ಸ್ವಯಂಚಾಲಿತ ವಿದ್ಯುತ್ ವಾಹನಗಳ ಚರ್ಚೆ ಆಗಾಗ ಆಗುತ್ತಿರುತ್ತದೆ. ಅಂಥ ಎಲ್ಲ ಚರ್ಚೆಗಳೂ ಹೆಚ್ಚಿನದಾಗಿ ಪ್ರಯಾಣಿಕರು ಮತ್ತು ಪ್ರಯಾಣಿಕರ ಮಾರ್ಗವನ್ನವಲಂಬಿಸಿದ ವಾಹನಗಳ ಬಗ್ಗೆಯೇ ಹೆಚ್ಚು. ಅವು ಬೇರೆ ಬೇರೆ ದೇಶಗಳ ಬೇರೆ ಬೇರೆ ಬಗೆಯ ರಸ್ತೆ ವಿನ್ಯಾಸ ಮತ್ತು ಆ ರಸ್ತೆಗಳ ಮೇಲೆ ಬದಲಾಗುವ ವಾಹನಸಾಂದ್ರತೆಯ ಪ್ರಮಾಣಗಳು ಇವೆಲ್ಲವನ್ನೂ ಅವಲಂಬಿಸಿರುವುದರಿಂದ ಇಲ್ಲಿನ ಸಮೀಕರಣಗಳು ಕ್ಲಿಷ್ಟ. ಆದರೆ, ಇವುಗಳಿಗೆ ಭಿನ್ನವಾದ ವಲಯವೊಂದಿದೆ. ಅಲ್ಲಿ ಸ್ವಯಂಚಾಲಿತ ವಾಹನಕ್ಕೆ ಈ ಸವಾಲುಗಳಿಲ್ಲ. ಅದೆಂದರೆ ಕೃಷಿ ವಲಯ.
ರಸ್ತೆ ಮತ್ತು ಪ್ರಯಾಣಿಕರ ವಲಯಕ್ಕೆ ಹೋಲಿಸಿದರೆ ಇಲ್ಲಿನ ಸ್ಕೇಲ್ ತುಂಬ ಕಡಿಮೆ ಹೌದು. ಆದರೆ ಟ್ರಾಕ್ಟರ್ ಅಥವಾ ಇನ್ಯಾವುದೇ ಸಲಕರಣೆಗಳ ಸ್ವಯಂಚಾಲಿತ ವ್ಯವಸ್ಥೆ ಎನ್ನುವುದು ಭವಿಷ್ಯದ ಕೃಷಿ ನಿರ್ವಹಣೆಯಲ್ಲಿ ಅನಿವಾರ್ಯವಾಗಲಿದೆ. ಏಕೆಂದರೆ, ಅದಾಗಲೇ ಕೃಷಿ ವಲಯದಲ್ಲಿ ಕಾರ್ಮಿಕರ ಕೊರತೆ ಎಂಬುದು ಬಹುತೇಕ ದೇಶಗಳಲ್ಲಿ ಕಾಡುತ್ತಿದೆ. ಜನಸಂಖ್ಯೆ ಹೆಚ್ಚಿದೆ ಎಂಬ ಭಾರತದಂಥ ದೇಶಗಳಲ್ಲಿ ಸಹ ಕೃಷಿ ಕೆಲಸಕ್ಕೆ, ವಿಶೇಷವಾಗಿ ದೈಹಿಕ ಶ್ರಮ ಬೇಡುವ ಕೆಲಸಗಳಿಗೆ ಕೆಲಸಗಾರರು ದೊರಕುತ್ತಿಲ್ಲ. ಇದು ಕೃಷಿವಲಯದಲ್ಲಿ ಸ್ವಯಂಚಾಲಿತ ತಂತ್ರಜ್ಞಾನ ವ್ಯವಸ್ಥೆಗೆ ಅರ್ಥಾತ್ ಅಟೊಮೇಶನ್ ಗೆ ದೊಡ್ಡ ಅವಕಾಶವೊಂದನ್ನು ಹರವಿಟ್ಟಿದೆ. ಇದು ತೆರೆದುಕೊಳ್ಳುತ್ತಿರುವ ಬಗೆ ಹೇಗೆ ಎಂಬುದನ್ನು ಕಂಪನಿಯೊಂದರ ಉದಾಹರಣೆಯ ಮೂಲಕವೇ ನೋಡೋಣ. ಮೊನಾರ್ಕ್ ಟ್ರ್ಯಾಕ್ಟರ್ಸ್ (Monarch Tractor ) ಅನ್ನೋದು 2017ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಶುರುವಾದ ನವೋದ್ದಿಮೆ. ಭಾರತೀಯ ಮೂಲದ ಪ್ರವೀಣ ಪೆನ್ಮೆಸ್ತ (Praveen Penmetsa) ಇದರ ಸಿಇಒ. ಟ್ರ್ಯಾಕ್ಟರುಗಳನ್ನು ಎಲೆಕ್ಟ್ರಿಕ್ ಚಾಲಿತ ಹಾಗೂ ಸ್ವಯಂಚಾಲಿತವಾಗಿಸಿ ಅವನ್ನು ಮಾಹಿತಿ ಸಂಗ್ರಹ ಹಾಗೂ ಸಂಸ್ಕರಣೆಯ ಕೇಂದ್ರವನ್ನೂ ಆಗಿಸಿರುವುದು ಮೊನಾರ್ಕ್ ಟ್ರ್ಯಾಕ್ಟರ್ ಕಂಪನಿಯ ಹೆಚ್ಚುಗಾರಿಕೆ. 2021ರಲ್ಲಿ ಇದು 61 ಮಿಲಿಯನ್ ಡಾಲರುಗಳ ಸಿರೀಸ್ ಬಿ ಫಂಡ್ ಪಡೆದುಕೊಂಡಿದೆ. ಯಾವುದೇ ನವೋದ್ದಿಮೆ ಒಂದು ಹಂತದಲ್ಲಿ ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸಿಕೊಂಡು ಮುಂದಿನ ಬೆಳವಣಿಗೆಯ ವಿಶ್ವಾಸ ಹುಟ್ಟಿಸಿದಾಗಲಷ್ಟೇ ಸಿರೀಸ್ ಬಿ ಫಂಡಿಂಗ್ ಆಗುತ್ತದೆ ಎಂಬುದು ಗಮನಿಸಬೇಕಾದ ಅಂಶ. ಈ ಹಣವನ್ನು ಏಷ್ಯ, ಯುರೋಪ್ ಮತ್ತು ದಕ್ಷಿಣ ಅಮೆರಿಕಗಳಲ್ಲಿ ತನ್ನ ಉತ್ಪಾದನೆ ಹೆಚ್ಚಿಸಿಕೊಳ್ಳುವುದಕ್ಕೆ ಬಳಸಿಕೊಳ್ಳುವುದಾಗಿ ಮೊನಾರ್ಕ್ ಹೇಳಿರುವುದು ಸಹ ಈ ಟ್ರೆಂಡ್ ಜಾಗತಿಕವಾಗಿ ವ್ಯಾಪಿಸಿಕೊಳ್ಳಲಿರುವ ಸೂಚನೆಯನ್ನು ಕೊಡುತ್ತಿದೆ.
Monarch Tractor ವಿಶೇಷತೆ ಏನು?
ಡಿಸೇಲ್ ಟ್ರ್ಯಾಕ್ಟರುಗಳ ಬದಲಿಗೆ ವಿದ್ಯುತ್ ಚಾಲಿತ ಟ್ರ್ಯಾಕ್ಟರ್ ಅನ್ನು ಹೊಲಗಳಿಗೆ ಪರಿಚಯಿಸಿದ ಮಾತ್ರಕ್ಕೆ ಏನಾದಂತಾಯಿತು, ಅಮೆರಿಕ ಸೇರಿದಂತೆ ಜಗತ್ತಿನ ಎಲ್ಲೆಡೆ ಇರುವ ಟ್ರ್ಯಾಕ್ಟರ್ ಉತ್ಪಾದನೆಯ ಕಂಪನಿಗಳ ಜತೆ ಇದೊಂದು ಸೇರಿಕೊಂಡಿತಷ್ಟೇ ಅಂತ ಮೇಲ್ನೋಟಕ್ಕೆ ಅನ್ನಿಸಿಬಿಡಬಹುದೇನೋ. ಆದರೆ, ಪ್ರವೀಣ ಪೆನ್ಮೆಸ್ತ ಅವರ ಮೊನಾರ್ಕ್ ಮಾರುಕಟ್ಟೆ ಮೌಲ್ಯ ಪಡೆದಿರುವುದಕ್ಕೆ ಕಾರಣ ಅಷ್ಟು ಸರಳವೇನಿಲ್ಲ. ಅದು ಅಂತರ್ಜಾಲಪ್ರಣೀತ ಉತ್ಪನ್ನಗಳ (Internet of things) ಹೊಸಯುಗದ ಪ್ರತಿನಿಧಿ. ಹೇಗೆಂದು ನೋಡೋಣ.
ಈ ಟ್ರ್ಯಾಕ್ಟರ್ ಎಂಬುದು ಸಾಫ್ಟವೇರ್ ಆಶ್ರಯವೂ ಹೌದು. ಅಂದರೆ, ಈ ಟ್ರ್ಯಾಕ್ಟರ್ ಹೊಲದ ಮಧ್ಯೆ ಸ್ವಯಂಚಾಲಿತವಾಗಿ ಹಲವು ಕೆಲಸಗಳನ್ನು ಮಾಡುವುದಕ್ಕೆ ಬೇಕಾದ ತಂತ್ರಾಂಶಗಳನ್ನು, ಸಾಫ್ಟವೇರ್ ವ್ಯವಸ್ಥೆಯನ್ನು ಹೊಂದಿರುತ್ತದೆ. ನಿಮ್ಮ ಲ್ಯಾಪ್ಟಾಪ್ ಎಂಬುದು ಒಂದು ಭೌತಿಕ ಅಸ್ತಿತ್ವವಾದರೆ, ಅದರೊಳಗೆ ವಿಂಡೋಸ್ ವ್ಯವಸ್ಥೆ ಇಲ್ಲದಿದ್ದರೆ ಕೆಲಸ ಮಾಡುವುದಿಲ್ಲವಲ್ಲ…ಅದೇ ಪರಿಕಲ್ಪನೆಯಲ್ಲಿ ಇರುವ ಟ್ರ್ಯಾಕ್ಟರ್ ಇದು. ಇದರಲ್ಲಿ ಕೆಮರಾ, ಸೆನ್ಸಾರ್, ಯಾವ ಹಣ್ಣು ಅಥವಾ ಯಾವ ಬೆಳೆಗೆ ಎಲ್ಲಿ ರೋಗವಿದೆಯೋ ಅದನ್ನಷ್ಟನ್ನೇ ಗುರುತಿಸಿ ಅಲ್ಲಷ್ಟೇ ರಾಸಾಯನಿಕ ಸಿಂಪಡಿಸುವ ವ್ಯವಸ್ಥೆ, ಕಳೆಯನ್ನು ಕೀಳುವುದಕ್ಕೆಂದೋ ಇಲ್ಲವೇ ಪಾತಿಯಲ್ಲಿ ಬೆಳೆದಿರುವ ಸಸ್ಯಗಳನ್ನು ಒಂದು ನೇರದಲ್ಲಿ ಕತ್ತರಿಸಿಡುವುದಕ್ಕೆಂದೋ ಆ ಟ್ರ್ಯಾಕ್ಟರಿಗೆ ಹೆಚ್ಚುವರಿ ಉಪಕರಣ ಜೋಡಿಸಿದರೆ ಅದರ ನಿಯಂತ್ರಣ ವ್ಯವಸ್ಥೆಗೆ ಸಹಕರಿಸುವ ಗಣಕ ವ್ಯವಸ್ಥೆ, ಜತೆಗೆ ಮಣ್ಣಿನಲ್ಲಿ ಯಾವ ಅಂಶದ ಕೊರತೆ ಇದೆ, ಹೊಲಕ್ಕೆ ನೀರಿನ ಹರಿವು ಎಷ್ಟಿದೆ, ಬೆಳೆ ಪ್ರಮಾಣ ಇವೆಲ್ಲದರ ಮಾಹಿತಿ ಸಂಗ್ರಹಿಸುವ ಸಂವೇದಕಗಳು ಇಂಥವೆಲ್ಲವನ್ನೂ ಹೊಂದಿರುವ ಟ್ರ್ಯಾಕ್ಟರ್ ಅದು. ಸಂದರ್ಶನವೊಂದರಲ್ಲಿ ಪ್ರವೀಣ ಪೆನ್ಮೆಸ್ತ ವಿವರಿಸಿರುವಂತೆ- ಮೊನಾರ್ಕ್ ಕಂಪನಿಯ ಉದ್ದೇಶವು ಕೃಷಿ ವಿಭಾಗದ ಆ್ಯಂಡ್ರಾಯ್ಡ್ ಆಗುವುದು!
ಇನ್ನು ಎಲೆಕ್ಟ್ರಿಕ್ ಟ್ರ್ಯಾಕ್ಟರ್ ಇವತ್ತಿನ ತಾಪಮಾನ ಏರಿಕೆ ನಿಯಂತ್ರಣ ಮಾಡಬೇಕೆನ್ನುವ ಯುಗದಲ್ಲಿ, ಹೊಲದಲ್ಲಿ ಯಾವುದೇ ಇಂಗಾಲ ವಿಸರ್ಜನೆ ಮಾಡದಿರುವುದು ಒಂದು ಸಕಾರಾತ್ಮಕ ಅಂಶವಾದರೆ, ಇದಕ್ಕೆ ಸೋಲಾರ್ ಫಲಕ ಹೊದೆಸಿ ಅದು ಸುಮ್ಮನೇ ನಿಂತಿರುವ ವೇಳೆಯಲ್ಲೂ ಅದರ ಬ್ಯಾಟರಿಯಲ್ಲಿ ಸೌರಶಕ್ತಿ ಸಂಗ್ರಹವಾಗಿ ಅದನ್ನು ಬೇರೆ ಬಳಕೆಗಳಿಗೆ ಉಪಯೋಗಿಸಿಕೊಳ್ಳುವ ಅವಕಾಶವೂ ಇಲ್ಲಿದೆ.
ಮಾನಾರ್ಕ್ ಕಂಪನಿಯ ಆದಾಯ ಬರುವುದೆಲ್ಲಿಂದ?
ಮೊದಲನೆಯದು ಹಾರ್ಡ್ವೇರ್ ಅಂತಂದ್ರೆ ಟ್ರ್ಯಾಕ್ಟರುಗಳ ಮಾರಾಟ. ಮತ್ತೊಂದು ಅದರಲ್ಲಿ ಬಳಸುವ ಸಾಫ್ಟವೇರ್ ಅಪ್ಟೇಡ್ ಶುಲ್ಕಗಳು. ಟ್ರ್ಯಾಕ್ಟರ್ ಅನ್ನು ಒಂದು ಸೇವೆಯಾಗಿ ಬಳಸುವ ಮಾದರಿಗಳು- ಅಂದರೆ ಇದನ್ನು ಬಾಡಿಗೆಗೆ ಕೊಂಡು ಕೆಲಸ ಮಾಡುವ ರೈತನು ಅದರಲ್ಲಿ ದಾಖಲಾಗುವ ಮಾಹಿತಿಗಳ ಸಂಸ್ಕರಣಾ ವರದಿಗೆ ಪ್ರತ್ಯೇಕ ಬೆಲೆ ಕೊಡುವಂಥದ್ದು. ಇನ್ನು, ನ್ಯೂ ಹೊಲಾಂಡ್ ಥರದ ಟ್ರ್ಯಾಕ್ಟರ್ ಮತ್ತು ಕೃಷಿ ಸಲಕರಣೆಗಳ ಜಾಗತಿಕ ಕಂಪನಿಗೆ ತನ್ನ ಸಾಫ್ಟವೇರ್ ಕೊಡುವಂಥ ಒಪ್ಪಂದಗಳ ಮೂಲಕವೂ ಮೊನಾರ್ಕ್ ತನ್ನ ಆದಾಯ ಕಂಡುಕೊಳ್ಳುತ್ತಿದೆ.
ಈ ಪೈಕಿ, ರೈತನ ಮಾಹಿತಿ ಸಂಗ್ರಹಣೆ ಮತ್ತು ಅವುಗಳನ್ನು ಕೃತಕ ಬುದ್ಧಿಮತ್ತೆಯ ವಿಶ್ಲೇಷಣೆಗೆ ಕೊಟ್ಟು ಒಂದು ಪ್ಯಾಟರ್ನ್-ಸೂತ್ರಗಳನ್ನು ಕಂಡುಕೊಳ್ಳುವ ಹಾಗೂ ಅದನ್ನು ಬಿಸಿನೆಸ್ಸಿಗೆ ಬಳಸುವ ರೀತಿಗೆ ಹಲವರ ಆಕ್ಷೇಪವಿದೆ. ಇತ್ತೀಚಿನ ವರ್ಷಗಳಲ್ಲಿ ಎಲ್ಲ ಸರ್ಕಾರಗಳೂ ಮಾಹಿತಿ ಬಳಕೆ ಕುರಿತು ನಿಯಮಾವಳಿಗಳನ್ನು ರೂಪಿಸುತ್ತಿದ್ದಾರಾದ್ದರಿಂದ ಈ ಆಯಾಮವನ್ನು ಅವು ಮುಂದಿನ ದಿನಗಳಲ್ಲಿ ನೇರಗೊಳಿಸುತ್ತವೆ.ಭಾರತದಲ್ಲಿನ ಸಣ್ಣ ರೈತರಿಗೆ ಮಾನಾರ್ಕ್ ಟ್ರ್ಯಾಕ್ಟರ್ಸ್ ನಂತಹ ಉದ್ದಿಮೆ-ತಂತ್ರಜ್ಞಾನದಿಂದ ಲಾಭವೇನು?
ಇವೆಲ್ಲವನ್ನು ಓದಿಕೊಂಡಾಗಲೂ ಹೆಚ್ಚಿನವರಿಗೆ ಸಹಜವಾಗಿ ಅನ್ನಿಸಬಹುದು- ನೂರಾರು ಹೆಕ್ಟೇರ್ ಭೂಮಿ ಒಬ್ಬರ ಕೈಲಿರುವ, ದೊಡ್ಡ ರೈತರೇ ಹೆಚ್ಚಾಗಿರುವ ಅಮೆರಿಕ ಮತ್ತು ಪಾಶ್ಚಾತ್ಯ ದೇಶಗಳಲ್ಲಿ ಈ ಮೊನಾರ್ಕ್ ಮಾದರಿಯ ಪ್ರಯತ್ನಗಳು ಉದ್ಯಮವಾಗಬಹುದೇ ಹೊರತು ತುಂಡುಭೂಮಿ ಮತ್ತು ಸಣ್ಣರೈತರೇ ಶೇ. 85ರಷ್ಟಿರುವ ಭಾರತದಲ್ಲಲ್ಲ ಅಂತ.
ತೀರ ಇತ್ತೀಚಿನ ವರ್ಷಗಳವರೆಗೂ ಈ ವಿಶ್ಲೇಷಣೆ ಸರಿಯಾಗಿತ್ತು. ಆದರೆ, 2020ರಲ್ಲಿ ಮೋದಿ ಸರ್ಕಾರ ದೇಶಾದ್ಯಂತ 10,000 ರೈತ ಉತ್ಪಾದಕ ಸಂಘಟನೆಗಳು (FPO) ಶುರುವಾಗುವಂತೆ ನೀತಿ ಅನುಷ್ಠಾನ ಮಾಡಿರುವುದು ಈ ಸಮೀಕರಣವನ್ನು ಬದಲಿಸಿದೆ. ಒಂದು ಪ್ರದೇಶದ ಸಣ್ಣ ರೈತರನ್ನೆಲ್ಲ ಕಲೆಹಾಕಿ ಅವರ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ಮಾರಾಟ ಇವನ್ನೆಲ್ಲ ದೊಡ್ಡ ಸ್ಕೇಲ್ ನಲ್ಲಿ ಮಾಡುತ್ತದೆ ಎಫ್ ಪಿ ಒ. ಈ ರೈತೋತ್ಪಾದಕ ಸಂಘದ ಇನ್ನೊಂದು ದೊಡ್ಡ ಉಪಲಬ್ಧಿ ಎಂದರೆ ಸಾಮೂಹಿಕವಾಗಿ ಕೃಷಿ ಸಲಕರಣೆಗಳನ್ನು ಖರೀದಿಸಿ, ಎಲ್ಲರ ಭೂಮಿಗಳಲ್ಲೂ ಅದನ್ನು ಉಪಯೋಗಿಸುವುದು. ಹೀಗಾಗಿ, ಭಾರತದ ಸಣ್ಣ ರೈತನೊಬ್ಬನಿಗೆ ಎಲೆಕ್ಟ್ರಿಕ್ ಟ್ರ್ಯಾಕ್ಟರ್ ಖರೀದಿಸುವುದು ವೆಚ್ಚದಾಯಕ ಎನಿಸಿದರೂ ಎಫ್ ಪಿ ಒ ಒಂದಕ್ಕೆ ಅದು ಕಷ್ಟದ ವಿಚಾರವಾಗುವುದಿಲ್ಲ. ಅಲ್ಲದೇ, ಈ ನಿಟ್ಟಿನಲ್ಲಿ ಸರ್ಕಾರದ ಸಬ್ಸಿಡಿ ಸಹ ಸಿಗುವ ಸಾಧ್ಯತೆಗಳಿವೆ.
ಭವಿಷ್ಯದ ಕೃಷಿಯಲ್ಲಿ ತಂತ್ರಜ್ಞಾನ ಮೇಳೈಸಲೇಬೇಕಾದ ಹಲವು ಬಗೆಯ ಒತ್ತಡಗಳಿವೆ. ಹೀಗಾಗಿ ನಮ್ಮ ದೇಶದಲ್ಲೂ ಸಣ್ಣ ವ್ಯಾಪ್ತಿಯ ಭೂಮಿ ಹೊಂದಿರುವ ರೈತರೆಲ್ಲ ಎಫ್ ಪಿ ಒ ಮೂಲಕವೋ ಇಲ್ಲವೇ ಇನ್ಯಾವುದೇ ಸಹಕಾರಿ ಮಾದರಿಯಲ್ಲೋ ಒಂದುಗೂಡಲೇಬೇಕಿರುವುದು ಕಾಲದ ಅನಿವಾರ್ಯ. ಉದಾಹರಣೆಗೆ, ಇತ್ತೀಚೆಗೆ ರಾಸಾಯನಿಕಗಳ ಅತಿ ಬಳಕೆಯಿಂದ ಕ್ಯಾನ್ಸರ್ ಥರದ ರೋಗಗಳು ಬರುತ್ತವೆ ಎಂದು ಗ್ರಾಹಕ ಎಚ್ಚೆತ್ತುಕೊಳ್ಳುತ್ತಿರುವುದರಿಂದ ಸಾವಯವದ ಬಗ್ಗೆ ದೊಡ್ಡ ಬೇಡಿಕೆ ಶುರುವಾಗುತ್ತಿದೆ. ಇವತ್ತಿಗೆ ಸಾವಯವ ಉತ್ಪನ್ನದ ದೃಢೀಕರಣ ಎನ್ನುವುದು ಕೇವಲ ವಿಶ್ವಾಸದ ಮೇಲೆ ನಿಂತಿದೆ. ಆದರೆ ಮುಂದಿನ ದಿನಗಳಲ್ಲಿ ಬೆಳೆದ ಬೆಳೆ ಖರೀದಿಸುವಾಗಲೇ ಅದರಲ್ಲಿರಬಹುದಾದ ಕ್ರಿಮಿನಾಶಕ-ಕೀಟನಾಶಕಗಳ ಉಳಿಕೆಯನ್ನು ಪರಿಶೀಲಿಸುವ ತಂತ್ರಜ್ಞಾನ ದೊಡ್ಡ ವಿಸ್ತಾರದಲ್ಲಿ ಬರುತ್ತದೆ. ಈಗ ಕಳೆ ನಿವಾರಣೆಗೆ ರೈತ ರಾಸಾಯನಿಕ ಸುರಿಯುವುದು ಏಕೆಂದರೆ ಕಳೆ ಕೀಳುತ್ತ ಕೂರುವುದಕ್ಕೆ ಸಮಯ ಹಾಗೂ ಕಾರ್ಮಿಕ ಲಭ್ಯವಿಲ್ಲವೆಂಬ ಕಾರಣಕ್ಕೆ. ಆದರೆ ಟ್ರ್ಯಾಕ್ಟರಿಗೆ ಜೋಡಿಸುವ ಕಳೆ ನಿರ್ಮೂಲನ ಸಾಧನವು ಆ ಕೆಲಸವನ್ನು ಸುಲಭ ಮತ್ತು ತ್ವರಿತವಾಗಿರಿಸಿ ರಾಸಾಯನಿಕ ಒಳಸುರಿ ತಪ್ಪಿಸಬಲ್ಲದು. ಹವಾಮಾನ ಬದಲಾವಣೆ ಮತ್ತು ಇಂಗಾಲ ವಿಸರ್ಜನೆ ಬಗ್ಗೆ ಇಡೀ ಜಗತ್ತೇ ಹಲವು ಉಪಕ್ರಮಗಳನ್ನು ಹಾಕಿಕೊಳ್ಳುತ್ತಿರುವ ಹೊತ್ತಿನಲ್ಲಿ, ಇಂದಲ್ಲ ನಾಳೆ ಕೃಷಿ ಸಹ ಇಂಗಾಲ ಉತ್ಸರ್ಜಿಸುವ ಹಾಗೂ ಇಂಗಾಲವನ್ನು ಭೂಮಿಗೆ ಸೇರಿಸಿ ಸಹಕರಿಸುತ್ತಿರುವ ಪ್ರಮಾಣಗಳನ್ನು ಲೆಕ್ಕ ಹಾಕುವ ವ್ಯವಸ್ಥೆ ಬಂದೇ ಬರುತ್ತದೆ. ಇಂಥವೇ ಹಲವು ಸಾಧ್ಯತೆಗಳು ಮತ್ತು ಅನಿವಾರ್ಯಗಳು ಈ ‘ಟ್ರ್ಯಾಕ್ಟರ್ ಪ್ಲಸ್ ಸಾಫ್ಟವೇರ್’ ಎಂಬ ಸೂತ್ರವನ್ನು ಯಶಸ್ವಿಯಾಗುವುದಕ್ಕೆ ಪೂರಕ ವಾತಾವರಣ ನಿರ್ಮಿಸುತ್ತಿವೆ. ಭಾರತ ತನ್ನದೇ ಆದ 5ಜಿ ಜಾಲವನ್ನು ವಿಸ್ತರಿಸುತ್ತಿದೆ ಹಾಗೂ ದೇಶೀಯ ತಂತ್ರಜ್ಞಾನ ಸಾಮರ್ಥ್ಯದಲ್ಲೇ ಹೀಗೆ ಮಾಡುತ್ತಿರುವ ಬೆರಣಿಕೆಯ ದೇಶದಲ್ಲಿ ಇದೊಂದು. ಈ ಅಂಶವೇಕೆ ಪೂರಕ ಎಂದರೆ- ಕೃಷಿಯಲ್ಲಾಗಲೀ ಇನ್ನೆಲ್ಲೇ ಆಗಲಿ ಅಂತರ್ಜಾಲ ಪ್ರೇರಿತ ಸಾಧನಗಳು (Internet of Things) ಕೆಲಸ ಮಾಡಬೇಕೆಂದರೆ ಹೀಗೊಂದು 5ಜಿ ಸೇವೆ ಅಗತ್ಯ.
India Stack ಮಾದರಿಯಲ್ಲಿ Agri Stack
ಇವತ್ತು ಯುಪಿಐ, ಕೊವಿನ್ ಇತ್ಯಾದಿ ಸೇವೆಗಳನ್ನು ಭಾರತ ಸರ್ಕಾರವು ತಾನು ಅಭಿವೃದ್ಧಿಪಡಿಸಿರುವ ತಂತ್ರಜ್ಞಾನದ ಸ್ಟಾಕ್ (India Stack) ಆಧಾರದಲ್ಲಿ ಹೇಗೆ ಕೊಡುತ್ತಿದೆಯೋ ಅದೇ ರೀತಿ ಕೃಷಿಗೆ ಸಂಬಂಧಿಸಿದ ಅಗ್ರಿ ಸ್ಟಾಕ್ (Agri Stack) ಸಹ ನಿರ್ಮಾಣವಾಗುತ್ತಿದೆ. ರೈತರ ದೃಢೀಕರಣ, ಸರ್ಕಾರಿ ಯೋಜನೆಗಳನ್ನು ಮುಟ್ಟಿಸುವಿಕೆ, ರೈತನ ಸಾಲ ವಾಪಸಾತಿಯ ವರ್ತನೆ ಟ್ರ್ಯಾಕ್ ಮಾಡಿ ಅದರ ಡಿಜಿಟಲ್ ರೆಕಾರ್ಡ್ ನಿರ್ಮಿಸಿ ಆ ಮೂಲಕ ಹಣಕಾಸು ಸಂಸ್ಥೆಗಳು ಅರ್ಹ ರೈತರಿಗೆ ಸಾಲ ಕೊಡುವುದಕ್ಕೆ ಅನುವಾಗಿಸುವುದು ಹೀಗೆ ಹಲವು ಉದ್ದೇಶಗಳನ್ನು ಈ ಅಗ್ರಿ ಸ್ಟಾಕ್ ನೆರವೇರಿಸಲಿದೆ. ಹೇಗೆ ಯುಪಿಐ ಅನ್ನು ತಮ್ಮ ಬೇಸ್ ಆಗಿಸಿಕೊಂಡು ಪೇಟಿಎಂ, ಫೋನ್ ಪೆ ಸೇರಿದಂತೆ ಹಲವು ನವೋದ್ದಿಮೆಗಳು ಹುಟ್ಟಿಕೊಂಡವೋ ಹಾಗೆಯೇ ಅಗ್ರಿ ಸ್ಟಾಕ್ ಆಧಾರವಾಗಿಟ್ಟುಕೊಂಡು ದೊಡ್ಡಮಟ್ಟದಲ್ಲಿ ನವೋದ್ದಿಮೆಗಳು ಬೆಳೆಯಲಿವೆ.
ಈ ಎಲ್ಲ ಹಿನ್ನೆಲೆಗಳನ್ನಿಟ್ಟುಕೊಂಡು ನೋಡಿದಾಗ ಎಲೆಕ್ಟ್ರಿಕ್ ‘ಟ್ರ್ಯಾಕ್ಟರ್ ಪ್ಲಸ್ ಸಾಫ್ಟವೇರ್’ ಎಂಬ ಪ್ರವೀಣ ಪೆನ್ಮೆಸ್ತರ ಉದ್ಯಮ ಸಮೀಕರಣವು ಭವಿಷ್ಯದಲ್ಲೊಂದು ಅಕ್ಷಯಪಾತ್ರೆಯನ್ನೇ ಸಾಕಾರಗೊಳಿಸಿಕೊಂಬಂತಿದೆ.
ಲಿಂಕ್ಡ್ ಇನ್ ತಾಣದಲ್ಲಿ ಸಿಗುವ ಪ್ರವೀಣ ಪೆನ್ಮೆಸ್ತ ಅವರ ವಿವರದ ಪ್ರಕಾರ, ಅವರು ಎಂಜಿನಿಯರಿಂಗ್ ಪದವಿ ಪಡೆದಿದ್ದು ಆಂಧ್ರ ಪ್ರದೇಶದಲ್ಲಿ. ನಂತರದ ಓದು, ಉದ್ಯೋಗ, ಉದ್ಯಮ ಪ್ರಯತ್ನಗಳೆಲ್ಲ ಅಮೆರಿಕದಲ್ಲಿ ಆಗಿವೆ. ಸಂದರ್ಶನವೊಂದರಲ್ಲಿ ಹೇಳಿರುವಂತೆ, ಪ್ರವೀಣ್ ಅವರು ಮೊನಾರ್ಕ್ ಕಂಪನಿಯ ಟ್ರ್ಯಾಕ್ಟರ್ ಅನ್ನು ಪ್ರಯೋಗಾತ್ಮಕವಾಗಿ ಭಾರತದಲ್ಲೂ ಬಿಟ್ಟಿದ್ದಾರೆ. ಬೇರೊಂದು ಕಂಪನಿಯೊಂದಿಗೆ ಒಪ್ಪಂದದ ಮೂಲಕ. ಭಾರತದ ಸಣ್ಣ ರೈತರು ಟ್ರ್ಯಾಕ್ಟರ್ ಕೊಳ್ಳುವ ಅವಕಾಶ ಕಡಿಮೆ ಆದ್ದರಿಂದ ಅಲ್ಲಿ ಬಾಡಿಗೆ ನೀಡುವ ಮಾದರಿಯನ್ನು ಅನುಸರಿಸಿದ್ದೇವೆ ಎಂಬ ಪ್ರವೀಣ್ ಮಾತುಗಳಲ್ಲೇ ಮುಂದೆ ಈ ಉದ್ಯಮವು ಆಯಾ ದೇಶ ಮತ್ತು ಪ್ರಾಂತ್ಯಗಳಿಗೆ ಬೇಕಾದ ಬೇರೆ ಬೇರೆ ಮಜಲುಗಳನ್ನು ಪಡೆದುಕೊಳ್ಳುವ ಸೂಚನೆ ಸಿಗುತ್ತಿದೆ.
ಅಂದಹಾಗೆ, ಪ್ರವೀಣ ಪೆನ್ಮೆಸ್ತಾ ಕಂಪನಿ ಅಥವಾ ಸ್ಮಾರ್ಟ್ ಟ್ರ್ಯಾಕ್ಟರ್ ಮಾತ್ರವೇ ಭಾರತದ ಕೃಷಿವಲಯದಲ್ಲಿ ಬದಲಾವಣೆ ತರಲಿದೆ ಎಂಬುದು ಈ ಲೇಖನದ ಧ್ವನಿ ಅಲ್ಲ. ರೈತರನ್ನು ಮಾರುಕಟ್ಟೆಗೆ ಬೆಸೆಯುವಲ್ಲಿ, ಅವರಿಗೆ ಸಾಲಸೌಲಭ್ಯಗಳನ್ನು ಸರಾಗಗೊಳಿಸುವಲ್ಲಿ ಭಾರತದ್ದೇ ಆದ ಹಲವು ನವೋದ್ದಿಮೆಗಳು ಕೆಲಸ ಮಾಡುತ್ತಿವೆ, ಅವುಗಳ ಬಗ್ಗೆ ಅವಕಾಶವಾದಾಗಲೆಲ್ಲ ಇಲ್ಲಿ ಚರ್ಚಿಸೋಣ.