ಬೆಲೆ ಏರಿಕೆ: ಕೇಂದ್ರ ಸರ್ಕಾರದ ವಿರುದ್ಧ ಎಐಸಿಸಿ ವಕ್ತಾರೆ ಸುಪ್ರಿಯಾ ಶ್ರೀನಾಟೆ ವಾಗ್ದಾಳಿ

Share

ಕಳಪೆ ಮಟ್ಟದ ಆರ್ಥಿಕ ನಿರ್ವಹಣೆಯಿಂದಾಗಿ ದೇಶದಲ್ಲಿ ಬಡತನ ಹೆಚ್ಚಾಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಎಐಸಿಸಿ ವಕ್ತಾರೆ ಸುಪ್ರಿಯಾ ಶ್ರೀನಾಟೆ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಹಿಳಾ ಮುಖಂಡರೊಂದಿಗೆ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದರು.

ಅಗತ್ಯ ವಸ್ತುಗಳ ಬೆಲೆ ಏರಿಕೆ ಮೂಲಕ ಕೇಂದ್ರದ ಬಿಜೆಪಿ ಸರಕಾರ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆಯುತ್ತಿದೆ. ಆರ್ಥಿಕ ಬಿಕ್ಕಟ್ಟು ಹಾಗೂ ಪಿಡುಗಿನ ಸಮಯದಲ್ಲಿ ಹಣದುಬ್ಬರ ಜನಸಾಮಾನ್ಯರಿಗೆ ಹೊರೆಯಾಗಿದೆ. ಸರಕಾರದ ದುರಾಸೆ ಹಾಗೂ ಶೋಷಣೆಯಿಂದ ಇಂಧನ ತೈಲ ಬೆಲೆ ಏರಿಕೆ ಹೆಚ್ಚುತ್ತಿದೆ.

ದಿನಬಳಕೆ ವಸ್ತುಗಳ ಮೇಲೆ ಅತಿಯಾದ ಜಿಎಸ್ಟಿಯಿಂದ ಜನ ಸಾಮಾನ್ಯ ಸಂಕಷ್ಟಕ್ಕೆ ಸಿಲುಕಿದ್ದಾನೆ. ಹಣದುಬ್ಬರ ವಿಚಾರವನ್ನು ಕಾಂಗ್ರೆಸ್ ಸಂಸತ್ ಸದನದಲ್ಲಿ ಪ್ರಸ್ತಾಪಿಸಲಿದೆ. ಇಂಧನ ತೈಲ ಬೆಲೆ ಇಳಿಸಬೇಕು, ಆಮದು ಸುಂಕ ಹಾಗೂ ಜಿಎಸ್ಟಿ ಪ್ರಮಾಣ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಆರ್ಥಿಕ ಬಿಕ್ಕಟ್ಟು ಹಾಗೂ ಪಿಡುಗಿನ ಸಮಯದಲ್ಲಿ ಜನಸಾಮಾನ್ಯರು ತತ್ತರಿಸಿದ್ದು, ಈ ಮಧ್ಯೆ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಿದೆ. ಜನ ಭಯಾನಕ ವೈರಸ್ ಹಾಗೂ ಮೋದಿ ಸರಕಾರದ ಆರ್ಥಿಕ ದುರಾಡಳಿತದ ವಿರುದ್ಧ ಹೋರಾಟ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಉದ್ಯೋಗ ನಷ್ಟ, ವೇತನ ಕಡಿತವಾಗಿದೆ. ಈ ಪರಿಸ್ಥಿತಿಯಲ್ಲಿ ಜನರ ಕೈಗೆ ಹಣ ನೀಡಬೇಕಾದ ಸರಕಾರ ಅಗತ್ಯ ವಸ್ತುಗಳ ಬೆಲೆ ಹೆಚ್ಚಳಕ್ಕೆ ಕಾರಣವಾಗಿ ಬೇಜವಾಬ್ದಾರಿ ತೋರುತ್ತಿದೆ ಎಂದು ಕಿಡಿಕಾರಿದ್ದಾರೆ.

ಯುಪಿಎ ಸರ್ಕಾರದ ಉತ್ತಮ ಕೆಲಸದ ಮೂಲಕ ದೇಶದ 27 ಕೋಟಿ ಜನರನ್ನು ಬಡತನ ರೇಖೆಗಿಂತ ಹೊರಕ್ಕೆ ತಂದಿತ್ತು. ಆದರೆ ಬಿಜೆಪಿ ಸರ್ಕಾರದ ದುರಾಡಳಿತ ದೇಶದ 23 ಕೋಟಿ ಜನ ಬಡತನ ರೇಖೆಗಿಂತ ಕೆಳಕ್ಕೆ ದೂಡಿದೆ. ಕಳೆದ ವರ್ಷ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ 2 ಕೋಟಿ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ದೇಶದ ಶೇ.97ರಷ್ಟು ಜನ ಕಡಿಮೆ ವೇತನ ಪಡೆಯುವಂತಾಗಿದೆ. ಪರಿಣಾಮ ಭಾರತೀಯರು 1.25 ಲಕ್ಷ ಕೋಟಿ ರೂ.ಕಾರ್ಮಿಕ ನಿಧಿ ಹಣ ಪಡೆಯುವಂತಾಗಿದೆ.

ದೇಶದ ಜಿಡಿಪಿ ಕುಸಿಯುತ್ತಿರುವಾಗ ಹಣದುಬ್ಬರ ಮಹಾಪರಾಧ. ಜನರ ಆದಾಯ ಕುಸಿದಿರುವಾಗ ಅಗತ್ಯ ವಸ್ತುಗಳ ಮೇಲೆ ಹೆಚ್ಚು ವ್ಯಯಿಸುವಂತೆ ಮಾಡುವಂತಾಗಿದೆ. ಇದು ಕೇವಲ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ವಿಚಾರ ಮಾತ್ರವಲ್ಲ. ಅಡುಗೆ ಎಣ್ಣೆ, ಬೇಳೆ ಕಾಳುಗಳು, ಚಹಾ, ಕಾಫಿ, ಸೋಪುಗಳ ಬೆಲೆ ಕೂಡ ಹೆಚ್ಚಾಗಿವೆ. ಇತ್ತೀಚಿನ ಹಣದುಬ್ಬರ ಸಂಖ್ಯೆ ಎಚ್ಚರಿಕೆ ಗಂಟೆಯಾಗಿದೆ. ಚಿಲ್ಲರೆ ಹಣದುಬ್ಬರವು ಆರ್ ಬಿ ಐನ ಗುರಿ ಶೇ.6ಕ್ಕಿಂತ ಹೆಚ್ಚಾಗಿದ್ದು, ಶೇ.6.3ರಷ್ಟು ತಲುಪಿದೆ ಎಂದು ತಿಳಿಸಿದ್ದಾರೆ.

ಮೋದಿ ಸರ್ಕಾರ ಜನರಿಗೆ ದ್ರೋಹ ಬಗೆದಿದೆ. ಅತಿಯಾದ ಹಣದುಬ್ಬರಕ್ಕೆ ಅತಿಯಾದ ಬೇಡಿಕೆ ಅಥವಾ ಜನರ ಕೈಯಲ್ಲಿ ಹೆಚ್ಚಿನ ಹಣವಿರುವ ಕಾರಣದಿಂದ ಉಂಟಾಗಿಲ್ಲ. ಬದಲಿಗೆ ಜನರ ಆದಾಯ ಕುಸಿದು ಜನರ ಕೈಯಲ್ಲಿ ಹಣವಿಲ್ಲದಂತಾಗಿದೆ. ಈ ಪರಿಸ್ಥಿತಿಯಲ್ಲಿ ಬೆಲೆ ಏರಿಕೆಗೆ ಕಾರಣವಾಗಿರುವುದು ಸರಕಾರದ ಶೋಷಣೆ, ದುರಾಸೆ ಹಾಗೂ ಆರ್ಥಿಕತೆ ನಿರ್ವಹಣೆಯಲ್ಲಿನ ವೈಫಲ್ಯವಾಗಿದೆ.

ಜನರ ಮೇಲಿನ ಹೊರೆ ಇಳಿಸಲು ಸರ್ಕಾರ ಕೂಡಲೇ ಪೆಟ್ರೋಲ್, ಡೀಸೆಲ್ ಹಾಗೂ ಎಲ್ ಪಿಜಿ ಬೆಲೆ ಇಳಿಸಬೇಕು. ಆಮದು ಸುಂಕ ಪರಿಶೀಲಿಸಬೇಕು. ದಿನಬಳಕೆ ವಸ್ತುಗಳ ಮೇಲಿನ ಜಿಎಸ್ಟಿ ದರ ಇಳಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸುತ್ತದೆ. ಈ ಎಲ್ಲ ವಿಚಾರಗಳ ಬಗ್ಗೆ ಸಂಸತ್ ಅಧಿವೇಶನದಲ್ಲಿ ವಿಸ್ತೃತ ಚರ್ಚೆ ಜತೆಗೆ ಜನರಿಗೆ ಪರಿಹಾರ ನೀಡುವಂತೆ ಕಾಂಗ್ರೆಸ್ ಆಗ್ರಹಿಸಲಿದೆ ಸುಪ್ರಿಯಾ ಶ್ರೀನಾಟೆ ಹೇಳಿದ್ದಾರೆ.


Share

ಪಂಜಾಬ್ ರಾಜಕೀಯ ಬೇಗುದಿ ಉಲ್ಬಣ: ಸೋನಿಯಾ, ರಾಹುಲ್ ಗಾಂಧಿ ಭೇಟಿ ಮಾಡಿದ ನವಜೋತ್ ಸಿಂಗ್ ಸಿಧು

Share

ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಜೊತೆಗಿನ ಭಿನ್ನಾಭಿಪ್ರಾಯದ ನಂತರ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿದು ಇಂದು ದೆಹಲಿಯಲ್ಲಿ ಸೋನಿಯಾ ಮತ್ತು ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ್ದಾರೆ.

ಪಂಜಾಬ್ ಸಿಎಂ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಮತ್ತು ಮಾಜಿ ಸಚಿವ ನವಜೋತ್‌ ಸಿಂಗ್‌ ಸಿಧು ನಡುವಿನ ಭಿನ್ನಾಭಿಪ್ರಾಯಕ್ಕೆ ಅಂತ್ಯ ಹಾಡಲು ಕೊನೆಗೂ ಸಂಧಾನ ಸೂತ್ರ ಸಿದ್ಧಪಡಿಸಿದ್ದು, ಈ ಹಿನ್ನೆಲೆಯಲ್ಲಿ ಸಿಧು ಅವರಿಗೆ ಹೈಕಮಾಂಡ್ ಬುಲಾವ್ ನೀಡಿತ್ತು.

ಈ ಹಿನ್ನೆಲೆಯಲ್ಲಿ ಇಂದು ದೆಹಲಿಯ ನಿವಾಸದಲ್ಲಿ ಸೋನಿಯಾ ಮತ್ತು ರಾಹುಲ್ ಗಾಂಧಿ ಅವರನ್ನು ನವಜೋತ್ ಸಿಂಗ್ ಸಿಧು ಭೇಟಿ ಮಾಡಿದ್ದಾರೆ.ಈ ವೇಳೆ ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಹರೀಶ್ ರಾವತ್ ಕೂಡ ಉಪಸ್ಥಿತರಿದ್ದರು.

ಮುಂದಿನ ವರ್ಷ ವಿಧಾನಸಭೆ ಚುನಾವಣೆ ಎದುರಿಸಲಿರುವ ಪಂಜಾಬ್‌ನಲ್ಲಿ ನಡೆಯುತ್ತಿರುವ ಭಿನ್ನಮತಕ್ಕೆ ಕೊನೆಗೂ ಪೂರ್ಣ ವಿರಾಮ ಬೀಳುವ ಸಾಧ್ಯತೆಯಿದೆ. ಪಂಜಾಬ್‌ ಪ್ರದೇಶ ಕಾಂಗ್ರೆಸ್‌ ಸಮಿತಿ (ಪಿಪಿಸಿಸಿ) ಅಧ್ಯಕ್ಷರಾಗಿ ಮಾಜಿ ಕ್ರಿಕೆಟಿಗ ನವಜೋತ್‌ ಸಿಂಗ್‌ ಸಿಧು ನೇಮಕ ಮಾಡಲು ಕಾಂಗ್ರೆಸ್‌ ವರಿಷ್ಠರ ನಿರ್ಧಾರ ಮಾಡಿದ್ದಾರೆ ಎಂದು ತಿಳಿದು ಬಂದಿದೆ


Share

ಬದುಕುವ ಹಕ್ಕು’ ಮುಖ್ಯ: ಕನ್ವರ್ ಯಾತ್ರೆ ಕುರಿತ ನಿಲುವು ಮರುಪರಿಶೀಲಿಸಿ; ಉತ್ತರಪ್ರದೇಶ ಸರ್ಕಾರಕ್ಕೆ ‘ಸುಪ್ರೀಂ’ ಸೂಚನೆ

Share

ನವದೆಹಲಿ: ಬದುಕುವ ಹಕ್ಕು ಪ್ರಮುಖವಾಗಿದ್ದು, ಕನ್ವರ್ ಯಾತ್ರೆ ಕುರಿತ ನಿಲುವನ್ನು ಮರುಪರಿಶೀಲಿಸುವಂತೆ ಉತ್ತರಪ್ರದೇಶ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಶುಕ್ರವಾರ ಸೂಚನೆ ನೀಡಿದೆ.

ಕನ್ವರ್ ಯಾತ್ರೆಗೆ ಉತ್ತರ ಪ್ರದೇಶ ಸರ್ಕಾರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಈ ವಿಷಯವನ್ನು ಸ್ವಯಂ ಪ್ರೇರಿತವಾಗಿ ವಿಚಾರಣೆಗೆ ಕೈಗೆತ್ತಿಕೊಂಡಿದೆ.

ಶಿವನ ಭಕ್ತರು ಗಂಗಾ ನದಿಯ ವಿವಿಧ ಸ್ನಾನಘಟ್ಟಗಳಲ್ಲಿ ಇದೇ 25ರಿಂದ ಆಗಸ್ಟ್‌ 6ರವರೆಗೆ ಪವಿತ್ರ ಸ್ನಾನ ಮಾಡಲಿದ್ದಾರೆ. ಕೋವಿಡ್‌ ಸಾಂಕ್ರಾ ಮಿಕದ ಮಧ್ಯೆಯೇ ಕನ್ವರ್ ಯಾತ್ರೆ ನಡೆಸಲು ಈಗಾಗಲೇ ಹಲವು ಭಕ್ತರ ಅಖಾಡಗಳು ಸಿದ್ಧತೆ ನಡೆಸಿವೆ. ಹೀಗಾಗಿ ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತ ಮೊಕದ್ದಮೆ ದಾಖಲಿಸಿಕೊಂಡಿದೆ.

ಇದರಂತೆ ನ್ಯಾಯಮೂರ್ತಿಗಳಾದ ಆರ್‌.ಎಫ್‌.ನರೀಮನ್ ಮತ್ತು ಬಿ.ಆರ್.ಗವಾಯಿ ಅವರಿದ್ದ ಪೀಠವು ವಿಚಾರಣೆ ನಡೆಸಿ, ಬದುಕುವ ಹಕ್ಕು ಪ್ರಮುಖವಾಗಿದ್ದು, ಕನ್ವರ್ ಯಾತ್ರೆ ಕುರಿತ ನಿಲುವನ್ನು ಮರುಪರಿಶೀಲಿಸುವಂತೆ ಹಾಗೂ ಈ ಕುರಿತು ಜು.19ರೊಳಗೆ ಪ್ರತಿಕ್ರಿಯೆ ನೀಡುವಂತೆ ಸೂಚನೆ ನೀಡಿದೆ.

ಉತ್ತರ ಪ್ರದೇಶದಲ್ಲಿ ಕನ್ವರ್ ಯಾತ್ರೆ ನಡೆಸಲು ಭಾರಿ ಸಿದ್ಧತೆ ನಡೆದಿದೆ. ರಾಜ್ಯದಲ್ಲಿರುವ ಗಂಗಾ ಸ್ನಾನಘಟ್ಟಗಳಲ್ಲಿ ಪವಿತ್ರ ಸ್ನಾನ ನಡೆಸಲು ಮತ್ತು ಗಂಗಾ ಜಲ ಕೊಂಡೊಯ್ಯಲು ಬೇಕಾದ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ. ಇದಕ್ಕೆ ಸುಪ್ರೀಂ ಕೋರ್ಟ್‌ ಕಳವಳ ವ್ಯಕ್ತಪಡಿಸಿದೆ.

2021ರ ಮಾರ್ಚ್‌ನಲ್ಲಿ ಹರಿದ್ವಾರದಲ್ಲಿ ನಡೆದ ಕುಂಭಮೇಳದಲ್ಲಿ 25 ಲಕ್ಷಕ್ಕೂ ಹೆಚ್ಚು ಜನರು ಪವಿತ್ರ ಸ್ನಾನ ಮಾಡಿದ್ದರು. ಕೋವಿಡ್‌ ಮಾರ್ಗಸೂಚಿಯನ್ನು ಕಡೆಗಣಿಸಿದ್ದರು. ಮೇಳದಲ್ಲಿ ಭಾಗವಹಿಸಿದ್ದವರಲ್ಲಿ ಹಲವರಿಗೆ ಕೋವಿಡ್‌ ತಗುಲಿತ್ತು. ಮೇಳ ನಡೆಸಲು ಅವಕಾಶ ಮಾಡಿಕೊಟ್ಟ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಭಾರಿ ಆಕ್ಷೇಪ ವ್ಯಕ್ತವಾಗಿತ್ತು.

ಇದರ ಬೆನ್ನಲ್ಲೇ ಕನ್ವರ್ ಯಾತ್ರೆಗೆ ಉತ್ತರಪ್ರದೇಶ ಸರ್ಕಾರ ಅನುಮತಿ ನೀರುವುದು ಆತಂಕ ಹೆಚ್ಚಾಗುವಂತೆ ಮಾಡಿದೆ.

ಉತ್ತರಪ್ರದೇಶ ಹಾಗೂ ಹರಿಯಾಣದ ರಾಜ್ಯದ ಶಿವಭಕ್ತರು ಹರಿದ್ವಾರಕ್ಕೆ ಆಗಮಿಸಿ ಗಂಗಾಜಲವನ್ನು ಶ್ರಾವಣದಲ್ಲಿ ತೆಗೆದುಕೊಂಡು ಹೋಗುವುದೇ ಕನ್ವರ್ ಯಾತ್ರೆಯಾಗಿದೆ.


Share