ನವೋದಯ ವಿದ್ಯಾಲಯಕ್ಕೆ ಬೆಳ್ಳಿ ಹಬ್ಬದ ಸಂಭ್ರಮ
ನಮ್ಮ ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿ 1987 ನೇ ಇಸವಿಯಲ್ಲಿ ಆರಂಭವಾದಂತ ಜವಾಹರ ನವೋದಯ ವಿದ್ಯಾಲಯವು ಸತತ ನಾಲ್ಕು ದಶಕಗಳಿಂದ ಬಡ ಮತ್ತು ಗ್ರಾಮೀಣ ಪ್ರತಿಭೆಗಳಿಗೆ ಉಚಿತ ಶಿಕ್ಷಣವನ್ನು ನೀಡುತ್ತಾ ಬಂದಿದೆ. ಈ ವಿದ್ಯಾಲಯವು 1998ರಲ್ಲಿ 12ನೇ ಬ್ಯಾಚ್ ಆರಂಭವಾದಾಗ ಕುಮಟಾದಿಂದ ವಿದ್ಯಾರ್ಥಿಗಳ ಸಮೇತ ಮುಂಡಗೋಡ ತಾಲೂಕಿನ ಮಳಗಿ ಗ್ರಾಮದ ಪಂಚವಟಿಗೆ ಸ್ಥಳಾಂತರಗೊಂಡಿತ್ತು. ಕಳೆದ ನಾಲ್ಕು ದಶಕಗಳಲ್ಲಿ ಕಂಡು ಬಂದ ಈ ವಿದ್ಯಾಲಯದ ಶೈಕ್ಷಣಿಕ ಸಾಧನೆಯು ಹಿಮಾಲಯ ಪರ್ವತದಷ್ಟೇ ಎತ್ತರವಾಗಿದ್ದು, ಅರಬ್ಬಿ ಸಮುದ್ರದಷ್ಟೇ ವಿಶಾಲವಾದದ್ದು. ಮುಖ್ಯವಾಗಿ ಗ್ರಾಮೀಣ ಪ್ರದೇಶದಿಂದ ಬಂದವರಿಗಾಗಿ ಆರಂಭಗೊಂಡ ಜವಾಹರ ನವೋದಯ ವಿದ್ಯಾಲಯವು ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ನಗರದಿಂದ ಬಂದ ವಿದ್ಯಾರ್ಥಿಗಳಿಗೂ ಅಚ್ಚುಮೆಚ್ಚೆನಿಸಿದೆ. ನಗರದವರು ಗ್ರಾಮೀಣ ಪರಿಸರದಲ್ಲಿ ವಿದ್ಯಾಭ್ಯಾಸಕ್ಕಾಗಿ ಬಂದು, ಗುಣಮಟ್ಟದ ಶಿಕ್ಷಣ ಪಡೆದು, ತಮ್ಮ ಬದುಕನ್ನು ಸಾರ್ಥಕ ಪಡಿಸಿಕೊಂಡಿದ್ದಾರೆ. ಇಲ್ಲಿ ಸರಿಸುಮಾರು 42 ಎಕರೆ ಜಾಗದಲ್ಲಿ ಸುಸಜ್ಜಿತ ಶಾಲಾ ಕಟ್ಟಡ, ಆಟದ ಮೈದಾನ, ಭೋಜನ ಶಾಲೆ, ಸಂಗೀತ ಕೂಠಡಿ, ಡ್ರಾಯಿಂಗ್ ಕೊಠಡಿ, ರಸಾಯನಶಾಸ್ತ್ರ ಪ್ರಯೋಗಾಲಯ ಕೊಠಡಿ, ಭೌತಶಾಸ್ತ್ರ ಪ್ರಯೋಗಾಲಯ ಕೊಠಡಿ, ಜೀವಶಾಸ್ತ್ರ ಪ್ರಯೋಗಾಲಯ ಕೊಠಡಿ, ವೈದ್ಯಕೀಯ ಕೊಠಡಿ, ಗಣಕಯಂತ್ರ ಕೊಠಡಿ, ಪ್ರತಿ ಹಂತ ಹಂತದಲ್ಲೂ ಸಿ ಸಿ ಕ್ಯಾಮೆರಾ, ಎಲ್ಲಾ ತರಗತಿಯಲ್ಲಿ ಸ್ಮಾರ್ಟ್ ಕ್ಲಾಸ್ ಸೌಲಭ್ಯಗಳಿವೆ. ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ ವ್ಯವಸ್ಥೆ ಇದೆ. ಈ ವಿದ್ಯಾಲಯದಲ್ಲಿ ಓದಿದ 13 ನೇ ಬ್ಯಾಚಿನ ವಿದ್ಯಾರ್ಥಿಗಳಿಗೆ ಇದೇ ಡಿಸೆಂಬರ್ 15 ರ ರವಿವಾರ ದಂದು ಬೆಳ್ಳಿ ಹಬ್ಬದ ಸಂಭ್ರಮ.
13 ನೆಯ ಬ್ಯಾಚಿನ ವೈಶಿಷ್ಟ್ಯ
13 ನೆಯ ಬ್ಯಾಚಿನಲ್ಲಿ 1999 ರಲ್ಲಿ 6ನೆಯ ತರಗತಿಗೆ 80 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಎಲ್ಲರೂ ಅಲ್ಲಿನ ವಿದ್ಯಾಭ್ಯಾಸಕ್ಕೆ ಹೊಂದಿಕೊಂಡು ಉತ್ತಮ ಶಿಕ್ಷಣ ಪಡೆದಿದ್ದಾರೆ ಮತ್ತು ಶಿಕ್ಷಣ ಮುಗಿದ ನಂತರ ಉತ್ತಮ ಹುದ್ದೆಗಳಲ್ಲಿ ವೃತ್ತಿನಿರತರಾಗಿದ್ದಾರೆ:
35 ಇಂಜನಿಯರಗಳು (10 ಜನರು ವಿದೇಶಗಳಲ್ಲಿ)
02 ವೈದ್ಯರು
01 ಐ.ಐ.ಟಿ.ಯಲ್ಲಿ ಪ್ರೋಫೆಸರ
02 ಪಿ.ಎಚ.ಡಿ. ಮತ್ತು KSET
01 ಸಿ.ಎ.
03 ಬ್ಯಾಂಕಿನ ವ್ಯವಸ್ಥಾಪಕರು
01 ಬೋಧಕರು
02 ನರ್ಸಿಂಗ್ ಅಧಿಕಾರಿಗಳು 01 ವಾಣಿಜ್ಯೋದ್ಯಮಿ
02 ಸೇನಾ ಅಧಿಕಾರಿ ಆಗಿದ್ದಾರೆ.
ಕೆಲವರು ಸ್ವಂತ ಸ್ಟಾರ್ಟಪ್(ಆರಂಭೋದ್ಯಮಿ) ಮಾಡಿದ್ದಾರೆ.
ಕೆಲವರು ಸ್ವಂತ ಕಂಪನಿಯನ್ನು ಕಟ್ಟಿದ್ದಾರೆ, ಮತ್ತು
ಕೆಲವರು ಸ್ವಂತ ಬ್ರಹತ್ ಪ್ರಮಾಣದ ವ್ಯಾಪಾರದಲ್ಲಿ ತೊಡಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ವಾತಾವರಣ ಮತ್ತು ಶೈಕ್ಷಣಿಕ ವಾತಾವರಣ ಎಂದರೆ ಕಲಿಕೆಗೆ ಯೋಗ್ಯವಾದ ಶಾಂತತೆಯಿಂದ ಕೂಡಿದ ಏಕಾಗ್ರತೆಗೆ ಭಂಗ ಆಗದೆ ಇರುವಂತಹ ವಾತಾವರಣ ಎಂದು ಇಡೀ ಕರ್ನಾಟಕ ರಾಜ್ಯ ಹಾಡಿ ಹೊಗಳುತ್ತದೆ. ಆದ್ದರಿಂದ ಕೇವಲ ಉತ್ತರ ಕನ್ನಡ ಜಿಲ್ಲೆಯ ಮಕ್ಕಳು ಅಷ್ಟೇ ಅಲ್ಲ ಪಕ್ಕದ ಬೆಳಗಾವಿ, ಧಾರವಾಡ, ಹಾವೇರಿ, ಶಿವಮೊಗ್ಗ ಹಾಗೂ ಇತರ ಭಾಗದ ಮಕ್ಕಳು ಸಹ ಉತ್ತರ ಕನ್ನಡ ಜಿಲ್ಲೆಯ ಜವಾಹರ ನವೋದಯ ವಿದ್ಯಾಲಯಕ್ಕೆ ಸೇರಲು ತಮ್ಮ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಉತ್ತರ ಕನ್ನಡ ಜಿಲ್ಲೆಯ ಯಾವುದಾದರೂ ಗ್ರಾಮೀಣ ಭಾಗದ ಶಾಲೆಯಲ್ಲಿ ದಾಖಲು ಮಾಡಿಕೊಳ್ಳುತ್ತಾರೆ. ಉತ್ತರ ಕನ್ನಡ ಜಿಲ್ಲೆಯ ನವೋದಯ ಶಾಲೆಗೆ ಆಯ್ಕೆಯಾಗಲು ಸಾಮಾನ್ಯವಾಗಿ ಇತರೆ ಜಿಲ್ಲೆಗೆ ಹೋಲಿಸಿದರೆ ಸ್ಪರ್ಧೆ ಹೆಚ್ಚಾಗಿರುತ್ತದೆ. ಈಗಾಗಲೇ ಉತ್ತರ ಕನ್ನಡ ಜಿಲ್ಲೆಯು ಶೈಕ್ಷಣಿಕವಾಗಿ ಎರಡು ವಿಭಾಗವಾಗಿ ಮಾರ್ಪಟ್ಟಿದೆ – ಒಂದು ಕಾರವಾರ ಮತ್ತೊಂದು ಶಿರಸಿ ಶೈಕ್ಷಣಿಕ ಜಿಲ್ಲೆ. ಆದರೆ, ಇಡೀ ಉತ್ತರ ಕನ್ನಡ ಜಿಲ್ಲೆಗೆ ಒಂದೇ ನವೋದಯ ಶಾಲೆ ಇದೆ. ಅದೇ ರೀತಿ ಒಂದೇ ಕೇಂದ್ರೀಯ ವಿದ್ಯಾಲಯ ಕಾರವಾರದ ಅರ್ಗಾದಲ್ಲಿದೆ. ಇಂಥ ವಿಶಾಲವಾದ ಉತ್ತರ ಕನ್ನಡ ಜಿಲ್ಲೆಯಲ್ಲಿ ಇನ್ನು ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ. ಆದ್ದರಿಂದ ಕಾರವಾರ ಭಾಗದಲ್ಲಿ ಒಂದು ನವೋದಯ ಶಾಲೆ ಮತ್ತು ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಒಂದು ಕೇಂದ್ರೀಯ ವಿದ್ಯಾಲಯದ ಬೇಡಿಕೆ ಇದೆ.
ಉತ್ತರ ಕನ್ನಡ ಜಿಲ್ಲೆಯ ಪಂಚವಟಿ ನವೋದಯದಲ್ಲಿ ಒಂದು ದಿನ
ವಿದ್ಯಾರ್ಥಿಗಳು ಬೆಳಿಗ್ಗೆ 5 ಗಂಟೆಗೆ ಎದ್ದು ನಿತ್ಯಕರ್ಮಗಳನ್ನು ಮುಗಿಸಿ 5:45ಕ್ಕೆ ಮೈದಾನದಲ್ಲಿ ಹಾಜರಿರಬೇಕು. ಹಾಜರಾತಿ ಪರಿಶೀಲನೆ ಬಳಿಕ ಓಟ ಮತ್ತು ವ್ಯಾಯಾಮ ನಡೆಸಲಾಗುತ್ತದೆ. 6:30ಕ್ಕೆ ಸ್ನಾನ ಮತ್ತು ಶಾಲೆಗೆ ಹೊರಡಲು ತಯಾರಿಯ ನಂತರ 7:30ಕ್ಕೆ ಶಾಲಾ ಸಭೆ ಮತ್ತು ಪ್ರಾರ್ಥನೆ ನಡೆಯುತ್ತದೆ. 7:45ರಿಂದ 9:00ರವರೆಗೆ ಎರಡು ಅವಧಿಯ ಪಾಠಗಳು ನಡೆಯುತ್ತವೆ, ಬಳಿಕ 9:00ಕ್ಕೆ ಉಪಹಾರವಿರುತ್ತದೆ. 9:30ರಿಂದ 1:30ರವರೆಗೆ ಪಾಠ ಪ್ರವಚನಗಳು (ಒಟ್ಟು 8 ಅವಧಿ) ನಡೆಯುತ್ತವೆ. 1:30ರಿಂದ 2:30ರವರೆಗೆ ಭೋಜನ ವಿರಾಮ ನೀಡಲಾಗುತ್ತದೆ. ನಂತರ 2:30ರಿಂದ 4:00ರವರೆಗೆ ತರಗತಿಯಲ್ಲಿ ಅಂದಿನ ಪಾಠಗಳ ಅಭ್ಯಾಸ ನಡೆಸಲಾಗುತ್ತದೆ. 4:00ರಿಂದ
4:30ರವರೆಗೆ ಉಪಹಾರ ಮತ್ತು ಲಘು ವ್ಯಾಯಾಮಕ್ಕೆ ಸಮಯ ಹೊಂದಿಸಲಾಗಿದೆ. 4:30ರಿಂದ 6:00ರವರೆಗೆ ಕ್ರೀಡೆಗಳಲ್ಲಿ ಭಾಗವಹಿಸುವ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ. 6:00ರಿಂದ 6:30ರವರೆಗೆ ತಯಾರಿಯ ನಂತರ 6:30ರಿಂದ 8:00ರವರೆಗೆ ಮತ್ತೆ ತರಗತಿಯಲ್ಲಿ ಪಾಠಗಳ ಅಭ್ಯಾಸ ನಡೆಸಲಾಗುತ್ತದೆ. 8:00ಕ್ಕೆ ರಾತ್ರಿಯ ಭೋಜನ ಮತ್ತು 10:00ಕ್ಕೆ ನಿದ್ರೆಗೆ ಸಮಯವಿರುತ್ತದೆ. ಪ್ರತಿ ದಿನ 10 ರಿಂದ 15 ಬಾರಿ ಹಾಜರಾತಿ ಪರಿಶೀಲನೆ ನಡೆಯುತ್ತದೆ. ತಿಂಗಳ ಕೊನೆಯ ಶನಿವಾರ ಬಡಾಕಾನಾ (ಔತಣದೂಟ) ಆಯೋಜಿಸಲಾಗುತ್ತದೆ. ಶಾಲೆಯಲ್ಲಿ ನೀರು, ವಿದ್ಯುತ್, ಮತ್ತು ಬಿಸಿ ನೀರಿನ ಸೌಲಭ್ಯಗಳೂ ಲಭ್ಯವಿವೆ.
ನಮ್ಮ ದೇಶದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಜವಾಹರ ನವೋದಯ ವಿದ್ಯಾಲಯ ಸದಾ ಮುಂಚೂಣಿಯಲ್ಲಿದೆ. ಹಲವು ಕಡೆ ಆರಂಭಗೊಂಡಿರುವ ಈ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆದವರು ಬದುಕಿನಲ್ಲಿ ಯಶಸ್ಸು ಸಾಧಿಸಿದ್ದಾರೆ. ಮಳಗಿ ಧರ್ಮಾಜಲಾಶಯ ಸಮೀಪ ಇರುವ ಉತ್ತರ ಕನ್ನಡ ಜಿಲ್ಲೆಯ ಪಂಚವಟಿಯ ನವೋದಯ ವಿದ್ಯಾಲಯದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಯೊಬ್ಬರು ಅವರ ಬ್ಯಾಚಿನ ಬೆಳ್ಳಿಹಬ್ಬವನ್ನು ಆಚರಿಸುವ ಸಂದರ್ಭದಲ್ಲಿ ತಾವು ಪಡೆದ ಶಿಕ್ಷಣದ ದಿನಗಳನ್ನು ಇಲ್ಲಿ ನೆನಪಿಸಿಕೊಂಡಿದ್ದಾರೆ.
ವಿದ್ಯಾಲಯದ ಗುರಿ
ವಿದ್ಯಾರ್ಥಿಯ ಕುಟುಂಬದ ಸಾಮಾಜಿಕ, ಆರ್ಥಿಕ ಸ್ಥಿತಿಯನ್ನು ಪರಿಗಣಿಸದೆ ಗ್ರಾಮೀಣ ಪ್ರದೇಶದ ಪ್ರತಿಭಾವಂತ ಮಕ್ಕಳಿಗೆ ಉತ್ತಮ ಗುಣಮಟ್ಟದ ಆಧುನಿಕ ಶಿಕ್ಷಣವನ್ನು ಒದಗಿಸುವದು. ಸಂಸ್ಕೃತಿ ಮೌಲ್ಯಗಳ ಅಳವಡಿಕೆ, ಪರಿಸರದ ಅರಿವು, ಸಾಹಸ ಚಟುವಟಿಕೆಗಳು ಮತ್ತು ದೈಹಿಕ ಶಿಕ್ಷಣದ ಬಲವಾದ ಅಂಶಗಳನ್ನು ವಿದ್ಯಾರ್ಥಿಯಲ್ಲಿ ಮೈಗೂಡಿಸುವುದು.
ವಿದ್ಯಾಲಯದ ಉದ್ದೇಶ
“ವಿದ್ಯೆ ಕಲಿಯಲು ಒಳಗೆ ಬನ್ನಿ ಸೇವೆಗಯ್ಯಲು ಹೊರಗೆ ಹೋಗಿ
“COME IN TO LEARN, GO OUT TO SERVE”
ಇಲ್ಲಿನ ಶಿಕ್ಷಕರು ಮತ್ತು ಶಾಲೆ ಕಲ್ಲಿನಂತಿದ್ದ ನಮ್ಮನ್ನು ಸರಿಯಾಗಿ ಕತ್ತಿ ಯೋಗ್ಯ ಮೂರ್ತಿಯನ್ನಾಗಿ ಮಾಡಿದ್ದಾರೆ. ಆ ಸವಿ ನೆನಪಿಗಾಗಿ ಬೆಳ್ಳಿ ಹಬ್ಬವನ್ನು ಇದೆ ಡಿಸೆಂಬರ್ 15 ಕ್ಕೆ ಮಾಡುತ್ತಿದ್ದೇವೆ.
ಬೆಳ್ಳಿ ಹಬ್ಬದ ಉದ್ದೇಶ
ಜವಾಹರ್ ನವೋದಯ ವಿದ್ಯಾಲಯ ನಮ್ಮನ್ನೆಲ್ಲ ಸರ್ವತೋಮುಖವಾಗಿ ಅಭಿವೃದ್ಧಿಪಡಿಸಿದೆ. ಅಂದು ಈ ಕೆಳಗಿನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ:
1) ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮತ್ತು ಅವರೊಂದಿಗೆ ಸಂವಾದ
2) ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಅಥವಾ ಅಧ್ಯಯನ ಸಾಮಗ್ರಿ ವಿತರಣೆ
3) ಶಾಲಾ ದೀರ್ಘಾವಧಿ ಅಭಿವೃದ್ಧಿ ನಿಧಿ ಪ್ರದಾನ
4) ಬೋಧಿಸಿದ ಗುರುಗಳಿಗೆ ವಂದನಾರ್ಪಣೆ ನಡೆಯಲಿದೆ
ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಬಾಂಧವ್ಯದ ಹೇಗಿದೆ ಎಂದರೆ ಶಿಕ್ಷಕರನ್ನು ನೋಡಲೆಂದು ವಿದ್ಯಾರ್ಥಿಗಳು ಪ್ರತಿ ವರ್ಷ ಬರುತ್ತಿರುತ್ತಾರೆ, ಅದೇ ರೀತಿ ಶಿಕ್ಷಕರು ಸಹ ತಮ್ಮ ಕಾರ್ಯನಿರತದಲ್ಲೂ ಬಿಡುವು ಮಾಡಿಕೊಂಡು ತಾವು ಕಲಿಸಿದ ವಿದ್ಯಾರ್ಥಿಗಳನ್ನು ನೋಡಲು ಬರುತ್ತಾರೆ. ಇದೆ ಈ ಬೆಳ್ಳಿ ಹಬ್ಬ.