ಗೋಕರ್ಣ : ಶ್ರೀ ಕ್ಷೇತ್ರ ಗೋಕರ್ಣ ಸಮೀಪ ಸಾಣಿಕಟ್ಟಾ ಗ್ರಾಮದ ಪ್ರಕೃತಿ ರಮ್ಯ ತಾಣಗಳಲ್ಲಿ ಮುಕುಟ ಮಣಿಯಾದ ಗುಡ್ಡದ ಮೇಲೆ ಶ್ರೀ ಸದ್ಗುರು ನಿತ್ಯಾನಂದ ಸ್ವಾಮಿಗಳ ಅನುಗ್ರಹದಿಂದ ಪ್ರೌಢಶಾಲೆ ಸ್ಥಾಪನೆಯಾಗಿ ಶ್ರೇಷ್ಠ ಪರಂಪರೆ ಹೊಂದಿದ್ದು, ಶ್ರೀ ಸದ್ಗುರು ನಿತ್ಯಾನಂದ ಶಿಕ್ಷಣ ಸಮಿತಿಯ ಅಧ್ಯಕ್ಷರಾಗಿ ಕೆಲವು ದಶಕಗಳಿಂದ ಸಮರ್ಪಣ ಭಾವನೆ ಮತ್ತು ಕಳಕಳಿಯಿಂದ ಈ ಪ್ರೌಢಶಾಲೆಯನ್ನು ಪುನಶ್ಚೇತನಗೊಳಿಸಿ ಅಭಿವೃದ್ಧಿ ಪಡಿಸಿರುವ ಉದ್ಯಮಿ ನಾಗರಾಜ ಹಿತ್ತಲಮಕ್ಕಿ ಅವರ ಪರಿಶ್ರಮ ಅತ್ಯಂತ ದೊಡ್ಡದು ಶ್ರೀ ಕ್ಷೇತ್ರ ಗೋಕರ್ಣ ಆನುವಂಶೀಯ ಉಪಾಧಿವಂತ ಮಂಡಳದ ಅಧ್ಯಕ್ಷ ವೇ. ರಾಜಗೋಪಾಲ ಅಡಿ ಗುರೂಜಿಯವರು ಹೇಳಿದರು.
ಸಾಣಿಕಟ್ಟೆಯ ಶ್ರೀ ಸದ್ಗುರು ನಿತ್ಯಾನಂದ ಪ್ರೌಢಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದ ಅವರು, ಸಕಾಲದಲ್ಲಿ ಬಿದ್ದ ಮಳೆಯಲ್ಲಿ ಕೃಷಿಕರು ಹೇಗೆ ಉತ್ತಿಬಿತ್ತಿ ಯೋಗ್ಯ ಫಸಲನ್ನು ಪಡೆಯುತ್ತಾರೋ ಅದೇ ರೀತಿ ವಿದ್ಯಾರ್ಥಿಗಳು ತಮ್ಮ ಅಮೂಲ್ಯ ವೇಳೆಯನ್ನು ಸದುಪಯೋಗಪಡಿಸಿಕೊಂಡು ಶ್ರದ್ಧೆಯಿಂದ ವಿದ್ಯಾರ್ಜನೆ ಮಾಡಿ ತಮಗೆ ಸೂಕ್ತವೆನಿಸುವ ವೃತ್ತಿಯನ್ನು ಆಯ್ದುಕೊಳ್ಳುವ ವಿವೇಕಿಗಳಾಗಬೇಕು. ತಮ್ಮ ಅತ್ಯುತ್ತಮ ಸಾಧನೆ-ಸೌಜನ್ಯಶೀಲತೆಯಿಂದ ಮನೆಗೆ, ಊರಿಗೆ ಮತ್ತು ಕಲಿತ ಶಾಲೆಗೆ ಕೀರ್ತಿ ತರುವಂತಾಗಬೇಕು. ವಿದ್ಯಾರ್ಥಿಗಳ ಏಳ್ಗೆಯಲ್ಲಿ ಶಿಕ್ಷಕರ ಪಾತ್ರ ಎಷ್ಟು ಮುಖ್ಯವೋ ಅಷ್ಟೇ ಪ್ರಮಾಣದಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡಬೇಕು ಎಂದರು.
ಉನ್ನತ ವೈದ್ಯಕೀಯ ಎಂಬಿಬಿಎಸ್, ಎಂ.ಡಿ, ಪಿಸಿಪಿ ಪದವೀಧರರಾಗಿ ಹೊರದೇಶಗಳಲ್ಲಿ ಲಕ್ಷಾಂತರ ಹಣ ಸಂಪಾದನೆಗೆ ಅವಕಾಶವಿದ್ದರೂ ಹಾಗೇ ಮಾಡದೇ ಊರ ಜನರ ಮೇಲಿನ ಕಳಕಳಿ ಮತ್ತು ಹಿತಾಕಾಂಕ್ಷೆಯಿಂದ ತಮ್ಮೂರು ಗೋಕರ್ಣಕ್ಕೆ ಬಂದು ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ವಿಕಾಸ ಬಿ. ನಾಯಕರವರ ಆದರ್ಶವನ್ನು ಜನರು ಮೈಗೂಡಿಸಿಕೊಳ್ಳಬೇಕು ಅವರ ಸೇವೆ ಪ್ರಶಂಸನೀಯ ಎಂದರು.
ಸಾಣಿಕಟ್ಟೆಯ ಶ್ರೀ ಸದ್ಗುರು ನಿತ್ಯಾನಂದ ಪ್ರೌಢಶಾಲೆ ೬೦ ಸಂವತ್ಸರಗಳಿಗೂ ಮೇಲ್ಪಟ್ಟು ಸಾರ್ಥಕ ಸೇವೆ ಸಲ್ಲಿಸುತ್ತಿದೆ. ಹಿತ್ತಲಮಕ್ಕಿಯಿಂದ ತದಡಿವರೆಗಿನ ವ್ಯಾಪ್ತಿಯಲ್ಲಿ ಬರುವ ವಿದ್ಯಾರ್ಥಿಗಳೆಲ್ಲರೂ ಈ ಪ್ರೌಢಶಾಲೆಯಲ್ಲಿ ಕಲಿತು ರಾಜ್ಯ ಮತ್ತು ರಾಷ್ಟçಮಟ್ಟದಲ್ಲಿ ಉನ್ನತ ಸಾಧನೆ ಮಾಡಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರಕಾರಗಳಲ್ಲಿ ಅರಣ್ಯ, ಪೊಲೀಸ್, ಶಿಕ್ಷಣ ಮುಂತಾದ ಇಲಾಖೆಯ ಉನ್ನತಾಧಿಕಾರಿಗಳಾಗಿ, ಪ್ರಾಚಾರ್ಯರಾಗಿ, ಡಿಡಿಪಿಐ ಆಗಿ, ಆಯುಕ್ತರಾಗಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ- ಹೀಗೆ ಸೇವೆ ಸಲ್ಲಿಸಿ ಕೀರ್ತಿ ತಂದಿದ್ದಾರೆ. ಸಮಾಜಕ್ಕೆ ಕೊಡುಗೆ ನೀಡಿದ್ದಾರೆ ಈ ಆದರ್ಶ ಪರಂಪರೆಯನ್ನು ಈ ಪ್ರೌಢಶಾಲೆ ರೂಢಿಸಿಕೊಂಡು ಬಂದಿದೆ. ಇದಕ್ಕೆ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ, ಮುಖ್ಯಾಧ್ಯಾಪಕರು ಶಿಕ್ಷಕ ಸಿಬ್ಬಂದಿವರ್ಗ, ಊರವರು ಕಾರಣರಾಗಿದ್ದಾರೆ. ಈ ವಿದ್ಯಾಸಂಸ್ಥೆಯ ಆದರ್ಶವನ್ನು ವಿದ್ಯಾರ್ಥಿಗಳು ತಮ್ಮ ಉನ್ನತ ಸಾಧನೆಗೆ ಮೇಲ್ಪಂಕ್ತಿಯಾಗಿ ತೆಗೆದುಕೊಂಡು ಶ್ರೇಷ್ಠ ಪರಂಪರೆಯನ್ನು ಮುಂದುವರೆಸಬೇಕು. ತಮ್ಮಲ್ಲಿ ಸೂಕ್ತವಾಗಿರುವ ಪತ್ರಿಭೆಯನ್ನು ಪ್ರಕಾಶಪಡಿಸಬೇಕು ಎಂದು ರಾಜಗೋಪಾಲ ಅಡಿ ಹಿತವಚನ ನುಡಿದರು. ಹಾಗೂ ಗ್ರಾಮ ಪಂಚಾಯತ ಸದಸ್ಯ ಶೇಖರ ಜಿ. ನಾಯ್ಕ ಮತ್ತು ಈ ಸಂಸ್ಥೆಯ ಕಾರ್ಯದರ್ಶಿಗಳಾದಂತಹ ವಿಶಾಲ ಜಿ ನಾಯಕ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭ ಹಾರೈಸಿದರು.
ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಶ್ರೀಮತಿ ಶಾರದಾ ಜಿ. ನಾಯಕ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಕಿ ಹೇಮಾ ಸ್ವಾಗತಿಸಿದರು. ಶಿಕ್ಷಕಿ ಶಿಲ್ಪಾ ನಾಯಕ, ಶೈಕ್ಷಣಿಕ ವರದಿ ವಾಚಿಸಿದರು. ಶಿಕ್ಷಣ ಸಂಯೋಜನಾಧಿಕಾರಿ ದೀಪಾ ಕಾಮತ, ವಲಯ ಸಂಯೋಜನಾಧಿಕಾರಿ ಮೋಹಿನಿ ಗೌಡ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಮನರಂಜನೆ ನಡೆಯಿತು.
