ಕನ್ನಡ ನಾಡಿನ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿ ಅಮಟೂರೆಂಬ ಹಳ್ಳಿಯೊಂದಿದೆ. ಆ ಊರಲ್ಲಿ ಜನಸಿದ ಮರಿಸಿಂಹವೊಂದು, ಬ್ರಿಟಿಷರ ಭೇಟಿಯಾಡುತ್ತದೆ. ಕಿತ್ತೂರು ಸಂಸ್ಥಾನದ ಮೇಲೆ ಆಕ್ರಮಣ ಮಾಡಿದ ಬ್ರಿಟಿಷ್ ಅಧಿಕಾರಿ ಥ್ಯಾಕರೆಯ ರಕ್ತದ ರುಚಿ ನೋಡುತ್ತದೆ. ಆ ಸಿಂಹ ಬೇರೆ ಯಾರು ಅಲ್ಲಾ, ವೀರ ಕೇಸರಿ “ಅಮಟೂರು ಬಾಳಪ್ಪ”. ಬ್ರಿಟಿಷರ ಎದೆಗೆ ನೇರವಾಗಿ ಗುಂಡಿಕ್ಕಿ, ಕಿತ್ತೂರಿನಲ್ಲಿ ನಂದಿಧ್ವಜ ಹಾರಿಸಿದ ವೀರ ಯೋಧನ ಬಗ್ಗೆ ಅದೆಷ್ಟೊ ಜನಕ್ಕೆ ಗೊತ್ತಿಲ್ಲದಿರುವುದು ವಿಪರ್ಯಾಸ…
ಸರ್ಕಾರಗಳು ಮರೆತರೆ ಏನಂತೆ, ಆ ಊರಿನ ಜನರೇ ಅಮಟೂರು ಬಾಳಪ್ಪನವರ ಹೆಸರಲ್ಲಿ ಒಂದು ಟ್ರಸ್ಟ್ ಕಟ್ಟಿ, ಅವರ ಇತಿಹಾಸ ಇನ್ನೂ ಜೀವಂತ ಉಳಿಯುವಂತೆ ಮಾಡಿದ್ದಾರೆ..
೧೮೨೪ ರಲ್ಲಿ ಕಿತ್ತೂರು ಸಂಸ್ಥಾನದ ಮೇಲೆ ಬ್ರಿಟಿಷರ ಕಣ್ಣು ಬಿದ್ದಿತ್ತು. ರಾಣಿ ಚೆನ್ನಮ್ಮಳ ಈ ಸಂಸ್ಥಾನವನ್ನು ಹೇಗಾದ್ರು ಮಾಡಿ ತಮ್ಮ ವಶಕ್ಕೆ ತೆಗೆದುಕೊಳ್ಳಬೇಕೆಂದು ಬ್ರಿಟಿಷರು ಹೊಂಚು ಹಾಕುತಿದ್ದರು. ಆದರೆ, ಬ್ರಿಟಿಷರಿಗೆ ಅದು ಅಷ್ಟು ಸುಲಭದ ತುತ್ತಾಗಿರಲಿಲ್ಲ. ಕಿತ್ತೂರು ಸಂಸ್ಥಾನ ಚಿಕ್ಕದಾಗಿದ್ದರು, ತಮ್ಮ ಸಂಸ್ಥಾನವನ್ನಾ ಪರಕೀಯರಿಂದ ಪ್ರಾಣ ಕೊಟ್ಟಾದರು ಕಾಪಾಡಬೇಕೆಂಬ ಸಾವಿರಾರು ಶೂರರು ಅಲ್ಲಿದ್ದರು. ಈ ಶೂರರಲ್ಲಿ ಪ್ರಮುಖವಾಗಿ ಕೇಳಿ ಬರುವುದೆ ಎರಡು ಹೆಸರುಗಳು. ಒಂದು ಕ್ರಾಂತಿವೀರ ಎನಿಸಿದ ಸಂಗೊಳ್ಳಿ ರಾಯಣ್ಣ, ಮತ್ತೊಂದು ವೀರಕೇಸರಿ ಅಮಟೂರು ಬಾಳಪ್ಪ. ಈ ಇಬ್ಬರು ಕೂಡ ರಾಣಿ ಚೆನ್ನಮ್ಮನ ಎರಡು ಕಣ್ಣುಗಳಂತಿದ್ದರು. ರಾಯಣ್ಣನ ಬಗ್ಗೆ ನಾವೆಲ್ಲಾ ತಿಳಿದುಕೊಂಡಿದ್ದೇವೆ. ಆದರೆ, ಇನ್ನೊಬ್ಬ ಧೀರ ಯೋಧ ಅಮಟೂರು ಬಾಳಪ್ಪರ ಬಗ್ಗೆ ಹೆಚ್ಚಿನ ಮಾಹಿತಿ ಸಿಗುವುದಿಲ್ಲ.. ಈ ಲೇಖನದ ಮೂಲಕವಾದರು ಬಾಳಪ್ಪನ ಬಗ್ಗೆ ಒಂದಷ್ಟು ಮಾಹಿತಿಯನ್ನು ಹಂಚಿಕೊಳ್ಳುವ..
೧೮೨೪ ರಲ್ಲಿ ಬ್ರಿಟಿಷರು ಕಿತ್ತೂರಿನ ಮೇಲೆ ಆಕ್ರಮಣ ಮಾಡೋಕೆ ಸಜ್ಜಾಗಿ ನಿಂತಿದ್ರು.. ಬ್ರಿಟಿಷರು ಅಂದುಕೊಂಡಂತೆ ಕಿತ್ತೂರಿನ ಮೇಲೆ ಆಕ್ರಮಣ ಮಾಡಲು ಮುಂದಾದರು. ತನ್ನ ನಾಡಿನ ಉಳಿವಿಗಾಗಿ ಅಪಾರವಾದ ಬ್ರಿಟಿಷರ ಸೈನ್ಯದ ಮುಂದೆ ತೊಡೆತಟ್ಟಿ ನಿಂತ ರಾಣಿ ಚೆನ್ನಮ್ಮ, ತನ್ನ ನೆಚ್ಚಿನ ಸೈನಿಕರೊಂದಿಗೆ ಹೋರಾಡಲು ಸಜ್ಜಾದರು..
ಅಂದು ಅಕ್ಟೋಬರ ೨೧, ೧೮೨೪. ಬ್ರಿಟಿಷ್ ಅಧಿಕಾರಿಗಳಾದ ಥ್ಯಾಕರೆ, ಮನ್ರೋ ಮತ್ತು ಚಾಪ್ಲಿನ್ ಕಿತ್ತೂರಿನ ಮೇಲೆ ಆಕ್ರಮಣ ಮಾಡಲು ಸನ್ನದ್ಧರಾಗಿರುತ್ತಾರೆ. ಅಕ್ಟೋಬರ ೨೩ ರಂದು ಇನ್ನೇನು ಕಿತ್ತೂರು ನಮ್ಮ ಬ್ರಿಟಿಷರ ವಶವಾಗುತ್ತದೇನೋ ಅಂದುಕೊಳ್ಳುತ್ತಿರುವಾಗ, ಸರದಾರ ಗುರುಸಿದ್ದಪ್ಪನವರ ಮುಂದಾಳತ್ವದಲ್ಲಿ ಕಿತ್ತೂರಿನ ಸೈನ್ಯ, ಬ್ರಿಟಿಷರ ಮೇಲೆ ಮುಗಿಬಿದ್ದಿತು. ಆಗ ನಮ್ಮ ವೀರ ಯೋಧ, ರಾಣಿ ಚೆನ್ನಮ್ಮಳ ಅಂಗರಕ್ಷಕನಾದ ಅಮಟೂರು ಬಾಳಪ್ಪ ಬ್ರಿಟಿಷ್ ಅಧಿಕಾರಿ ಥ್ಯಾಕ್ರೆಯ ಎದೆಗೆ ಗುರಿ ಇಟ್ಟು ಗುಂಡಿನ ದಾಳಿ ಮಾಡುತ್ತಾನೆ. ಆ ಗುರಿಕಾರನ ಗುರಿ ತಪ್ಪಲಿಲ್ಲ.. ಕಿತ್ತೂರು ಬ್ರಿಟಿಷರ ವಶವಾಗಲಿಲ್ಲ.. ನೋಡು ನೋಡುತ್ತಿದ್ದಂತೆ ಕೆಂಪು ಮುಖದ ಆ ಬ್ರಿಟಿಷ್ ಅಧಿಕಾರಿ ರಕ್ತದ ಮಡುವಿನಲ್ಲಿ ಬಿದ್ದು ಅಸುನೀಗುತ್ತಾನೆ. ಈ ಐತಿಹಾಸಿಕ ದಿನವನ್ನು ಕರ್ನಾಟಕ ಸರ್ಕಾರ “ಕಿತ್ತೂರು ಉತ್ಸವ” ಎಂಬ ಹೆಸರಿನಲ್ಲಿ ಆಚರಿಸುತ್ತಾ ಬಂದಿದೆ. ಆದರೆ ಈ ಉತ್ಸವಕ್ಕೆ ಕಿರೀಟಪ್ರಾಯವಾಗಬೇಕಿದ್ದ ವೀರಯೋಧ ಅಮಟೂರು ಬಾಳಪಪ್ಪನನ್ನು ನಾವೆಲ್ಲಾ ಮರೆತಿರುವುದನ್ನ ಇತಿಹಾಸ ಯಾವತ್ತು ಕ್ಷಮಿಸುವುದಿಲ್ಲಾ..
ಕಿತ್ತೂರಿನಲ್ಲಿ ಆದ ಅವಮಾನದ ಸೇಡು ಬ್ರಿಟಿಷರ ಎದೆಯಲ್ಲಿ ಕೊತ ಕೊತ ಕುದಿಯುತ್ತಿತ್ತು. ಅವಕಾಶಕ್ಕಾಗಿ ಹೊಂಚು ಹಾಕಿ ಕಾಯುತ್ತಿದ್ದವರಿಗೆ, ನಮ್ಮ ನೆಲದ ಕೆಲವು ನರಿ ಬುದ್ಧಿಯುಳ್ಳ ವಿಶ್ವಾಸಘಾತುಕರು ಸಹಾಯ ಮಾಡಿದ್ದರ ಪರಿಣಾಮ ಬ್ರಿಟಿಷರು ಎರಡನೇ ಬಾರಿಗೆ ಕಿತ್ತೂರಿನ ಮೇಲೆ ಯುದ್ಧ ಸಾರಿದ್ರು. ಡಿಸೆಂಬರ ೩, ೧೮೨೪ ರಂದು ಅಪಾರ ಸೈನ್ಯದೊಂದಿಗೆ ಆಗಮಿಸಿದ ಬ್ರಿಟಿಷರು, ಕಿತ್ತೂರು ಎಂಬ ಪುಟ್ಟ ಸಂಸ್ಥಾನದ ಮೇಲೆ ಆಕ್ರಮಣ ಮಾಡಿಯೇ ಬಿಟ್ರು. ಬಹುಶಃ ನಮ್ಮ ನೆಲದ ಮಲ್ಲಪ್ಪನಂತವರು ಬ್ರಿಟಿಷರಿಗೆ ಸಹಕಾರ ಕೊಡದಿದ್ರೆ ಎರಡನೇ ಯುದ್ಧದಲ್ಲೂ ನಂದಿಧ್ವಜ ಕಿತ್ತೂರಿನ ಕೋಟೆಯ ಮೇಲೆ ಹಾರುತ್ತಿತ್ತೆನೊ…
ಆದರೆ, ಆ ವಿಧಿಯ ಆಟವೇ ಬೇರೊಂದಾಗಿತ್ತು. ಡಿಸೆಂಬರ ೪ ರ ಯುದ್ಧದ ಸಮಯದಲ್ಲಿ, ರಾಣಿ ಚೆನ್ನಮ್ಮರಿಗೆ ಬಂದೂಕಿನಿಂದ ಗುರಿಯಿಟ್ಟ ಬ್ರಿಟಿಷರಿಗೆ ಅಡ್ಡಲಾಗಿ ನಿಂತಿದ್ದು ಇದೇ ಅಮಟೂರು ಬಾಳಪ್ಪ. ಆದರೆ, ಆ ಕುತಂತ್ರದ ಯುದ್ಧದಲ್ಲಿ ನಮ್ಮ ವೀರ ಯೋಧ ಬಾಳಪ್ಪರಿಗೆ ಸಾವಾಯಿತು. ಬ್ರಿಟಿಷರ ಗುಂಡೇಟಿಗೆ ಎದೆ ಕೊಟ್ಟು ನಿಂತ ವೀರಕೇಸರಿ ಅಮಟೂರು ಬಾಳಪ್ಪ ಯುದ್ಧದಲ್ಲಿ ಹುತಾತ್ಮರಾದರು. ತನ್ನ ತಾಯಿ ಸಮಾನಳಾದ ರಾಣಿ ಚೆನ್ನಮ್ಮನ ಪ್ರಾಣ ಕಾಪಾಡಲು, ತಮ್ಮ ಪ್ರಾಣವನ್ನೆ ನಾಡಿಗಾಗಿ ಅರ್ಪಿಸಿದ ಮಹಾನ್ ತ್ಯಾಗಿ ಅಮಟೂರು ಬಾಳಪ್ಪ..
ಇಂತಹ ವೀರ ಯೋಧನ ಬಗ್ಗೆ ಇತಿಹಾಸದಲ್ಲಾಗಲಿ ಅಥವಾ ಪಠ್ಯ ಪುಸ್ತಕದಲ್ಲಾಗಲಿ ಸ್ಥಾನಮಾನ ಸಿಗದಿರುವುದು ನಿಜಕ್ಕೂ ದುಃಖದ ಸಂಗತಿ. ನಾಡಿಗಾಗಿ ಪ್ರಾಣ ತ್ಯಾಗ ಮಾಡಿದ ಅಮಟೂರು ಬಾಳಪ್ಪನಂತ ವೀರ ಯೋಧರು ಇಂದಿನ ಯುವಪೀಳಿಗೆಗೆ ಮಾದರಿಯಾಗಬೇಕು…
ನಾವೆಲ್ಲಾ ಗೌರವಪೂರ್ವಕವಾಗಿ ಅವರನ್ನು ಸ್ಮರಿಸೋಣ.
ವರದಿ: ಬಸವರಾಜ್ ಕೊಲ್ಕರ್