ಬಿಹಾರದಲ್ಲಿ ಬಿಸಿಲಿನ ತಾಪಕ್ಕೆ 10 ಚುನಾವಣಾ ಸಿಬ್ಬಂದಿ ಸೇರಿ 14 ಮಂದಿ ಬಲಿ

ಬಿಹಾರದಲ್ಲಿ ಬಿಸಿಲಿನ ತಾಪಕ್ಕೆ 10 ಚುನಾವಣಾ ಸಿಬ್ಬಂದಿ ಸೇರಿ 14 ಮಂದಿ ಬಲಿ

Share

ಪಾಟ್ನಾ: ಬಿಹಾರದಲ್ಲಿ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 10 ಮತಗಟ್ಟೆ ಸಿಬ್ಬಂದಿ ಸೇರಿದಂತೆ 14 ಜನ ಬಿಸಿಲಿನ ಶಾಖದಿಂದ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ಮಧ್ಯಾಹ್ನ ತಿಳಿಸಿದ್ದಾರೆ.

ವಿಪತ್ತು ನಿರ್ವಹಣಾ ಇಲಾಖೆ ಹೊರಡಿಸಿದ ಪ್ರಕಟಣೆಯಲ್ಲಿ, ಭೋಜ್‌ಪುರದಲ್ಲಿ ಹೆಚ್ಚಿನ ಸಾವುನೋವುಗಳು ವರದಿಯಾಗಿವೆ. ಅಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಐವರು ಅಧಿಕಾರಿಗಳು ಶಾಖದಿಂದ ಸಾವನ್ನಪ್ಪಿದ್ದಾರೆ.

ರೋಹ್ತಾಸ್‌ನಲ್ಲಿ ಮೂವರು ಚುನಾವಣಾ ಅಧಿಕಾರಿಗಳು ಮತ್ತು ಕೈಮೂರ್ ಹಾಗೂ ಔರಂಗಾಬಾದ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಚುನಾವಣಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ವಿಪತ್ತು ನಿರ್ವಹಣಾ ಇಲಾಖೆ ತಿಳಿಸಿದೆ.ರಾಜ್ಯದ ವಿವಿಧ ಭಾಗಗಳಲ್ಲಿ ಇನ್ನೂ ನಾಲ್ವರು ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಗಳಿಗೆ ಪರಿಹಾರ ನೀಡುವ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಹಲವೆಡೆ ತಾಪಮಾನ 44 ಡಿಗ್ರಿ ಸೆಲ್ಸಿಯಸ್ ದಾಟಿದ್ದರಿಂದ ಜನ ಬಿಸಿಲಿನ ಬೇಗೆಯಿಂದ ತತ್ತರಿಸಿದ್ದಾರೆ. ಗುರುವಾರ, ಬಕ್ಸರ್ ನಲ್ಲಿ 47.1 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ.

ಬಿಸಿಲಿನ ತಾಪ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಶಾಲೆಗಳು, ಕೋಚಿಂಗ್ ಸಂಸ್ಥೆಗಳು ಮತ್ತು ಅಂಗನವಾಡಿ ಕೇಂದ್ರಗಳಿಗೆ ಜೂನ್ 8 ರವರೆಗೆ ರಜೆ ಘೋಷಿಸಲಾಗಿದೆ.


Share