕ್ಕಳನ್ನು ಕಾಯಬೇಕಿತ್ತು ಯಾಕೆಂದರೆ ಕಂಪೌoಡ್ ಇರಲಿಲ್ಲ. ಶಾಲೆ ಮೊದಲು ನನ್ನಿಂದಲೇ ಪ್ರಾರಂಭವಾಯಿತು ಎನ್ನುವುದಕ್ಕೆ ತುಂಬಾ ಖುಷಿಯಿದೆ ಎಂದರು.
ಎಲ್ಲರ ಸಹಕಾರ ಇರುವುದಕ್ಕೆ ಶಾಲೆಯ ಪ್ರಗತಿಗೆ ಸಹಾಯವಾಗಿದೆ. ನನ್ನ ನಂತರದಲ್ಲಿ ಬರುವ ಶಿಕ್ಷಕರಿಗೆ ಇದೇ ರೀತಿಯ ಗೌರವ ಸಿಗುವಂತಾಗಲಿ. ಶಾಲೆಯಲ್ಲಿ ಒಂದು ಕೈತೋಟ ಮಾಡಬೇಕೆಂಬ ಹಂಬಲ ತುಂಬಾ ಇತ್ತು ಆದರೆ ನೀರಿಗಾಗಿ ಪರದಾಟ ಮಾಡಿರುವುದನ್ನು ನೆನಪಿಕೊಂಡು, ದಯಮಾಡಿ ಪಂಚಾಯತದವರು ನಮ್ಮ ಶಾಲೆಯ ಕಂಪೌoಡ್ ಒಳಗಡೆ ನೀರಿನ ವ್ಯವಸ್ಥೆ ಮಾಡಿಕೊಡಬೇಕಾಗಿ ವಿನಂತಿಸಿಕೊoಡರು.
ಈ ಸಂದರ್ಭದಲ್ಲಿ ಗ್ರಾ.ಪಂಚಾಯಿತ್ ಉಪಾದ್ಯಕ್ಷೆ ಶ್ರೀಮತಿ ನಳಿನಿ ಮಹೇಂದ್ರ ನಾಯ್ಕ, ಸದಸ್ಯ ಶ್ರೀ ಮಹೇಶ ದೇಶಭಂಡಾರಿ, ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಜಯಶ್ರೀ ಎನ್ ಗೌಡ, ಶಾಲಾ ಮುಖ್ಯಶಿಕ್ಷಕರಾದ ಶ್ರೀ ಸುಧಾಕರ ಮಡಿವಾಳ, ಶಿಕ್ಷಾಣಾಭಿಮಾನಿಗಳಾದ ಶಿವರಾಮ ಭಟ್, ಅದೇ ಶಾಲೆಯಲ್ಲಿ 7 ವರ್ಷಗಳ ಸೇವೆ ಸಲ್ಲಿಸಿ ಸದ್ಯ ಹೊನ್ನಾವರ ಸಂತೆಗುಳಿ ಸಿ.ಆರ್.ಪಿ ಆಗಿರುವ ಶ್ರೀ ಈಶ್ವರ ಭಟ್, ಶಿಕ್ಷಕಿ ಶ್ರೀಮತಿ ಶ್ಯಾಮಲಾ ಹೆಗಡೆ, ಗ್ರಾಮಸ್ಥರಾದ ಮಾದೇವ ಭಟ್, ಗೊಪಾಲ ಗೌಡ, ಶಾಲೆಯ ಹಳೆಯ ವಿದ್ಯಾರ್ಥಿಗಳು, ಗ್ರಾಮಸ್ಥರು, ಮುಂತಾದವರು ಉಪಸ್ಥಿತರಿದ್ದರು.
