ಬೆಂಗಳೂರು, ನ. 5, 2025: ಎಲೆಕ್ಟ್ರಾನಿಕ್ ಸಿಟಿಯ ಹೊಸರೋಡಿನ ನಿವಾಸಿ ಶ್ರೀಮತಿ. ಜಡೆ ರೋಹಿಣಿ (72) ಅವರು ದಿನಾಂಕ 4.11.2025 ರ ತಡರಾತ್ರಿ ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದರೂ, ತಮ್ಮ ಜೀವಿತಾವಧಿಯ ಇಚ್ಛೆಯಂತೆ ನೇತ್ರ ಮತ್ತು ದೇಹದಾನ ಮಾಡುವ ಮೂಲಕ ಸಾರ್ಥಕ ಬದುಕು ಸಾಗಿಸಿದ್ದಾರೆ.
ಮೃತರ ಇಚ್ಛೆಯಂತೆ ತಕ್ಷಣವೇ ಕಣ್ಣುಗಳನ್ನು ನಾರಾಯಣ ನೇತ್ರಾಲಯದ ಡಾ. ರಾಜಕುಮಾರ್ ನೇತ್ರನಿಧಿಗೆ ದಾನ ಮಾಡಲಾಗಿದ್ದು, ನಂತರ ಅವರ ದೇಹವನ್ನು ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ದಿ ಆಕ್ಸ್ಫರ್ಡ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಹಸ್ತಾಂತರಿಸಲಾಯಿತು.
ಇಂದು (ನ. 5, 2025) ದಿ ಆಕ್ಸ್ಫರ್ಡ್ ಮೆಡಿಕಲ್ ಕಾಲೇಜಿನಲ್ಲಿ ನೂರಾರು ವೈದ್ಯಕೀಯ ವಿದ್ಯಾರ್ಥಿಗಳು, ವೈದ್ಯರೊಂದಿಗೆ ಮೃತರ ದೇಹಕ್ಕೆ ಅಂತಿಮ ಗೌರವ ಸಲ್ಲಿಸಲಾಯಿತು. ಕುಟುಂಬಸ್ಥರು ಕೊನೆಯ ಪೂಜಾ ವಿಧಾನಗಳನ್ನು ಮುಗಿಸಿ ದೇಹದಾನ ಪತ್ರವನ್ನು ಹಸ್ತಾಂತರಿಸಿದರು.
ಕುಟುಂಬದ ಆಶಯ ಮತ್ತು ಗೌರವಾರ್ಪಣೆ
ಈ ಮಹಾಕಾಯಕಕ್ಕೆ ಪ್ರೇರಣೆ ನೀಡಿದ ಮೃತರ ಪತಿ ಶ್ರೀ ಜಡೆ ನಾಗರಾಜು ರವರನ್ನು ಹೊಸಬೆಳಕು ಟ್ರಸ್ಟಿನ ಡಾ//ರಾಮಕೃಷ್ಣಅವರು ಗೌರವಿಸಿದರು.
ಭಾವಪರವಶರಾಗಿ ಮಾತನಾಡಿದ ಮೃತರ ಮಗ ಅವಿನಾಶ್ “ನನ್ನಮ್ಮನ ಇಚ್ಛೆಯಂತೆ ನಾವು ಅಂಗಾಂಗ ಮತ್ತು ದೇಹದಾನ ಮಾಡಿದ್ದೇವೆ. ಈ ಕಾಯಕ ಇಡೀ ನಮ್ಮ ಕುಟುಂಬಕ್ಕೆ ಗೌರವ ತಂದಿದೆ. ನನ್ನಮ್ಮನಂತೆ ನೀವೆಲ್ಲರೂ ಅಂಗಾಂಗದಾನಕ್ಕೆ ಮುಂದಾಗಬೇಕು” ಎಂದು ಮನವಿ ಮಾಡಿದರು.
ಮತ್ತೊಬ್ಬ ಮಗ ಅರವಿಂದ್ ಮಾತನಾಡಿ, “ನನ್ನ ತಾಯಿಯ ದಾನ ಮಾಡಿದ ಕಣ್ಣುಗಳು ನಾಳೆ ಕಣ್ಣು ಕಾಣದ ಇಬ್ಬರು ಕಾರ್ನಿಯಾ ಅಂಧರ ಮನೆಗೆ ಹೊಸಬೆಳಕು ತರಲಿವೆ. ಕರೋನಾ ಸಂಕಷ್ಟದ ನಂತರವೂ ಸವಿರಾರು ಕಾರ್ನಿಯಾಗಳು ಅಗತ್ಯವಿದ್ದು, ಸಾವಿನ ನಂತರ ಅಮೂಲ್ಯ ಅಂಗಗಳನ್ನು ಸುಡದೆ ದಾನ ಮಾಡಿ ಕಣ್ಣು ಕಾಣದ ಇಬ್ಬರು ಅಂಧಮಕ್ಕಳಿಗೆ ಹೊಸಜೀವನ ನೀಡಬೇಕು” ಎಂದರು. ತಡರಾತ್ರಿಯಲ್ಲಿ ಜೊತೆ ನಿಂತು ನೇತ್ರದಾನ, ದೇಹದಾನಕ್ಕೆ ಸಹಕರಿಸಿದ ಹೊಸಬೆಳಕು ಟ್ರಸ್ಟಿನ ಡಾ//ರಾಮಕೃಷ್ಣ ಮತ್ತು ಮಂಜುಳಾರಾಮಕೃಷ್ಣ ಅವರ ಸೇವೆಯನ್ನು ಶ್ಲಾಘಿಸಿದರು.
ಡಾ. ರಾಜಕುಮಾರ್ ಮತ್ತು ಪುನೀತ್ ರಾಜಕುಮಾರ ಅವರು ನೇತ್ರದಾನಕ್ಕೆ ಸ್ಫೂರ್ತಿ ಎಂಬುದು ಸೊಸೆಯಂದಿರಾದ ವಿಮಲಾ ಮತ್ತು ಸೌಮ್ಯ ಅವರ ಅಭಿಪ್ರಾಯವಾಗಿತ್ತು.
ಹೊಸಬೆಳಕು ಟ್ರಸ್ಟಿನ ಜಿಗಣಿ ಡಾ//ರಾಮಕೃಷ್ಣ ಅವರ ಕಳಕಳಿಯ ಮನವಿ:
ಅಪಾರ ಸಮಾಜ ಸೇವೆಯಲ್ಲಿ ತೊಡಗಿರುವ ಡಾ//ರಾಮಕೃಷ್ಣ (ಜಿಗಣಿ) ರವರು ಮಾತನಾಡುತ್ತ, “ಶ್ರೀಮತಿ ರೋಹಿಣಿ ಅವರ ಈ ನಿರ್ಧಾರ ಇಡೀ ಸಮಾಜಕ್ಕೆ ಮಾದರಿಯಾಗಿದೆ. ಈ ಪುಣ್ಯಕಾರ್ಯದಲ್ಲಿ ಪಾಲ್ಗೊಳ್ಳಲು ನಮಗೆ ಹೆಮ್ಮೆ ಇದೆ. ನಾನು ನನ್ನ ಜೀವನವನ್ನು ಸಮಾಜಸೇವೆಗೆ ಮುಡಿಪಾಗಿಟ್ಟುಕೊಂಡು, ಲೆಕ್ಕವಿಲ್ಲದಷ್ಟು ಜನರಿಗೆ ಉಚಿತ ಕಣ್ಣಿನ ಆಪರೇಷನ್ಗಳು, ರಕ್ತದಾನ ಮತ್ತು ಅಂಗಾಂಗ ದಾನದಂತಹ ಕಾರ್ಯಕ್ರಮಗಳನ್ನು ಮಾಡುತ್ತ ಬಂದಿದ್ದೇನೆ. ನಮ್ಮ ಸಮಾಜದಲ್ಲಿ ಇನ್ನೂ ಹಲವಾರು ಅಂಧ ಮಕ್ಕಳು ಬೆಳಕು ಕಾಣಬೇಕಿದೆ. ಪ್ರತಿಯೊಬ್ಬರೂ ಸಾವಿನ ನಂತರ ತಮ್ಮ ಕಣ್ಣುಗಳನ್ನು ದಾನ ಮಾಡುವ ಸಂಪ್ರದಾಯವನ್ನು ರೂಢಿಸಿಕೊಳ್ಳಬೇಕು. ಕಣ್ಣುಗಳನ್ನು ದಾನ ಮಾಡುವುದರಿಂದ ಇಬ್ಬರು ಕಾರ್ನಿಯಾ ಅಂಧರ ಬಾಳಲ್ಲಿ ಹೊಸಬೆಳಕು ಮೂಡಿಸಬಹುದು” ಎಂದು ಕಳಕಳಿಯ ಮನವಿ ಮಾಡಿದರು.
ಸಹಕರಿಸಿದ ಗಣ್ಯರು
ಈ ಮಹಾಕಾಯಕದಲ್ಲಿ ಮೃತರ ಪತಿ ಶ್ರೀ ಜಡೆ ನಾಗರಾಜು, ಮಕ್ಕಳು ಅರವಿಂದ್, ಅವಿನಾಶ್, ಸೊಸೆಯರಾದ ವಿಮಲಾ, ಸೌಮ್ಯ, ಮೊಮ್ಮಕ್ಕಳು, ಹೊಸಬೆಳಕು ಟ್ರಸ್ಟಿನ ಡಾ//ರಾಮಕೃಷ್ಣ ಮತ್ತು ಮಂಜುಳಾ ರಾಮಕೃಷ್ಣ, ನಾರಾಯಣ ನೇತ್ರಾಲಯದ ಶ್ರೀ ಅಶೋಕ್, ದಿ ಆಕ್ಸ್ಫರ್ಡ್ ಮೆಡಿಕಲ್ ಕಾಲೇಜಿನ ಡಾ. ಜಯಶ್ರೀ, ಇತರೆ ವೈದ್ಯರು ಮತ್ತು ನೂರಾರು ಜನ ವೈದ್ಯಕೀಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ನೇತ್ರದಾನ – ಅಂಗಾಂಗದಾನ – ದೇಹದಾನ ನಮ್ಮ ಕುಟುಂಬಗಳ ಸಂಪ್ರದಾಯವಾಗಿಸೋಣ.
ನೇತ್ರದಾನ, ಅಂಗಾಂಗದಾನ, ದೇಹದಾನದ ಸಮಯ ಬಂದಾಗ ಹೊಸಬೆಳಕು ಟ್ರಸ್ಟ್(ರಿ) ಜಿಗಣಿ ರಾಮಕೃಷ್ಣ (9945028899) ರವರನ್ನು ಸಂಪರ್ಕಿಸಬಹುದಾಗಿದೆ
ವರದಿ :- ನಾಗರಾಜ್ ಪದ್ಮಶಾಲಿ
