ಅತ್ತಿಬೆಲೆ :- ಕರ್ನಾಟಕದಲ್ಲಿ ಕನ್ನಡಿಗರು ಎದುರಿಸುತ್ತಿರುವ ಉದ್ಯೋಗ, ಶಿಕ್ಷಣ ಮತ್ತು ವ್ಯಾಪಾರ ಕ್ಷೇತ್ರದಲ್ಲಿನ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಲು ಹಾಗೂ ಕನ್ನಡಿಗರ ಐಕ್ಯತೆ, ಏಕತೆ, ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಸಾರಲು ಕನ್ನಡ ಜಾಗೃತಿ ವೇದಿಕೆಯು ಬೃಹತ್ ‘ಸ್ವಾಭಿಮಾನಿ ಕನ್ನಡಿಗರ ಮಹಾ ಪಥಸಂಚಲನ’ಕ್ಕೆ ಕರೆ ನೀಡಿದೆ.
ಕನ್ನಡ ಜಾಗೃತಿ ವೇದಿಕೆಯ ಮಾನ್ಯ ರಾಜ್ಯಾಧ್ಯಕ್ಷರಾದ ಶ್ರೀ ಕೆ. ಮಂಜುನಾಥ ದೇವಣ್ಣನವರ ನೇತೃತ್ವದಲ್ಲಿ, ಈ ಬೃಹತ್ ಕಾರ್ಯಕ್ರಮವು ಡಿಸೆಂಬರ್ 7, 2025 ರ ಭಾನುವಾರದಂದು ಬೆಳಗ್ಗೆ 11:30 ಕ್ಕೆ ಅತ್ತಿಬೆಲೆಯಲ್ಲಿ ನಡೆಯಲಿದೆ.
ಪಥಸಂಚಲನದ ಮುಖ್ಯ ಉದ್ದೇಶಗಳು ಮತ್ತು ವೇದಿಕೆಯ ಕಳಕಳಿ
ಕನ್ನಡ ಜಾಗೃತಿ ವೇದಿಕೆಯ ಅಧ್ಯಕ್ಷರ ಹೇಳಿಕೆ
“ಕರ್ನಾಟಕ ಏಕೀಕರಣಗೊಂಡು 70 ವರ್ಷಗಳಾಗಿವೆ. ಕನ್ನಡಿಗರೇ ನಮ್ಮ ನಾಡಿನ ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿಯ ಅಭಿವೃದ್ಧಿಯ ಜವಾಬ್ದಾರಿ ಹೊರಬೇಕಿದೆ. ಆದರೆ ಇಂದು, ಅನ್ಯಭಾಷಿಕರ ಹೆಚ್ಚಿದ ವಲಸೆಯಿಂದಾಗಿ ನಮ್ಮ ರಾಜ್ಯದ ಉದ್ಯೋಗ, ಶಿಕ್ಷಣ ಮತ್ತು ವ್ಯಾಪಾರ-ವ್ಯವಹಾರಗಳ ಮೇಲೆ ತೀವ್ರ ದಾಳಿ ನಡೆಯುತ್ತಿದೆ. ರಾಜ್ಯದ ಯುವಕರ ಮೇಲೆ ಹೊರ ರಾಜ್ಯದವರಿಂದ ದೌರ್ಜನ್ಯ ಮತ್ತು ದಬ್ಬಾಳಿಕೆ ಮಿತಿ ಮೀರಿದೆ.”

ಅಭಿವೃದ್ಧಿ ಮತ್ತು ಅಸ್ಮಿತೆಯ ಮೇಲಿನ ದಾಳಿ
ಸಣ್ಣ ವ್ಯಾಪಾರದಿಂದ ಹಿಡಿದು ದೊಡ್ಡ ಉದ್ಯಮಗಳವರೆಗೆ ಹೊರರಾಜ್ಯದವರು ಹಿಡಿತ ಸಾಧಿಸಲು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ಪರಿಣಾಮವಾಗಿ, ಕನ್ನಡಿಗರು ಕರ್ನಾಟಕದಲ್ಲಿಯೇ ಬಡತನ, ನಿರುದ್ಯೋಗ ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದಾರೆ.
ಖಾಸಗಿ ಶಿಕ್ಷಣ ಕ್ಷೇತ್ರದಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸಲಾಗಿದೆ, ನಾಡಗೀತೆಯನ್ನು ಹಾಡುತ್ತಿಲ್ಲ. ಕನ್ನಡ ಮಾತನಾಡಿದರೆ ವಿದ್ಯಾರ್ಥಿಗಳಿಗೆ ದಂಡ ವಿಧಿಸುವ ಹಂತಕ್ಕೆ ಖಾಸಗಿ ಆಡಳಿತ ಮಂಡಳಿಗಳು ತಲುಪಿವೆ.
ಖಾಸಗಿ ಕಾರ್ಖಾನೆಗಳಲ್ಲಿ ಕನ್ನಡಿಗರನ್ನು ನಿರ್ಲಕ್ಷಿಸಲಾಗಿದ್ದು, ಕನ್ನಡ ರಾಜ್ಯೋತ್ಸವವನ್ನು ಸಹ ಆಚರಿಸಲಾಗುತ್ತಿಲ್ಲ.
ಸಾರ್ವಭೌಮತ್ವ ಸಾರಲು ಕರೆ
ಇಂತಹ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸಲು, ಕನ್ನಡ, ಕನ್ನಡಿಗ, ಕರ್ನಾಟಕದ ವೈಭವದ ದಿನಗಳನ್ನು ಮರುಸ್ಥಾಪಿಸಲು, ಕನ್ನಡಿಗರ ಒಗ್ಗಟ್ಟು, ಏಕತೆ, ಐಕ್ಯತೆ ಮತ್ತು ಸಾರ್ವಭೌಮತ್ವವನ್ನು ಸಾರಲು ಈ ಬೃಹತ್ ಪಥಸಂಚಲನವನ್ನು ಆಯೋಜಿಸಲಾಗಿದೆ.
ಸಾರ್ವಜನಿಕರಲ್ಲಿ ಮನವಿ
ಕನ್ನಡ ಜಾಗೃತಿ ವೇದಿಕೆಯ ರಾಜ್ಯಧ್ಯಕ್ಷ ಕೆ. ಮಂಜುನಾಥ ದೇವ ಅವರು, “ಈ ಸ್ವಾಭಿಮಾನಿ ಕನ್ನಡಿಗರ ಮಹಾ ಪಥಸಂಚಲನದಲ್ಲಿ ಕನ್ನಡದ ಅಭಿಮಾನಿಗಳು, ಯುವಕ-ಯುವತಿಯರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಮಹಿಳೆಯರು, ಕಾರ್ಮಿಕರು, ಆಟೋ, ಟೆಂಪೋ, ಲಾರಿ ಚಾಲಕರು, ಕವಿಗಳು, ಸಾಹಿತಿಗಳು, ಬರಹಗಾರರು, ರೈತರು ಮತ್ತು ಎಲ್ಲಾ ಕ್ಷೇತ್ರದ ಹೋರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಭರ್ಜರಿಯಾಗಿ ಯಶಸ್ವಿಗೊಳಿಸಬೇಕೆಂದು” ಕಳಕಳಿಯ ಮನವಿ ಮಾಡಿದ್ದಾರೆ.
ಸಂಜೆ ಮನೋರಂಜನೆ ಹಾಗೂ ಸನ್ಮಾನ ಕಾರ್ಯಕ್ರಮ
ಪಥಸಂಚಲನದ ನಂತರ ಸಂಜೆ 7.00 ಗಂಟೆಗೆ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮಗಳು, ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಹಾಗೂ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
