ಕುಮಟಾ : ತಾಲ್ಲೂಕಿನ ಬರ್ಗಿಯ ಶ್ರೀ ಮಹಾಲಿಂಗೇಶ್ವರ ವಿದ್ಯಾಪೀಠದಿಂದ ಸ್ಥಳೀಯ ವಿದ್ಯಾಭಿಮಾನಿಗಳಾದ ಅನಂತರಾಜ ಹಂದೆಯವರ ಮನೆಯಂಗಳದಲ್ಲಿ ದಿನಾಂಕ 9 3 2025ರ ರವಿವಾರದಂದು ತಿಳಿ ಸಂಜೆ ನಾಲ್ಕು ಗಂಟೆಯಿಂದ 5 ಗಂಟೆಯವರೆಗೆ ” ಸಂಸ್ಕೃತ ಪ್ರದೀಪ ಪುರಸ್ಕಾರ ” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಸಂಸ್ಕೃತ ವಿದ್ಯಾರ್ಥಿಗಳಾದ ನಂದನ ನಾರಾಯಣ ನಾಯಕ, ಜೀವನ ರಮೇಶ ಪಟಗಾರ, ಸಂಜನಾ ಮೂರ್ತಿ ನಾಯ್ಕ, ವಿಘ್ನೇಶ ತಿಮ್ಮಪ್ಪ ಹರಿಕಂತ್ರ, ನಾಗಶ್ರೀ ಶಂಕರ ಹಳ್ಳೇರ್,ಎನ್. ನಾಗಲಕ್ಷ್ಮೀ,ಸಂಜನಾ ಮಂಜುನಾಥ ಹರಿಕಂತ್ರ,ನವ್ಯಾ
ಮಂಜುನಾಥ ಪಟಗಾರ, ಸಿಂಚನಾ ನಾಗೇಶ ಗಾವಡಿ,ನವ್ಯಾ ಸುರೇಶ ಗಾವಡಿ,ನಾಗಶ್ರೀ ನಾಗೇಶ ಹರಿಕಂತ್ರ, ಗಜೇಂದ್ರ ವಸಂತ ಪಟಗಾರ, ವಿನಾಯಕ ನಾರಾಯಣ ಪಟಗಾರ,ನಂದನ ಕಮಲಾಕರ ಪಟಗಾರ ಹಾಗೂ ಜೀವನ ಚಂದ್ರಶೇಖರ ಪಟಗಾರರವರು “ಸಂಸ್ಕೃತ ಪ್ರದೀಪ” ಪುರಸ್ಕಾರಕ್ಕೆ ಭಾಜನರಾಗಲಿರುವರು.
“ಸಂಸ್ಕೃತ ಪ್ರದೀಪ ಪುರಸ್ಕಾರ’ ವು ನಗದು,ಪದಕ,ಫಲಕ ಹಾಗೂ ಶಾಲು ಗೌರವವನ್ನು ಒಳಗೊಂಡಿರುತ್ತದೆ.
ಸಂಸ್ಕೃತ ಮತ್ತು ಸಂಸ್ಕೃತಿಯ ಕುರಿತಾದ ಅಪಾರವಾದ ಒಲವಿನಿಂದ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಸಂಸ್ಕೃತ ಕಲಿಕೆಯನ್ನು ಉತ್ತೇಜಿಸುವ ಸದ್ಭಾವನೆಯಿಂದ, ವಿದ್ಯಾಪೋಷಕರಾದ ಉತ್ತರ ಕನ್ನಡ ಜಿಲ್ಲಾ ಪಂಚಾಯತದ ನಿಕಟಪೂರ್ವ ಸದಸ್ಯರಾದ ಪ್ರದೀಪ ನಾಯಕ ದೇವರಬಾವಿಯವರು ಈ ಪುರಸ್ಕಾರವನ್ನು ಪ್ರಾಯೋಜಿಸಿರುತ್ತಾರೆ.
ಪ್ರದೀಪ ನಾಯಕರವರು ಬರ್ಗಿಯ ಶ್ರೀ ಮಹಾಲಿಂಗೇಶ್ವರ ವಿದ್ಯಾಪೀಠದೊಂದಿಗೆ ಸಹಭಾಗಿಯಾಗಿ 2021 ರಿಂದಲೇ ಬರ್ಗಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸಂಸ್ಕೃತವನ್ನು ಆಯ್ದು ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳನ್ನು ಬೆಂಬಲಿಸುತ್ತಲೇ ಬಂದಿರುತ್ತಾರೆ.
ಈ ಸಮಾರಂಭದಲ್ಲಿ ಸ್ಥಳೀಯ ಧಾರ್ಮಿಕ ನೇತಾರರಾಗಿ ವಿಧಾಯಕವಾದ ಕಾರ್ಯಚಟುವಟಿಕೆಗಳ ಮೂಲಕ ಪ್ರಾಥಸ್ಮರಣೀಯರಾದ ಸಂಸ್ಕೃತಾಭಿಮಾನಿಗಳಾದ ಅನಂತರಾಜ ಸೀತಾರಾಮ ಹಂದೆಯವರನ್ನು ಸನ್ಮಾನಿಸಲಾಗುವುದು.
ಪೀಠಾಧ್ಯಕ್ಷರಾದ ವಿಶ್ರಾಂತ ಮುಖ್ಯಾಧ್ಯಾಪಕರಾದ ಬಿ.ಏನ್.ಗಾಂವ್ಕರ್ ರವರು ಸಭಾಧ್ಯಕ್ಷತೆಯನ್ನು ವಹಿಸಲಿದ್ದಾರೆ. ಸಂಸ್ಕೃತ ಅಧ್ಯಾಪಕರಾದ ಮಂಜುನಾಥ ಗಾಂವಕರ್ ಬರ್ಗಿಯವರು ಆಶಯ ನುಡಿಯನ್ನಾಡಲಿರುವರು. ಶಿಕ್ಷಕ ಮೋಹನ್ ನಾಯ್ಕ್ ರವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಲಿದ್ದಾರೆ.
ಸಭಾ ಕಾರ್ಯಕ್ರಮದ ತರುವಾಯ ಲಘು ಉಪಹಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಸಂಸ್ಕೃತಾರಾಧಕರು ಬಹುಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಚಂದಗಾಣಿಸುವಂತೆ ಕಾರ್ಯಕ್ರಮದ ಪ್ರಧಾನ ಸಂಘಟಕರಾದ ಗ್ರಾಮದ ಮುಖಂಡ ನಾರಾಯಣ ನಾಗು ನಾಯಕ ಹಾಗೂ ಪ್ರೌಢ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಸ್ಥಳೀಯ ಗ್ರಾಮ ಪಂಚಾಯತದ ನಿಕಟಪೂರ್ವ ಸದಸ್ಯರಾದ ನಾಗರಾಜ ಕೃಷ್ಣ ನಾಯ್ಕರವರು ಕೋರಿದ್ದಾರೆ.
