ಅಂಕೋಲಾ : ಇಲ್ಲಿನ ಕೆಎಲ್ಇ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಿದ ಪ್ರೇಮಾ ಪಿಕಳೆ ಶತಮಾನೋತ್ಸವದಲ್ಲಿ ನಾಡಿನ ಹೆಸರಾಂತ ವಾಗ್ಮಿ – ಬರಹಗಾರರಾದ ಅಧ್ಯಾಪಕ ಮಂಜುನಾಥ ಗಾಂವಕರ್ ಬರ್ಗಿಯವರನ್ನು ಸನ್ಮಾನಿಸಲಾಯಿತು.
ಅಂಕವಲ್ಲಿ ಶತಮಾನದ ಪ್ರೇಮ ಸ್ಮೃತಿ ಕೃತಿಯನ್ನು ಹೆಸರಾಂತ ನಿರೂಪಕ ರಾಜೇಶ ನಾಯಕ ಸೂರ್ವೆಯವರೊಂದಿಗೆ ಸಂಪಾದಿಸಿದ ಕುರಿತಂತೆ ಮಂಜುನಾಥ ಬರ್ಗಿಯವರನ್ನು ಕೃತಜ್ಞತಾಪೂರ್ವಕವಾಗಿ ಅಭಿಮಾನದಿಂದ ಸನ್ಮಾನಿಸುತ್ತಿರುವುದಾಗಿ ಪ್ರೇಮಾತಾಯಿ ಶಿಷ್ಯ ವೃಂದದ ಅಧ್ಯಕ್ಷ ಎನ್ಬಿ ನಾಯಕ್ ಸೂರ್ವೆಯವರು ಹೇಳಿದರು.
ಗೌರವವನ್ನು ಸ್ವೀಕರಿಸಿದ ಮಂಜುನಾಥ ಬರ್ಗಿಯವರು ಮಾತನ್ನಾಡಿ, ಚಾರಿತ್ರಿಕ ಅಂಕೋಲೆಯ ಚರಿತ್ರೆಯಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿಯೆಸಗಿ ಅಳಿದರೂ ಉಳಿದು ಪ್ರಾಥಸ್ಮರಣೀಯರಾದ ಪ್ರೇಮಾ ಪಿಕಳೆಯವರು ಹುಟ್ಟು ಹಾಕಿದ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ತನ್ನ ಹೆತ್ತವರು ಕಲಿತು ಬದುಕನ್ನು ಕಟ್ಟಿಕೊಂಡ ಋಣಕ್ಕಾಗಿ ಅವರ ಕುರಿತಾದ ಕೃತಿಯ ಸಂಪಾದನೆಯ ಹೊಣೆಯನ್ನು ಸಾಂಸ್ಕೃತಿಕ ಬದ್ಧತೆಯ ಮೇರೆಗೆ ಮಾಡಿರುವಲ್ಲಿ ಧನ್ಯತೆ ಇದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಕೆಎಲ್ಇ ಸಂಸ್ಥೆಯ ನಿರ್ದೇಶಕರಾದ ಶಂಕರಣ್ಣ ಮುನವಳ್ಳಿ ವಹಿಸಿದ್ದರು. ಅಂಕವಲ್ಲಿ ಕೃತಿಯನ್ನು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ರವರು ಲೋಕಾರ್ಪಣೆಗೊಳಿಸಿದರು. ನಿವೃತ್ತ ಶಿಕ್ಷಕ ವಾಸುದೇವ ನಾಯಕರು ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಡಾಕ್ಟರ್ ಡಿ. ಎಲ್. ಭಟ್ಕಳ,ಆರ್.ನಟರಾಜ್ ಹಾಗೂ ಡಾ.ಮೀನನ್ ನಾರ್ವೆಕರ್ ಉಪಸ್ಥಿತರಿದ್ದರು.
ಪ್ರಾಚಾರ್ಯ ಡಾ. ವಿನಾಯಕ ಹೆಗಡೆ ಸ್ವಾಗತಿಸಿದರು, ಪ್ರೊ. ಮಂಜುನಾಥ್ ಇಟಗಿ ಹಾಗೂ ಪ್ರೊ. ಪುಷ್ಪ ನಾಯಕ್ ಜಂಟಿಯಾಗಿ ಕಾರ್ಯಕ್ರಮವನ್ನು ನಿರೂಪಿಸಿದರು.
