ಕರ್ನಾಟಕ ಹೆಸರು ನಾಮಕರಣವಾಗಿ ಐವತ್ತು ವರ್ಷ ತುಂಬಿದ ನೆನಪಿನಲ್ಲಿ ರೂಪಿಸಿರುವ ಕನ್ನಡ ರಥ ಯಾತ್ರೆಯನ್ನು ಆನೇಕಲ್ ನಲ್ಲಿ ಸ್ವಾಗತಿಸಲಾಯಿತು.
ಆನೇಕಲ್: ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಕನ್ನಡದ ಅಸ್ಮಿತೆ ಹಾಗೂ ಅಸ್ತಿತ್ವದ ವಿಚಾರದಲ್ಲಿ ನಮ್ಮವರ ಅಭಿಮಾನ ಮೊದಲಿನಿಂದಲೂ ಜೋರಾಗಿಯೇ ಇದೆ. ಕರ್ನಾಟಕವೂ ರಚನೆಯಾಗಿ ಐದು ದಶಕ ತುಂಬಿ ಹೋಗಿದ್ದು. ಈ ಸಂಬಂಧ ಅಲ್ಲಲ್ಲಿ ಚಟುವಟಿಕೆಗಳೂ ನಡೆದಿವೆ. ಅದರಲ್ಲಿ ಹೆಸರಾಯಿತು ಕರ್ನಾಟಕ ಉಸಿರಾಯಿತು ಕನ್ನಡ ಅಭಿಯಾನ ಕೂಡ ಒಂದು. ಸರ್ಕಾರವು ಕರ್ನಾಟಕ ಸಂಭ್ರಮ -50 ರಡಿ ಹೆಸರಾಯಿತು ಕರ್ನಾಟಕ ಉಸಿರಾಯಿತು ಕನ್ನಡ ಅಭಿಯಾನದ ಅಂಗವಾಗಿ ರಾಜಧಾನಿಯಿಂದ ಆನೇಕಲ್ ಪಟ್ಟಣಕ್ಕೆ ಶುಕ್ರವಾರ ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.
ವಿವಿಧ ಜಾನಪದ ಕಲಾತಂಡಗಳ ಮುಖೇನ ಆನೇಕಲ್ ಪಟ್ಟಣದ ರಾಜಬೀದಿಗಳಲ್ಲಿ ಕನ್ನಡ ರಥಯಾತ್ರೆಯ ಮೆರವಣಿಗೆ ನಡೆಸಲಾಯಿತು. ಆನೇಕಲ್ ತಾಲ್ಲೂಕು ವಿಷೇಶ ತಹಸೀಲ್ದಾರ್ ಕರಿಯ ನಾಯಕ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪ್ರಕಾಶಮೂರ್ತಿ , ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕ್ ಅಧ್ಯಕ್ಷ ಆದೂರು ಪ್ರಕಾಶ್, ಕರ್ನಾಟಕ ರಕ್ಷಣಾ ವೇದಿಕೆ ಲೋಕೇಶ್ ಗೌಡ ಹಾಗೂ ಮಂಜುನಾಥ್ ಅವರು ಕನ್ನಡಾಂಬೆಯ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಲೋಕೇಶ್ ಗೌಡ ಮಾತನಾಡಿ ನಾಡು-ನುಡಿಗಾಗಿ ಶ್ರಮಿಸಿದ ಕಲಾವಿದರು, ಲೇಖಕರು, ಹೋರಾಟಗಾರರನ್ನು ಸ್ಮರಿಸುತ್ತಾ, ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆ ಕುರಿತು ಜಾಗೃತಿ ಮೂಡಿಸುವುದು, ಅಧಿಕಾರಿ ಹಾಗೂ ನಾಗರೀಕರಲ್ಲಿ ಕನ್ನಡ ವಾತಾವರಣ ನಿರ್ಮಾಣ ಮಾಡುವುದು ಈ ರಥಯಾತ್ರೆಯ ಉದ್ದೇಶವಾಗಿದೆ ಎಂದು ತಿಳಿಸಿದರು.
ವರದಿ:- ನಾಗರಾಜ್ ಪದ್ಮಶಾಲಿ
