ಕುಮಟಾ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಡಮೆಯಲ್ಲಿ ನೆಹರುರವರಿಗೆ ಪುಷ್ಪ ನಮನ ಸಲ್ಲಿಸಿ ವಿದ್ಯಾರ್ಥಿಗಳೇ ಕಾರ್ಯಕ್ರಮದ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ, ಅತಿಥಿಗಳಾಗಿ, ಕಾರ್ಯ ನಿರ್ವಹಿಸಿದ್ದು ಸಂಪೂರ್ಣ ಕಾರ್ಯಕ್ರಮದ ಸಂಯೋಜನೆಯನ್ನು ವಿದ್ಯಾರ್ಥಿಗಳೇ ನೆರವೇರಿಸಿದ್ದು ಮಕ್ಕಳ ದಿನಾಚರಣೆಯ ಸಂಭ್ರಮವನ್ನು ಹೆಚ್ಚಿಸಿದೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿದ್ಯಾರ್ಥಿನಿ ದೀಕ್ಷಾ ರಮೇಶ ಗೌಡ ರವರು “ಮಕ್ಕಳ ಹಕ್ಕುಗಳು, ಆರೋಗ್ಯ, ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವುದೇ ಮಕ್ಕಳ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ” ಎಂದಳು. ವಿದ್ಯಾರ್ಥಿ ವಿಘ್ನೇಶ್ ಗೌಡ ಮಾತನಾಡಿ “ಮಕ್ಕಳ ಅಕ್ಕರೆಯ ಚಾಚಾ ನೆಹರೂರವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸುತ್ತಿರುವುದು ವಿದ್ಯಾರ್ಥಿಗಳಾದ ನಮ್ಮೆಲ್ಲರ ಸೌಭಾಗ್ಯ” ಎಂದನು.
ಮುಖ್ಯ ಅತಿಥಿಯಾಗಿ ಮಾತನಾಡಿದ ಖುಷಿ “ನೆಹರೂರವರ ಆದರ್ಶ ಚಿಂತನೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಂಸ್ಕಾರಯುತ ಪ್ರಜೆಗಳಾಗೋಣ” ಎಂದಳು.
ನಂತರ ಮಕ್ಕಳಿಗಾಗಿ ಏರ್ಪಡಿಸಿದ್ದ ರಂಗೋಲಿ, ಗಾಳಿಪಟ, ಗೋಣಿಚೀಲ ಓಟ ವಿವಿಧ ಸ್ಪರ್ಧಾ ವಿಜೇತರಿಗೆ ಉಮಾ.ಜಿ. ನಾಯ್ಕ, ಲತಾ ಗೌಡ, ರಾಜೀವ ಗಾಂವಕರ, ಆನಂದ ನಾಯ್ಕ, ಬಹುಮಾನದ ಪ್ರಾಯೋಜಕತ್ವ ವಹಿಸಿದ್ದು ಬಹುಮಾನ ವಿತರಿಸಿ ಮಕ್ಕಳ ಪಾಲ್ಗೊಳ್ಳುವಿಕೆ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ದೇವಯಾನಿ ನಾಯಕ, ನಯನಾ ಜಿ.ಪಿ, ವೈಶಾಲಿ ನಾಯಕ,ನಾಗರತ್ನ ಗೌಡ, ಸವಿತಾ ಗೌಡ, ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಲೇಖಶ್ರೀ ಮಕ್ಕಳ ಹಕ್ಕುಗಳ ವಾಚನ ಮಾಡಿದರು. ಕಾರ್ಯಕ್ರಮ ವಿದ್ಯಾರ್ಥಿನಿ ನೇತ್ರಾವತಿ ಸಂಗಡಿಗರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ವಿದ್ಯಾರ್ಥಿನಿ ಪಲ್ಲವಿ ಸರ್ವರನ್ನು ಸ್ವಾಗತಿಸಿದಳು. ವಿದ್ಯಾರ್ಥಿನಿ ಲಕ್ಷ್ಮೀ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿನಿ ಶ್ರಾವ್ಯ ವಂದಿಸಿದರು. ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಲಾಯಿತು.
