ಪದ್ಮ ಭೂಷಣ ಡಾ. ಹೆಚ್. ನರಸಿಂಹಯ್ಯ ಇವರ ಹೆಸರಿನಲ್ಲಿ ಕೊಡಮಾಡುವ ಹೆಚ್.ಎನ್ ರಾಜ್ಯ ಪ್ರಶಸ್ತಿಯನ್ನು 2024-25 ನೇ ಸಾಲಿಗೆ ವಿನಾಯಕ ಲಕ್ಷ್ಮಣ ನಾಯ್ಕ ಇವರಿಗೆ ನೀಡಿ ಗೌರವಿಸಲಾಯಿತು.
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು (ರಿ) ದೊಡ್ಡಬಳ್ಳಾಪುರ, ಬೆಂಗಳೂರು ಹಾಗೂ ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರದ ವತಿಯಿಂದ ಪ್ರತಿ ವರ್ಷ ಶಿಕ್ಷಣ, ಸಾಹಿತ್ಯ, ವಿಜ್ಞಾನ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳನ್ನು ಗುರುತಿಸಿ ರಾಜ್ಯಮಟ್ಟದ ಪ್ರಶಸ್ತಿಗಳನ್ನು ಕೊಡಲಾಗುತ್ತಿದೆ. ಜ. 4 ರಂದು ಬೆಂಗಳೂರು ನಗರ ಜಿಲ್ಲೆಯ ಬಾಗಲೂರಿನಲ್ಲಿ ನಡೆದ ರಾಜ್ಯಮಟ್ಟದ 4 ನೇ ವೈಜ್ಞಾನಿಕ ಸಮ್ಮೇಳನದಲ್ಲಿ ಸಮ್ಮೇಳಾನಾಧ್ಯಕ್ಷೆ ಶ್ರೀಮತಿ ಉಮಾಶ್ರೀ, ಇಸ್ರೋದ ಮಾಜಿ ಅಧ್ಯಕ್ಷರಾದ ಡಾ. ಎ. ಎಸ್. ಕಿರಣಕುಮಾರ್, ಸಂಸ್ಥಾಪಕ ಅಧ್ಯಕ್ಷರಾದ ಡಾ. ಹುಲಿಕಲ್ ನಟರಾಜರವರ ನೇತೃತ್ವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ವಿನಾಯಕ ಲಕ್ಷ್ಮಣ ನಾಯ್ಕರು ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಕ್ಷೇತ್ರ ಸಂಪನ್ಮೂಲ ಕೇಂದ್ರ ದಲ್ಲಿ ವಿಶೇಷ ಶಿಕ್ಷಣದ ವಿಶೇಷ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೂಲತಃ ಹೊನ್ನಾವರ ತಾಲ್ಲೂಕಿನ ಕಡತೋಕಾದವರಾದ ಇವರು ಎಮ್.ಎ.-ಬಿ. ಎಡ್ (ಜನರಲ್ ಹಾಗೂ ವಿಶೇಷ ಶಿಕ್ಷಣ) ಪದವೀಧರರು
ಕಳೆದ 31 ವರ್ಷದಿಂದ ಶಾಲಾ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರಾಗಿ, ಜೋಯಿಡಾದ ಕುರಾವಳಿ, ಹೊನ್ನಾವರದ ಮಂಕಿಯ ಹೊಸಹಿತ್ತಲ, ಕುಮಟಾದ ಕುಡವಳ್ಳಿ ಶಾಲೆಗಳಲ್ಲಿ ಸೇವೆ ಸಲ್ಲಿಸಿ ಶಾಲೆಗಳ ಭೌತಿಕ, ಬೌದ್ಧಿಕ ಪರಿಸರವನ್ನು ಉತ್ತಮಗೊಳಿಸುವಲ್ಲಿ ಇವರ ಪಾತ್ರ ಗಮನಾರ್ಹವಾದುದು.
ಹೊನ್ನಾವರದ ಬಿ.ಆರ್.ಸಿ. ಯಲ್ಲಿ ಬಿ.ಆರ್.ಪಿ ಯಾಗಿ, ಕಡತೋಕ ಕ್ಲಸ್ಟರಿನ ಸಿ.ಆರ್.ಪಿ ಯಾಗಿ ಅತ್ಯುತ್ತಮವಾಗಿ ಸೇವೆ ಸಲ್ಲಿಸಿ, ಪ್ರಸ್ತುತ ಕುಮಟಾ ತಾಲ್ಲೂಕಿನ ಬಿ.ಆರ್.ಸಿ. ಯಲ್ಲಿ ಬಿ.ಆಯ್.ಇ.ಆರ್.ಟಿ. ಆಗಿ ಕರ್ತವ್ಯ ನಿರ್ವಹಿಸುತ್ತ ತಾಲ್ಲೂಕಿನ, ಜಿಲ್ಲೆಯ ಹಲವು ಬಡ ಮಕ್ಕಳು, ತೀವ್ರ ಅನಾರೋಗ್ಯದ, ಮಾರಣಾoತಿಕ ಕಾಯಿಲೆಗೆ ತುತ್ತಾದ ಸಂದರ್ಭದಲ್ಲಿ ರಾಜ್ಯದ ಸುಸಜ್ಜಿತ ಆಸ್ಪತ್ರೆಗಳಲ್ಲಿ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಉಚಿತ ಚಿಕಿತ್ಸೆ, ಸೌಲಭ್ಯ ಒದಗಿಸಿಕೊಡುತ್ತ ತಮ್ಮ ಶಿಕ್ಷಕ ಬದುಕಿನ ಸಾರ್ಥಕತೆ ಮೆರೆದಿದ್ದಾರೆ.
ಇವರ ನಿಶ್ವಾರ್ಥ ಸೇವೆ ಗುರುತಿಸಿ ಇತ್ತೀಚೆಗೆ ಶಿಕ್ಷಣ ನಿರ್ಮಾತೃ ರಾಜ್ಯ ಪ್ರಶಸ್ತಿ ಲಭಿಸಿರುವುದನ್ನು ಇಲ್ಲಿ ಸ್ಮರಿಸಬಹುದು.
ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಆನಂದ ಕೆ. ನಾಯ್ಕ ಮತ್ತು ಕಾರ್ಯದರ್ಶಿ ಮಂಜಪ್ಪ ಅಂಗರಗಟ್ಟಿ ಹಾಗೂ ಜಿಲ್ಲೆಯ ಎಲ್ಲಾ ಪದಾಧಿಕಾರಿಗಳು, ಶಿಕ್ಷಕ ವೃಂದದವರು ವಿನಾಯಕ ನಾಯ್ಕರವರನ್ನು ಅಭಿನಂದಿಸಿದ್ದಾರೆ.