ಶಿರಸಿ: ೧೫ ನೇ ಹಣಕಾಸು ಆಯೋಗದ ಕ್ರೋಡಿಕೃತವಾದ ಬಡ್ಡಿ ಹಣವನ್ನು ತಾಲೂಕಿನ ಆಯಾ ೩೨ ಗ್ರಾಪಂಗಳಿಗೆ ಕ್ರಿಯಾ ಯೋಜನೆ ಮಾಡಲು ಅನುಮತಿ ನೀಡುವಂತೆ ಶಿರಸಿ ಪಶ್ಚಿಮ ಭಾಗದ ಚುನಾಯಿತ ಗ್ರಾಮ ಪ್ರತಿನಿಧಿಗಳ ಒಕ್ಕೂಟದಿಂದ ತಾಪಂ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಿದರು.
ತಾಲೂಕಾ ಪಂಚಾಯತ ಕಚೇರಿಯಿಂದ ೧೫ ನೇ ಹಣಕಾಸು ಆಯೋಗದ ಅಡಿಯಲ್ಲಿ (೨೦೨೦-೨೧ ರಿಂದ ೨೦೨೪-೨೫ ) ಕ್ರೋಡಿಕೃತವಾದ ಬಡ್ಡಿ ಹಣವನ್ನು ರಾಜ್ಯ ಸರ್ಕಾರಕ್ಕೆ ಹಿಂಪಡೆಯಲು ನಿರ್ದೇಶಿಸಲಾಗಿದೆ. ೧೫ ನೇ ಹಣಕಾಸು ಆಯೋಗದ (೨೦೧೫-೨೦೨೦) ಸಮಯದಲ್ಲಿ ಗ್ರಾಮ ಪಂಚಾಯತಗಳು ಬಡ್ಡಿ ಹಣವನ್ನು ಸ್ಥಳೀಯ ಅಭಿವೃದ್ಧಿ ಕಾರ್ಯಗಳಿಗೆ ಯಶಸ್ವಿಯಾಗಿ ಬಳಸಲಾಗಿದ್ದು, ೧೫ ನೇ ಹಣಕಾಸು ಆಯೋಗದ ಕ್ರೋಡಿಕರಣದ ಬಡ್ಡಿ ಹಣವನ್ನು ಗ್ರಾಮ ಪಂಚಾಯತಗಳಿಗೆ ಇ ಸ್ವರಾಜ್ ತಂತ್ರಾಂಶದಲ್ಲಿ ಅಳವಡಿಸಿ, ಸಪ್ಲಿಮೆಂಟರಿ ಆಕ್ಷನ್ ಪ್ಲಾನ್ ಮಾಡಲು ಅವಕಾಶ ನೀಡಿ, ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅನುಮತಿ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ತಾಪಂ ಕಾರ್ಯನಿರ್ವಹಣಾಧಿಕಾರಿ ಸತೀಶ ಹೆಗಡೆ ಮನವಿ ಸ್ವೀಕರಿಸಿ, ಸರ್ಕಾರದಿಂದ ಆದೇಶ ಬಂದಿದ್ದು, ಅದನ್ನು ಯಥಾ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ರವಾನಿಸಲಾಗಿದ್ದು, ಮೇಲಧಿಕಾರಿಗಳ ಗಮನಕ್ಕೆ ತರುತ್ತೇನೆಂದು ಭರವಸೆ ನೀಡಿದರು.
ಶಿರಸಿ ಪಶ್ಚಿಮ ಭಾಗದ ಚುನಾಯಿತ ಗ್ರಾಮ ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ನವೀನ ಶೆಟ್ಟಿ, ಉಪಾಧ್ಯಕ್ಷ ನಾರಾಯಣ ಹೆಗಡೆ,ಪ್ರಧಾನ ಕಾರ್ಯದರ್ಶಿ ರವೀಶ ಹೆಗಡೆ, ರಾಜ್ಯ ಸಮಿತಿ ಸದಸ್ಯ ಸಂದೇಶ ಭಟ್ಟ ಬೆಳಖಂಡ, ಸಂಘದ ಪ್ರಮುಖರಾದ ಗಜಾನನ ನಾಯ್ಕ, ಮಂಜುನಾಥ ಪೂಜಾರಿ, ದತ್ತಾತ್ರೇಯ ಮಡಿವಾಳ, ಬಿ.ಎಸ್.ಪಟಗಾರ ಮತ್ತಿತರರು ಇದ್ದರು.
